ಬೆಂಗಳೂರು: ಮಾಜಿ ಸಿಎಂ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ (Former CM and JDS state president HD Kumaraswamy) ಅವರು ಗ್ಯಾರಂಟಿ ಯೋಜನೆಗಳ (Congress Guarantee Scheme) ಜಾರಿ ಬಗ್ಗೆ ತಮ್ಮ ಕ್ಷೇತ್ರ ಚನ್ನಪಟ್ಟಣದಲ್ಲಿ ಕೇಳಿ ತಿಳಿದುಕೊಳ್ಳಲಿ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DCM DK Shivakumar) ತಿರುಗೇಟು ನೀಡಿದ್ದಾರೆ.
ಕುಮಾರಸ್ವಾಮಿ ಅವರಿಗೂ ಗ್ಯಾರಂಟಿ ಯೋಜನೆಗಳಿಗೂ ಏನು ಸಂಬಂಧ? ಅವರಿಗೆ ಗ್ಯಾರಂಟಿ ಯೋಜನೆಗಳ ಬಗ್ಗೆ ಏನು ಗೊತ್ತಿದೆ” ಎಂದು ಮಾಧ್ಯಮಗಳ ಎದುರು ಡಿ.ಕೆ. ಶಿವಕುಮಾರ್ ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ: Three phase power : ಕಾಡಂಚಿನ ಗ್ರಾಮಗಳಿಗೆ ಹಗಲು ಹೊತ್ತಲ್ಲೇ 3 ಫೇಸ್ ವಿದ್ಯುತ್: ಸಿಎಂಗೆ ಈಶ್ವರ ಖಂಡ್ರೆ ಮನವಿ
ರಾಜ್ಯ ಸರ್ಕಾರವು ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಜನರಿಗೆ ತಲುಪಿಸುತ್ತಿಲ್ಲ ಎಂಬ ಎಚ್.ಡಿ. ಕುಮಾರಸ್ವಾಮಿ ಆರೋಪ ಬಗ್ಗೆ ಪ್ರಶ್ನೆ ಮಾಡಿದಾಗ ಪ್ರತಿಕ್ರಿಯೆ ನೀಡಿದ ಡಿ.ಕೆ. ಶಿವಕುಮಾರ್, ಕುಮಾರಸ್ವಾಮಿ ಅವರಿಗೆ ಬಡ ಜನತೆಯ ನೋವು ಗೊತ್ತಿದ್ದರೆ ಮಾತನಾಡುತ್ತಿರಲಿಲ್ಲ. ಅವರೂ ಒಬ್ಬ ನಾಯಕರು, ಆರೋಪ ಮಾಡಲಿ ತೊಂದರೆಯಿಲ್ಲ. ಗ್ಯಾರಂಟಿ ಯೋಜನೆಗಳಿಂದ ಯಾರಿಗೆ ಒಳ್ಳೆಯದಾಗಬೇಕಿತ್ತೋ ಅವರಿಗೆ ಅದು ತಲುಪಿ, ಸಂತೋಷವಾಗಿದ್ದಾರೆ ಎಂದು ಹೇಳಿದರು.
ಜಾರಿಯಾಗದ ಪಂಚರತ್ನ ಯೋಜನೆ
ಕುಮಾರಸ್ವಾಮಿ ಅವರೇನು ಫಲಾನುಭವಿಗಳೂ ಅಲ್ಲ, ಅದರ ಬಗ್ಗೆ ಅವರಿಗೆ ಚಿಂತೆ ಇಲ್ಲ. ಪಾಪ ಅವರಿಗೆ ಪಂಚರತ್ನ ಯೋಜನೆಗಳನ್ನು ಜಾರಿ ಮಾಡಲು ಅವಕಾಶ ಆಗಲೇ ಇಲ್ಲ. ನಮ್ಮ ಗ್ಯಾರಂಟಿ ಯೋಜನೆಗಳು ತಲುಪಿದೆಯೋ, ಇಲ್ಲವೊ ಎನ್ನುವುದನ್ನು ಎಚ್‌ಡಿಕೆಯವರು ಮತದಾರರಿಗೆ ಕೇಳಿ ತಿಳಿದುಕೊಳ್ಳಬೇಕು ಎಂದು ಡಿ.ಕೆ. ಶಿವಕುಮಾರ್ ಕಿವಿ ಮಾತು ಹೇಳಿದರು.
ಚನ್ನಪಟ್ಟಣದ 25ಕ್ಕೂ ಹೆಚ್ಚು ಮತದಾರರ ಬಳಿ ನಾನೇ ಖುದ್ದಾಗಿ ಮಾತನಾಡಿದ್ದೇನೆ. ಎಚ್.ಡಿ. ಕುಮಾರಸ್ವಾಮಿ ಅವರು ತಮ್ಮ ಕ್ಷೇತ್ರದ ಮತದಾರರ ಬಳಿ ಹೋಗಿ ಕೇಳಲಿ. ಉಚಿತ ವಿದ್ಯುತ್, ಶಕ್ತಿ, ಅನ್ನ ಭಾಗ್ಯ, ಗೃಹಲಕ್ಷ್ಮಿ ಯೋಜನೆಗಳು ಅವರಿಗೆ ತಲುಪಿದೆಯೆ? ಇಲ್ಲವೇ? ಎಂದು ಪರೀಕ್ಷೆ ಮಾಡಲಿ ಎಂದು ಡಿ.ಕೆ. ಶಿವಕುಮಾರ್ ಸವಾಲು ಹಾಕಿದರು.
ಒಂದಷ್ಟು ತಾಂತ್ರಿಕ ದೋಷ ಹಾಗೂ ಇತರೆ ಕಾರಣಗಳಿಂದ ಶೇ. 5ರಷ್ಟು ಫಲಾನುಭವಿಗಳಿಗೆ ಯೋಜನೆ ತಲುಪಿಲ್ಲ. ಈಗ ಒಂದೊಂದೇ ಸಮಸ್ಯೆಗಳನ್ನು ಬಗೆಹರಿಸಿ ತಲುಪಿಸಲಾಗುತ್ತಿದೆ ಎಂದು ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದರು.
ತೆಲಂಗಾಣದಲ್ಲಿ ಕರ್ನಾಟಕ ಮಾದರಿ ಗ್ಯಾರಂಟಿ ಅನುಷ್ಠಾನ
ನಾನು ತೆಲಂಗಾಣದ 5 ಕ್ಷೇತ್ರಗಳ ಚುನಾವಣಾ ಪ್ರಚಾರದಲ್ಲಿ ತೊಡಗಿಕೊಂಡಿದ್ದೆ. ಆ ಐದೂ ಕ್ಷೇತ್ರಗಳನ್ನು ಗೆಲ್ಲುತ್ತೇವೆ ಎನ್ನುವ ವಿಶ್ವಾಸವಿದೆ. ಡಿ. 9 ರಂದು ಕಾಂಗ್ರೆಸ್ ಪಕ್ಷ ತೆಲಂಗಾಣದಲ್ಲಿ ಸರ್ಕಾರ ರಚಿಸಲಿದ್ದು, ಕರ್ನಾಟಕದ ಮಾದರಿಯಂತೆ 6 ಗ್ಯಾರಂಟಿಗಳನ್ನು ಜಾರಿಗೆ ತರಲಾಗುವುದು. ಈ ಕುರಿತು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.”
ತಾಳ್ಮೆಯಿಂದರಲು ಕುಮಾರಸ್ವಾಮಿಗೆ ಆಗುತ್ತಿಲ್ಲ
ಕರ್ನಾಟಕದ ಸಚಿವರಿಗೆ ಪಂಚರಾಜ್ಯ ಚುನಾವಣೆ ಸಲುವಾಗಿ ಕಮಿಷನ್ ಟಾರ್ಗೆಟ್ ಕೊಡಲಾಗಿದೆ ಎಂದು ಎಚ್.ಡಿ. ಕುಮಾರಸ್ವಾಮಿ ಮಾಡಿದ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಡಿ.ಕೆ. ಶಿವಕುಮಾರ್, “ಕುಮಾರಸ್ವಾಮಿ ಅವರು ಟಾರ್ಗೆಟ್ ಕೊಟ್ಟಿರಬೇಕು. ನಮ್ಮ ಸಚಿವರು ತೆಲಂಗಾಣ ಚುನಾವಣಾ ಪ್ರಚಾರಕ್ಕೆ ಹೋಗಿ ಬರುತ್ತಿದ್ದಾರೆ. ತಾಳ್ಮೆಯಿಂದ ಇರಲು ಕುಮಾರಸ್ವಾಮಿ ಅವರಿಗೆ ಆಗುತ್ತಿಲ್ಲ. ಅವರಿಗೂ ವಿಜಯೇಂದ್ರ ಇಬ್ಬರಿಗೂ ಒಳ್ಳೆಯದಾಗಲಿ ಎಂದು ಉತ್ತರಿಸಿದರು.
ಇದನ್ನೂ ಓದಿ: BY Vijayendra : ಬಿ.ವೈ. ವಿಜಯೇಂದ್ರ 3 ವರ್ಷಕ್ಕೆ ಅಧ್ಯಕ್ಷ, ನಂತರ ಮತ್ತೊಬ್ಬರು ಎಂದ ಪ್ರಲ್ಹಾದ್ ಜೋಶಿ
ಸಿಎಂ ಸಿದ್ದರಾಮಯ್ಯ ಅವರು ಹೈಕಮಾಂಡ್ ಕೊಟ್ಟಿರುವ ನೋಟಿಸ್ ಪೀರಿಯಡ್‌ನಲ್ಲಿ ಇದ್ದಾರೆ ಎಂಬ ಎಚ್.ಡಿ. ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ,.ಕೆ. ಶಿವಕುಮಾರ್, ಕುಮಾರಸ್ವಾಮಿ ಅವರಿಗೂ ಕಾಂಗ್ರೆಸ್ ಪಕ್ಷಕ್ಕೂ ಏನು ಸಂಬಂಧ? ರಾಜ್ಯದ ಜನತೆ ಕಾಂಗ್ರೆಸ್ ಪಕ್ಷಕ್ಕೆ ಸಂಪೂರ್ಣ ಬಹುಮತ ನೀಡಿದ್ದಾರೆ. ನಾವೆಲ್ಲ ಹೈಕಮಾಂಡ್ ಏನು ಹೇಳುತ್ತದೆಯೋ ಅದರಂತೆ ಕೆಲಸ ಮಾಡುತ್ತಿದ್ದೇವೆ. ಇಲ್ಲಿ ಬೇರೆ ಚರ್ಚೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ