Site icon Vistara News

8th Pay Commission: ಭಾರಿ ವೇತನ ಹೆಚ್ಚಳ ನಿರೀಕ್ಷೆಯಲ್ಲಿ ಕೇಂದ್ರ ಸರ್ಕಾರಿ ನೌಕರರು

8th Pay Commission

ನವದೆಹಲಿ: ಪ್ರಧಾನಿ (PM) ನರೇಂದ್ರ ಮೋದಿ (Narendra Modi) ನೇತೃತ್ವದ 3.0 ಸರ್ಕಾರ ರಚನೆಯಾಗಿದ್ದು, ಸಂಪುಟ ಸಚಿವರು (Cabinet Ministers) ಭಾನುವಾರ ಪ್ರಮಾಣ ವಚನ ಸ್ವೀಕರಿಸಿದರು. ಹೊಸದಾಗಿ ರಚನೆಯಾಗಿರುವ ಸರಕಾರದಿಂದ ಈಗ 8ನೇ ವೇತನ ಆಯೋಗ (8th Pay Commission) ರಚನೆ ಸೇರಿದಂತೆ ಹಲವಾರು ನಿರೀಕ್ಷೆಗಳಿವೆ.

ಹೊಸ ಸರ್ಕಾರವು ಶೀಘ್ರದಲ್ಲೇ 8ನೇ ವೇತನ ಆಯೋಗದ ಬಗ್ಗೆ ಚರ್ಚೆಗಳನ್ನು ಪ್ರಾರಂಭಿಸಬಹುದು ಎನ್ನಲಾಗುತ್ತಿದೆಯಾದರೂ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಇನ್ನು ಕೆಲವೇ ತಿಂಗಳುಗಳಲ್ಲಿ ಮೋದಿ ಸರ್ಕಾರ ಕೇಂದ್ರ ಸರ್ಕಾರಿ ನೌಕರರಿಗೆ ದೊಡ್ಡ ಘೋಷಣೆ ಮಾಡಬಹುದು ಎನ್ನುವ ನಿರೀಕ್ಷೆಯಿದೆ.

ಸರ್ಕಾರಿ ನೌಕರರು, ಪಿಂಚಣಿದಾರರಿಗೆ ಅನುಕೂಲ

ಸರ್ಕಾರಿ ಸಿಬ್ಬಂದಿಯ ವೇತನ ಹೆಚ್ಚಳಕ್ಕೆ ಸಂಬಂಧಿಸಿ 8ನೇ ವೇತನ ಆಯೋಗವು ತನ್ನ ಶಿಫಾರಸುಗಳನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಿದೆ. ಇದು ಜಾರಿಯಾದರೆ ಕೋಟ್ಯಂತರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಅನುಕೂಲವಾಗಲಿದೆ.

ಈ ಹಿಂದೆ ಕೇಂದ್ರ ಸರ್ಕಾರವು ಪ್ರತಿ 10 ವರ್ಷಗಳಿಗೊಮ್ಮೆ ಹೊಸ ವೇತನ ಆಯೋಗದ ಶಿಫಾರಸುಗಳನ್ನು ಜಾರಿಗೆ ತರುತ್ತಿತ್ತು. 7ನೇ ವೇತನ ಆಯೋಗವು ಜನವರಿ 2016ರಲ್ಲಿ ಜಾರಿಗೆ ಬಂದಿತು. ಆದ್ದರಿಂದ ಭಾರತದಲ್ಲಿ 8 ನೇ ವೇತನ ಆಯೋಗವು ಜನವರಿ 2026ರಿಂದ ಜಾರಿಗೆ ಬರುವ ಸಾಧ್ಯತೆಯಿದೆ.

ಮುಂದಿನ 8ನೇ ವೇತನ ಆಯೋಗ 2025ರಲ್ಲೇ ರಚನೆಯಾಗಬೇಕು. ಇದು ನಡೆದರೆ ಕೇಂದ್ರ ಸರ್ಕಾರಿ ನೌಕರರ ವೇತನದಲ್ಲಿ ಭಾರಿ ಏರಿಕೆಯಾಗುವ ಸಾಧ್ಯತೆ ಇದೆ ಎಂಬುದು ತಜ್ಞರ ಅಭಿಪ್ರಾಯ.

ಹಲವು ಬದಲಾವಣೆ

8ನೇ ವೇತನ ಆಯೋಗದಲ್ಲಿ ಫಿಟ್‌ಮೆಂಟ್ ಅಂಶ ಸೇರಿದಂತೆ ಹಲವು ಬದಲಾವಣೆಗಳು ನಡೆಯುವ ಸಾಧ್ಯತೆ ಇದೆ. ಫಿಟ್‌ಮೆಂಟ್ ಅಂಶವೆಂದರೆ ಹಿಂದಿನ ವೇತನದಿಂದ ವೇತನ ಪರಿಷ್ಕೃರಣೆ ಮಾಡಲು ಪರಿಷ್ಕೃತ ವೇತನದ ಲೆಕ್ಕಾಚಾರ ನಡೆಸಲು ವೇತನ ಆಯೋಗವು ಸೂಚಿಸುವ ನಿರ್ದಿಷ್ಟ ಮೌಲ್ಯವಾಗಿದೆ. ಇದು ಒಂದು ವಿಶಿಷ್ಟ ಅಂಶದ ಮೂಲಕ ಮೂಲ ವೇತನದಲ್ಲಿನ ಪರಿಷ್ಕರಣೆಯನ್ನು ಸೂಚಿಸುತ್ತದೆ. ಫಿಟ್‌ಮೆಂಟ್ ಅಂಶವು ಕೇಂದ್ರ ಸರ್ಕಾರಿ ಸೇವೆಗಳಲ್ಲಿರುವ ಎಲ್ಲಾ ಉದ್ಯೋಗಿಗಳಿಗೆ ಅನ್ವಯಿಸುತ್ತದೆ.

ಉದ್ಯೋಗಿಗಳ ಫಿಟ್‌ಮೆಂಟ್ ಅಂಶವು 3.68 ಪಟ್ಟು ಹೆಚ್ಚಾಗುವ ಸಾಧ್ಯತೆ ಇದೆ. ಸರ್ಕಾರಿ ನೌಕರರ ಕನಿಷ್ಠ ಮೂಲ ವೇತನ 18,000 ರೂ. ಗಳಾಗಿದೆ. ಫಿಟ್‌ಮೆಂಟ್ ಅಂಶ ಹೆಚ್ಚಳದಿಂದ ಅವರ ಮೂಲ ವೇತನ 18,000 ರೂ. ನಿಂದ 26,000 ರೂ. ಗೆ ಏರಿಕೆಯಾಗಲಿದೆ.

Exit mobile version