ಚಿತ್ರದುರ್ಗ: ಜಾತಿ ವ್ಯವಸ್ಥೆ ದೇವರ ಸೃಷ್ಟಿಯಲ್ಲ. ಸ್ವಾರ್ಥಿ ಮನುಷ್ಯರ ಸೃಷ್ಟಿ. ಅಸಮಾನತೆ ಹೋಗಲಾಡಿಸದೆ ಶೋಷಿತ ಸಮುದಾಯಗಳ ಏಳಿಗೆ ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಹೇಳಿದರು.
ಭೋವಿ ಗುರುಪೀಠದ ಜಗದ್ಗುರು ಸಿದ್ಧರಾಮೇಶ್ವರ ಮಹಾಸಂಸ್ಥಾನದ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿಯವರ ದೀಕ್ಷಾ ರಜತ ಮಹೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯೆ ಕಲಿಯಲು ಅವಕಾಶ ಸಿಕ್ಕ ಕೆಲವರು ಮಾತ್ರ ಆರ್ಥಿಕವಾಗಿ ಮೇಲೆ ಬಂದರು. ಅವಕಾಶ ಇಲ್ಲದವರು ಕುಲ ಕಸುಬನ್ನಷ್ಟೆ ಮಾಡಿಕೊಂಡು ಹಿಂದುಳಿದರು. ಶೋಷಿತ ಸಮುದಾಯಗಳ ವಿಮೋಚನೆಗೆ ಹೋರಾಡಿದ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಶಿಕ್ಷಣದಿಂದಲೇ ಮೇಧಾವಿಯಾದರು ಎಂದು ವಿವರಿಸಿದರು.
ಶತಮಾನಗಳ ಕಾಲ ಗುಲಾಮಗಿರಿ ಇದ್ದುದರಿಂದ ತಳಸಮುದಾಯಗಳು ಹಿಂದೆ ಉಳಿದವು. ಈಗಲೂ ಶಿಕ್ಷಣದ ಕೊರತೆಯಿಂದ ಆ ಗುಲಾಮಗಿರಿ ಮನಸ್ಥಿತಿಯಿಂದ ಹೊರಗೆ ಬರಲು ಸಾಧ್ಯವಾಗಿಲ್ಲ. ಆದ್ದರಿಂದ ಸ್ವಾಭಿಮಾನ ಬೆಳೆಸಿಕೊಂಡು ಗುಲಾಮಗಿರಿ ಮನಸ್ಥಿತಿಯಿಂದ ಹೊರಗೆ ಬರಬೇಕು ಎಂದರು.
ಹಿಂದುಳಿದವರು, ದಲಿತರು, ಅಲ್ಪಸಂಖ್ಯಾತರು ಶಿಕ್ಷಣ ಪಡೆಯಲು ಸಾಧ್ಯವಾಗಿಲ್ಲ. ಶಿಕ್ಷಣ ಪ್ರತಿಯೊಬ್ಬರ ಮೂಲಭೂತ ಹಕ್ಕು ಎಂದರು.
ಎಸ್‌ಸಿ/ಎಸ್‌ಟಿ ಸಮುದಾಯಗಳ ಜನಸಂಖ್ಯೆ ರಾಜ್ಯದಲ್ಲಿ ಶೇ.24 ಇದ್ದಾರೆ. ಈ ಜನಸಂಖ್ಯೆಗೆ ಸಮವಾಗಿ ಅಭಿವೃದ್ಧಿ ಆಯವ್ಯಯದ ಶೇ.24 ರಷ್ಟು ಹಣವನ್ನು ಈ ಸಮುದಾಯಗಳ ಏಳಿಗೆಗಾಗಿ ಮೀಸಲಿಟ್ಟಿದ್ದು ನಮ್ಮ ಸರ್ಕಾರ. ಭೋವಿ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿದ್ದು ನಮ್ಮ ಸರ್ಕಾರ. ಭೋವಿ ಸಮುದಾಯದ ಪ್ರತಿನಿಧಿಯನ್ನು ಕೆಪಿಎಸ್‌ಸಿ ಸದಸ್ಯರನ್ನಾಗಿ ಮಾಡಿದ್ದು ನಮ್ಮ ಸರ್ಕಾರ ಎಂದರು.
ಭೋವಿ ಅಭಿವೃದ್ಧಿ ನಿಗಮವನ್ನು ಭೋವಿ-ವಡ್ಡರ ಅಭಿವೃದ್ಧಿ ನಿಗಮವಾಗಿ ಮರುನಾಮಕರಣ ಮಾಡುಬೇಕು ಎನ್ನುವ ಬೇಡಿಕೆ ಇದೆ. ಈ ಬೇಡಿಕೆಯನ್ನು ಈಡೇರಿಸಲಾಗುವುದು. ಇನ್ನು ಸಿದ್ಧರಾಮೇಶ್ವರ ಅಧ್ಯಯನಪೀಠಕ್ಕಾಗಿ ಬೇಡಿಕೆ ಇದೆ. ಈ ಬೇಡಿಕೆಯನ್ನೂ ಈಡೇರಿಸಲಾಗುವುದು ಎಂದರು.
ಸಚಿವರಾದ ಶಿವರಾಜ್ ತಂಗಡಗಿ, ಡಿ.ಸುಧಾಕರ್, ಸತೀಶ್ ಜಾರಕಿಹೊಳಿ, ಶಾಸಕರಾದ ರಘುಮೂರ್ತಿ, ವೀರೇಂದ್ರ ಪಪ್ಪಿ, ಎಚ್.ವಿ.ವೆಂಕಟೇಶ್, ಶ್ರೀನಿವಾಸ್, ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ರವಿಕುಮಾರ್, ಮಾಜಿ ಸಚಿವ ಅರವಿಂದ ಲಿಂಬಾವಳಿ, ಮಾಜಿ ಸಂಸದರಾದ ಚಂದ್ರಣ್ಣ ಸೇರಿ ಹಲವು ಮಂದಿ ಸಮಾಜದ ಮುಖಂಡರು ಮತ್ತು ಸಮುದಾಯದ ಶ್ರೀಗಳು ಹಾಗೂ ನಾನಾ ಸಮುದಾಯಗಳ ಮುಖಂಡರು ಉಪಸ್ಥಿತರಿದ್ದರು.
ವಾರದಲ್ಲಿ 4 ದಿನ ಶಾಲೆಗಳಿಗೆ ಮೊಟ್ಟೆ ಪೂರೈಸಲು ಅಜೀಂ ಪ್ರೇಮ್‌ಜಿ ಫೌಂಡೇಶನ್ ಜತೆ ಒಪ್ಪಂದ: ಸಿಎಂ
ಬೆಂಗಳೂರು: ವಾರದಲ್ಲಿ 4 ದಿನಗಳು ಸರ್ಕಾರಿ ಶಾಲೆಗಳು ಹಾಗೂ ಸರ್ಕಾರಿ ಅನುದಾನಿತ ಶಾಲೆಗಳಿಗೆ ಮೊಟ್ಟೆಯನ್ನು ಸರಬರಾಜು ಮಾಡಲು ಅಜೀಂ ಪ್ರೇಮ್‌ಜಿ ಪ್ರತಿಷ್ಠಾನದೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ತಿಳಿಸಿದರು.
ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದ ಸರ್ಕಾರಿ ಶಾಲೆಗಳಲ್ಲಿ ವಾರದಲ್ಲಿ 6 ದಿನ ಪೌಷ್ಟಿಕ ಆಹಾರ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ಮಾತನಾಡಿದ ಅವರು, ಮಕ್ಕಳು ಆರೋಗ್ಯವಂತರಾಗಿರಲು ಪೌಷ್ಟಿಕ ಆಹಾರ ಅಗತ್ಯ. ಮಾನಸಿಕ ಆರೋಗ್ಯ ಮತ್ತು ಉತ್ತಮ ಶಿಕ್ಷಣಕ್ಕೆ ಗುಣಮಟ್ಟದ ಆಹಾರ ಮುಖ್ಯ. ಉಪಹಾರ ಇಲ್ಲದೆ ಶಾಲೆಗೆ ಬಂದು, ಊಟ ಇಲ್ಲದೆ ಮಧ್ಯಾಹ್ನದವರೆಗೂ ಶಾಲೆಯಲ್ಲಿರುವ ಮಕ್ಕಳನ್ನು ನಾನು ನೋಡಿದ್ದೇನೆ. ಹೀಗಾಗಿ ವಾರದಲ್ಲಿ ಎರಡು ದಿನ ಊಟ ಮತ್ತು ಮೊಟ್ಟೆ ಕೊಡಲು ಮುಂದಾದೆವು. ಈಗ ಅಜೀಂ ಪ್ರೇಮ್‌ಜಿ ಫೌಂಡೇಷನ್ ಅವರು ವಾರದಲ್ಲಿ ನಾಲ್ಕು ದಿನ ಮಕ್ಕಳಿಗೆ ಮೊಟ್ಟೆ ನೀಡಲು ಮತ್ತು ಪೂರಕ ಪೌಷ್ಠಿಕ ಆಹಾರ ಒದಗಿಸುವ ಪುಣ್ಯದ ಕಾರ್ಯಕ್ಕೆ ಸರ್ಕಾರದ ಜೊತೆಗೆ ಕೈಜೋಡಿಸಿದ್ದಾರೆ. ಅವರಿಗೆ ಧನ್ಯವಾದಗಳು ಎಂದು ತಿಳಿಸಿದರು.
ವೈಜ್ಞಾನಿಕವಾಗಿ, ವೈಚಾರಿಕವಾಗಿ ಮಕ್ಕಳು ವಿಕಾಸ ಹೊಂದಬೇಕು. ಆಗ ಮಾತ್ರ ಸಮಾಜಮುಖಿ ಆಗಲು ಸಾಧ್ಯ. ಬಡವರ ಮಕ್ಕಳಿಗೆ ಉತ್ತಮ ಶಿಕ್ಷಣಕ್ಕಾಗಿ ಅವಕಾಶಗಳನ್ನು ಸೃಷ್ಟಿಸುವುದು ನಮ್ಮ ಆಶಯ. ಈ ಕಾರಣಕ್ಕೆ ಸಮವಸ್ತ್ರ, ಶೂ, ಸಾಕ್ಸ್ ಕೊಡುವ ಜೊತೆಗೆ ಹೆಚ್ಚೆಚ್ಚು ವಸತಿ ಶಾಲೆಗಳನ್ನು ತೆರೆಯುತ್ತಿದ್ದೇವೆ ಎಂದರು.
ನಾಳೆ ಅಂಕೋಲಾಕ್ಕೆ ಭೇಟಿ
ಮಳೆಯಿಂದ ರಸ್ತೆ, ಮನೆ ಬಿದ್ದಿರುವುದು ಹಾಗೂ ಬೆಳೆ ಹಾನಿಯಾಗಿರುವುದಕ್ಕೆ ಪರಿಹಾರ ಕಾರ್ಯಗಳನ್ನು ತುರ್ತಾಗಿ ಕೈಬೇಕೆಂದು ಸೂಚಿಸಲಾಗಿದೆ ಎಂದ ಮುಖ್ಯಮಂತ್ರಿಗಳು, ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಸೇತುವೆ ಪರಿಶೀಲಿಸಲು ನಾಳೆ (ಜುಲೈ 21) ತೆರಳುತ್ತಿರುವುದಾಗಿ ತಿಳಿಸಿದರು.
ಇದನ್ನೂ ಓದಿ | Karnataka Rain : ಭಾರಿ ಮಳೆಗೆ ಮನೆ ಗೋಡೆ ಕುಸಿತ; ಕೊಟ್ಟಿಗೆಯಲ್ಲಿದ್ದ ಜಾನುವಾರುಗಳು ಸಾವು
ಕಾರ್ಯಕ್ರಮದಲ್ಲಿ ಈ ವೇಳೆ ಶಿಕ್ಷಣ ಸಚಿವ ಮಧು ಬಂಗಾರಪ್ಪ, ವಿಪ್ರೋ ಮುಖ್ಯಸ್ಥರಾದ ಅಜೀಂ ಪ್ರೇಮ್ ಜಿ ದಂಪತಿ, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷರಾದ ಮೆಹರೂಜ್ ಖಾನ್ ಸೇರಿ ಹಲವು ಗಣ್ಯರು ಉಪಸ್ಥಿತರಿದ್ದರು.