Site icon Vistara News

Karnataka Sangha Qatar: ಅದ್ಧೂರಿಯಾಗಿ ಕರ್ನಾಟಕ ಸಂಘ ಕತಾರ್ ವಸಂತೋತ್ಸವ- 2023 ಸಂಪನ್ನ

Karnataka Sangha Qatar Vasanthotsava-2023 celebrated in a grand manner

Karnataka Sangha Qatar Vasanthotsava-2023 celebrated in a grand manner

ದೋಹಾ (ಕತಾರ್): ಕರ್ನಾಟಕ ಸಂಘ ಕತಾರ್ ವಾರ್ಷಿಕ ಕಾರ್ಯಕ್ರಮ “ವಸಂತೋತ್ಸವ – 2023” (Karnataka Sangha Qatar) ಅದ್ಧೂರಿಯಾಗಿ ಅಲ್‌ ವಾಕ್ರಾ ನಗರದಲ್ಲಿ ನೆರವೇರಿದೆ. ವಾರ್ಷಿಕೋತ್ಸವದ ಪ್ರಯುಕ್ತ ಗಾಯನ, ನೃತ್ಯ ಸೇರಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಈ ಪೈಕಿ ಗಾಯಕ ಹಾಗೂ ಸಂಗೀತ ನಿರ್ದೇಶಕ ನವೀನ್ ಸಜ್ಜು ಅವರು, ಹಾಡಿದ ಪ್ರಸಿದ್ಧ ಜಾನಪದ ಮತ್ತು ಕನ್ನಡ ಚಲನಚಿತ್ರ ಗೀತೆಗಳು ಗಮನ ಸೆಳೆದವು.
 
ಕರ್ನಾಟಕ ಸಂಘ ಕತಾರ್ ಅಧ್ಯಕ್ಷ ಮಹೇಶ್ ಗೌಡ ಅವರು ಸ್ವಾಗತ ಭಾಷಣ ಮಾಡಿ, ಸಂಘದ ಯಶಸ್ಸಿಗೆ ಕೊಡುಗೆ ನೀಡಿದ ಹಿಂದಿನ ಅಧ್ಯಕ್ಷರು ಮತ್ತು ಸಮಿತಿಯ ಸದಸ್ಯರಿಗೆ ಧನ್ಯವಾದಗಳನ್ನು ಅರ್ಪಿಸಿದರು. ಜತೆಗೆ 2024 ಕರ್ನಾಟಕ ಸಂಘ ಕತಾರ್‌ಗೆ ಬೆಳ್ಳಿಹಬ್ಬದ ವರ್ಷವಾಗಲಿದ್ದು, ಕಾರ್ಯಕ್ರಮವನ್ನು ಅದ್ಧೂರಿಯಾಗಿ ಆಚರಿಸುವ ಇಚ್ಛೆ ವ್ಯಕ್ತ ಪಡಿಸಿದರು.

ಭಾರತೀಯ ಸಾಂಸ್ಕೃತಿಕ ಕೇಂದ್ರದ ಅಧ್ಯಕ್ಷ ಮಣಿಕಂಠನ್ ಮಾತನಾಡಿ, ಕನ್ನಡ ಸಮುದಾಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಕರ್ನಾಟಕ ಸಂಘ ಕತಾರ್‌ನ ಕೊಡುಗೆಯನ್ನು ಶ್ಲಾಘಿಸಿ, ಸಂಘಕ್ಕೆ ಎಲ್ಲ ರೀತಿಯ ಸಂಪೂರ್ಣ ಬೆಂಬಲ ನೀಡುವ ಭರವಸೆ ನೀಡಿದರು.

ಇದನ್ನೂ ಓದಿ | ಸಮರಾಂಕಣ: ಯುದ್ಧದಾಹದಿಂದ ಶಾಂತಿ ಸ್ಥಾಪಕನ ಸ್ಥಾನದತ್ತ: ಹೊಸ ಅವತಾರದಲ್ಲಿ ಕಾಣಿಸಿಕೊಂಡಿರುವ ಡ್ರ್ಯಾಗನ್ ಚೀನಾ!

ಭಾರತೀಯ ರಾಯಭಾರ ಕಚೇರಿ ಕಾರ್ಯದರ್ಶಿ ಕ್ಸೇವಿಯರ್ ಧನರಾಜ್ ಅವರು ಮಾತನಾಡಿ, ಕಾರ್ಯಕ್ರಮಕ್ಕೆ ಬೆಂಬಲ ನೀಡಿದ ಎಲ್ಲಾ ಸಮುದಾಯದ ಸದಸ್ಯರಿಗೆ ಧನ್ಯವಾದಗಳನ್ನು ಅರ್ಪಿಸಿದರು. ಇದೇ ವೇಳೆ “ಹಾಸ್ಯ ಸಂಗಮ” ಕಾರ್ಯಕ್ರಮದಲ್ಲಿ ಪ್ರೊಫೆಸರ್ ಕೃಷ್ಣೇಗೌಡ ಅವರು, ಸಾಮಾಜಿಕ ಸಂದೇಶದ ಜತೆಗೆ ತಮ್ಮ ಹಾಸ್ಯದ ಮಾತುಗಳಿಂದ ಗಮನ ಸೆಳೆದರು.

ಗಾಯಕ, ಸಂಗೀತ ನಿರ್ದೇಶಕ ನವೀನ್ ಸಜ್ಜು ಮತ್ತು ತಂಡ ನಡೆಸಿಕೊಟ್ಟ ಕನ್ನಡ ಜಾನಪದ ರಾಕ್ ಬ್ಯಾಂಡ್ ಕನ್ಸರ್ಟ್ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿತು. ಕನ್ನಡ ಸಮುದಾಯ ಮತ್ತು ಭಾಷೆಗೆ ಮಾಡಿದ ಸೇವೆಯನ್ನು ಗುರುತಿಸಿ ಕರ್ನಾಟಕ ಸಂಘ ಕತಾರ್ ಪ್ರೊಫೆಸರ್ ಕೃಷ್ಣ ಬೈರೇಗೌಡ ಅವರಿಗೆ “ಕನ್ನಡ ಕಾವ್ಯ ಕಲಾ ಕನಕ ಕಲಶ” ಮತ್ತು ಗಾಯಕ ನವೀನ್ ಸಜ್ಜು ಅವರಿಗೆ “ಜಾನಪದ ಕೋಗಿಲೆ” ಎಂಬ ಬಿರುದು ನೀಡಿ ಗೌರವಿಸಿತು.

ಇದನ್ನೂ ಓದಿ | ಸೈಬರ್‌ ಸೇಫ್ಟಿ ಅಂಕಣ: ಅಂಗೈಯಲ್ಲಿ ಅಂತರ್ಜಾಲ, ಅರಿವಿದೆಯೇ ಅಪಾಯ?

ಕರ್ನಾಟಕ ಸಂಘ ಕತಾರ್‌ನ ಸದಸ್ಯರು ಕಾರ್ಯಕ್ರಮಗಳಲ್ಲಿ ಲೈವ್ ಹಾಡುಗಳಿಗೆ ನೃತ್ಯ ಪ್ರದರ್ಶನ ಮಾಡಿದರು. ಕತಾರ್‌ನ ಕೌಶಲ್ಯ ಅಭಿವೃದ್ಧಿ ಕೇಂದ್ರದ ಕಲಾವಿದರು ಸ್ವಾಗತ ಕಾರ್ಯಕ್ರಮವನ್ನು ಪ್ರದರ್ಶಿಸಿದರು. ಆಡಳಿತ ಮಂಡಳಿ ಸದಸ್ಯರಾದ ಮಂಜೋತ್ ಅವರು ಕಾರ್ಯಕ್ರಮವನ್ನು ನಡೆಸಿಕೊಟ್ಟರು ಮತ್ತು ಆಡಳಿತ ಸಮಿತಿಯ ಸದಸ್ಯರಾದ ನಿಲೇಶ್ ಅವರು ಧನ್ಯವಾದಗಳನ್ನು ಅರ್ಪಿಸಿದರು.

ಭಾರತೀಯ ಸಾಂಸ್ಕೃತಿಕ ಕೇಂದ್ರದ ಉಪಾಧ್ಯಕ್ಷ ಸುಬ್ರಹ್ಮಣ್ಯ ಹೆಬ್ಬಾಗಿಲು, ಭಾರತೀಯ ಕ್ರೀಡಾ ಕೇಂದ್ರದ ಅಧ್ಯಕ್ಷ ಇ.ಪಿ.ಅಬ್ದುಲ್ ರಹ್ಮಾನ್ ಮತ್ತು ಇತರ ಅಪೆಕ್ಸ್ ಸಂಸ್ಥೆಗಳ ಅಧ್ಯಕ್ಷರು ಮತ್ತು ಕರ್ನಾಟಕ ಸಂಘ ಕತಾರ್ ಆಡಳಿತ ಸಮಿತಿ ಸದಸ್ಯರು ಮತ್ತು ಸಲಹಾ ಮಂಡಳಿ ಸದಸ್ಯರು ಭಾಗವಹಿಸಿದ್ದರು.

Exit mobile version