ಹೈದ್ರಾಬಾದ್, ತೆಲಂಗಾಣ: ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಹೊರಟಿದ್ದ ವೈಎಸ್ಆರ್ ತೆಲಂಗಾಣ ಪಕ್ಷದ ಅಧ್ಯಕ್ಷೆ ವೈ ಎಸ್ ಶರ್ಮಿಳಾ (YS Sharmila) ಅವರು ಮಹಿಳಾ ಕಾನ್‌ಸ್ಟೆಬಲ್ ಕೆನ್ನೆಗೆ ಬಾರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರನ್ನು ಹೈದ್ರಾಬಾದ್ ಪೊಲೀಸರು ಬಂಧಿಸಿದ್ದಾರೆ. ತೆಲಂಗಾಣ ಲೋಕ ಸೇವಾ ಆಯೋಗ(TSPSC) ನೇಮಕಾತಿ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತಂಡದ ಕಚೇರಿ ಎದುರು ವೈಎಸ್‌ಆರ್ ತೆಲಂಗಾಣ ಪಕ್ಷವು ಪ್ರತಿಭಟನೆಯನ್ನು ಹಮ್ಮಿಕೊಂಡಿತ್ತು. ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ವೈ ಎಸ್ ಶರ್ಮಿಳಾ ಅವರು ತಮ್ಮ ಮನೆಯಿಂದ ಹೊರಟಿದ್ದರು. ಆಗ ತಡೆಯಲು ಬಂದ ಮಹಿಳಾ ಪೊಲೀಸ್ ಕೆನ್ನೆಗೆ ಬಾರಿಸಿದ್ದಾರೆ. ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾರೆ.
ವೈ ಎಸ್ ಶರ್ಮಿಳಾ ಅವರ ತಾಯಿ ವಿಜಯಲಕ್ಷ್ಮೀ ಕೂಡ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ ಆರೋಪವನ್ನು ಎದುರಿಸುತ್ತಿದ್ದಾರೆ. ವೈ.ಎಸ್.ವಿಜಯಲಕ್ಷ್ಮಿ ಕೂಡ ಪೊಲೀಸ್ ಠಾಣೆಯಲ್ಲಿ ಮಗಳನ್ನು ಭೇಟಿಯಾಗದಂತೆ ತಡೆದ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಈ ಕುರಿತು ವಿಡಿಯೋ ವೈರಲ್ ಆಗಿದೆ.
ಮಹಿಳಾ ಪೊಲೀಸ್ ಕಾನ್‌ಸ್ಟೆಬಲ್‌ಗೆ ವೈ ಎಸ್ ಶರ್ಮಿಳಾ ಕಪಾಳಮೋಕ್ಷ
ಹೈದ್ರಾಬಾದ್ ಪಶ್ಚಿಮ ವಲಯದ ಡೆಪ್ಯುಟಿ ಕಮಿಷನರ್ ಜೋಯೆಲ್ ಡೇವಿಸ್ ಅವರು, ಪೂರ್ವಾನುಮತಿ ಇಲ್ಲದೇ ಎಸ್ಐಟಿ ಕಚೇರಿಗೆ ವೈ ಎಸ್ ಶರ್ಮಿಳಾ ಅವರು ತಮ್ಮ ಬಂಜಾರಾ ಹಿಲ್ಸ್ ಮನೆಯಿಂದ ಹೊರಟಿದ್ದರು. ಆಗ ಮನೆಯ ಹೊರಗೆ ಅವರನ್ನು ತಡೆದ ಪೊಲೀಸ್ ಸಿಬ್ಬಂದಿಯನ್ನು ತಳ್ಳಾಡಿದ ವೈ ಎಸ್ ಶರ್ಮಿಳಾ ಅವರು, ಮಹಿಳಾ ಕಾನ್‌ಸ್ಟೆಬಲ್ ಕೆನ್ನೆಗೆ ಬಾರಿಸಿದ್ದಾರೆಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.
ಶರ್ಮಿಳಾ ಅವರು ಪೊಲೀಸ್ ಸಿಬ್ಬಂದಿಗೆ ಹೊಡೆದ ವಿಡಿಯೋ ಕ್ಲಿಪ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಸಾರ್ವಜನಿಕ ನೌಕರನ ಕರ್ತವ್ಯಕ್ಕೆ ಅಡ್ಡಿಪಡಿಸಿದ ಕಾರಣಕ್ಕಾಗಿ ಸೆಕ್ಷನ್ 353, ಕರ್ತವ್ಯ ನಿರತ ಸಾರ್ವಜನಿಕ ಸೇವಕನಿಗೆ ನೋವುಂಟು ಮಾಡಿರುವುದಕ್ಕಾಗಿ ಸೆಕ್ಷನ್ 322, ಮಹಿಳಾ ಮರ್ಯಾದೆಗೆ ಹಾಳು ಮಾಡಿದ್ದಕ್ಕೆ ಸೆಕ್ಷನ್ 509, ಸಾರ್ವಜನಿಕ ಆಸ್ತಿ ಪಾಸ್ತಿ ಹಾನಿ ಮಾಡಿದ ಕಾರಣಕ್ಕಾಗಿ ಸೆಕ್ಷನ್ 427ರ ಅಡಿ ವೈ ಎಸ್ ಶರ್ಮಿಳಾ ಅವರ ವಿರುದ್ದ ಪ್ರಕರಣ ದಾಖಲಿಸಲಾಗಿದೆ ಎಂದು ಡೇವಿಸ್ ಅವರು ತಿಳಿಸಿದ್ದಾರೆ.
ಪೊಲೀಸ್ ಸಿಬ್ಬಂದಿಗೆ ಕಪಾಳಮೋಕ್ಷ ಮಾಡುತ್ತಿರುವ ವೈ ಎಸ್ ಶರ್ಮಿಳಾ ಅವರ ತಾಯಿ ವಿಜಯಲಕ್ಷ್ಮಿ ಅವರ ವಿಡಿಯೋ ವೈರಲ್
ಇದನ್ನೂ ಓದಿ: ಬಿಆರ್ಎಸ್ ಶಾಸಕನಿಗೆ ಲಂಚಕೋರ ಎಂದ ಆಂಧ್ರ ಸಿಎಂ ಸಹೋದರಿ ವೈ.ಎಸ್.ಶರ್ಮಿಳಾ ಅರೆಸ್ಟ್
ಶರ್ಮಿಳಾ ಬಂಧನವಾದ ಕೆಲವು ಗಂಟೆಗಳ ಬಳಿಕ ಅವರ ತಾಯಿ ವಿಜಯಲಕ್ಷ್ಮಿ ಅವರು ಪೊಲೀಸರೊಂದಿಗೆ ವಾಗ್ವಾದ ಮಾಡಿದ ಘಟನೆ ನಡೆದಿದೆ. ತಮ್ಮ ಮಗಳನ್ನು ಭೇಟಿ ಮಾಡಲು ಅವಕಾಶ ನೀಡದ ಕಾರಣಕ್ಕಾಗಿ ಜುಬಿಲಿ ಹಿಲ್ಸ್ ಪೊಲೀಸ್ ಠಾಣೆಯ ಮುಂದೆ ಮಹಿಳಾ ಪೊಲೀಸ್ ಕಾನ್‌ಸ್ಟೆಬಲ್ ಒಬ್ಬರಿಗೆ ಕಪಾಳಮೋಕ್ಷ ಮಾಡಿದ್ದಾರೆಂದು ಹೇಳಲಾಗುತ್ತಿದೆ. ಆದರೆ, ಅವರ ವಿರುದ್ಧ ಪೊಲೀಸರು ಯಾವುದೇ ದೂರು ದಾಖಲಿಸಿಲ್ಲ ಎನ್ನಲಾಗಿದೆ.