ಬೆಂಗಳೂರು : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ದೇಶವ್ಯಾಪಿ ಪಾದಯಾತ್ರೆಯಾದ ಭಾರತ್ ಜೋಡೊ, ಸೆಪ್ಟೆಂಬರ್ 7 ರಂದು (Bharat Jodo Yatra) ಕನ್ಯಾಕುಮಾರಿಯಿಂದ ಆರಂಭವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸೆಪ್ಟೆಂಬರ್ ಕೊನೆ ವಾರ ಅಥವಾ ಅಕ್ಟೋಬರ್ ಮೊದಲ ವಾರದಲ್ಲಿ ಭಾರತ್ ಜೋಡೊ ಯಾತ್ರೆ ರಾಜ್ಯಕ್ಕೆ ಪ್ರವೇಶ ಮಾಡಲಿದೆ.
ರಾಜ್ಯದಲ್ಲಿ ಒಟ್ಟು 511 ಕಿ.ಮೀ ಪಾದಯಾತ್ರೆ ಮಾಡಲಿದ್ದು, 21 ದಿನಗಳ ಕಾಲ ಭಾರತ್ ಜೋಡೊ ಯಾತ್ರೆ…ಕೈಗೊಳ್ಳಲಿದೆ. ರಾಜ್ಯದಲ್ಲಿ ಮೂರು ಹಂತಗಳಲ್ಲಿ ನಡೆಯಲಿದೆ. ಒಟ್ಟು 7 ಲೋಕಸಭಾ ಕ್ಷೇತ್ರಗಳು, 20 ವಿಧಾನಸಭಾ ಕ್ಷೇತ್ರಗಳಲ್ಲಿ ಭಾರತ್ ಜೋಡೋ ಯಾತ್ರೆ ಸಂಚಾರ ಮಾಡಲಾಗುತ್ತಿದೆ.
ರಾಜ್ಯದಲ್ಲಿ ಭಾರತ್ ಜೋಡೊ ಯಾತ್ರೆಯ ರೂಟ್ ಮ್ಯಾಪ್
ಮೊದಲ ಹಂತದಲ್ಲಿ ತಮಿಳುನಾಡು ರಾಜ್ಯದಿಂದ ಗುಂಡ್ಲುಪೇಟೆ ಮೂಲಕ ಕರ್ನಾಟಕ ರಾಜ್ಯಕ್ಕೆ ಪ್ರವೇಶ ಮಾಡಲಿದೆ. ಮೈಸೂರಿನಿಂದ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಮೇಲುಕೋಟೆಗೆ ಯಾತ್ರೆ ತೆರಳಲಿದೆ. ನಂತರ ಮೇಲುಕೋಟೆಯಿಂದ ರಂಗನಾಥಪುರದ ಮೂಲಕ ಚಿತ್ರದುರ್ಗ ಜಿಲ್ಲೆಯ ಪ್ರವೇಶ ಮಾಡಲಿದೆ. ರಂಗನಾಥಪುರ ದಿಂದ ತುಮಕೂರಿನ ತುರುವೇಕೆರೆ ಹಾಗೂ ಅಲ್ಲಿಂದ ಚಿಕ್ಕನಾಯಕನಹಳ್ಳಿ ಹುಳಿಯಾರ್ ತಲುಪಲಿದೆ. ಹುಳಿಯಾರ್ ಮೂಲಕ ಚಿತ್ರದುರ್ಗ ಹಿರಿಯೂರುಗೆ ಸಂಚಾರ ಮಾಡಲಿದೆ. ಹಿರಿಯೂರಿನಿಂದ ಚಳ್ಳಕೆರೆಗೆ ಯಾತ್ರೆ ಕೈಗೊಂಡು ಚಳ್ಳಕೆರೆಯಿಂದ ರಾಯಪುರಕ್ಕೆ ಯಾತ್ರೆ ಮಾಡಲಿದೆ. ರಾಯಪುರದಿಂದ ಹಿರೇಹಾಳ್ ಮೂಲಕ ಆಂಧ್ರಪ್ರದೇಶ ರಾಜ್ಯಕ್ಕೆ ಪ್ರವೇಶ ಮಾಡಲಿದೆ.
ಇದನ್ನೂ ಓದಿ | Bharat Jodo Yatra | ಕಾಂಗ್ರೆಸ್‌ನಿಂದ ಭಾರತ್ ಜೋಡೊ ಯಾತ್ರೆಯ ಪೂರ್ವಸಿದ್ಧತಾ ಸಭೆ ಇಂದು
ಎರಡನೇ ಹಂತದ ರೂಟ್ ಮ್ಯಾಪ್
ಹೀರೆಹಾಳ್ ನಿಂದ ಓಬಾಳಪುರ ಮೂಲಕ ರಾಜ್ಯಕ್ಕೆ ಪ್ರವೇಶ ಮಾಡಿ ಹಲಕುಂಡಿ, ಬಳ್ಳಾರಿಯಲ್ಲಿ ಭಾರತ್ ಜೋಡೊ ಯಾತ್ರೆ ಮಾಡಲಿದೆ. ಬಳಿಕ ಬಳ್ಳಾರಿನಿಂದ ಅಲುರ್ ಮೂಲಕ ಆಂಧ್ರಪ್ರದೇಶಕ್ಕೆ ಪ್ರವೇಶ ಮಾಡಲಿದೆ.
ಮೂರನೇ ಹಂತದ ರೂಟ್ ಮ್ಯಾಪ್
ತಮಿಳುನಾಡಿನ ಮಾಧವರಂ ಮೂಲಕ ರಾಯಚೂರಿನ ಗಿಲ್ಲೆಸೂಗೂರು ಮೂಲಕ ರಾಜ್ಯಕ್ಕೆ ಪ್ರವೇಶ ಮಾಡಿ, ಗಿಲ್ಲೆಸೂಗೂರುನಿಂದ ಯರೇಗಾರಕ್ಕೆ ಪಾದಯಾತ್ರೆ ಕೈಗೊಳ್ಳಲಿದೆ. ಯರೇಗಾರ ಮೂಲಕ ರಾಯಚೂರು ಸಂಚಾರದ ಬಳಿಕ ರಾಯಚೂರಿನಿಂದ ದೇವಸೂಗೂರುಗೆ ಭಾರತ್ ಜೋಡೊ ಯಾತ್ರೆ ಮಾಡಲಿದೆ. ದೇವಸೂಗೂರಿನಿಂದ ವಿಕಾರಬಾದ್ ಮೂಲಕ ತೆಲಂಗಾಣಕ್ಕೆ ಭಾರತ್ ಜೋಡೊ ಪಾದಯಾತ್ರೆ ಪ್ರವೇಶ ಮಾಡಲಿದೆ.
ಈ ಕುರಿತು ಇಂದು ಸಂಜೆ 7 ಗಂಟೆಗೆ ಖಾಸಗಿ ಹೊಟೇಲ್‌ನಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಲಿದೆ. ರಾಜ್ಯದಲ್ಲಿ ಪಾದಯಾತ್ರೆ ಸಂಚರಿಸುವ ಎಂಟು ಜಿಲ್ಲೆಗಳಲ್ಲಿ ಇಂದು ಭಾರತ್ ಜೋಡೊ ಲೋಗೊ ಬಿಡುಗಡೆಯಾಗಲಿದೆ. ಕೆಪಿಸಿಸಿ ಕಚೇರಿಯಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಲೊಗೊ ಬಿಡುಗಡೆ ಮಾಡಲಿದ್ದಾರೆ. ಒಟ್ಟು ೩,೫೦೦ ಕಿ.ಮೀಟರ್ ಉದ್ದದ ಈ ಯಾತ್ರೆ ಕನ್ಯಾಕುಮಾರಿಯಿಂದ ಆರಂಭವಾಗಲಿದೆ. ಭಾರತ್ ಜೋಡೊ ತಯಾರಿ ಹಾಗೂ ಸೆಪ್ಟೆಂಬರ್ 12 ರಂದು ಅಧಿವೇಶನ ಪ್ರಾರಂಭದ ಬಗ್ಗೆ ಚರ್ಚೆ ನಡೆಯಲಿದೆ.
ಇದನ್ನೂ ಓದಿ| ವಿಸ್ತಾರ TOP 10 NEWS | ಮತ್ತೆ 40% ಕಮಿಷನ್ ಸದ್ದು, ಸಾವರ್ಕರ್ ವಾರ್ ಮತ್ತಿತರ ಪ್ರಮುಖ ಸುದ್ದಿಗಳಿವು