ಬೆಂಗಳೂರು: ನಾನು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ದೆಹಲಿಗೆ ತೆರಳುತ್ತಿದ್ದು, ನಿಗಮ ಮಂಡಳಿ ನೇಮಕ ಪಟ್ಟಿ ಅಂತಿಮ ಮಾಡಿಸಿಕೊಂಡು ಬರುತ್ತೇವೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DCM DK Shivakumar) ಅವರು ತಿಳಿಸಿದರು.
ದೆಹಲಿಗೆ ಪ್ರಯಾಣ ಬೆಳೆಸುವ ಮುನ್ನ ಸದಾಶಿವನಗರ ನಿವಾಸದ ಬಳಿ ಅವರು ಮಾಧ್ಯಮಗಳಿಗೆ ಸೋಮವಾರ ಪ್ರತಿಕ್ರಿಯೆ ನೀಡಿದ ಡಿ.ಕೆ. ಶಿವಕುಮಾರ್, ನಿಗಮ ಮಂಡಳಿ ನೇಮಕ ವಿಚಾರವಾಗಿ ಈಗಾಗಲೇ ಸಭೆ ಮಾಡಿ ಪಟ್ಟಿ ಕಳುಹಿಸಿಕೊಟ್ಟಿದ್ದೇವೆ. ಈ ಮಧ್ಯೆ ಬೇರೆ ಬೇರೆ ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ಇದ್ದ ಕಾರಣ ಅದು ಅಂತಿಮವಾಗಿಲ್ಲ. ಈಗ ದೆಹಲಿಯಲ್ಲಿ ಈ ಪಟ್ಟಿ ಅಂತಿಮವಾಗಲಿದೆ ಎಂದು ತಿಳಿಸಿದರು. ಈ ಮೂಲಕ ಇನ್ನೆರಡು ದಿನಗಳಲ್ಲಿ ಅಂತಿಮವಾಗಲಿದೆ ಎಂಬ ಮನ್ಸೂಚನೆಯನ್ನು ಡಿಸಿಎಂ ಡಿ.ಕೆ. ಶಿವಕುಮಾರ್ ಪರೋಕ್ಷವಾಗಿ ನೀಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭೇಟಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಸಮಯಾವಕಾಶ ನೀಡಿರುವ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಡಿ.ಕೆ. ಶಿವಕುಮಾರ್, “ಅವರು ಹೋಗಿ ಭೇಟಿ ಮಾಡುತ್ತಾರೆ” ಎಂದು ತಿಳಿಸಿದರು.
ಡಿಸೆಂಬರ್ 21ಕ್ಕೆ ಸಿಡಬ್ಲ್ಯೂಸಿ ಸಭೆ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಡಿ.ಕೆ. ಶಿವಕುಮಾರ್, “ಇಲ್ಲೂ ಇದೆ, ನಾಗ್ಪುರದಲ್ಲೂ ಇದೆ” ಎಂದು ಹೇಳಿದರು.
ಸಿಎಂ ಸಿದ್ದರಾಮಯ್ಯ- ಶೆಟ್ಟರ್ ರಹಸ್ಯ ಮಾತುಕತೆ; ಲೋಕಸಭೆಗೆ ಮಾಜಿ ಸಿಎಂ?
ಮುಂಬರುವ ಲೋಕಸಭಾ ಚುನಾವಣೆಗೆ (Lok Sabha Election 2024) ಧಾರವಾಡ ಕ್ಷೇತ್ರದಿಂದ ಮಾಜಿ ಸಿಎಂ ಜಗದೀಶ್ ಶೆಟ್ಟರ್ (Former CM Jagadish Shettar) ಸ್ಪರ್ಧೆ ಮಾಡಲಿದ್ದಾರೆಯೇ? ಸಿಎಂ ಸಿದ್ದರಾಮಯ್ಯ (CM Siddaramaiah) ಹಾಗೂ ಜಗದೀಶ್ ಶೆಟ್ಟರ್ ಭೇಟಿ, ಮಾತುಕತೆ ಇಂಥದ್ದೊಂದು ಚರ್ಚೆಯನ್ನು ಹುಟ್ಟುಹಾಕಿದೆ. ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರ 68ನೇ ಜನ್ಮ ದಿನ ಹಿನ್ನೆಲೆಯಲ್ಲಿ ಅವರ ನಿವಾಸಕ್ಕೆ ಸೋಮವಾರ (ಡಿ.17) ಆಗಮಿಸಿದ್ದ ಸಿಎಂ ಸಿದ್ದರಾಮಯ್ಯ ಅವರು ಶೆಟ್ಟರ್ ಜತೆ ಕೆಲಕಾಲ ರಹಸ್ಯವಾಗಿ ಮಾತನಾಡಿದ್ದರು. ಆ ಬಳಿಕ ಮಾತನಾಡಿದ್ದ ಜಗದೀಶ್ ಶೆಟ್ಟರ್, ಲೋಕಸಭೆಗೆ ಸ್ಪರ್ಧೆ ಮಾಡುವಂತೆ ನನಗೆ ಇದುವರೆಗೂ ಪಕ್ಷ ಏನನ್ನೂ ಹೇಳಿಲ್ಲ. ಪಕ್ಷ ಬಯಸಿದರೆ ಸ್ಪರ್ಧಿಸಲು ಸಿದ್ಧನಿದ್ದೇನೆ ಎಂದು ಹೇಳಿದ್ದರು. ಅಲ್ಲದೆ, ಅವರ ಸಹೋದರ ಬಿಜೆಪಿ ಎಂಎಲ್‌ಸಿ ಪ್ರದೀಪ್ ಶೆಟ್ಟರ್ (BJP MLC Pradeep Shettar) ಸಹ ಸ್ಪರ್ಧೆಗೆ ಸಿದ್ಧ ಎಂದು ಹೇಳಿದ್ದಾರೆ. ಈ ಮೂಲಕ ಹೊಸ ಚರ್ಚೆಗೆ ನಾಂದಿ ಹಾಡಲಾಗಿದೆ.
ಜಗದೀಶ್ ಶೆಟ್ಟರ್ ಹುಟ್ಟುಹಬ್ಬದ ನಿಮಿತ್ತ ಅವರ ನಿವಾಸಕ್ಕೆ ಇದೇ ಮೊದಲ ಬಾರಿ ಸಿಎಂ ಸಿದ್ದರಾಮಯ್ಯ ಭೇಟಿ ನೀಡಿದ್ದರು. ಇನ್ನು ಈ ಭೇಟಿಯಿಂದ ಅನೇಕ ರಾಜಕೀಯ ಪಟ್ಟುಗಳಿವೆ ಎಂದೂ ಹೇಳಲಾಗುತ್ತಿದೆ. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಶೆಟ್ಟರ್ ಅವರನ್ನು ವಾಪಸ್ ಬಿಜೆಪಿಗೆ ಕರೆ ತರುವ ಬಗ್ಗೆ ಬಿಜೆಪಿ ಪ್ರಯತ್ನ ಮಾಡುತ್ತಿದೆ ಎಂಬ ಸುದ್ದಿಗಳು ಹರಿದಾಡಿದ್ದವು. ಆದರೆ, ಉಭಯ ಪಕ್ಷಗಳ ನಾಯಕರು ಇದನ್ನು ನಿರಾಕರಿಸುತ್ತಲೇ ಬಂದಿದ್ದಾರೆ. ಈಗ ಶೆಟ್ಟರ್ ಅವರಿಗೆ ಕಾಂಗ್ರೆಸ್ ಪ್ರಾಧಾನ್ಯತೆ ಕೊಡುತ್ತಿದೆ. ಅವರ ಹಿಂದೆ ಪಕ್ಷ ನಿಂತಿದೆ ಎಂಬ ಸಂದೇಶವನ್ನು ಸಾರುವ ಉದ್ದೇಶವೇ ಈ ಭೇಟಿ ಎಂದು ಹೇಳಲಾಗುತ್ತಿದೆ.
ಇನ್ನು ಲೋಕಸಭಾ ಚುನಾವಣೆಯಲ್ಲಿ ಲಿಂಗಾಯತರ ಮತಗಳನ್ನು ಸೆಳೆಯಲು ಕಾಂಗ್ರೆಸ್‌ಗೆ ಶೆಟ್ಟರ್ ಟ್ರಂಪ್ ಕಾರ್ಡ್ ಆಗಿದ್ದಾರೆ. ಸದ್ಯ ಎದ್ದಿರುವ ಜಾತಿಗಣತಿ ವಿವಾದ ಕಾಂಗ್ರೆಸ್‌ಗೆ ಮುಳುವಾಗುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಶೆಟ್ಟರ್ ಜತೆ ನಾವಿದ್ದೇವೆ ಎಂಬ ಸಂದೇಶವನ್ನು ರವಾನೆ ಮಾಡಿ ಲಿಂಗಾಯತ ನಾಯಕರನ್ನು ಭದ್ರಗೊಳಿಕೊಳ್ಳುವ ಪ್ಲ್ಯಾನ್‌ನಲ್ಲಿ ಕಾಂಗ್ರೆಸ್ ಇದೆ ಎನ್ನಲಾಗಿದೆ. ಒಂದು ವೇಳೆ ಧಾರವಾಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಶೆಟ್ಟರ್ ಆಯ್ಕೆಯಾಗಿಲ್ಲವಾದರೂ, ಯಾರನ್ನು ಮಾಡಬಹುದು ಎಂಬ ವಿಷಯದಲ್ಲಿ ಅವರಿಗೆ ಆದ್ಯತೆ ಹಾಗೂ ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ ಎನ್ನಲಾಗಿದೆ. ಅಲ್ಲದೆ, ಸಹೋದರ ಪ್ರದೀಪ್ ಶೆಟ್ಟರ್ ಅವರನ್ನು ಆಪರೇಷನ್ ಹಸ್ತದ ಮೂಲಕ ಬರಮಾಡಿಕೊಂಡು ಕಣಕ್ಕಿಳಿಸುವ ಬಗ್ಗೆಯೂ ಇಲ್ಲಿ ಚರ್ಚೆಯಾಗಿದೆ ಎನ್ನಲಾಗಿದೆ.
ಲೋಕಸಭೆ ಟಿಕೆಟ್ ಆಕಾಂಕ್ಷಿ ನಾನಲ್ಲ, ಸೂಚಿಸಿದರೆ ಸ್ಪರ್ಧೆ ಮಾಡುವೆ: ಜಗದೀಶ್ ಶೆಟ್ಟರ್
ಬಳಿಕ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ್ದ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಸಿಎಂ ಸಿದ್ದರಾಮಯ್ಯ ಅವರು ಹುಟ್ಟುಹಬ್ಬದ ಶುಭ ಕೋರಿದ್ದಾರೆ. ರಾಜಕೀಯ ಚರ್ಚೆ ಏನು ಆಗಿಲ್ಲ. ಸಹಜವಾಗಿಯೇ ಪ್ರದೀಪ್ ಶೆಟ್ಟರ್ ಕೂಡ ಮನೆಗೆ ಬಂದಿದ್ದರು. ಸಿದ್ದರಾಮಯ್ಯನವರು ನಮ್ಮ ರಾಜಕೀಯ ಜೀವನದ ಒಡನಾಟವನ್ನು ಈ ವೇಳೆ ನೆನಪಿಸಿಕೊಂಡರು. ನಾನು ಲೋಕಸಭೆ ಟಿಕೆಟ್ ಆಕಾಂಕ್ಷಿಯಲ್ಲ. ಪಕ್ಷವೂ ನನ್ನನ್ನು ಸ್ಪರ್ಧಿಸುವಂತೆ ಹೇಳಿಲ್ಲ. ಮುಂದೆ ಹೇಳಿದರೆ ನೋಡೋಣ. ಲೋಕಸಭಾ ಚುನಾವಣೆಗೆ ಟಿಕೆಟ್ ಆಕಾಂಕ್ಷಿಗಳ ಬಗ್ಗೆ ಚರ್ಚೆಯು ಜನವರಿ ನಂತರ ಶುರುವಾಗುತ್ತದೆ. ಪಕ್ಷ ಬಯಸಿದರೆ ಸ್ಪರ್ಧಿಸಲು ಸಿದ್ಧ ಎಂದು ಹೇಳಿದ್ದಾರೆ.
ನಮ್ಮ ಜಾತಿಯವರಿಗೇ ಟಿಕೆಟ್ ಕೊಡಬೇಕು: ಪ್ರದೀಪ್ ಶೆಟ್ಟರ್!
ಈ ವೇಳೆ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ್ದ ಬಿಜೆಪಿ ಎಂಎಲ್‌ಸಿ ಪ್ರದೀಪ್ ಶೆಟ್ಟರ್, ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಲಿಂಗಾಯತ ಸಮುದಾಯ ಪ್ರಬಲವಾಗಿದೆ. ನಮ್ಮ ಜಾತಿಯವರಿಗೆ ಟಿಕೆಟ್ ಕೊಡಬೇಕು. ಬಿಜೆಪಿಯಲ್ಲಿ ಟಿಕೆಟ್ ಕೊಟ್ಟರೆ ಸ್ಪರ್ಧೆಗೆ ಸಿದ್ಧ. ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು. ಜಗದೀಶ್ ಶೆಟ್ಟರ್ ಇನ್ನೂ ಹತ್ತು ವರ್ಷ ಸೆಂಟ್ರಲ್ ಕ್ಷೇತ್ರದ ಶಾಸಕರಾಗಿರುತ್ತಾರೆ ಎಂದು ಮಹೇಶ್ ಟೆಂಗಿನಕಾಯಿ ಹೇಳಿದ್ದರು. ಈಗ ಏನಾಯ್ತು? ರಾಜಕೀಯದಲ್ಲಿ ಹಾಗೆ ಆಗೋದು ಎಂದು ಹೇಳಿದ್ದಾರೆ. ಈ ಮೂಲಕ ತಾವು ಪಕ್ಷಾಂತರ ಮಾಡುವ ಸಂದೇಶವನ್ನು ನೀಡಿದ್ದಾರೆಯೇ ಎಂಬ ಅನುಮಾನವನ್ನು ಸಹ ಹುಟ್ಟುಹಾಕಿದ್ದಾರೆ.