Site icon Vistara News

HD Kumaraswamy : ಎಚ್‌ಡಿಕೆ ವಿರುದ್ಧ ಪೋಸ್ಟರ್; ಬಿಂದುಗೌಡ ಸೇರಿ 6 ಜನರ ವಿರುದ್ಧ ಕೇಸ್‌

HD kumaraswamy

ಬೆಂಗಳೂರು: ವಿದ್ಯುತ್‌ ಕಳವು (Electricity Theft) ಆರೋಪದಲ್ಲಿ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ (HD Kumaraswamy ) ವಿರುದ್ಧ ನ. 14ರಂದು ಎಫ್‌ಐಆರ್‌ ದಾಖಲಾಗಿದ್ದ ಬೆನ್ನಲ್ಲೇ ಜೆಡಿಎಸ್ ಕಚೇರಿ ಜೆಪಿ ಭವನಕ್ಕೆ ʼಕರೆಂಟ್‌ ಕಳ್ಳ ಕುಮಾರಸ್ವಾಮಿʼ, ʼವಿದ್ಯುತ್‌ ಕಳ್ಳ ಕುಮಾರಸ್ವಾಮಿʼ ಎನ್ನುವ ಬರಹವುಳ್ಳ ಅವಹೇಳನಕಾರಿ ಪೋಸ್ಟರ್‌ (Derogatory poster) ಅನ್ನು ಅಂಟಿಸಲಾಗಿತ್ತು. ಇದು ಸಾಕಷ್ಟು ವಿವಾದವನ್ನು ಪಡೆದುಕೊಂಡಿತ್ತು. ಈ ಸಂಬಂಧ ಜೆಡಿಎಸ್‌ (JDS Karnataka) ದೂರು ಸಹ ನೀಡಿತ್ತು. ಈಗ ಈ ಪ್ರಕರಣ ಸಂಬಂಧ ಬಿಂದುಗೌಡ, ನವೀನ್​ ಗೌಡ ಸೇರಿ ಒಟ್ಟು ಆರು ಮಂದಿಯ ಮೇಲೆ ಕೇಸ್‌ ದಾಖಲಾಗಿದೆ.

ಜೆಡಿಎಸ್ ಕಚೇರಿ ಜೆಪಿ ಭವನದ ಆವರಣದಲ್ಲಿ ಪೋಸ್ಟರ್​​ ಅಂಟಿಸಿದ್ದ ಪ್ರಕರಣ ಸಂಬಂಧ ಶ್ರೀರಾಮಪುರ ಠಾಣೆಯಲ್ಲಿ ಕಾಂಗ್ರೆಸ್​ ಕಾರ್ಯಕರ್ತರ ವಿರುದ್ಧ ಜೆಡಿಎಸ್‌ ಮುಖಂಡರು ದೂರು ದಾಖಲಿಸಿದ್ದರು. ಈ ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡಿರುವ ಪೊಲೀಸರು, ಬಿಂದುಗೌಡ, ನವೀನ್​ ಗೌಡ ಆರು ಜನರ ಮೇಲೆ ಕೇಸ್‌ ದಾಖಲು ಮಾಡಿದ್ದಾರೆ.

ಐಪಿಸಿ -ಸೆಕ್ಷನ್​​ 448, 504, 324, 506, 149 ಅಡಿಯಲ್ಲಿ ಕೇಸ್ ದಾಖಲು ಮಾಡಿಕೊಳ್ಳಲಾಗಿದೆ. ಪ್ರಕರಣದಲ್ಲಿ ಬಿಂದುಗೌಡ ಐದನೇ ಆರೋಪಿಯಾಗಿದ್ದರೆ (A-5), ನವೀನ್​ಗೌಡ ಆರನೇ (A-6) ಆರೋಪಿಯಾಗಿದ್ದಾರೆ. ಅವಹೇಳನಕಾರಿ ಪೋಸ್ಟರ್​ ಅಂಟಿಸಿ ಸೆಕ್ಯೂಟಿಗೆ ಬೆದರಿಸಿದ ಆರೋಪ ಅವರ ಮೇಲೆ ಇದೆ. ಅಲ್ಲದೆ, ಜೆಡಿಎಸ್​ ಕಚೇರಿಗೆ ಅತಿಕ್ರಮ ಪ್ರವೇಶ ಮಾಡಿ ಪೋಸ್ಟರ್​ ಅಂಟಿಸಿದ ಆರೋಪವನ್ನೂ ಮಾಡಲಾಗಿದೆ.

ದೂರಿನಲ್ಲೇನಿದೆ?

ಅಂದು ಬಿಂದು ಗೌಡ, ನವೀನ್‌ ಗೌಡ ಸೇರಿ ಒಟ್ಟು ಆರು ಮಂದಿ ಜೆಡಿಎಸ್‌ ಕಚೇರಿಗೆ ಅತಿಕ್ರಮವಾಗಿ ಪ್ರವೇಶ ಮಾಡಿದ್ದಾರೆ. ಈ ವೇಳೆ ಕಾಂಪೌಂಡ್‌ ಮೇಲೆ ಪೋಸ್ಟರ್‌ ಅಂಟಿಸಲು ಮುಂದಾಗಿದ್ದಾರೆ. ಇದನ್ನು ಪ್ರಶ್ನೆ ಮಾಡಲು ಮುಂದಾದ ಸೆಕ್ಯುರಿಟಿ ಮೇಲೆ ಕೀ ಬಂಚ್‌ನಿಂದ ಹಲ್ಲೆ ಮಾಡಲಾಗಿದ್ದು, ತಪ್ಪಿತಸ್ಥರನ್ನು ಬಂಧಿಸಿ, ಸೂಕ್ತ ಕಾನೂನು ಕ್ರಮವನ್ನು ತೆಗೆದುಕೊಳ್ಳುವಂತೆ ದೂರಲಾಗಿತ್ತು. ಈಗ ಈ ಸಂಬಂಧ ಪೊಲೀಸರು ಒಟ್ಟು ಆರು ಮಂದಿ ವಿರುದ್ಧ ಕೇಸ್‌ ದಾಖಲು ಮಾಡಿಕೊಂಡಿದ್ದಾರೆ.

ಪೋಸ್ಟರ್‌ನಲ್ಲೇನಿತ್ತು?

ಕುಮಾರಸ್ವಾಮಿ ಕರೆಂಟ್‌ 200 ಯುನಿಟ್‌ ಮಾತ್ರ ಉಚಿತ ನೆನಪಿಟ್ಟುಕೊಳ್ಳಿ, ಹೆಚ್ಚು ಕದಿಯಬೇಡಿ. ಕರೆಂಟ್‌ ಕದ್ದರೂ ಎಚ್‌ಡಿಕೆ ಪ್ರಾಮಾಣಿಕತೆಯನ್ನು ಮೆಚ್ಚಲೇಬೇಕು ಎಂದು ಪೋಸ್ಟರ್‌ಗಳಲ್ಲಿ ಬರೆಯಲಾಗಿತ್ತು. ಈ ಬಗ್ಗೆ ಆಕ್ರೋಶ ಹೊರಹಾಕಿದ್ದ ಜೆಡಿಎಸ್‌ ಕಾರ್ಯಕರ್ತರು, ಮಾಜಿ ಸಿಎಂ ಎಚ್‌ಡಿಕೆಗೆ ಅವಮಾನ ಮಾಡಲು ಕಾಂಗ್ರೆಸ್‌ ಕಾರ್ಯಕರ್ತರು ಈ ಪೋಸ್ಟರ್‌ಗಳನ್ನು ಅಂಟಿಸಿದ್ದಾರೆ ಎಂದು ದೂರು ನೀಡಿತ್ತು.

ಕುಮಾರಸ್ವಾಮಿ ವಿರುದ್ಧ ದಾಖಲಾಗಿರುವ FIR

ದೀಪಾವಳಿ ಹಬ್ಬದ (Diwali Festival) ಪ್ರಯುಕ್ತ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ (HD Kumaraswamy) ಅವರ ನಿವಾಸಕ್ಕೆ ವಿದ್ಯುತ್ ದೀಪಗಳ ಅಲಂಕಾರ (Decoration of electric lights) ಮಾಡಲಾಗಿತ್ತು. ಇದಕ್ಕೆ ವಿದ್ಯುತ್‌ ಕಂಬದಿಂದ ನೇರವಾಗಿ ಸಂಪರ್ಕ ಪಡೆಯಲಾಗಿತ್ತು. ಈ ವಿಡಿಯೊ ಸಖತ್‌ ವೈರಲ್‌ ಆಗಿತ್ತು. ಈ ಸಂಬಂಧ ಕಾಂಗ್ರೆಸ್‌, ಕುಮಾರಸ್ವಾಮಿ ಅವರು ವಿದ್ಯುತ್‌ ಕಳ್ಳತನ ಮಾಡಿದ್ದಾರೆ ಎಂದು ಸೋಷಿಯಲ್‌ ಮೀಡಿಯಾದಲ್ಲಿ ಆರೋಪ ಮಾಡಿತ್ತು. ಸಂಬಂಧ ಈಗ ಕುಮಾರಸ್ವಾಮಿ ಮೇಲೆ ಎಫ್‌ಐಆರ್‌ ದಾಖಲಾಗಿತ್ತು. ವಿದ್ಯುತ್‌ ಕಳ್ಳತನದ ಆರೋಪದ ಮೇಲೆ ಪ್ರಕರಣವನ್ನು ದಾಖಲು ಮಾಡಿಕೊಳ್ಳಲಾಗಿತ್ತು.

ಈ ಸಂಬಂಧ ಬೆಸ್ಕಾಂ ಅಧಿಕಾರಿಗಳು ಕುಮಾರಸ್ವಾಮಿ ನಿವಾಸಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಲ್ಲದೆ, ಜಯನಗರ ಬೆಸ್ಕಾಂ ಜಾಗೃತ ದಳದಿಂದ ದೂರು ನೀಡಿ ಎಫ್ಐಆರ್ ದಾಖಲು ಮಾಡಲಾಗಿತ್ತು.

ಇದನ್ನೂ ಓದಿ | Yathindra Siddaramaiah : ವಿದ್ಯುತ್ ಕಳ್ಳತನ ಮುಚ್ಚಿಹಾಕಲು ಈ ಆರೋಪ: ಎಚ್‌ಡಿಕೆ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ

ಹೊಣೆ ಹೊತ್ತಿದ್ದ ಎಚ್.ಡಿ. ಕುಮಾರಸ್ವಾಮಿ

ಜಯನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದ್ದು, ಮಂಗಳವಾರ (ನ.14) ರಂದು ಅಪರಾಧ ಎಸಗಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಎಇಇ ಪ್ರಶಾಂತ್‌ ಕುಮಾರ್‌ ಎಂಬುವವರು ದೂರು ನೀಡಿದ್ದರು. ಈ ದೂರಿನನ್ವಯ ಎಫ್‌ಐಆರ್‌ ದಾಖಲು ಮಾಡಿಕೊಳ್ಳಲಾಗಿತ್ತು. ಅಲ್ಲದೆ, ಇದಕ್ಕೆ ಸಂಬಂಧಪಟ್ಟಂತೆ ಸಂಪೂರ್ಣ ಹೊಣೆ ಹೊರುವುದಾಗಿ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದು, ನೋಟಿಸ್‌ ಕೊಡಿ ದಂಡ ಕಟ್ಟುತ್ತೇನೆ ಎಂದೂ ಹೇಳಿದ್ದರು.

Exit mobile version