Site icon Vistara News

ಸರ್ಕಾರಿ ಜಾಗದಲ್ಲಿ ಬಡೇ ಇಸ್ತೆಮಾ ಆಚರಣೆ; ಬಾಗಲಕೋಟೆಯಲ್ಲಿ ಹಿಂದು ಸಂಘಟನೆಗಳ ಆಕ್ರೋಶ

Hindu workers protest

ಬಾಗಲಕೋಟೆ: ಸರ್ಕಾರಿ ಜಾಗದಲ್ಲಿ ಮುಸ್ಲಿಮರಿಂದ ಬಡೇ ಇಸ್ತೆಮಾ ಆಚರಣೆ ವಿರೋಧಿಸಿ ವಿಶ್ವ ಹಿಂದು ಪರಿಷತ್, ಹಿಂದು ಜಾಗರಣ ವೇದಿಕೆ ಕಾರ್ಯಕರ್ತರು (Hindu organisations), ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ (protest) ನಡೆಸಿದರು.

ಕಾರ್ಯಕ್ರಮಕ್ಕೆ ಕಾನೂನುಬಾಹಿರವಾಗಿ ಅನುಮತಿ ನೀಡಿದ್ದಾರೆ ಎಂದು ಆರೋಪಿಸಿರುವ ಕಾರ್ಯಕರ್ತರು, ಅತೀ ಸೂಕ್ಷ್ಮ ಪ್ರದೇಶವಾದ ನಗರದಲ್ಲಿ ಬಡೆ ಇಸ್ತೆಮಾಗೆ ಅವಕಾಶ ನೀಡಿರುವುದು ಖಂಡನೀಯ. ಸರ್ಕಾರಿ ಜಾಗದಲ್ಲಿ ಬೃಹತ್ ಪೆಂಡಾಲ್ ಮತ್ತು ಪಾರ್ಕಿಂಗ್‌ಗೆ ವ್ಯವಸ್ಥೆ ಮಾಡಲಾಗಿದೆ. ಒಂದು ಸಮುದಾಯದ ಓಲೈಕೆಗಾಗಿ ನಿಯಮ ಬಾಹಿರವಾಗಿ ಅನುಮತಿ ನೀಡಲಾಗಿದೆ ಎಂದು ಅಧಿಕಾರಿಗಳ ವಿರುದ್ಧ ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದ್ದಾರೆ.

ಅನಧಿಕೃತವಾಗಿ ಹಾಕಿರುವ ಪೆಂಡಾಲ್ ತೆರವು ಮಾಡಿ ಎಂಬ ಮನವಿಗೆ ಸ್ಪಂದಿಸದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕೆ.ಎಂ.ಜಾನಕಿ ವಿರುದ್ಧ ಕಾರ್ಯಕರ್ತರು ಆಕ್ರೋಶ ಹೊರಹಾಕಿದರು. ಕಾರ್ಯಕರ್ತರು ವಾಗ್ವಾದ ನಡೆಸಿದ್ದರಿಂದ ಜಿಲ್ಲಾಧಿಕಾರಿ ಗರಂ ಆದರು. ಆದರೆ, ನೀವು ಸಮರ್ಪಕ ಉತ್ತರ ನೀಡುವವರೆಗೂ ಜಾಗ ಬಿಟ್ಟು ಕದಲಲ್ಲ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದರು.

ಇದನ್ನೂ ಓದಿ | ವಿಧಾನಸೌಧ ರೌಂಡ್ಸ್‌: ಬಿಜೆಪಿ ಸಂಸದರೇ ರಾಜಕಾರಣ ಮಾಡಿ, ಆದರೆ ರಾಜ್ಯದ ಹಿತ ಮಾರಬೇಡಿ!

ಭಟ್ಕಳ ಪುರಸಭೆಯನ್ನು ನಗರಸಭೆ ಮಾಡುವ ಪ್ರಸ್ತಾಪಕ್ಕೆ ತೀವ್ರ ವಿರೋಧ

ಕಾರವಾರ: ಭಟ್ಕಳ ಪುರಸಭೆಯನ್ನು ನಗರಸಭೆಯನ್ನಾಗಿ ಮೇಲ್ದರ್ಜೆಗೇರಿಸುವ ಪ್ರಸ್ತಾಪಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ಸಚಿವ ಮಂಕಾಳು ವೈದ್ಯ ಅವರ ಪ್ರಸ್ತಾವನೆಗೆ ಹಿಂದು ಸಂಘಟನೆಗಳು ಆಕ್ರೋಶ ಹೊರಹಾಕಿದ್ದು, ಇದು ಭಟ್ಕಳವನ್ನು ಮುಸ್ಲಿಂ ಸಮುದಾಯದ ತೆಕ್ಕೆಗೆ ಕೊಡುವ ಕೈ ನಾಯಕರ ಹುನ್ನಾರವಾಗಿದೆ ಎಂದು ಆರೋಪಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಪಟ್ಟಣದಲ್ಲಿ ಮುಸ್ಲಿಮರ ಪ್ರಾಬಲ್ಯ ಇರುವ ಜಾಲಿ ಮತ್ತು ಹೆಬಳೆ ಪಂಚಾಯಿತಿಯನ್ನು ಭಟ್ಕಳ ಪುರಸಭೆ ಜೊತೆ ವಿಲೀನಗೊಳಿಸಿ ನಗರಸಭೆ ನಿರ್ಮಾಣದ ಪ್ಲ್ಯಾನ್ ಮಾಡಿದ್ದಾರೆ. ಹಿಂದುಗಳು ಜಾಸ್ತಿ ಇರುವ ಗ್ರಾಮಗಳನ್ನು ಭಟ್ಕಳಕ್ಕೆ ಸೇರ್ಪಡೆ ಮಾಡುವ ಅವಕಾಶವಿತ್ತು. ಆದರೆ, ಭವಿಷ್ಯದಲ್ಲಿ ಮುಸ್ಲಿಮರಿಗೆ ಹೆಚ್ಚಿನ ಅನುಕೂಲ ಒದಗಿಸಲು ಜಾಲಿ, ಹೆಬಳೆಯನ್ನು ಮಾತ್ರ ಭಟ್ಕಳಕ್ಕೆ ಸೇರಿಸಲಾಗುತ್ತಿದೆ. ಮುಸ್ಲಿಮರ ಮತಗಳು ಜಾಸ್ತಿ ಇರುವ ಪಂಚಾಯತಿಗಳನ್ನು ಮಾತ್ರ ಸೇರ್ಪಡೆ ಮಾಡುತ್ತಿರುವುಕ್ಕೆ ಹಿಂದು ಸಂಘಟನೆಗಳು ಅಸಮಾಧಾನ ಹೊರಹಾಕಿವೆ.

ಚುನಾವಣೆ ಬಳಿಕ ಮುಸ್ಲಿಮರಿಗೆ ಸಚಿವ ಮಂಕಾಳು ವೈದ್ಯ ಮಾತು ಕೊಟ್ಟಿದ್ದಾರೆ. ಕೊಟ್ಟ ಮಾತಿನಂತೆ ಮುಸ್ಲಿಮರಿಗೆ ಸಚಿವರು ಅನುಕೂಲ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ನಗರಾಭಿವೃದ್ಧಿ ಇಲಾಖೆಗೆ ಸಚಿವ ಮಂಕಾಳು ವೈದ್ಯ ಪತ್ರ

ಭಟ್ಕಳ ಪುರಸಭೆಯ ಜನಸಂಖ್ಯೆಯು 2011 ರ ಜನಗಣತಿ ಪ್ರಕಾರ 32000 ಜನಸಂಖ್ಯೆಯನ್ನು ಹೊಂದಿದ್ದು, ಪುರಸಭೆಗೆ ಹೊಂದಿಕೊಂಡಿರುವಂತೆ ಜಾಲಿ ಪಟ್ಟಣ ಪಂಚಾಯತಿಯು 19,362 ಜನಸಂಖ್ಯೆಯನ್ನು ಹೊಂದಿದ್ದು, ಹಾಗೂ ಹೆಬಳೆ ಗ್ರಾಮ ಪಂಚಾಯತಿಯ ಜನಸಂಖ್ಯೆ 19,362 ಇದೆ. ಕರಾವಳಿಯಲ್ಲಿ ಭಟ್ಕಳವು ಒಂದು ಪ್ರಮುಖ ನಗರವಾಗಿ ಬೆಳೆಯುತ್ತಿದ್ದು, ವಾಣಿಜ್ಯ ಚಟುವಟಿಕೆಗಳು ಸಹ ಅತೀ ವೇಗವಾಗಿ ಬೆಳೆಯುತ್ತಿದೆ. ಅಲ್ಲದೇ ಜನಸಾಂದ್ರತೆಯು ಸಹ ಹೆಚ್ಚಾಗಿದೆ. ಹೀಗಾಗಿ ಮೂರು ಸ್ಥಳೀಯ ಸಂಸ್ಥೆಗಳನ್ನು ಒಟ್ಟುಗೂಡಿಸಿ ನಗರಸಭೆಯನ್ನಾಗಿ ಮೇಲ್ದರ್ಜೆಗೇರಿಸಿದರೆ ಸುಗಮ ಆಡಳಿತಕ್ಕೆ ಅನುಕೂಲಕರವಾಗುವುದರ ಜೊತೆಗೆ ಅಭಿವೃದ್ಧಿ ದೃಷ್ಟಿಯಿಂದಲೂ ಪೂರಕವಾಗಿರುತ್ತದೆ ಎಂದು ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಬಿ.ಎಸ್. ಸುರೇಶ್‌ ಅವರಿಗೆ ಸಚಿವ ಮಂಕಾಳು ವೈದ್ಯ ಕೋರಿದ್ದಾರೆ.

ಇದನ್ನೂ ಓದಿ | PM Narendra Modi: ಎಲ್ಲಿಯ 20 ಕೋಟಿ ಉದ್ಯೋಗ? ಪ್ರಧಾನಿ ಮೋದಿಗೆ ಸಿದ್ದರಾಮಯ್ಯ ಸರಣಿ ಪ್ರಶ್ನೆ!

ಭಟ್ಕಳ ಪುರಸಭೆ, ಜಾಲಿ ಪಟ್ಟಣ ಪಂಚಾಯತಿ ಹಾಗೂ ಹೆಬಳೆ ಗ್ರಾಮ ಪಂಚಾಯತಿ ಸೇರಿದಂತೆ ಮೂರು ಸ್ಥಳೀಯ ಸಂಸ್ಥೆಗಳ ಒಟ್ಟು ಜನಸಂಖ್ಯೆಯು 2011 ರ ಜನಗಣತಿ ಪ್ರಕಾರ 63,216 ಇದೆ. ಕರ್ನಾಟಕ ಪುರಸಭೆ ಅಧಿನಿಯಮ 1964ರ ಕಲಂ-3(2) ಪ್ರಕಾರ ಪುರಸಭೆಯನ್ನು ನಗರಸಭೆಯನ್ನಾಗಿ ಮೇಲ್ದರ್ಜೆಗೇರಿಸಲು ಹೊಂದಿರಬೇಕಾದ ಎಲ್ಲಾ ಅರ್ಹತೆಗಳನ್ನು ಈ ಮೂರು ಸ್ಥಳೀಯ ಸಂಸ್ಥೆಗಳು ಹೊಂದಿರುವ ಕಾರಣ ಭಟ್ಕಳ ಪುರಸಭೆ, ಜಾಲಿ ಪಟ್ಟಣ ಪಂಚಾಯತ ಹಾಗೂ ಹೆಬಳೆ ಗ್ರಾಮ ಪಂಚಾಯತಿಗಳನ್ನು ಸೇರಿಸಿ ಭಟ್ಕಳ ನಗರಸಭೆಯನ್ನಾಗಿ ಮೇಲ್ದರ್ಜೇಗೇರಿಸಬೇಕು ಎಂದು ಮನವಿ ಮಾಡಿದ್ದಾರೆ. ಹೀಗಾಗಿ ಈ ಬಗ್ಗೆ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಬಿ.ಎಸ್. ಸುರೇಶ್‌ ಅವರು ಸೂಚಿಸಿದ್ದಾರೆ.

Exit mobile version