Site icon Vistara News

Mizoram CM: ಮಿಜೋರಾಂ ಮುಖ್ಯಮಂತ್ರಿಯಾಗಿ ಲಾಲ್ದುಹೋಮ ಪ್ರಮಾಣ ವಚನ

lalduhoma

ಐಜ್ವಾಲ್:‌ ಮಿಜೋರಾಂನ ಮುಖ್ಯಮಂತ್ರಿಯಾಗಿ (Mizoram CM) ಜೋರಾಮ್ ಪೀಪಲ್ಸ್ ಮೂವ್ಮೆಂಟ್ (ZPM) ನಾಯಕ ಲಾಲ್ದುಹೋಮ (Lalduhoma) ಶುಕ್ರವಾರ ಪ್ರಮಾಣ ವಚನ ಸ್ವೀಕರಿಸಿದರು.

ರಾಜಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಲಾಲ್ದುಹೋಮ ಅವರಿಗೆ ರಾಜ್ಯಪಾಲ ಹರಿಬಾಬು ಕಂಬಂಪಾಟಿ ಅವರು ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ವಚನ ಬೋಧಿಸಿದರು. ಪಕ್ಷದ ನಾಯಕ ವನ್ಲಾಲ್ರುಟಾ ಅವರು ಕೂಡ ಕ್ಯಾಬಿನೆಟ್ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.

ಮಿಜೋ ನ್ಯಾಶನಲ್ ಫ್ರಂಟ್ ನಾಯಕ ಮತ್ತು ನಿರ್ಗಮಿತ ಮುಖ್ಯಮಂತ್ರಿ ಝೋರಾಮ್‌ತಂಗ, ಅದರ ಶಾಸಕಾಂಗ ಪಕ್ಷದ ನಾಯಕ ಲಾಲಛಂದಮ ರಾಲ್ಟೆ, ಮಾಜಿ ಮುಖ್ಯಮಂತ್ರಿ ಲಾಲ್ ಥನ್ಹಾವ್ಲಾ ಸೇರಿದಂತೆ ಎಲ್ಲಾ ಎಂಎನ್‌ಎಫ್ ಶಾಸಕರು ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಲಾಲ್ದುಹೋಮ ಅವರು ಗುರುವಾರ ರಾಜ್ಯಪಾಲರನ್ನು ಭೇಟಿ ಮಾಡಿ ರಾಜ್ಯದಲ್ಲಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ದರು.

ಮಿಜೋರಾಂ ವಿಧಾನಸಭೆ 40 ಸದಸ್ಯಬಲ ಹೊಂದಿದೆ. ಸಂಪುಟ ಮುಖ್ಯಮಂತ್ರಿ ಸೇರಿದಂತೆ 12 ಮಂತ್ರಿಗಳನ್ನು ಹೊಂದಬಹುದು. ಮುಂದಿನ ವಾರ ನಾವು ಮೊದಲ ಅಧಿವೇಶನವನ್ನು ನಡೆಸಲಿದ್ದೇವೆ ಎಂದು ಲಾಲ್ದುಹೋಮ ಹೇಳಿದ್ದಾರೆ. ನಮ್ಮ ಮೊದಲ ಆದ್ಯತೆ ಕೃಷಿ ಉತ್ಪನ್ನಗಳ ಖರೀದಿ ಎಂದಿದ್ದಾರೆ.

ಝೋರಾಮ್ ಪೀಪಲ್ಸ್ ಮೂವ್ಮೆಂಟ್ (ZPM) ವಿಧಾನಸಭೆ ಚುನಾವಣೆಯಲ್ಲಿ 27 ಸ್ಥಾನಗಳೊಂದಿಗೆ ನಿರ್ಣಾಯಕ ವಿಜಯವನ್ನು ಪಡೆದುಕೊಂಡು, ಆಡಳಿತಾರೂಢ ಮಿಜೋ ನ್ಯಾಷನಲ್ ಫ್ರಂಟ್ (MNF) ಅನ್ನು ಸೋಲಿಸಿತ್ತು. ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ಕಾಂಗ್ರೆಸ್ ಕ್ರಮವಾಗಿ ಎರಡು ಮತ್ತು ಒಂದು ಸ್ಥಾನಗಳಿಗೆ ತೃಪ್ತವಾದವು.

ಲಾಲ್ದುಹೋಮ ತಮ್ಮ ಪಕ್ಷವು ಆರ್ಥಿಕ ಸುಧಾರಣೆಗಳಿಗಾಗಿ ಸಂಪನ್ಮೂಲ ಕ್ರೋಢೀಕರಣ ಮಾಡುತ್ತದೆ ಎಂದು ಭರವಸೆ ನೀಡಿದ್ದಾರೆ. ಮಿಜೋರಾಂ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ಹಿಂದಿನ ಸರ್ಕಾರ ಖಜಾನೆಯನ್ನು ಖಾಲಿ ಮಾಡಿದೆ ಎಂದು ಆರೋಪಿಸಿದರು. ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ, ರೈತರಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಅವರು ಚುನಾವನಾ ಪ್ರಚಾರದ ವೇಳೆ ಹೇಳಿದ್ದರು. ಮೂರು ಹೊಸ ಜಲವಿದ್ಯುತ್ ಅಣೆಕಟ್ಟುಗಳ ನಿರ್ಮಾಣದ ವಾಗ್ಧಾನ ನೀಡಿದ್ದಾರೆ ಹಾಗೂ ಮುಂದಿನ ಐದು ವರ್ಷಗಳವರೆಗೆ ವಿದ್ಯುತ್ ದರಗಳಲ್ಲಿ ಹೆಚ್ಚಳ ಮಾಡದ ಭರವಸೆ ನೀಡಿದರು.

ಇದನ್ನೂ ಓದಿ: ಇಂದಿರಾ ಗಾಂಧಿಗೆ ಭದ್ರತಾ ಅಧಿಕಾರಿಯಾಗಿದ್ದ ಲಾಲದುಹೋಮಾ ಈಗ ಮಿಜೋರಾಂ ಸಿಎಂ!

Exit mobile version