Site icon Vistara News

Basavaraja Bommai : ಕಾಂಗ್ರೆಸ್‌ ಸರ್ಕಾರದಿಂದ ಮಾಧ್ಯಮ ಸ್ವಾತಂತ್ರ್ಯಹರಣ; ದೊಡ್ಡ ಮಟ್ಟದ ಹೋರಾಟಕ್ಕೆ ಬಿಜೆಪಿ ಅಣಿ

Basavaraja Bommai

ಬೆಂಗಳೂರು: ರಾಜ್ಯ ಸರ್ಕಾರದ ನಿಲುವುಗಳು (Policies of State Government), ಸಮಾಜವಿರೋಧಿ ನೀತಿಗಳನ್ನು ಟೀಕಿಸಿದವರ ಬಾಯಿ ಮುಚ್ಚಿಸಲು, ದಮನಕಾರಿ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಸರ್ವಾಧಿಕಾರಿ ಧೋರಣೆ (Autocratic leadership) ಅನುಸರಿಸಲಾಗುತ್ತಿದೆ. ಮಾಧ್ಯಮಗಳ ಸ್ವಾತಂತ್ರ್ಯವನ್ನೂ (Freedom of Media) ಹರಣ ಮಾಡಲಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraja Bommai) ಆರೋಪಿಸಿದ್ದು, ಇದರ ವಿರುದ್ಧ ದೊಡ್ಡ ಮಟ್ಟದಲ್ಲಿ ಹೋರಾಟ ನಡೆಸಲಾಗುವುದು ಎಂದು ಹೇಳಿದ್ದಾರೆ.

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನಿವಾಸದಲ್ಲಿ ಶುಕ್ರವಾರ ಸಂಜೆ ನಡೆದ ಪಕ್ಷದ ಬೆಂಗಳೂರು ಶಾಸಕರ ಸಭೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹನ್ನೊಂದು ಜನ ಶಾಸಕರು ನಕಲಿ ಪತ್ರ ಎಂದು ದೂರು ಕೊಟ್ಟ ತಕ್ಷಣ ಮಾಧ್ಯಮದವರಿಗೆ ನೋಟಿಸ್ ಕೊಡಲಾಗುತ್ತಿದೆ. ಮೊದಲು ಪತ್ರಕ್ಕೆ ಸಹಿ ಮಾಡಿದವರನ್ನು ಕರೆಯಿಸಿ ವಿಚಾರಣೆ ಮಾಡಬೇಕಿತ್ತು. ಅವರು ಸಹಿ ಮಾಡಿದ್ದು ನಕಲಿಯಾ ಅಥವಾ ನಿಜಾನಾ ಅನ್ನುವುದನ್ನು ವಿಚಾರಣೆ ಮಾಡಬೇಕು. ಶಾಸಕರು ಸಹಿ ಮಾಡಿರುವ ಬಗ್ಗೆ ಎಫ್ ಎಸ್ ಎಲ್ ಲ್ಯಾಬ್ ಗೆ ಕಳುಹಿಸಿ ತನಿಖೆ ನಡೆಸಲಿ, ಅದನ್ನು ಬಿಟ್ಟು ಸುದ್ದಿ ಪ್ರಸಾರ ಮಾಡಿದ ಮಾಧ್ಯಮಗಳನ್ನು ವಿಚಾರಣೆ ಕರೆಯುವುದು ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ. ಈ ರೀತಿ ಮಾಧ್ಯಮಗಳಿಗೆ ನೊಟಿಸ್‌ ಕೊಟ್ಟು ವಿಚಾರಣೆಗೆ ಕರೆದಿರುವುದು ಜಗತ್ತಿನಲ್ಲಿ ಎಲ್ಲಿಯೂ ನಡೆದಿರಲಿಲ್ಲ ಎಂದು ವಾಗ್ದಾಳಿ ನಡೆಸಿದರು.

ಬಿಲ್‌ ಆಗಿಲ್ಲ ಎಂದ ಕಾಂಟ್ರಾಕ್ಟರ್‌ಗಳ ಮೇಲೆ ಕೇಸ್‌!

ʻʻತಾವು ಮಾಡಿದ ಕಾಮಗಾರಿಗಳ ಬಿಲ್‌ ಆಗಿಲ್ಲ, ದಯವಿಟ್ಟು ಕ್ರಮ ಕೈಗೊಳ್ಳಿ ಎಂದು ಕಾಂಟ್ರಾಕ್ಟರ್‌ಗಳು ರಾಜ್ಯಪಾಲರಿಗೆ ದೂರು ನೀಡಿದರೆ, ಅವರ ವಿರುದ್ಧವೂ ಕೇಸ್ ದಾಖಲಿಸಲಾಗುತ್ತಿದೆ. ನಮ್ಮ ಅವಧಿಯಲ್ಲಿಯೂ ಗುತ್ತಿಗೆದಾರರು ಆರೋಪ ಮಾಡಿದ್ದರು, ನಾವು ಇದೇ ರೀತಿ ನಡೆದುಕೊಂಡಿದ್ದೇವಾ? ರಾಜ್ಯಪಾಲರಿಗೂ ಗೌರವ‌ ಇಲ್ಲವೇ?ʼʼ ಎಂದು ಬೊಮ್ಮಾಯಿ ಪ್ರಶ್ನಿಸಿದರು.

ʻʻಗುತ್ತಿಗೆದಾರರಿಗೆ ಒಂದು ಸಂಘಟನೆ ಇದೆ. ಅವರು ಕೆಲಸ ಮಾಡಿದ್ದಾರೆ. ಅವರು ನಿಮ್ಮೆಲ್ಲರ ಮನೆ ಬಾಗಿಲು ತಟ್ಟಿದ್ದಾರೆ. ಕೊನೆಗೆ ರಾಜ್ಯಪಾಲರು, ಪ್ರತಿಪಕ್ಷದ ನಾಯಕರನ್ನು ಭೇಟಿ ಮಾಡಿದ್ದಾರೆ. ಅವರು ನಿಮ್ಮ ವಿರುದ್ಧ ಧ್ವನಿ ಎತ್ತಿದರೆ ಅವರ ವಿರುದ್ದ ಕೇಸ್ ಹಾಕುತ್ತೀರಿ, ನಿಮ್ಮ ವಿರುದ್ದ ಯಾರೂ ಧ್ವನಿ ಎತ್ತಬಾರದು ಅನ್ನುವ ಧೋರಣೆ ತಾಳುತ್ತಿದ್ದೀರಿ ಅದನ್ನು ನಾವು ಖಂಡಿಸುತ್ತೇವೆʼʼ ಎಂದು ಹೇಳಿದರು.

ಇದನ್ನೂ ಓದಿ : BJP Politics : ಬಿಎಸ್‌ವೈ ಸಭೆಗೆ ಸೋಮಶೇಖರ್‌, ಬೈರತಿ ಗೈರು; ಯಡಿಯೂರಪ್ಪ ನೀಡಿದ ಮಹತ್ವದ ಸುಳಿವೇನು?

ಯಾರೂ ಬಿಜೆಪಿ ತೊರೆಯುವುದಿಲ್ಲ ಎಂದ ಬೊಮ್ಮಾಯಿ

ʻʻರಾಜ್ಯ ಸರ್ಕಾರ ಭ್ರಷ್ಟಾಚಾರ ಹಾಗೂ ಕಮಿಷನ್ ದಂಧೆಯ ವಿರುದ್ಧ ಕೇಳಿ ಬರುತ್ತಿರುವ ಆರೋಪವನ್ನು ಡೈವರ್ಟ್ ಮಾಡಲು ಬಿಜೆಪಿ ಶಾಸಕರು ಪಕ್ಷಾಂತರದ ಸುಳ್ಳು ಆರೋಪ ಮಾಡುತ್ತಿದ್ದಾರೆ. ಎಸ್.‌ಟಿ.ಸೋಮಶೇಖರ್, ಶಿವರಾಮ್ ಹೆಬ್ಬಾರ್ ಜೊತೆ ನಾನು ಮಾತನಾಡಿದ್ದು, ಬಿಜೆಪಿಯ ಯಾವುದೇ ಶಾಸಕರು ಪಕ್ಷ ತೊರೆಯುವುದಿಲ್ಲ‌‌ʼʼ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದರು.

ʻʻಬಿಜೆಪಿಯ ಯಾವುದೇ ಶಾಸಕರು ಪಕ್ಷ ತೊರೆಯುವುದಿಲ್ಲ, ಸ್ಥಳೀಯವಾಗಿರುವ ಸಮಸ್ಯೆಗಳನ್ನು ಹೇಳಿದ್ದಾರೆ. ಅದನ್ನು ರಾಜ್ಯಾಧ್ಯಕ್ಷರ ಗಮನಕ್ಕೆ ತಂದಿದ್ದೇವೆ. ಎಲ್ಲವನ್ನು ಬಗೆ ಹರಿಸುತ್ತೇವೆ. ನಾವೆಲ್ಲ ಒಗ್ಗಟ್ಟಾಗಿದ್ದೇವೆ.‌
ಕಾಂಗ್ರೆಸ್ ನವರ ವಿರುದ್ದ ಕೇಳಿ ಬಂದ ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಅವರ ಶಾಸಕರೇ ದಂಗೆ ಎದ್ದಿರುವುದನ್ನು ಮರೆ ಮಾಚಲು ಪಕ್ಷಾಂತರದ ಸುಳ್ಳು ಕತೆ ಹೇಳುತ್ತಿದ್ದಾರೆʼʼ ಎಂದು ಆರೋಪಿಸಿದರು ಬೊಮ್ಮಾಯಿ.

Exit mobile version