Site icon Vistara News

Congress Politics : ಬಾಯಿಗೆ ಬಂದಂತೆ ಹೇಳಿಕೆ ಕೊಡಬೇಡಿ; ಕಾಂಗ್ರೆಸ್‌ ಶಿಸ್ತು ಸಮಿತಿ ಎಚ್ಚರಿಕೆ

Congress Discipline

ಬೆಂಗಳೂರು: ಕಾಂಗ್ರೆಸ್‌ನ ಕೆಲವು ಶಾಸಕರು ಮತ್ತು ನಾಯಕರು ಸಿಎಂ ಹುದ್ದೆ (Chief Minister Post), ಅಧಿಕಾರ ಹಂಚಿಕೆಗೆ (Power Sharing) ಸಂಬಂಧಿಸಿ ತಮಗೆ ತೋಚಿದಂತೆ ಹೇಳಿಕೆ (Damaging Statement) ನೀಡುತ್ತಿರುವುದನ್ನು ಶಿಸ್ತು ಸಮಿತಿ (Congress Descipline Committee) ಗಂಭೀರವಾಗಿ ಪರಿಗಣಿಸಿದೆ. ಸೋಮವಾರ ಕೆಪಿಸಿಸಿ ಕಚೇರಿಯಲ್ಲಿ ನಡೆದ ಶಿಸ್ತು ಸಮಿತಿ ಸಭೆಯಲ್ಲಿ ಈ ಬಗ್ಗೆ ವಿಸ್ತೃತ ಚರ್ಚೆ ನಡೆಯಿತು. ಸಿಎಂ ಆಗಲಿ, ಡಿಸಿಎಂ ಆಗಲೀ ಯಾರೇ ಆದರೂ ಪಕ್ಷಕ್ಕೆ ಹಾನಿಯಾಗುವ ಹೇಳಿಕೆಗಳನ್ನು ನೀಡಬಾರದು (Congress Politics ಎಂದು ಎಚ್ಚರಿಕೆ ನೀಡಲಾಯಿತು.

ರಾಜ್ಯದಲ್ಲಿ ಮುಂದಿನ ಮುಖ್ಯಮಂತ್ರಿಯ ಚರ್ಚೆ ಜೋರಾಗಿದೆ. ಅದರ ಜತೆಗೆ ಎರಡೂವರೆ ವರ್ಷದ ಬಳಿಕ ಮಂತ್ರಿಗಳನ್ನೂ ಬದಲಿಸುತ್ತಾರೆ ಎಂಬ ಮಾತುಗಳ ಮೇಲೆ ಶಾಸಕರು, ನಾಯಕರು ಬೇಕಾಬಿಟ್ಟಿಯಾಗಿ ಹೇಳಿಕೆ ನೀಡುತ್ತಿದ್ದಾರೆ. ಅದರಲ್ಲೂ ಹೆಚ್ಚಿನ ನಾಯಕರು ಪಕ್ಷದ ಹಿತ ಮರೆತು ತಮ್ಮ ಸಮುದಾಯದ ನಾಯಕರಿಗೆ ಸ್ಥಾನ ಕೊಡಿ ಎಂದು ಕೇಳುತ್ತಿದ್ದಾರೆ. ನೀನಾ-ನಾನಾ ಪಾಲಿಟಿಕ್ಸ್‌ನಲ್ಲಿ ದಿನ ಹೋದಂತೆ ಪಕ್ಷಕ್ಕೆ ಡ್ಯಾಮೇಜ್‌ ಮಾಡುವ ರೀತಿಯ ಹೇಳಿಕೆಗಳೇ ದಾಖಲಾಗುತ್ತಿವೆ. ಇದು ಮುಂದಿನ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಭಾರಿ ಗೊಂದಲ ಸೃಷ್ಟಿಸುವ ಸಾಧ್ಯತೆ ಕಂಡುಬಂದಿದೆ. ಹೀಗಾಗಿ ಶಿಸ್ತು ಸಮಿತಿ ಮಧ್ಯಪ್ರವೇಶ ಮಾಡಲು ಮುಂದಾಗಿದೆ.

ಕಾಂಗ್ರೆಸ್‌ ಶಿಸ್ತು ಸಮಿತಿ ಅಧ್ಯಕ್ಷ ರೆಹಮಾನ್‌ ಖಾನ್‌ ಮತ್ತು ಸಹ ಅಧ್ಯಕ್ಷ ಯು.ಬಿ. ಕೋಳಿವಾಡ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಹೇಳಿಕೆಗಳ ಅವಲೋಕನ ಮಾಡಲಾಯಿತು. ಅದರಿಂದ ಆಗಬಹುದಾದ ಸಂಭಾವ್ಯ ಹಾನಿಗಳ ಚರ್ಚೆ ನಡೆಯಿತು.

ಇಂಥ ಹೇಳಿಕೆಗಳಿಗೆ ಕಡಿವಾಣ ಹಾಕದಿದ್ರೆ ಪಕ್ಷಕ್ಕೆ ಡ್ಯಾಮೇಜ್‌‌ ಆಗುವುದು ಖಂಡಿತ ಎಂದು ಅಭಿಪ್ರಾಯಪಟ್ಟಿರುವ ಸಮಿತಿ, ಸಿಎಂ, ಡಿಸಿಎಂ ಸೇರಿದಂತೆ ಯಾರೂ ಬಹಿರಂಗ ಹೇಳಿಕೆ ಕೊಡಬಾರದು ಎಂದಿದೆ. ಈ ಮೂಲಕ ಬಣ ರಾಜಕೀಯಕ್ಕೆ ಬ್ರೇಕ್‌ ಹಾಕಲು ನಿರ್ದೇಶನ ನೀಡಲಾಗಿದೆ. ಒಂದು ವೇಳೆ ಪಕ್ಷದ ವಿರುದ್ಧವಾಗಿ, ನಾಯಕರ ಪರವಾಗಿ ಹೇಳಿಕೆ ನೀಡಿದರೆ ನೋಟೀಸ್‌ ನೀಡಲು ತೀರ್ಮಾನ ಮಾಡಿದೆ ಸಮಿತಿ.

ಸಭೆಯ ಬಳಿಕ ವಿಸ್ತಾರ ನ್ಯೂಸ್‌ ಜತೆ ಮಾತನಾಡಿದ ಶಿಸ್ತು ಸಮಿತಿಯ ಸಹ ಅಧ್ಯಕ್ಷ ಯು.ಬಿ. ಕೋಳಿವಾಡ ಅವರು, ʻʻನಾವು ಅಶಿಸ್ತು ಸಹಿಸಲ್ಲ. ಪಕ್ಷ ಮುಖ್ಯ. ಪಕ್ಷಕ್ಕೆ ಡ್ಯಾಮೇಜ್‌ ಆಗುವ ಹೇಳಿಕೆ ಸಹಿಸಲ್ಲ. ಯಾರು ಯಾರು ಏನು ಮಾತನಾಡಿದ್ದಾರೆ ಅನ್ನೋದು ಗೊತ್ತಿದೆ. ಮುಂದೆ ಈ ರೀತಿ ಮಾತನಾಡಬಾರದುʼʼ ಎಂದು ಎಚ್ಚರಿಸಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌ ಅವರಿಗೂ ಸಭೆ ಬಗ್ಗೆ ಮಾಹಿತಿ ನೀಡಿದ್ದೇವೆ. ಇನ್ನೂ ಮೇಲೆ ಬಹಿರಂಗ ಹೇಳಿಕೆ ನೀಡಿದ್ರೆ ಮುಲಾಜಿಲ್ಲದೇ ನೋಟೀಸ್‌ ನೀಡಲಾಗುವುದು. ಸಿಎಂ ಇರಲಿ, ಡಿಸಿಎ ಇರಲಿ. ಎಲ್ಲರೂ ಪಕ್ಷದ ವ್ಯಾಪ್ತಿ ಒಳಗೆ ಕೆಲಸ ಮಾಡಲಿ ಎಂದು ಯು.ಬಿ. ಕೋಳಿವಾಡ ಹೇಳಿದರು.

ಇದನ್ನೂ ಓದಿ: Congress politics : ಸಿಎಂ ರೇಸ್‌ಗೆ ಸತೀಶ್‌ ಜಾರಕಿಹೊಳಿ ಎಂಟ್ರಿ; ವಾಲ್ಮೀಕಿ ಸಮಾಜದವರೇ ಸಿಎಂ ಎಂದ ಆಪ್ತ

ಮಂಡ್ಯ ಶಾಸಕ ರವಿ ಗಣಿಗ ಅವರು ಡಿ.ಕೆ. ಶಿವಕುಮಾರ್‌ ಅವರು ಎರಡುವರೆ ವರ್ಷಗಳ ಬಳಿಕ ಸಿಎಂ ಆಗಿಯೇ ಆಗುತ್ತಾರೆ ಎಂದರೆ, ಸಿದ್ದರಾಮಯ್ಯ ಅವರ ಆಪ್ತ ಅಶೋಕ್‌ ಪಟ್ಟಣ್‌ ಎರಡೂವರೆ ವರ್ಷದ ಬಳಿಕ ಮಂತ್ರಿ ಮಂಡಲ ಫುಲ್‌ ಚೇಂಜ್‌ ಆಗುತ್ತದೆ ಎಂದಿದ್ದರು. ಸುರಪುರ ಶಾಸಕ ರಾಜಾ ವೆಂಕಟಪ್ಪ ನಾಯಕ ಅವರು ನಾಯಕ ಸಮುದಾಯದವರು ಸಿಎಂ ಆಗಬೇಕು ಎಂದಿದ್ದರು. ಅದರ ನಡುವೆ ಶಾಮನೂರು ಶಿವಶಂಕರಪ್ಪ ಲಿಂಗಾಯತ ಸಿಎಂ ಧ್ವನಿ ಎತ್ತಿದ್ದರು. ಹೀಗೆ ಒಬ್ಬೊಬ್ಬರೂ ತಮ್ಮ ನಾಯಕರ ಪರವಾಗಿ ಧ್ವನಿ ಎತ್ತುವ ಮೂಲಕ ಪಕ್ಷದ ಹಿತ ಕಡೆಗಣಿಸುತ್ತಿದ್ದಾರೆ ಎಂಬ ಆರೋಪ ವ್ಯಕ್ತವಾಗಿದೆ.

Exit mobile version