ಬೆಂಗಳೂರು: ರಾಜ್ಯಪಾರು ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದಲ್ಲಿ ತಲ್ಲಣ ಶುರುವಾಗಿದೆ. ಹೀಗಾಗಿ ಮುಂದಿನ ಕಾನೂನು ಹೋರಾಟದ ಬಗ್ಗೆ ಚರ್ಚೆ ನಡೆಸಲು ಸಿಎಂ ಸಿದ್ದರಾಮಯ್ಯ ಅವರು ಆ.28ರಂದು ಸಂಜೆ 4 ಗಂಟೆಗೆ ವಿಧಾನಸೌಧದ 3ನೇ ಮಹಡಿಯಲ್ಲಿರುವ ಕೊಠಡಿ ಸಂ. 334, ಸಮ್ಮೇಳನ ಸಭಾಂಗಣದಲ್ಲಿ ‘ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ’ (CLP Meeting)ಯನ್ನು ಕರೆದಿದ್ದಾರೆ.
ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರು ಹಾಗೂ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಸಭೆಯ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಈ ಸಭೆಯಲ್ಲಿ ಕೆ.ಪಿ.ಸಿ.ಸಿ. ಅಧ್ಯಕ್ಷರು ಹಾಗೂ ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರು, ವಿಧಾನ ಪರಿಷತ್ತಿನ ಸಭಾ ನಾಯಕರಾದ ಎನ್.ಎಸ್. ಭೋಸರಾಜು ರವರು ಹಾಗೂ ಪಕ್ಷದ ಎಲ್ಲಾ ಕಾರ್ಯಾಧ್ಯಕ್ಷರುಗಳು ಉಪಸ್ಥಿತರಿರುತ್ತಾರೆ. ಆದ್ದರಿಂದ ಎಲ್ಲಾ ಸದಸ್ಯರು ತಪ್ಪದೇ ಶಾಸಕಾಂಗ ಪಕ್ಷದ ಸಭೆಯಲ್ಲಿ ಭಾಗವಹಿಸಬೇಕೆಂದು ಕಾರ್ಯದರ್ಶಿ ಅಲ್ಲಮಪ್ರಭು ಹೇಳಿದ್ದಾರೆ.
ಇದನ್ನೂ ಓದಿ | ಇದನ್ನೂ ಓದಿ: CM Siddaramaiah: ಆ.23ಕ್ಕೆ ಸಿಎಂ ಸಿದ್ದರಾಮಯ್ಯ ದೆಹಲಿಗೆ; ಕಾನೂನು ಹೋರಾಟಕ್ಕೆ ಹೈ ಕಮಾಂಡ್ ಬೆಂಬಲ ಕೋರಲು ಭೇಟಿ
ನಾನು ಡಲ್ ಆಗಿಲ್ಲ, ನನ್ನ ಹೋರಾಟದ ಜೋಶ್ ಹೆಚ್ಚಾಗಿದೆ: ಸಿಎಂ ಸಿದ್ದರಾಮಯ್ಯ
ಬೆಂಗಳೂರು: ನಿಜೆಪಿ- ಜೆಡಿಎಸ್ ಸುಳ್ಳು ದೂರುಗಳ ಮೂಲಕ ನನ್ನನ್ನು ಹಣಿಯುವುದಕ್ಕೆ ಮುಂದಾಗಿವೆ. ನಾನು ರಾಜಕೀಯ ಜೀವನದಲ್ಲಿ ನಿರಂತರವಾಗಿ ಹೋರಾಟ ಮಾಡುತ್ತಾ ಬಂದಿದ್ದು, ಮುಂದೆಯೂ ಮಾಡುತ್ತೇನೆ. ಇಂಥ ಹೋರಾಟದ ಸಂದರ್ಭದಲ್ಲಿ ನನ್ನ ಜೋಶ್ ಜಾಸ್ತಿಯಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಹೇಳಿದರು.
ಮುಡಾ ಪ್ರಕರಣದಲ್ಲಿ (MUDA case, MUDA scam) ರಾಜ್ಯಪಾಲರು ತನಿಖೆಗೆ ಅನುಮತಿ ನೀಡಿರುವುದು ಹಾಗೂ ರಾಜೀನಾಮೆಗೆ ಬಿಜೆಪಿ ಆಗ್ರಹದ ಕುರಿತು ಅವರು ಮಾಧ್ಯಮಗಳ ಮುಂದೆ ಮಾತನಾಡಿದರು. ನಾನು ಡಲ್ ಆಗಿಲ್ಲ. ಬಹಳ ಆಕ್ಟೀವ್ ಆಗಿಯೇ ಇದ್ದೇನೆ. ನಾನು ಬಡವರ ಪರ ಇದ್ದೇನೆ, ಗ್ಯಾರಂಟಿಗಳನ್ನು ಜಾರಿಗೆ ತಂದಿದ್ದೇನೆ ಎಂಬ ಕಾರಣಕ್ಕಾಗಿ ಸಿದ್ದರಾಮಯ್ಯನನ್ನು ಮುಗಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ನಾನು, ನನ್ನ ರಾಜಕೀಯ ಜೀವನ ತೆರೆದ ಪುಸ್ತಕ. ನಿನ್ನೆಗೆ ನಾನು ಮಂತ್ರಿಯಾಗಿಯೇ ನಲುವತ್ತು ವರ್ಷಗಳಾದವು. ಯಾವತ್ತೂ ತಪ್ಪು ಮಾಡಿಲ್ಲ, ಮಾಡೋದೂ ಇಲ್ಲ. ನನ್ನಲ್ಲಿ ಒಂದು ಕಪ್ಪು ಚುಕ್ಕಿಯೂ ಇಲ್ಲ. ನನ್ನ ಜೀವನದಲ್ಲಿ ಮಸಿ ಬಳಿಯಬೇಕು ಅಂತ ಇದನ್ನೆಲ್ಲ ಮಾಡುತ್ತಿದ್ದಾರೆ. ಬಿಜೆಪಿ ರಾಜಕೀಯ ದುರುದ್ದೇಶದಿಂದ ಪ್ರತಿಭಟನೆ ಮಾಡುತ್ತಿದೆ ಎಂದು ಅವರು ಆಪಾದಿಸಿದರು.
ಸುಳ್ಳು ಆಪಾದನೆ, ಕೇಸ್ ಇತ್ಯಾದಿಗಳ ಬಗ್ಗೆ ರಾಜಕೀಯವಾಗಿಯೂ ಹೋರಾಡುತ್ತೇನೆ; ಕಾನೂನಾತ್ಮಕವಾಗಿಯೂ ಹೋರಾಡುತ್ತೇನೆ. ರಾಜ್ಯಪಾಲರ ಆದೇಶ ಪ್ರಶ್ನೆ ಮಾಡಿ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದೇವೆ. ತಡೆಯಾಜ್ಞೆ ಕೊಡಿ ಅಂತ ಕೇಳಿದ್ದೇವೆ. ನನ್ನ ಪರವಾಗಿ ವಾದಿಸಲು ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಬರ್ತಾ ಇದ್ದಾರೆ. ನ್ಯಾಯಾಲಯದ ಮೇಲೆ ಸಂಪೂರ್ಣ ವಿಶ್ವಾಸ ಇದೆ ಎಂದು ಅವರು ತಿಳಿಸಿದರು.