Site icon Vistara News

‌DK Shivakumar: ಡಿಕೆಶಿಗೆ ಸಿಬಿಐ ಸಂಕಷ್ಟ; ಚಾನೆಲ್‌ ಹೂಡಿಕೆ ಬಗ್ಗೆ ನೋಟಿಸ್

DK Shivakumar

ಬೆಂಗಳೂರು: ಡಿಸಿಎಂ ಡಿ.ಕೆ. ಶಿವಕುಮಾರ್‌ (DCM ‌DK Shivakumar) ಅವರಿಗೆ ಮತ್ತೆ ಸಂಕಷ್ಟ ಎದುರಾಗಿದೆ. ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ (Disproportionate assets case) ಸಂಬಂಧಿಸಿದಂತೆ ಚಾನೆಲ್‌ನಲ್ಲಿ ಮಾಡಿರುವ ಹೂಡಿಕೆಯ ವಿವರಗಳನ್ನು ಕೇಳಿ ಸಿಬಿಐನಿಂದ ನೋಟಿಸ್‌ (CBI notice) ಜಾರಿ ಮಾಡಲಾಗಿದೆ.

ಕೇರಳ ಮೂಲದ ಜೈಹಿಂದ್ ಚಾನೆಲ್‌ಗೆ ಸಿಬಿಐ ನೋಟಿಸ್ ಜಾರಿ ಮಾಡಲಾಗಿದೆ. ಜೈಹಿಂದ್ ಕಮ್ಯುನಿಕೇಷನ್ಸ್ ಪ್ರೈವೇಟ್ ಲಿಮಿಟೆಡ್‌ನ ಮ್ಯಾನೇಜಿಂಗ್ ಡೈರೆಕ್ಟರ್‌ ಬಿಎಸ್‌ ಶಿಜು ಅವರಿಗೆ ಸಿಬಿಐನ ಬೆಂಗಳೂರು ಕಚೇರಿಯಿಂದ ಈ ನೋಟಿಸ್ ಅನ್ನು ಜಾರಿ ಮಾಡಲಾಗಿದೆ. ಅಗತ್ಯ ದಾಖಲೆಗಳೊಂದಿಗೆ ಜನವರಿ 11 ರಂದು ಬೆಂಗಳೂರಿನಲ್ಲಿರುವ ಸಿಬಿಐ ಕಚೇರಿಗೆ ವಿಚಾರಣೆಗೆ ಹಾಜರಾಗುವಂತೆ ನಿರ್ದೇಶನ ನೀಡಲಾಗಿದೆ.

ಅಪರಾಧ ದಂಡ ಸಂಹಿತೆಯ ಸೆಕ್ಷನ್ 91 ಪ್ರಕಾರ ನೋಟಿಸ್ ಕಳುಹಿಸಲಾಗಿದೆ. ಡಿ.ಕೆ. ಶಿವಕುಮಾರ್ ಮತ್ತು ಅವರ ಪತ್ನಿ ಉಷಾ ಶಿವಕುಮಾರ್ ಅವರು ಮಾಡಿದ ಹೂಡಿಕೆಗಳ ವಿವರ ಮತ್ತು ಅವರಿಗೆ ಪಾವತಿಸಿದ ಲಾಭಾಂಶಗಳು, ಷೇರು ವಹಿವಾಟುಗಳು, ಹಣಕಾಸಿನ ವಹಿವಾಟುಗಳ ವಿವರ ನೀಡಬೇಕು. ಇಷ್ಟೇ ಅಲ್ಲದೆ, ಜೈಹಿಂದ್ ಹೆಸರಿನಲ್ಲಿ ಅವರು ಮಾಡಿದ ಬ್ಯಾಂಕ್ ವಹಿವಾಟುಗಳ ವಿವರಗಳು, ಲೆಡ್ಜರ್ ಖಾತೆಗಳು, ಒಪ್ಪಂದದ ಟಿಪ್ಪಣಿಗಳ ವಿವರ ನೀಡಲು ಹೇಳಲಾಗಿದೆ. ಶಿವಕುಮಾರ್ ಅವರ ಪುತ್ರ ಮತ್ತು ಇತರ ಕುಟುಂಬ ಸದಸ್ಯರು ವಾಹಿನಿಯಲ್ಲಿ ಮಾಡಿರುವ ಹೂಡಿಕೆಯ ವಿವರಗಳನ್ನೂ ನೀಡುವಂತೆ ಸಿಬಿಐ ಕೇಳಿದೆ.

ಶಿವಕುಮಾರ್ ಅವರ ವಿರುದ್ಧದ ಪ್ರಕರಣದ ತನಿಖೆ ನಡೆಸುತ್ತಿರುವ ಏಜೆನ್ಸಿಯ ಬೆಂಗಳೂರು ಘಟಕ ಜೈಹಿಂದ್ ಕಮ್ಯುನಿಕೇಷನ್ಸ್ ಪ್ರೈವೇಟ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕರಿಗೆ 2024 ಜನವರಿ 11 ರಂದು ತನಿಖಾಧಿಕಾರಿ ಕೋರಿದ ಎಲ್ಲ ಅಗತ್ಯ ದಾಖಲೆಗಳೊಂದಿಗೆ ತನ್ನ ಮುಂದೆ ಹಾಜರಾಗುವಂತೆ ಸೂಚಿಸಲಾಗಿದೆ. CrPC ಯ ಸೆಕ್ಷನ್ 91ರ ಅಡಿಯಲ್ಲಿ ನೋಟಿಸ್‌ ನೀಡಲಾಗಿದೆ.

ಅಕ್ರಮ ಎಸಗಿಲ್ಲ, ಎಲ್ಲ ದಾಖಲೆ ನೀಡುವೆವು

ಜೈಹಿಂದ್ ವ್ಯವಸ್ಥಾಪಕ ನಿರ್ದೇಶಕ, ಕೇರಳದ ಕಾಂಗ್ರೆಸ್ ನಾಯಕ ಬಿ.ಎಸ್. ಶಿಜು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ದಾಖಲೆ ನೀಡುವಂತೆ ಸಿಬಿಐ ಸೂಚನೆ ನೀಡಿದೆ. ತನಿಖಾ ಸಂಸ್ಥೆ ಕೋರಿರುವ ಎಲ್ಲ ದಾಖಲೆಗಳನ್ನು ಒದಗಿಸುತ್ತೇವೆ. ಎಲ್ಲ ದಾಖಲೆಗಳು ನಮ್ಮ ಬಳಿ ಇದ್ದು, ಅಕ್ರಮ ಎಸಗಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: Self Harming : ವರ್ಷದ ಮೊದಲ ದಿನವೇ ಬಿಬಿಎ ವಿದ್ಯಾರ್ಥಿನಿ ನೇಣು ಬಿಗಿದು ಆತ್ಮಹತ್ಯೆ

2013 ಮತ್ತು 2018ರ ನಡುವೆ ಆದಾಯಕ್ಕೆ ಅನುಗುಣವಾಗಿರದ 74 ಕೋಟಿ ರೂಪಾಯಿಗೂ ಹೆಚ್ಚು ಆಸ್ತಿಯನ್ನು ಗಳಿಸಿದ್ದಾರೆ ಎಂದು ಆರೋಪಿಸಿ ಶಿವಕುಮಾರ್ ವಿರುದ್ಧ ಸಿಬಿಐ 2020ರಲ್ಲಿ ಪ್ರಕರಣ ದಾಖಲಿಸಿತ್ತು.

Exit mobile version