ಬೆಂಗಳೂರು: ರಾಜ್ಯದಲ್ಲಿ ವಿವಾದಕ್ಕೆ ಕಾರಣವಾಗಿರುವ ಪಠ್ಯಪುಸ್ತಕ ಪರಿಷ್ಕರಣೆ ವಿಚಾರದಲ್ಲಿ, ಪರಿಷ್ಕರಣೆ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಅವರನ್ನು ಕೈಬಿಡುವ ಕುರಿತು ಚಿಂತನೆ ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶನಿವಾರ ತಿಳಿಸಿದ್ದಾರೆ.
ವಿವಾದಕ್ಕೆ ಕಾರಣವಾಗಿರುವ ರೋಹಿತ್ ಚಕ್ರತೀರ್ಥ ಅವರನ್ನು ಕೈಬಿಡಬೇಕು ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಸರ್ಕಾರವನ್ನು ಒತ್ತಾಯಿಸಿದ್ದರು. ಈ ಕುರಿತು ಬೆಂಗಳೂರಿನ ಆರ್.ಟಿ. ನಗರದಲ್ಲಿರುವ ತಮ್ಮ ನಿವಾಸದ ಬಳಿ ಸುದ್ದಿಗಾರರ ಪ್ರಶ್ನೆಗೆ ಸಿಎಂ ಬೊಮ್ಮಾಯಿ ಉತ್ತರಿಸಿದರು.
ಇದನ್ನೂ ಓದಿ | ತಿಳಿಗೇಡಿ ಯುವಕನಿಂದ ಪಠ್ಯಪುಸ್ತಕ ಪರಿಷ್ಕರಣೆ ಎಂದ ಸಿದ್ದರಾಮಯ್ಯ
ಈ ವಿಚಾರದಲ್ಲಿ ಶಿಕ್ಷಣ ಸಚಿವರ ಜತೆಗೆ ಚರ್ಚೆ ಮಾಡುತ್ತೇನೆ. ರೋಹಿತ್ ಚಕ್ರತೀರ್ಥ ಅವರ ಹೆಸರನ್ನು ಕೈಬಿಡುವ ಕುರಿತು ನಿರ್ಧಾರ ಮಾಡಲಾಗುತ್ತದೆ ಎಂದು ಉತ್ತರ ನೀಡಿದರು.
ಬೆಳಗಾವಿಯಲ್ಲಿ ಕನ್ನಡ ಹಾಡು ಹಾಕಿದ್ದಕ್ಕೆ ಎಂಇಎಸ್ ಪುಂಡರು ನಡೆಸಿದ ದಾಂಧಲೆಯ ಕುರಿತು ಪ್ರತಿಕ್ರಿಯಿಸಿದ ಬೊಮ್ಮಾಯಿ, ಎಂಇಎಸ್ ಪುಂಡಾಟಿಕೆಯನ್ನು ನಾವು ಖಂಡಿಸುತ್ತೇವೆ. ಈಗಾಗಲೆ ಪೊಲೀಸರು ಅವರ ವಿರುದ್ಧ ಕ್ರಮ ಕೈಗೊಂಡಿದ್ದಾರೆ. ಕನ್ನಡದ ನೆಲದಲ್ಲಿ ಕನ್ನಡಿಗರ ವಿರುದ್ಧ ನಡೆದುಕೊಂಡರೆ ಉಗ್ರ ಕ್ರಮ ಕೈಗೊಳ್ಳಲಾಗುತ್ತದೆ, ಕಾನೂನು ಕೈಗೆತ್ತಿಕೊಳ್ಳುವವರನ್ನು ಸಹಿಸುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ನೀಡಲಾಗಿದೆ ಎಂದರು.
ಜವಾಹರಲಾಲ್ ನೆಹರೂ ಅವರ ಪುಣ್ಯಸ್ಮರಣೆಯಂದು ಶುಕ್ರವಾರ ಮಾತನಾಡಿದ್ದ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ನೆಹರೂ ಅವರು ಪ್ರಧಾನಿ ಆದ ಮೇಲೂ ವಿರೋಧ ಪಕ್ಷಗಳಿಗೆ ಮನ್ನಣೆ ನೀಡುತ್ತಿದ್ದರು. ವಿರೋಧ ಪಕ್ಷದ ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದರು. ವಿರೋಧ ಪಕ್ಷದ ನಾಯಕರು ಮಾತನಾಡುತ್ತಾರೆ ಎಂದು ಪ್ರಧಾನಿ ನೆಹರೂ ಅವರು ಪಾರ್ಲಿಮೆಂಟ್‌ಗೆ ಗೈರು ಹಾಜರಾಗುತ್ತಿರಲಿಲ್ಲ. ಸದನದಲ್ಲೇ ಕುಳಿತು ವಿರೋಧ ಪಕ್ಷದವರ ಮಾತು ಮತ್ತು ಅಭಿಪ್ರಾಯಗಳನ್ನು ಸಂಪೂರ್ಣವಾಗಿ ಕೇಳಿಸಿಕೊಳ್ಳುವ ಎದೆಗಾರಿಕೆ ಇತ್ತು. ಈ ಎದೆಗಾರಿಕೆ ಈಗಿನ ಪ್ರಧಾನಿ ನರೇಂದ್ರ ಮೋದಿಯವರಿಗೆ ಏಕಿಲ್ಲ? ಇಬ್ಬರನ್ನೂ ಹೋಲಿಕೆ ಮಾಡಲಾಗದು ಎಂದು ಹೇಳಿದ್ದರು.
ಈ ಕುರಿತು ಪ್ರತಿಕ್ರಿಯೆ ನೀಡಿದ ಸಿಎಂ ಬೊಮ್ಮಾಯಿ, ಅವರು ಹೇಳಿದ್ದು ಸರಿಯಿದೆ. ನೆಹರೂ ಅವರನ್ನು ಹೋಲಿಕೆ ಮಾಡಲು ಸಾಧ್ಯವಿಲ್ಲ. ಭಾರತದ ಮೇಲೆ ಚೀನಾ ಆಕ್ರಮಣ ಮಾಡಿದಾಗ ಸರಿಯಾದ ಕ್ರಮ ಕೈಗೊಳ್ಳದವರು ನೆಹರು. ಅದೇ ಚೀನಾ ಈಗ ಆಕ್ರಮಣ ಮಾಡಿದಾಗ ಸರಿಯಾದ ಉತ್ತರ ಕೊಟ್ಟವರು ಪ್ರಧಾನಿ ಮೋದಿ. ಮೋದಿಯವರು ಪಾಕಿಸ್ತಾನದೊಂದಿಗೆ ರಾಜಿ ಮಾಡಿಕೊಂಡವರಲ್ಲ, ಭಾರತದ ಏಕತೆ ಹಾಗೂ ಅಖಂಡತೆಯನ್ನು ಬಲಿಕೊಟ್ಟವರಲ್ಲ. ಹಾಗಾಗಿ ನೆಹರೂ ಅವರನ್ನು ಯಾರಿಗೂ ಹೋಲಿಕೆ ಮಾಡಲು ಸಾಧ್ಯವಾಗುವುದಿಲ್ಲ ಎಂದು ಟೀಕಿಸಿದರು.
ಮಂಗಳೂರಿನಲ್ಲಿ ಹಿಜಾಬ್ ವಿವಾದ ಮತ್ತೆ ಆರಂಭವಾಗಿರುವುದರ ಕುರಿತು ಪ್ರತಿಕ್ರಿಯಿಸಿ, ಈ ವಿಚಾರದಲ್ಲಿ ವಿವಾದ ಮಾಡುವ ಪ್ರಶ್ನೆ ಇಲ್ಲ. ಎಲ್ಲರೂ ನ್ಯಾಯಾಲಯದ ಆದೇಶ ಪಾಲನೆ ಮಾಡಬೇಕು, ಬಹುತೇಕರು ಪಾಲನೆ ಮಾಡುತ್ತಿದ್ದಾರೆ. ಈ ಬಗ್ಗೆ ಸಿಂಡಿಕೇಟ್ ನಿರ್ಧಾರ ಕೈಗೊಂಡಿದೆ, ಅದೇ ಅಂತಿಮ ಎಂದರು.
ಇದನ್ನೂ ಓದಿ | ರೋಹಿತ್ ಚಕ್ರತೀರ್ಥ ಆಯ್ಕೆಗೆ ಮಾನದಂಡ ಏನು?: ಸರ್ಕಾರಕ್ಕೆ 83 ಸಾಹಿತಿಗಳ ಪತ್ರ