Site icon Vistara News

Cauvery water dispute : ರಾಜಕೀಯ ಲಾಭಕ್ಕಾಗಿ ಕಾಂಗ್ರೆಸ್‌ನಿಂದಲೇ ಕಾವೇರಿ ವಿವಾದದ ಹುಟ್ಟು: ಅಣ್ಣಾಮಲೈ

Tamilnadu BJP state president Annamalai in front of KRS Dam with BJP and Congress Logo

ಬೆಂಗಳೂರು: ಕಾವೇರಿ ನದಿ ವಿವಾದವು (Cauvery water dispute) ದಿನೇ ದಿನೆ ತೀವ್ರ ಸ್ವರೂಪವನ್ನು ಪಡೆದುಕೊಳ್ಳುತ್ತಿದೆ. ಬುಧವಾರವಷ್ಟೇ ರಾಜ್ಯ ಸರ್ಕಾರದಿಂದ ಸರ್ವಪಕ್ಷಗಳ ಸಭೆ (Karnataka All Party meeting) ಕರೆದು ಕಾವೇರಿ ಸೇರಿದಂತೆ ರಾಜ್ಯದ ಪ್ರಮುಖ ನೀರಾವರಿ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿತ್ತು. ಅಲ್ಲದೆ, ಕಾನೂನು ಹೋರಾಟಕ್ಕೆ ಬೆಂಬಲ ನೀಡುವ ಬಗ್ಗೆ ಸರ್ವಾನುಮತದ ತೀರ್ಮಾನವನ್ನು ತೆಗೆದುಕೊಳ್ಳಲಾಗಿತ್ತು. ಈ ನಡುವೆ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ (Tamil Nadu BJP state president K Annamalai) ಕಾಂಗ್ರೆಸ್‌ ಸರ್ಕಾರದ (Congress Government) ಬಗ್ಗೆ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಇಷ್ಟೆಲ್ಲ ವಿವಾದವಾಗಲು ಕಾಂಗ್ರೆಸ್ಸೇ ಕಾರಣ. ರಾಜಕೀಯ ಲಾಭಕ್ಕಾಗಿಯೇ (Political gains) ಅವರು ಈ ಸಮಸ್ಯೆಯನ್ನು ಸೃಷ್ಟಿ ಮಾಡಿದ್ದಾರೆ ಎಂದು ಗುಡುಗಿದ್ದಾರೆ.

ಈಗ ಕಾಂಗ್ರೆಸ್‌ ಸರ್ಕಾರ ಮತ್ತೊಂದು ವಿವಾದಿತ ಹೆಜ್ಜೆಯನ್ನಿಡಲು ಮುಂದಾಗಿದೆ. ಕಾವೇರಿ ನದಿಗೆ ಅಡ್ಡಲಾಗಿ ಮೇಕೆದಾಟುವಿನಲ್ಲಿ ಅಣೆಕಟ್ಟು ನಿರ್ಮಿಸಲು ಮುಂದಾಗಿದ್ದು, ಈ ಮೂಲಕ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ನಡುವೆ ಭಿನ್ನಾಭಿಪ್ರಾಯ ಮೂಡುವಂತೆ ಮಾಡಿದೆ ಎಂದು ಅಣ್ಣಾಮಲೈ ಕಿಡಿಕಾರಿದ್ದಾರೆ.

ಇದನ್ನೂ ಓದಿ: Operation Hasta : ಕಾಂಗ್ರೆಸ್‌ ಸೇರಿದ ಆಯನೂರು ಮಂಜುನಾಥ್‌, ನಾಗರಾಜಗೌಡ; ಜಿಲ್ಲಾ ನಾಯಕರ ಸೇರ್ಪಡೆಗೆ ಡಿಕೆಶಿ ಕರೆ

ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಕಾವೇರಿ ನದಿ ನೀರಿನ ಸಮಸ್ಯೆ ಪ್ರಾರಂಭವಾಯಿತು. ಅವರು ರಾಜಕೀಯ ಅಲ್ಪಾವಧಿ ಲಾಭಕ್ಕಾಗಿ ಈ ಸಮಸ್ಯೆಯನ್ನು ಸೃಷ್ಟಿಸಿದರು. ಈಗ ತಮಿಳುನಾಡಿಗೆ ಒಂದು ಹನಿ ನೀರನ್ನೂ ಬಿಡುವುದಿಲ್ಲ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DCM DK Shivakumar) ಹೇಳಿದ್ದಾರೆ. ಒಟ್ಟಾರೆಯಾಗಿ ಅವರು ಸಮಸ್ಯೆಯನ್ನು ಮತ್ತಷ್ಟು ಜಟಿಲ ಮಾಡುತ್ತಿದ್ದಾರೆ ಎಂದು ಅಣ್ಣಾಮಲೈ ಆರೋಪ ಮಾಡಿದ್ದಾರೆ.

ಕಾವೇರಿ ನದಿ ನೀರು ಹಂಚಿಕೆ ವಿವಾದದ ವಿಚಾರಣೆಗಾಗಿ ಪೀಠವನ್ನು ರಚಿಸಲು ಸುಪ್ರೀಂ ಕೋರ್ಟ್ ಒಪ್ಪಿಕೊಂಡಿದೆ. ತಮಿಳುನಾಡಿನ ಬೆಳೆಗಳಿಗೆ ಪ್ರತಿದಿನ 24,000 ಕ್ಯೂಸೆಕ್ ನೀರನ್ನು ನಿರಂತರವಾಗಿ ಬಿಡುಗಡೆ ಮಾಡಲು ಕರ್ನಾಟಕಕ್ಕೆ ನಿರ್ದೇಶನ ನೀಡುವಂತೆ ತಮಿಳುನಾಡು ಕೋರಿದೆ ಎಂದು ಅಣ್ಣಾಮಲೈ ವಿವರಿಸಿದ್ದಾರೆ.

ಕಾವೇರಿ ವಿವಾದವು ದಶಕಗಳಿಂದ ಕರ್ನಾಟಕ ಮತ್ತು ತಮಿಳುನಾಡು ನಡುವೆ ನಡೆಯುತ್ತಿದೆ. ಈ ಪ್ರದೇಶದ ಲಕ್ಷಾಂತರ ಜನರಿಗೆ ನೀರಾವರಿ ಮತ್ತು ಕುಡಿಯುವ ನೀರಿನ ಪ್ರಮುಖ ಮೂಲ ಕಾವೇರಿ ನದಿ ನೀರಾಗಿದೆ. ಅಲ್ಲಿಂದ ನೀರು ಪಡೆಯುವುದು ದೊಡ್ಡ ಹೋರಾಟದ ಮಾದರಿಯಂತಾಗಿದೆ ಎಂದು ಅಣ್ಣಾಮಲೈ ಹೇಳಿದ್ದಾರೆ.

1990ರಲ್ಲಿ ಕಾವೇರಿ ಜಲ ವಿವಾದ ನ್ಯಾಯಮಂಡಳಿ ರಚನೆ

ನೀರು ಹಂಚಿಕೆ ಸಾಮರ್ಥ್ಯಕ್ಕೆ ಸಂಬಂಧಿಸಿದಂತೆ ತಮಿಳುನಾಡು, ಕೇರಳ, ಕರ್ನಾಟಕ ಮತ್ತು ಪುದುಚೆರಿ ನಡುವಿನ ವಿವಾದಗಳನ್ನು ನಿರ್ಣಯಿಸಲು ಕೇಂದ್ರ ಸರ್ಕಾರವು 1990ರ ಜೂನ್ 2ರಂದು ಕಾವೇರಿ ಜಲ ವಿವಾದ ನ್ಯಾಯಮಂಡಳಿಯನ್ನು (ಸಿಡಬ್ಲ್ಯೂಡಿಟಿ) ರಚಿಸಿತು. ಕಾವೇರಿ ಅಂತಾರಾಜ್ಯ ಜಲಾನಯನ ಪ್ರದೇಶವಾಗಿದ್ದು, ಇದು ಕರ್ನಾಟಕದಲ್ಲಿ ಹುಟ್ಟಿ ತಮಿಳುನಾಡು ಮತ್ತು ಪುದುಚೆರಿ ಮೂಲಕ ಹರಿದು ಬಂಗಾಳ ಕೊಲ್ಲಿಗೆ ಸೇರುತ್ತದೆ.

ಇದನ್ನೂ ಓದಿ: Chandrayaana 3 : ಎಲ್ಲಿದೆ ಚಂದ್ರಯಾನ ಸಂಭ್ರಮ; ಮಣಿಪುರ ನೆನೆದು ನಟ ಕಿಶೋರ್‌ ರೋದನ

ಕಾವೇರಿ ಜಲಾನಯನ ಪ್ರದೇಶದ ಒಟ್ಟು ಜಲಾನಯನ ಪ್ರದೇಶವು 81,155 ಚದರ ಕಿ.ಮೀ, ಇದರಲ್ಲಿ ನದಿಯ ಜಲಾನಯನ ಪ್ರದೇಶವು ಕರ್ನಾಟಕದಲ್ಲಿ ಸುಮಾರು 34,273 ಚದರ ಕಿ.ಮೀ, ಕೇರಳದಲ್ಲಿ 2,866 ಚ.ಕಿ.ಮೀ ಮತ್ತು ತಮಿಳುನಾಡು ಮತ್ತು ಪುದುಚೆರಿಯಲ್ಲಿ ಉಳಿದ 44,016 ಚ.ಕಿ.ಮೀ. ವ್ಯಾಪ್ತಿಯನ್ನು ಒಳಗೊಂಡಿದೆ.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Exit mobile version