ನವದೆಹಲಿ: ತಂದೆ ಅಥವಾ ತಾಯಿಯೊಬ್ಬರೇ ಮಕ್ಕಳನ್ನು ಸಾಕುವುದು (ಸಿಂಗಲ್ ಪೇರೆಂಟ್), ಅವರ ಪಾಲನೆ-ಪೋಷಣೆ ಮಾಡುವುದು ಕಷ್ಟಕರ. ಅದರಲ್ಲೂ, ಬಡವರು, ದುಡಿದು ತಿನ್ನುವವರಿಗೆ ಕಷ್ಟಸಾಧ್ಯ. ಹೀಗೆ, ಜೊಮ್ಯಾಟೊ ಡೆಲಿವರಿ ಬಾಯ್ ಒಬ್ಬರು ತಮ್ಮ ಮಗಳು ಹಾಗೂ ಮಗನನ್ನು ಜತೆಯಲ್ಲಿ ಕರೆದುಕೊಂಡೇ ಫುಡ್ ಡೆಲಿವರಿ ಮಾಡುತ್ತಿರುವ ವಿಡಿಯೊ ಈಗ ಜಾಲತಾಣದಲ್ಲಿ ವೈರಲ್ (Viral Video) ಆಗಿದೆ.
ಫುಡ್ ಬ್ಲಾಗರ್ ಸೌರಭ್ ಪಂಜ್ವಾನಿ ಎಂಬುವರು ಜೊಮ್ಯಾಟೊ ಡೆಲಿವರಿ ಬಾಯ್ ವಿಡಿಯೊ ಪೋಸ್ಟ್ ಮಾಡಿದ್ದಾರೆ. ಪುಟ್ಟ ಕಂದಮ್ಮಳನ್ನು ಕಟ್ಟಿಕೊಂಡು, ಮೂರ್ನಾಲ್ಕು ವರ್ಷದ ಮಗನನ್ನು ಕರೆದುಕೊಂಡು ಫುಡ್ ಡೆಲಿವರಿಯಲ್ಲಿ ತೊಡಗಿದ್ದರ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. “ಇಡೀ ದಿನ ಬಿಸಿಲಲ್ಲಿ ಇಬ್ಬರು ಮಕ್ಕಳನ್ನು ಕರೆದುಕೊಂಡು ಆಹಾರ ಪೂರೈಕೆಯಲ್ಲಿ ತೊಡಗಿರುವ ಈ ವ್ಯಕ್ತಿಯನ್ನು ನೋಡಿ ಹೆಮ್ಮೆ ಎನಿಸಿತು. ಒಬ್ಬ ವ್ಯಕ್ತಿ ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡುತ್ತಾನೆ ಎಂಬುದಕ್ಕೆ ಇದೇ ಸಾಕ್ಷಿ” ಎಂದಿದ್ದಾರೆ.
ಇನ್ನು ವಿಡಿಯೊ ನೋಡುತ್ತಲೇ ಸಾವಿರಾರು ಜನ ಪ್ರತಿಕ್ರಿಯಿಸಿದ್ದಾರೆ. ಇಷ್ಟೊಂದು ಶ್ರಮ ವಹಿಸುವ ವ್ಯಕ್ತಿಗೆ ಶುಭವಾಗಲಿ ಎಂದು ಹಾರೈಸಿದ್ದಾರೆ. ಅಷ್ಟೇ ಅಲ್ಲ, ಸರಕಾರ ಈತನಿಗೊಂದು ಉದ್ಯೋಗ ಕೊಡಬೇಕು ಎಂದೂ ಒತ್ತಾಯಿಸಿದ್ದಾರೆ.