ಬೆಂಗಳೂರು: ರಾಜ್ಯಸಭೆ ಚುನಾವಣೆಗೆ ನಾಲ್ಕನೇ ಅಭ್ಯರ್ಥಿ ಆಯ್ಕೆ ಕಸರತ್ತು ನಡೆಯುತ್ತಿರುವಂತೆಯೇ ಕಾಂಗ್ರೆಸ್ ಅಚ್ಚರಿಯ ನಡೆ ಇಟ್ಟಿದೆ. ಈಗಾಗಲೆ ಒಂದು ಸ್ಥಾನಕ್ಕೆ ಜೈರಾಮ್ ರಮೇಶ್ ಅವರ ಹೆಸರು ಘೋಷಿಸಿರುವ ಕಾಂಗ್ರೆಸ್, ಮತ್ತೊಬ್ಬ ಅಭ್ಯರ್ಥಿಯನ್ನಾಗಿ ಕಾಂಗ್ರೆಸ್ ಹಿರಿಯ ನಾಯಕ ರೆಹಮಾನ್ ಖಾನ್ ಪುತ್ರ ಮನ್ಸೂರ್ ಖಾನ್ ಅವರನ್ನು ಕಣಕ್ಕಿಳಿಸಿದೆ. ಇದು ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ನಡುವೆ ನಡೆಯುತ್ತಿರುವ ಒಳಜಗಳದ ಪರಿಣಾಮ ಎಂದು ವಿಶ್ಲೇಷಿಸಲಾಗುತ್ತಿದೆ.
ರಾಜ್ಯಸಭೆಯಿಂದ ಆಯ್ಕೆಯಾಗಲು ಒಬ್ಬ ಅಭ್ಯರ್ಥಿಗೆ 45 ಮತಗಳ ಅವಶ್ಯಕತೆ ಇದೆ. ಆಡಳಿತ ಪಕ್ಷ ಬಿಜೆಪಿ ಬಳಿ ಸ್ಪೀಕರ್ ಸೇರಿ 120 ಮತಗಳಿವೆ. ಬಿಎಸ್‌ಪಿಯಿಂದ ಆಯ್ಕೆಯಾಗಿ ಬಿಜೆಪಿ ಸೇರಿರುವ ಎನ್. ಮಹೇಶ್, ಪಕ್ಷೇತರ ಶಾಸಕ ನಾಗೇಶ್ ಸೇರಿಸಿಕೊಂಡರೆ ಇಬ್ಬರು ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ ನಂತರ ಮೂರನೇ ಅಭ್ಯರ್ಥಿ ಆಯ್ಕೆ ಮಾಡಲು 13 ಮತಗಳ ಕೊರತೆ ಆಗುತ್ತದೆ.
ಇದನ್ನೂ ಓದಿ | ನವರಸನಾಯಕನಿಗೆ ಒಲಿದ ರಾಜ್ಯಸಭೆ: ನಿರ್ಮಲಾ ಸೀತಾರಾಮನ್ ಜತೆಗೆ ಜಗ್ಗೇಶ್‌ಗೆ ಬಿಜೆಪಿ ಟಿಕೆಟ್
ಅದೇ ರೀತಿ ಕಾಂಗ್ರೆಸ್ ಬಳಿ 69 ಮತಗಳಲ್ಲಿ ಒಬ್ಬ ಅಭ್ಯರ್ಥಿ ನಿರಾತಂಕವಾಗಿ ಆಯ್ಕೆ ಅಗಬಹುದು. ನಂತರ 24 ಮತಗಳು ಉಳಿಯುತ್ತವೆ, ಇನ್ನೂ 21 ಮತಗಳ ಕೊರತೆ ಆಗುತ್ತದೆ. ಒಂದು ಸ್ಥಾನಕ್ಕೆ ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಕೇಂದ್ರದ ಮಾಜಿ ಸಚಿವ ಜೈರಾಮ್ ರಮೇಶ್ ಅವರ ಹೆಸರನ್ನು ಎಐಸಿಸಿ ಭಾನುವಾರವಷ್ಟೆ ಘೋಷಣೆ ಮಾಡಿತ್ತು.
ಕುಪೇಂದ್ರ ರೆಡ್ಡಿಗೆ ನಿರಾಸೆ
ಜೆಡಿಎಸ್ ಬಳಿ 32 ಮತಗಳಿದ್ದು, ಒಬ್ಬ ಅಭ್ಯರ್ಥಿಯನ್ನೂ ಗೆಲ್ಲಿಸಿಕೊಳ್ಳಲು ಸಾಧ್ಯವಿಲ್ಲ ಜೆಡಿಎಸ್‌ನಿಂದ ಟಿಕೆಟ್ ಪಡೆದು ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಳ್ಳಲು ಕುಪೇಂದ್ರ ರೆಡ್ಡಿ ಬಯಸಿದ್ದರು. ಇನ್ನೇನು ಸೋಮವಾರ ಜೆಡಿಎಸ್‌ನಿಂದ ಬಿ ಫಾರಂ ಸಿಗುವ ವಿಶ್ವಾಸವನ್ನೂ ಹೊಂದಿದ್ದರು. ಇದಕ್ಕೂ ಮುನ್ನವೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿಬಂದಿದ್ದರು.
ಆದರೆ ಕುಪೇಂದ್ರ ರೆಡ್ಡಿ, ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿರಲಿಲ್ಲ. ಜೆಡಿಎಸ್ ಮೇಲಿನ ಬದ್ಧ ಧ್ವೇಷವನ್ನು ಮುಂದುವರಿಸಿರುವ ಸಿದ್ದರಾಮಯ್ಯ, ಯಾವುದೇ ಕಾರಣಕ್ಕೆ ಜೆಡಿಎಸ್ ಜತೆಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಭಾನುವಾರ ಟ್ವೀಟ್ ಮಾಡಿದ್ದರು. ಜೆಡಿಎಸ್ ಜತೆ ಮೈತ್ರಿ ಮಾಡಿಕೊಂಡು ಕುಪೇಂದ್ರ ರೆಡ್ಡಿ ಗೆಲ್ಲಿಸಲು ಡಿಕೆಶಿ ಸಿದ್ಧರಾಗುತ್ತಿರುವುದನ್ನು ಗಮನಿಸಿದ ಸಿದ್ದರಾಮಯ್ಯ, ನೇರವಾಗಿ ಹೈಕಮಾಂಡ್ ಜತೆ ಮಾತುಕತೆ ನಡೆಸಿದ್ದಾರೆ. ಯಾವುದೇ ಕಾರಣಕ್ಕೆ ಜೆಡಿಎಸ್ ಜತೆ ಮೈತ್ರಿ ಮಾಡಿಕೊಳ್ಳಬಾರದು. ಇನ್ನೇನು ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿರುವಾಗ ಜೆಡಿಎಸ್ ಜತೆ ಮೈತ್ರಿ ಮಾಡಿಕೊಂಡರೆ ಕಾರ್ಯಕರ್ತರಿಗೆ ತಪ್ಪು ಸಂದೇಶ ರವಾನೆ ಆಗುತ್ತದೆ ಎಂದು ಹೇಳಿದ್ದಾರೆ. ತಕ್ಷಣವೇ ಕಾರ್ಯಪ್ರವೃತ್ತರಾದ ಕಾಂಗ್ರೆಸ್ ನಾಯಕರು, ಹಿರಿಯ ಕಾಂಗ್ರೆಸ್ ನಾಯಕ ರೆಹಮಾನ್ ಖಾನ್ ಪುತ್ರ ಮನ್ಸೂರ್ ಖಾನ್ ಅವರನ್ನು ಕಣಕ್ಕೆ ಇಳಿಸಲು ನಿರ್ಧರಿಸಿದ್ದಾರೆ ಎಂದು ಮೂಲಗಳೂ ತಿಳಿಸಿವೆ.
ಸ್ವತ ಸಿದ್ದರಾಮಯ್ಯ ಉಪಸ್ಥಿತರಿದ್ದು, ಡಿ.ಕೆ. ಶಿವಕುಮಾರ್ ಜತೆಗೂಡಿ ಮನ್ಸೂರ್ ಖಾನ್ ನಾಮಪತ್ರವನ್ನೂ ಸಲ್ಲಿಸಿದ್ದಾರೆ. ಇದ್ದಕ್ಕಿದ್ದಂತೆ ನಡೆದ ಈ ಬೆಳವಣಿಗೆಯಿಂದ ಕುಪೇಂದ್ರ ರೆಡ್ಡಿ ಗೊಂದಲಕ್ಕೊಳಗಾಗಿದ್ದಾರೆ ಎನ್ನಲಾಗಿದೆ. ಕಾಂಗ್ರೆಸ್ ತನ್ನದೇ ಎರಡನೇ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿರುವುದರಿಂದಾಗಿ, ವಿಪ್ ಹೊರಡಿಸಲಾಗುತ್ತದೆ. ಕಾಂಗ್ರೆಸ್ ಶಾಸಕರು ವಿಪ್ ಉಲ್ಲಂಘಿಸಲು ಸಾಧ್ಯವಿಲ್ಲ. ಇನ್ನೇನಿದ್ದರೂ ಕುಪೇಂದ್ರ ರೆಡ್ಡಿ ಅವರಿಗೆ ಬಿಜೆಪಿ ಬಾಗಲು ಬಡಿಯುವುದೊಂದೇ ಬಾಕಿ ಉಳಿದಿದೆ. ನಾಮಪತ್ರ ಸಲ್ಲಿಕೆಗೆ ಮಂಗಳವಾರ ಕೊನೆಯ ದಿನವಾಗಿದ್ದು, ಅಲ್ಲಿವರೆಗೆ ಇನ್ನೂ ಏನೇನು ನಡೆಯುತ್ತದೆ ಎನ್ನುವುದನ್ನು ಕಾದುನೋಡಬೇಕಿದೆ.
ಇದನ್ನೂ ಓದಿ | ಕಾಂಗ್ರೆಸ್‌ಗೂ ರಾಜೀನಾಮೆ ನೀಡಿದ ಮುಖ್ಯಮಂತ್ರಿ ಚಂದ್ರು: ರಾಜ್ಯಸಭೆ ಟಿಕೆಟ್ ಸಿಗದ್ದಕ್ಕೆ ಸಿಟ್ಟು