ಬೆಂಗಳೂರು: ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ ಕುರಿತ ಎಫ್‍ಎಸ್‍ಎಲ್ ವರದಿಯನ್ನು (FSL Report) ಕೂಡಲೇ ಬಹಿರಂಗ ಮಾಡಬೇಕು ಎಂದು ಆಗ್ರಹಿಸಿ ಬಿಜೆಪಿ (BJP Karnataka) ಯುವ ಮೋರ್ಚಾ ವತಿಯಿಂದ ಹಮ್ಮಿಕೊಂಡಿದ್ದ ‘ತಿರಂಗಾ ಯಾತ್ರೆ’ಯನ್ನು ಪೊಲೀಸರು ಅರ್ಧಕ್ಕೆ ಮೊಟಕುಗೊಳಿಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಕಿಡಿಕಾರಿರುವ ಬಿಜೆಪಿ ಯುವ ಮೋರ್ಚಾ, ದೇಶ ಮೊದಲು ಚಿಂತನೆಯಡಿ ‘ತಿರಂಗಾ ಯಾತ್ರೆ’ ಹಮ್ಮಿಕೊಳ್ಳುವುದರಲ್ಲಿ ತಪ್ಪೇನಿದೆ? ಎಂದು ಪ್ರಶ್ನೆ ಮಾಡಿದೆ.
ಯುವ ಮೋರ್ಚಾ ರಾಜ್ಯ ಅಧ್ಯಕ್ಷ ಧೀರಜ್ ಮುನಿರಾಜು ಮಾತನಾಡಿ, ದೇಶ ಮೊದಲು ಚಿಂತನೆಯಡಿ ‘ತಿರಂಗಾ ಯಾತ್ರೆ’ ಹಮ್ಮಿಕೊಳ್ಳುವುದರಲ್ಲಿ ತಪ್ಪೇನಿದೆ? ಆದರೆ, ಇಲ್ಲಿ ಯುವ ಮೋರ್ಚಾ ಕಾರ್ಯಕರ್ತರು ತಂದ ಒಂದು ಸಾವಿರ ಅಡಿಯ ರಾಷ್ಟ್ರಧ್ವಜವನ್ನು ಕಸಿದುಕೊಂಡು ತುರ್ತು ಪರಿಸ್ಥಿತಿ ಹೇರಿದಂತೆ ವರ್ತಿಸಿದ್ದಾರೆ ಎಂದು ಆಕ್ಷೇಪಿಸಿದರು.
ದೇಶ ಮೊದಲು ಎಂಬ ಸಿದ್ಧಾಂತವನ್ನು ಬಿಜೆಪಿ ಹೊಂದಿದೆ. ಬಸ್ಸಿನಲ್ಲಿ ಕಾರ್ಯಕರ್ತರನ್ನು ತುಂಬಿಸಿ ಒಯ್ದಿದ್ದಾರೆ. ರಾಷ್ಟ್ರಧ್ವಜಕ್ಕೆ ಸಂಬಂಧಿಸಿದ ತಿರಂಗಾ ಯಾತ್ರೆಗೆ ಪೊಲೀಸರು ಅನುಮತಿ ನಿರಾಕರಿಸಿದ್ದು ಖಂಡನೀಯ. ಪ್ರಜಾಪ್ರಭುತ್ವದ ದೇವಾಲಯ ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆಯನ್ನು ಕೂಗುತ್ತಾರೆ. ಬಳಿಕ ಬಾಂಬ್ ಸ್ಫೋಟವೂ ಆಗಿದೆ ಎಂದು ವಿವರಿಸಿದರು.
ಲಾಠಿ ಚಾರ್ಜ್ ಮಾಡಿದ ಪೊಲೀಸರು
ಪೊಲೀಸರ ಈ ದೌರ್ಜನ್ಯ ಅತ್ಯಂತ ಖಂಡನಾರ್ಹ. ಬಿಜೆಪಿ ಯುವ ಮೋರ್ಚಾ ಕರ್ನಾಟಕದ ವತಿಯಿಂದ ಸೋಮವಾರ ಬೆಂಗಳೂರಿನ “ಟೌನ್ ಹಾಲ್”ನಿಂದ ತಿರಂಗಾ ಯಾತ್ರೆ ನಡೆಯಬೇಕಿತ್ತು. ಆದರೆ, ಯುವ ಮೋರ್ಚಾ ಕಾರ್ಯಕರ್ತರು ರಾಷ್ಟ್ರಧ್ವಜವನ್ನು ಬಿಡಿಸಲು ಅವಕಾಶ ಕೊಡದೆ ಲಾಠಿ ಚಾರ್ಜ್ ಮಾಡಿದ್ದಾರೆ ಎಂದು ಯುವ ಮೋರ್ಚಾ ರಾಜ್ಯ ಅಧ್ಯಕ್ಷ ಧೀರಜ್ ಮುನಿರಾಜು ಆಕ್ರೋಶ ವ್ಯಕ್ತಪಡಿಸಿದರು.
ದೇಶ ಮೊದಲು ಎಂಬ ಜಾಗೃತಿ ಮೂಡಿಸುವ ಉದ್ದೇಶ ನಮ್ಮದಾಗಿತ್ತು. ನಾವು ಯಾರಿಗೂ ತೊಂದರೆ ಮಾಡಿಲ್ಲ. ಆದರೂ ಪೊಲೀಸರು ದೌರ್ಜನ್ಯ ಮಾಡಿದ್ದಾರೆ ಎಂದು ಯುವ ಮೋರ್ಚಾ ರಾಜ್ಯ ಅಧ್ಯಕ್ಷ ಧೀರಜ್ ಮುನಿರಾಜು ಆರೋಪಿಸಿದರು.
ರಾಷ್ಟ್ರಧ್ವಜ ವಶಕ್ಕೆ
ಬಿಜೆಪಿ ಯುವ ಮೋರ್ಚಾದಿಂದ ನಗರದ ಟೌನ್ ಹಾಲ್‌ನಲ್ಲಿ ತಿರಂಗಾ ಯಾತ್ರೆ ಆರಂಭ ಮಾಡುತ್ತಿದ್ದಂತೆ ಪೊಲೀಸರು ನೂರಾರು ಕಾರ್ಯಕರ್ತರನ್ನು ಹಾಗೂ ತಿವರ್ಣ ಧ್ವಜವನ್ನು ವಶಕ್ಕೆ ಪಡೆದುಕೊಂಡರು.
ಇದನ್ನೂ ಓದಿ: Sedition Case: ವಿಧಾನಸೌಧದೊಳಗೆ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ದೃಢ; ಮೂವರು ಅರೆಸ್ಟ್
ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ನಂದೀಶ್ ರೆಡ್ಡಿ, ಯುವ ಮೋರ್ಚಾ ರಾಜ್ಯ ಅಧ್ಯಕ್ಷ ಧೀರಜ್ ಮುನಿರಾಜು, ಶಾಸಕ ಕೆ.ಸಿ. ರಾಮಮೂರ್ತಿ, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಹರೀಶ್, ಕೇಂದ್ರ ಜಿಲ್ಲಾಧ್ಯಕ್ಷ ಸಪ್ತಗಿರಿ ಗೌಡ ಮತ್ತು ಪಕ್ಷದ ಮುಖಂಡರು, ಯುವ ಮೋರ್ಚಾ ಮುಖಂಡರು, ಕಾರ್ಯಕರ್ತರು ಭಾಗಿಯಾಗಿದ್ದರು.