ಬೆಂಗಳೂರು: ಶಿವಮೊಗ್ಗದ ರಾಗಿಗುಡ್ಡೆಯಲ್ಲಿ ಭಾನುವಾರ (ಅಕ್ಟೋಬರ್ 5) ನಡೆದಿದ್ದ ಈದ್ ಮಿಲಾದ್ ಮೆರವಣಿಗೆ (Eid Milad Procession) ಸಂದರ್ಭದಲ್ಲಿ ಉಂಟಾದ ಗಲಭೆ (Shivamogga Violence), ಕಲ್ಲು ತೂರಾಟಕ್ಕೆ ಸಂಬಂಧಿಸಿ ಪ್ರತಿಪಕ್ಷ ಬಿಜೆಪಿ ವಿರುದ್ಧ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ಕಿಡಿಕಾರಿದ್ದಾರೆ. ಶಿವಮೊಗ್ಗದಲ್ಲಿ ಹೆಣ ಬೀಳದ ಕಾರಣ ಬಿಜೆಪಿಯವರು (BJP Karnataka) ಭ್ರಮನಿರಸನಗೊಂಡಿದ್ದಾರೆ ಎಂದು ಕುಟುಕಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ದಿನೇಶ್ ಗುಂಡೂರಾವ್, ಶಿವಮೊಗ್ಗ ಘಟನೆಯಲ್ಲಿ ಭಾಗಿಯಾದ ಕಿಡಿಗೇಡಿಗಳ ವಿರುದ್ಧ ಪೊಲೀಸರು ಕ್ರಮ ತೆಗೆದುಕೊಂಡಿದ್ದಾರೆ. ದುಷ್ಕೃತ್ಯ ನಡೆಸಿದ್ದವರ ಮೇಲೆ ಪ್ರಕರಣ ದಾಖಲಾಗಿದೆ. ಆದರೂ ಬಿಜೆಪಿಯವರು ಈ ಘಟನೆಯನ್ನು ವಿಪರೀತವಾಗಿ ವೈಭವೀಕರಿಸುತ್ತಿದ್ದಾರೆ. ಯಾಕೆ ಈ ವೈಭವೀಕರಣ? ರಾಜಕೀಯ ಲಾಭಕ್ಕಾಗಿಯೇ? (Political gains) ಅಥವಾ ಶಿವಮೊಗ್ಗದ ಘಟನೆಯಲ್ಲಿ ಹೆಣ ಬೀಳಲಿಲ್ಲ ಎಂಬ ಬೇಸರಕ್ಕಾಗಿಯೇ? ಎಂದು ಪ್ರಶ್ನೆ ಮಾಡಿದ್ದಾರೆ.
ಶಿವಮೊಗ್ಗದ ಗಲಭೆಯಲ್ಲಿ ಹೆಣ ಬೀಳುವುದನ್ನು ಬಿಜೆಪಿಯವರು ಬಕ ಪಕ್ಷಿಯಂತೆ ಕಾಯುತ್ತಿದ್ದರು. ಏಕೆಂದರೆ ಹೆಣದ ರಾಜಕೀಯದಲ್ಲಿ ಬಿಜೆಪಿಯವರಷ್ಟು ಸಿದ್ಧಹಸ್ತರು ದೇಶದಲ್ಲೇ ಇಲ್ಲ. ಯಾವುದೇ ಹೆಣ ಬಿದ್ದರೂ ಮಳೆಗಾಲದಲ್ಲಿ ದಿಢೀರ್ ಹುಟ್ಟುವ ಜಿಗಣೆಗಳಂತೆ ಬಿಜೆಪಿಯವರು ಕ್ರಿಯಾಶೀಲರಾಗುತ್ತಾರೆ. ಆದರೆ, ಶಿವಮೊಗ್ಗದಲ್ಲಿ ಹೆಣ ಬೀಳದೆ ಭ್ರಮನಿರಸನಗೊಂಡಿದ್ದಾರೆ ಎಂದು ದಿನೇಶ್ ಗುಂಡೂರಾವ್ ಕಿಡಿಕಾರಿದ್ದಾರೆ.
ಶಿವಮೊಗ್ಗದಲ್ಲಿ ಆದಂತಹ ಗಲಭೆಯು ಈ ಹಿಂದೆ ಬಿಜೆಪಿ ಸರ್ಕಾರವಿದ್ದಾಗಲೂ (BJP government) ನಡೆದಿದ್ದವು. ಆದರೆ, ಆಗಿನ ಸರ್ಕಾರ ಕೇವಲ ಕಠಿಣ ಕ್ರಮದ ಭರವಸೆ ನೀಡುತಿತ್ತು. ನಮ್ಮ ಸರ್ಕಾರ ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಂಡಿದೆ. ಸಮಾಜದಲ್ಲಿ ಶಾಂತಿ ತರುವುದು ನಮ್ಮ ಸರ್ಕಾರದ ಜವಾಬ್ದಾರಿಯಾಗಿದೆ. ಇದರಲ್ಲಿ ನಾವು ಯಾರ ಮುಲಾಜನ್ನೂ ನೋಡುವುದಿಲ್ಲ ಎಂದು ದಿನೇಶ್ ಗುಂಡೂರಾವ್ ಅವರು ಸೋಷಿಯಲ್ ಮೀಡಿಯಾ (Social Media) ಎಕ್ಸ್‌ನಲ್ಲಿ ಪೋಸ್ಟ್ ಹಾಕಿ ತಿರುಗೇಟು ನೀಡಿದ್ದಾರೆ.
ಶಿವಮೊಗ್ಗದಲ್ಲಿ ಆಗಿದ್ದೇನು?
ಭಾನುವಾರ ಬೆಳಗ್ಗೆ ಈದ್ ಮಿಲಾದ್ ಮೆರವಣಿಗೆ ವೇಳೆ ರಾಗಿಗುಡ್ಡದಲ್ಲಿ ತಲ್ವಾರ್ ಮಾದರಿ ಕಟೌಟ್ ವಿಚಾರಕ್ಕೆ ಗೊಂದಲ ಸೃಷ್ಟಿಯಾಗಿತ್ತು. ಕಟೌಟ್ ವಿಚಾರವಾಗಿ ಹಿಂದು-ಮುಸ್ಲಿಂ ಗದ್ದಲ ಎದ್ದಿತ್ತು. ರಾಗಿಗುಡ್ಡ ಮುಖ್ಯರಸ್ತೆಯಲ್ಲಿ ಕಟೌಟ್ ಹಾಕಲಾಗಿದ್ದರಿಂದ ಜನರು ಪ್ರತಿಭಟನೆ ಮಾಡಿದ್ದರು. ತಕ್ಷಣವೇ ಎಸ್‌ಪಿ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದರು. ನಿಷೇಧಾಜ್ಞೆ ಜಾರಿ ಮಾಡಿ ಪರಿಸ್ಥಿತಿಯನ್ನು ನಿಯಂತ್ರಿಸಲಾಗಿತ್ತು. ಶಿವಮೊಗ್ಗದ ರಾಗಿಗುಡ್ಡ-ಶಾಂತಿನಗರದಲ್ಲಿ ಟಿಪ್ಪು ಸುಲ್ತಾನ್ ಕಟೌಟ್ ಅಳವಡಿಸಲಾಗಿದ್ದಲ್ಲದೆ, ಟಿಪ್ಪುವಿನ ಕಟೌಟ್ನ ಕೆಳಭಾಗದಲ್ಲಿ ಆಕ್ಷೇಪಾರ್ಹ ಸಂಗತಿ ಇದ್ದ ಹಿನ್ನೆಲೆಯಲ್ಲಿ ಪೊಲೀಸರು ಬಿಳಿ ಬಣ್ಣವನ್ನು ಬಳಿದಿದ್ದರು. ಇದರಿಂದ ರೊಚ್ಚಿಗೆದ್ದ ರಾಗಿಗುಡ್ಡದ ಶಾಂತಿನಗರ ನಿವಾಸಿಗಳು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದರು. ಕಿಡಿಗೇಡಿಗಳು ಮನೆ, ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ್ದರು.
ಇದನ್ನೂ ಓದಿ: Cabinet Meeting : ಇಂದಿನ ಸಂಪುಟ ಸಭೆಯಲ್ಲಿ ಭಕ್ತವತ್ಸಲ ಆಯೋಗದ ವರದಿ ಚರ್ಚೆ; ಹಿಂದುಳಿದ ವರ್ಗಕ್ಕೆ ಸಿಗಲಿದೆಯೇ ಬಲ?
ಕಲ್ಲು ತೂರಾಟಕ್ಕೆ ಸಂಬಂಧಿಸಿ ಪೊಲೀಸರು ಇದುವರೆಗೆ 24 ಎಫ್‌ಐಆರ್‌ಗಳನ್ನು ದಾಖಲಿಸಿದ್ದು, 60 ಮಂದಿಯನ್ನು ಬಂಧಿಸಿದ್ದಾರೆ. ಜಿಲ್ಲಾ ಎಸ್‌ಪಿ ಮಿಥುನ್ ಕುಮಾರ್ (SP Mithun Kumar) ಈ ವಿಷಯವನ್ನು ತಿಳಿಸಿದ್ದು, ಬಂಧಿತ ಆರೋಪಿಗಳಲ್ಲಿ ಕೆಲವರನ್ನು ಶಿವಮೊಗ್ಗ, ಇನ್ನು ಕೆಲವರನ್ನು ಚಿತ್ರದುರ್ಗ ಜೈಲಿಗೆ ಹಾಕಲಾಗುವುದು ಎಂದು ತಿಳಿಸಿದ್ದಾರೆ. ಗಲಭೆಯಲ್ಲಿ ಒಂದು ಕಾರು, ಒಂದು ತ್ರಿಚಕ್ರ ವಾಹನ, ಎರಡು ದ್ವಿಚಕ್ರ ವಾಹನಕ್ಕೆ ಹಾನಿಯಾಗದೆ. ಗಲಭೆಯಲ್ಲಿ 7 ಮನೆ ಗಾಜು ಪುಡಿಪುಡಿಯಾಗಿದೆ ಎಂದು ವಿವರ ನೀಡಿದರು.