Site icon Vistara News

Music Event | ಮಹಾರಾಷ್ಟ್ರದಲ್ಲಿ ಸಪ್ತಕದ ಯಶಸ್ವೀ ಸ್ವರ ಯಾತ್ರೆ

music event

ಮುಂಬೈ: ಸ್ವರ ಸಭಾ, ನಾಂದೇಡ ಸಂಸ್ಥೆಯ ಸಹಯೋಗದಲ್ಲಿ ನಡೆದ ಸ್ವರ-ಸಪ್ತಕ ಕಾರ್ಯಕ್ರಮ (Music Event) ಯಶಸ್ವಿಯಾಗಿದೆ. ಕರ್ನಾಟಕದ ಸ್ವರ ಮಾಂತ್ರಿಕರ ಗಾನಸುಧೆಗೆ ಮಹಾರಾಷ್ಟ್ರದ ಸಂಗೀತ ಪ್ರಿಯರು ತಲೆಬಾಗಿದ್ದಾರೆ.

ಸಾಂಸ್ಕೃತಿಕ ಸಂಸ್ಥೆಯಾದ ಸಪ್ತಕ ಬೆಂಗಳೂರು ನಾಲ್ಕನೇ ಬಾರಿ ಮಹಾರಾಷ್ಟ್ರದಲ್ಲಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮವನ್ನು ನೀಡಿದ್ದು, ಉತ್ತರ ಕನ್ನಡ ಜಿಲ್ಲೆಯ ಗುಂದ ಗ್ರಾಮದ ಯುವ ಗಾಯಕ ಸುದಾಮ ದಾನಗೇರಿ ಅವರ ಶ್ರೀ ರಾಗ ಹಾಗೂ ದುರ್ಗಾ ರಾಗಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ಬಳಿಕ ಪ್ರಸ್ತುತಿಪಡಿಸಲಾದ ಭಜನೆ ಭಾಗ್ಯದ ಲಕ್ಷ್ಮೀ ಬಾರಮ್ಮ ಭಕ್ತಿ ಹಾಡಿಗೆ ಉತ್ತರ ಕನ್ನಡದ ತಬಲಾ ವಾದಕ ಗಣೇಶ ಭಾಗ್ವತ ಗುಂಡ್ಕಲ್ ಹಾಗೂ ಸ್ಥಳೀಯ ಯುವ ಹಾರ್ಮೋನಿಯಂ ವಾದಕ ಮಿಹಿರ ಜೋಶಿ ಸಾಥ್ ನೀಡಿದರು.

ಪದ್ಮಾ ತಲವಲ್ಕರ್ ಶಿಷ್ಯೆಯ ಹಾಡಿನ ಮೋಡಿ

ಪದ್ಮಾ ತಲವಲ್ಕರ್ ಅವರ ಶಿಷ್ಯೆ ಯುವ ಗಾಯಕಿ ಯಶಸ್ವೀ ಸರ್ ಪೋತದಾರ್ ಅವರು ಸುಮಾರು ಒಂದು ಗಂಟೆ ಕಾಲ ರಾಗ ಬಿಹಾಗ್ ಹಾಡಿ ನಂತರ ಮಿಯಾ ಮಲ್ಹಾರವನ್ನು ಪ್ರಸ್ತುತಿಪಡಿಸಿದರು. ಕೊನೆಯಲ್ಲಿ ಎರಡು ಮರಾಠಿ ಅಭಂಗಗಳನ್ನು ಅಮೋಘ ಕಂಠದಿಂದ ಹಾಡಿದರು. ಇವರಿಗೆ ಪ್ರಶಾಂತ ಗಜ್ರೆ ತಬಲಾ, ಕೃಷ್ಣರಾಜ ಲಾವೇಕರ್ ಹಾರ್ಮೋನಿಯಂ ಸಾಥ್ ನೀಡಿದರು. ಇಬ್ಬರೂ ಗಾಯಕರ ಭಕ್ತಿಗೀತೆಗಳಿಗೆ ವಿಶ್ವೇಶ್ವರ ಜೋಶಿ ಅವರ ಪಖಾವಝ್ ಹಾಗೂ ಭಗವಾನ್ ದೇಶಮುಖ್ ಅವರ ಮಂಜೀರ ಹಾಗೂ ಲಿಜಿಂ ವಾದನ ಮಂತ್ರಮುಗ್ದಗೊಳ್ಳುವಂತೆ ಮಾಡಿತು.

ಸ್ವರ ಧಾರಾ ಸಂಗೀತ ಸಂಜೆ

ಆಗಸ್ಟ್‌ 28ರ ಭಾನುವಾರ ಸಂಜೆ ಸ್ವರಾರ್ಚನ ಮ್ಯೂಸಿಕ್ ಕ್ಲಬ್, ಮುಂಬಯಿ ಇವರ ಸಹಯೋಗದೊಂದಿಗೆ ಸ್ವರಧಾರಾ ಸಂಗೀತ ಕಾರ್ಯಕ್ರಮ ನಡೆಯಿತು. ಬೆಂಗಳೂರಿನ ಯುವ ಕಲಾವಿದೆ ಹಿರಣ್ಮಯೀ ಅವರ ರಾಗ ಮುಲ್ತಾನಿಯಲ್ಲಿ ವಿಸ್ತಾರವಾಗಿ ಆಲಾಪ, ಬೋಲ ಆಲಾಪ, ಲಯ ಸರಗಮ್, ಲಯಕಾರಿ, ಎಲ್ಲವನ್ನೂ ಮಾಡಿ ರಾಗದ ರಂಗನ್ನು ಹೆಚ್ಚಿಸುತ್ತಾ ಖಯಾಲ್ ಗಾಯನದ ಸೊಬಗನ್ನು ಪ್ರಸ್ತುತಪಡಿಸಿದರು. ನಂತರ ಒಂದು ಮರಾಠಿ ನಾಟ್ಯ ಗೀತೆ ಹಾಡಿ ರಸಿಕರ ಮನಗೆದ್ದರು. ಇವರಿಗೆ ಹೊನ್ನಾವರ ಮುಗಳಿ ಗ್ರಾಮದ ಹಾಲಿ ಗೋವಾ ನಿವಾಸಿ ಸಿದ್ದಾರ್ಥ ಮೇಸ್ತ ಹಾರ್ಮೋನಿಯಂ ಸಾಥ್‌ ನೀಡಿದ್ದು, ಎಲ್ಲರ ಗಮನ ಸೆಳೆಯಿತು.

ವೃತ್ತಿಯಲ್ಲಿ ಬ್ಯಾಂಕ್‌ ಅಧಿಕಾರಿ ಪ್ರವೃತ್ತಿಯಲ್ಲಿ ಸಂಗೀತಗಾರ

ಹಿರಿಯ ಗಾಯಕರಾದ ಸುರೇಶ ಬಾಪಟ್‌ ಅವರ ಕಂಠದಲ್ಲಿ ಬಂದ ರಾಗ ಪೂರ್ವಿ ಮೈಮರೆಯುವಂತೆ ಮಾಡಿತ್ತು. ನಂತರ ಶಹನಾ ಕಾನಡಾ ಹಾಗೂ ಬಸಂತಿ ಕಂಸ್ ಹಾಡಿ ವೃತ್ತಿಯಲ್ಲಿ ಬ್ಯಾಂಕ್ ಅಧಿಕಾರಿ ಆಗಿಯೂ ಪ್ರವೃತ್ತಿ ಶಾಸ್ತ್ರೀಯ ಸಂಗೀತ ಇಟ್ಟುಕೊಂಡು ಮಾಡಿದ ಸಾಧನೆಗೆ ಮೆಚ್ಚುಗೆ ವ್ಯಕ್ತವಾಯಿತು. ಸುರೇಶ್‌ ಅವರ ಕಂಠಕ್ಕೆ ಹಾರ್ಮೋನಿಯಂ ಜೋಶಿ ಸಾಥ್ ನೀಡಿದರೆ ಯತಿ ಭಾಗ್ವತ್ ತಬಲಾ ಸಹಕಾರ ಕಾರ್ಯಕ್ರಮದ ಯಶಸ್ಸಿಗೆ ಕಾರಣವಾಯಿತು.

ಸ್ವರಾರ್ಚನ ಸಂಸ್ಥೆಯ ಅಧ್ಯಕ್ಷೆ ಹಾಗೂ ಸ್ವತಃ ಗಾಯಕಿಯಾಗಿರುವ ಅರ್ಚನಾ ಕಾನ್ಹಾರೆ ಅವರು ತೋರಿಸುತ್ತಿರುವ ಸಂಘಟನಾ ಶಕ್ತಿ ಎಲ್ಲರ ಗಮನ ಸೆಳೆಯಿತು.

ಇದನ್ನೂ ಓದಿ | AR Rahman | ಕೆನಡಾ ರಸ್ತೆಗೆ ಎ.ಆರ್.ರೆಹಮಾನ್‌ ಹೆಸರು, ಇದಕ್ಕೆ ಸಂಗೀತ ನಿರ್ದೇಶಕ ಹೇಳಿದ್ದೇನು?

Exit mobile version