ಬೆಂಗಳೂರು: ಸ್ನೇಹ ಬುಕ್ ಹೌಸ್‌ನಿಂದ ಪ್ರಕಟಿಸಿರುವ, ಕನ್ನಡ ಸಾಹಿತ್ಯ ಪರಿಷತ್‌ನ ಗೌರವ ಕಾರ್ಯದರ್ಶಿ ನೇ.ಭ.ರಾಮಲಿಂಗ ಶೆಟ್ಟಿ ಅವರು ರಚಿಸಿರುವ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಕುರಿತಾದ ʼಮಣ್ಣಿನ ಮಗʼ ಕೃತಿಯ ಪ್ರಥಮ ಪ್ರತಿಯನ್ನು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಡೋಜ ಮಹೇಶ ಜೋಶಿ ಅವರು ಎಚ್.ಡಿ. ದೇವೇಗೌಡರಿಗೆ (H D Deve Gowda) ನೀಡಿದರು.
ಪುಸ್ತಕ ಸ್ವೀಕರಿಸಿ ಮಾತನಾಡಿದ ಎಚ್.ಡಿ. ದೇವೇಗೌಡರು, ನಮ್ಮ ಸಾಹಿತ್ಯವು ದೇಶದ ಸಾಹಿತ್ಯಕ್ಕೆ ಸರಿಸಾಟಿಯಾಗಿ ಬೆಳೆಯುತ್ತಾ ಬಂದಿದೆ. ಪ್ರಸ್ತುತ ಕಾಲಘಟ್ಟದಲ್ಲಿ ಯುವ ಸಮುದಾಯವು ಓದುವ ಸಂಸ್ಕೃತಿಯನ್ನು ಮೈಗೂಡಿಸಿಕೊಳ್ಳಬೇಕು, ಜತೆಜತೆಗೆ ಸಾಹಿತ್ಯಾಸಕ್ತಿಯನ್ನು ಹೆಚ್ಚಿಸಿಕೊಂಡು ಜ್ಞಾನವರ್ಧನೆ ಮಾಡಿಕೊಳ್ಳುವತ್ತ ಸಾಗಬೇಕು. ಸಮಾಜದ ಅಭಿವೃದ್ಧಿಗೆ ಈ ಮೂಲಕವಾಗಿ ಯುವ ಸಮುದಾಯ ಕಾರಣವಾಗಬೇಕು ಸಲಹೆ ನೀಡಿದರು.
ಈ ಕೃತಿ ರಚನೆಗೆ ಅನೇಕ ಮಂದಿಯನ್ನು ಭೇಟಿಮಾಡಿ ಲೇಖನ, ವಿಷಯಸಂಗ್ರಹಣೆಯನ್ನು ಮಾಡಿರುವ ರಾಮಲಿಂಗಶೆಟ್ಟರ ಪರಿಶ್ರಮವನ್ನು ಶ್ಲಾಘಿಸಿದರಲ್ಲದೇ, ಫೆಬ್ರವರಿ 29ರಂದು ನಡೆಯಲಿರುವ ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಡೋಜ ಮಹೇಶ ಜೋಶಿ ಮಾತನಾಡಿ, ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳ ಜತೆಜತೆಗೆ ಈ ಕೃತಿರಚನೆ ಮಾಡುವುದಕ್ಕೆ ಶ್ರಮವಹಿಸಿದ ರಾಮಲಿಂಗಶೆಟ್ಟರ ಸಾಧನೆಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು.
ಕೃತಿಕಾರ ರಾಮಲಿಂಗ ಶೆಟ್ಟರು ಮಾತನಾಡಿ, ದೇವೇಗೌಡರ ಕುರಿತಾದ ಹತ್ತು ಹಲವು ಮಾಹಿತಿಗಳು, ಅವರು ಮಾಡಿರುವ ಜನಪರ ಕೆಲಸಗಳು, ನೀರಾವರಿ ಯೋಜನೆಗಳ ಮಾಹಿತಿ ಸಂಗ್ರಹಣೆಗೆ ಕಳೆದ ನಾಲ್ಕು ವರುಷಗಳಿಂದ ಪಟ್ಟ ಶ್ರಮ ಮತ್ತು ಅದರ ಹಿಂದಿನ ಅನುಭವಗಳನ್ನು ಹಂಚಿಕೊಂಡರು.
ಇದನ್ನೂ ಓದಿ | National Horticulture Fair 2024: ಹೆಸರಘಟ್ಟದಲ್ಲಿ ಮಾ. 5 ರಿಂದ 7 ರವರೆಗೆ ರಾಷ್ಟ್ರೀಯ ತೋಟಗಾರಿಕೆ ಮೇಳ
ಈ ಸಂದರ್ಭದಲ್ಲಿ ಸ್ನೇಹ ಬುಕ್ ಹೌಸ್ ಮಾಲೀಕ, ಪ್ರಕಾಶಕ ಕೆ.ಬಿ.ಪರಶಿವಪ್ಪ ಅವರು, ತಮ್ಮ ಪ್ರಕಾಶನದಿಂದ “ಮಣ್ಣಿನ ಮಗ” ಕೃತಿ ಪ್ರಕಟವಾಗುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸುತ್ತಾ, ಇದಕ್ಕೆ ಕಾರಣಕರ್ತರಾದ ಪ್ರತಿಯೊಬ್ಬರಿಗೂ ಧನ್ಯವಾದ ಸಲ್ಲಿಸಿದರು.
ಪುಸ್ತಕದ ಪ್ರತಿಗಳನ್ನು ಮುಂಗಡ ಕಾಯ್ದಿರಿಸಲು ಸಾಹಿತ್ಯಾಸಕ್ತರು ಸ್ನೇಹ ಬುಕ್ ಹೌಸ್ 9845031335 ಇವರನ್ನು ಸಂಪರ್ಕಿಸಬಹುದಾಗಿದೆ.
ಫೆ.29ರಂದು ಎಚ್.ಡಿ.ದೇವೇಗೌಡರ ಕುರಿತ ʼಮಣ್ಣಿನ ಮಗʼ ಕೃತಿ ಲೋಕಾರ್ಪಣೆ
ಬೆಂಗಳೂರು: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಕುರಿತು ನೇ.ಭ.ರಾಮಲಿಂಗ ಶೆಟ್ಟಿ ಅವರು ಬರೆದಿರುವ ಹಾಗೂ ಸ್ನೇಹ ಬುಕ್ ಹೌಸ್ ಪ್ರಕಟಿಸಿರುವ ʼಮಣ್ಣಿನ ಮಗʼ ಕೃತಿಯ (Book Release) ಲೋಕಾರ್ಪಣೆ ಕಾರ್ಯಕ್ರಮವನ್ನು ಫೆ.29ರಂದು ಸಂಜೆ 5 ಗಂಟೆಗೆ ನಗರದ ಚಾಮರಾಜಪೇಟೆಯ ಶ್ರೀ ಕೃಷ್ಣರಾಜ ಪರಿಷತ್ತಿನ ಮಂದಿರದಲ್ಲಿ ಆಯೋಜಿಸಲಾಗಿದೆ.
ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಅವರು ದಿವ್ಯ ಸಾನ್ನಿಧ್ಯ ವಹಿಸಲಿದ್ದಾರೆ. ಮಾಜಿ ಮುಖ್ಯಮಂತ್ರಿಗಳಾದ ಎಚ್‌ಡಿ.ಕುಮಾರಸ್ವಾಮಿ, ಬಸವರಾಜ ಬೊಮ್ಮಾಯಿ ಅವರು ಉದ್ಘಾಟನೆ ಮಾಡಲಿದ್ದಾರೆ. ನಾಡೋಜ ಡಾ.ಮಹೇಶ ಜೋಶಿ ಅವರು ʼಮಣ್ಣಿನ ಮಗʼ ಕೃತಿ ಬಿಡುಗಡೆ ಮಾಡಲಿದ್ದು, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ.ನಾರಾಯಣಗೌಡ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.
ನಾಡೋಜ ಹಂ.ಪ.ನಾಗರಾಜಯ್ಯ ಅವರು ಕೃತಿ ಬಗ್ಗೆ ಶುಭನುಡಿಗಳನ್ನಾಡಲಿದ್ದು, ಮುಖ್ಯ ಅತಿಥಿಗಳಾಗಿ ಪದ್ಮಶ್ರೀ ಡಾ.ಸಿ.ಎನ್.ಮಂಜುನಾಥ್, ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಭಾಗವಹಿಸಲಿದ್ದು, ಕೃತಿಯ ಲೇಖಕ ನೇ.ಭ.ರಾಮಲಿಂಗಾರೆಡ್ಡಿ, ಸ್ನೇಹ ಬುಕ್ ಹೌಸ್ ಪ್ರಕಾಶಕ ಕೆ.ಬಿ.ಪರಶಿವಪ್ಪ ಉಪಸ್ಥಿತರಿರಲಿದ್ದಾರೆ.
ಇದನ್ನೂ ಓದಿ | ನನ್ನ ದೇಶ ನನ್ನ ದನಿ ಅಂಕಣ: ಶತಮಾನದಾಚೆಗೆ ವಿಸ್ತರಿಸಿದ ಪ್ರತಿಭೆ ಪ್ರೊ || ಎಲ್.ಎಸ್. ಶೇಷಗಿರಿರಾವ್
ʼಮಣ್ಣಿನ ಮಗʼ ಎಚ್.ಡಿ. ದೇವೇಗೌಡರು: ಡಾ. ನಿರ್ಮಲಾನಂದನಾಥ ಸ್ವಾಮೀಜಿ
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಬಗ್ಗೆ ಪುಸ್ತಕ ಬಿಡುಗಡೆಯಾಗುತ್ತಿರುವುದಕ್ಕೆ ಆದಿಚುಂಚನಗಿರಿ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರು ಸಂತಸ ವ್ಯಕ್ತಪಡಿಸಿದ್ದು, ʼಮಣ್ಣಿನ ಮಗʼ ಕೃತಿಗಾಗಿ ಶ್ರೀಗಳು ಬರೆದ ಶುಭನುಡಿ ಲೇಖನದ ಆಯ್ದ ಭಾಗ ಇಲ್ಲಿ ನೀಡಲಾಗಿದೆ.
ಎಚ್.ಡಿ. ದೇವೇಗೌಡರು ನಾಡಷ್ಟೇ ಅಲ್ಲ, ದೇಶ ಕಂಡ ಅಪರೂಪದ ರಾಜಕಾರಣಿ. ಸಾಮಾಜಿಕ ಬದ್ಧತೆ ಹೊಂದಿರುವ ರಾಜಕೀಯ ಮುತ್ಸದ್ದಿ. ರಾಜ್ಯದ ಜನಪ್ರಿಯ ಮುಖ್ಯಮಂತ್ರಿಯಾಗಿ, ದೇಶದ ಪ್ರಧಾನ ಮಂತ್ರಿಯಾಗಿ ಜನಮನದಲ್ಲಿ ಶಾಶ್ವತ ಸ್ಥಾನ ಪಡೆದಿರುವುದು ಕರ್ನಾಟಕದ ಹೆಮ್ಮೆ. ದೇಶದ ಪ್ರಧಾನ ಮಂತ್ರಿಯಾಗಿ ಸಮರ್ಥವಾಗಿ ಹಾಗೂ ದಕ್ಷತೆಯಿಂದ ಆಡಳಿತ ನಡೆಸಿ ಹತ್ತಾರು ವರ್ಷಗಳಲ್ಲಿ ಸಾಧಿಸಬೇಕಾದ್ದನ್ನು ಕೇವಲ ಹತ್ತು ತಿಂಗಳಲ್ಲಿ ಸಾಧಿಸಿದ ಖ್ಯಾತಿ ಇವರದು. ಜಾತಿ ಮತಗಳ ಎಲ್ಲೆಯನ್ನು ಮೀರಿ ಸರ್ವಜನರ ಕಲ್ಯಾಣಕ್ಕೆ ದುಡಿದವರು. ನಿಸ್ಪೃಹತೆ ಹಾಗೂ ಪ್ರಾಮಾಣಿಕತೆಯಿಂದ ತಾವು ನಿರ್ವಹಿಸಿದ ಹುದ್ದೆಗೆ ಮೆರುಗನ್ನು ತಂದವರು. ಶಾಸಕರಾಗಿ, ವಿರೋಧ ಪಕ್ಷದ ನಾಯಕರಾಗಿ, ಸಚಿವರಾಗಿ, ಮುಖ್ಯಮಂತ್ರಿಗಳಾಗಿ, ಪ್ರಧಾನಮಂತ್ರಿಗಳಾಗಿ ಸಮಷ್ಟಿಯ ಹಿತಕ್ಕಾಗಿ ಅವರು ಸಾಧಿಸಿದ್ದು ಅಪಾರ, ವಿರೋಧಿಗಳು ಬೆರಗಾಗುವಂತೆ ಆಡಳಿತ ನಡೆಸಿ ದಕ್ಷ ಆಡಳಿತಗಾರ ಎಂಬ ಹಿರಿಮೆಗೆ ಪಾತ್ರರಾದವರು.
ಗೌಡರಿಗೆ ಶ್ರೀ ಆದಿಚುಂಚನಗಿರಿ ಕ್ಷೇತ್ರದ ಶ್ರೀ ಗುರು ದೇವತೆಗಳಲ್ಲಿ ಅಪಾರ ಶ್ರದ್ಧೆ ಹಾಗೂ ಭಕ್ತಿ. ಇಂದಿಗೂ ನಮ್ಮ ಶ್ರೀಮಠದ ಹಲವಾರು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಶ್ರೀಮಠವು ಕೈಗೊಳ್ಳುವ ಲೋಕಸೇವಾ ಕೈಂಕರ್ಯಗಳಿಗೆ ತಮ್ಮ ಸಲಹೆ ಸೂಚನೆಗಳನ್ನು ನೀಡುತ್ತಿದ್ದಾರೆ. ಜೊತೆಗೆ ಶ್ರೀಮಠವು ಕೈಗೊಳ್ಳುವ ಅಭಿವೃದ್ಧಿ ಕಾರ್ಯಗಳಿಗೆ ಪ್ರೋತ್ಸಾಹವನ್ನು ನೀಡುತ್ತಿರುವುದು ನಮಗೆ ಬಹಳ ಸಂತಸವನ್ನುಂಟು ಮಾಡಿದೆ.
ಗೌಡರು ಸರಳತೆ, ಸೌಜನ್ಯ, ಕ್ರಿಯಾಶೀಲತೆಗೆ ಹಾಗೂ ದೃಢ ನಿಲುವಿಗೆ ಖ್ಯಾತನಾಮರು. ಜನಸಾಮಾನ್ಯರ ಬದುಕುಬವಣೆಗಳನ್ನು ಸ್ವತಃ ಅನುಭವಿಸಿ ಜೀವನಾನುಭವ ಹೊಂದಿರುವ ಗೌಡರು ಜನಸಾಮಾನ್ಯರ ಕ್ಷೇಮಕ್ಕಾಗಿಯೇ ತಮ್ಮ ಇಡೀ ಜೀವನವನ್ನು ಮುಡಿಪಾಗಿಟ್ಟು ಜನನಾಯಕರೆನಿಸಿಕೊಂಡರು. ನಾಡು, ನುಡಿ, ನೆಲ, ಜಲ ರಕ್ಷಣೆಯ ವಿಷಯದಲ್ಲಿ ಗೌಡರದು ನಿಲ್ಲದ ಪಯಣ. ಮೊದಲ ಬಾರಿಗೆ ಮಹಿಳಾ ಮೀಸಲಾತಿಯನ್ನು ಜಾರಿಗೆ ತಂದ ಕೀರ್ತಿ ದೇವೇಗೌಡರದು.
ಇದನ್ನೂ ಓದಿ | Raja Marga Column : ಮರೆಯಾದ ಗೋಲ್ಡನ್ ವಾಯ್ಸ್ : ಬಿನಾಕಾ ಗೀತಮಾಲಾದ ಅಮೀನ್ ಸಯಾನಿ
ದೇವೇಗೌಡರನ್ನು ಕುರಿತು ಈಗಾಗಲೇ ಹಲವು ಕೃತಿಗಳು, ಅಭಿನಂದನಾ ಗ್ರಂಥಗಳು ಪ್ರಕಟನೆಗೊಂಡಿವೆ. ಪ್ರಸ್ತುತ ವಿವಿಧ ಸಂಘಸಂಸ್ಥೆಗಳಲ್ಲಿ ಹಾಗೂ ಸೇವಾ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ಲೇಖಕರಾದ ನೇ.ಭ. ರಾಮಲಿಂಗಶೆಟ್ಟಿ ಅವರು ಎಚ್.ಡಿ. ದೇವೇಗೌಡರ ಜೀವನ ಹಾಗೂ ಸಾಧನೆಯನ್ನು ದಾಖಲಿಸುವ ನಿಟ್ಟಿನಲ್ಲಿ ‘ಮಣ್ಣಿನ ಮಗ’ ಎಂಬ ಕೃತಿಯನ್ನು ರಚಿಸಿರುವುದು ಸ್ತುತ್ಯಾರ್ಹ. ಗೌಡರ ಬದುಕಿನ ಸಾರವನ್ನು ಹಾಗೂ ಅವರ ಸಾಧನೆಗಳನ್ನು ತನ್ನೊಡಲಿನೊಳಗೆ ಇರಿಸಿಕೊಂಡಿರುವ ಈ ಕೃತಿಯು ಮುಂದಿನ ತಲೆಮಾರಿನ ಹೃನ್ಮನದಲ್ಲಿ ಗೌಡರ ಜೀವನಾದರ್ಶವನ್ನು ಬಿತ್ತಲು ಸಹಕಾರಿಯಾಗಲಿ.