Site icon Vistara News

DK Shivakumar : ನನಗೆ ಜಾತಿ ರಾಜಕಾರಣ ಗೊತ್ತಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್‌

DK Shivakumar at lambani programme

ಬೆಂಗಳೂರು: “ನನಗೆ ಜಾತಿ ರಾಜಕಾರಣ (caste politics) ಗೊತ್ತಿಲ್ಲ. ಆದ ಕಾರಣ ನನ್ನ ಕ್ಷೇತ್ರದಲ್ಲಿ ಶೇ. 99ರಷ್ಟು ಜನರ ಬೆಂಬಲ ಪಡೆದು ದಾಖಲೆ ಬರೆದಿದ್ದೇನೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ (DK Shivakumar) ಹೇಳಿದರು.

ವಸಂತ ನಗರದಲ್ಲಿನ ಬಂಜಾರ ಭವನ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, “ನಾನು ಇದುವರೆಗೂ ಒಂಬತ್ತು ಚುನಾವಣೆಗಳನ್ನು ಎದುರಿಸಿ ಎಂಟರಲ್ಲಿ ಗೆದ್ದಿದ್ದೇನೆ. ಎಲ್ಲ ಸಮುದಾಯದವರು ನನ್ನ ಪರವಾಗಿ ನಿಂತ ಕಾರಣ 1.23 ಲಕ್ಷ ಮತಗಳನ್ನು ಪಡೆಯಲು ಕಾರಣವಾಯಿತು ಎಂದು ಹೇಳಿದರು.

ಇದನ್ನೂ ಓದಿ: Karnataka Live News: ಜೆಡಿಎಸ್‌ನಲ್ಲಿ ರಾಜ್ಯಾಧ್ಯಕ್ಷರಿಗೆ ನಿರ್ಧಾರ ಮಾಡುವ ಹಕ್ಕಿಲ್ಲವೆಂದ ಸಿ.ಎಂ. ಇಬ್ರಾಹಿಂ

“ನೀರಿನಿಂದ ಸ್ನಾನ ಮಾಡಿದವರು ಬಟ್ಟೆ ಬದಲಾಯಿಸುತ್ತಾರೆ. ಬೆವರಿನಿಂದ ಸ್ನಾನ ಮಾಡಿದವರು ಇತಿಹಾಸ ಬದಲಾಯಿಸುತ್ತಾರೆ” ಎಂದು ಬಂಜಾರರ ಕುಲಗುರು ಸೇವಾಲಾಲ್‌ ಅವರು ಹೇಳಿದ್ದಾರೆ. ಅದರಂತೆ ನಮ್ಮ ಸರ್ಕಾರ ದುಡಿಯುವ ವರ್ಗಕ್ಕೆ ಗ್ಯಾರಂಟಿ ಯೋಜನೆಗಳನ್ನು ತಂದು ಗೌರವ ನೀಡಿದೆ. ಬದಲಾವಣೆ ತರಲು ಹೊರಟಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ಹೇಳಿದರು.

ಬಂಜಾರ ಸಮುದಾಯದ (Banjara community) ಬದುಕು, ಬವಣೆ, ಸರಳ ಜೀವನವನ್ನು ಕಣ್ಣಾರೆ ಕಂಡಿದ್ದೇನೆ. ಬಂಜಾರ ಸಮುದಾಯ ಕಾಂಗ್ರೆಸ್‌ ಪಕ್ಷದ ಬೆನ್ನಿಗೆ ನಿಂತು ಅನೇಕ ಕ್ಷೇತ್ರಗಳಲ್ಲಿ ನಮ್ಮ ಅಭ್ಯರ್ಥಿಗಳ ಗೆಲುವಿಗೆ ಕಾರಣರಾಗಿದ್ದೀರಿ, ನಿಮ್ಮ ಸಮುದಾಯದ ಏಳಿಗೆಗೆ ನಮ್ಮ ಸರ್ಕಾರ ಶ್ರಮಿಸುತ್ತದೆ ಎಂದು ಡಿ.ಕೆ. ಶಿವಕುಮಾರ್‌ ವಾಗ್ದಾನ ನೀಡಿದರು.

ನಂಬಿಕೆಗಿಂತ ಹೆಚ್ಚು ದೇವರಿಲ್ಲ

ನಿಂಬೆಗಿಂತ ಹುಳಿಯಿಲ್ಲ, ತುಂಬೆಗಿಂತ ಔಷಧಿ ಇಲ್ಲ, ಶಂಬುಗಿಂತ ದೇವರಿಲ್ಲ, ನಂಬಿಕೆಗಿಂತ ಗುಣವಿಲ್ಲ ಎಂದು ಸರ್ವಜ್ಞ ಹೇಳುತ್ತಾರೆ. ಅಂದರೆ ನಂಬಿಕೆಗಿಂತ ಹೆಚ್ಚು ದೇವರಿಲ್ಲ, ನನ್ನ ಅನುಭವದಲ್ಲಿ ಲಂಬಾಣಿ ಸಮುದಾಯದವರು ನಂಬಿಕೆಗೆ, ದುಡಿಮೆಗೆ ಹೆಸರಾದವರು ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು.

ಡಾ. ಉಮೇಶ್‌ ಜಾದವ್‌ ಯಾಮಾರಿದರು

ರುದ್ರಪ್ಪ ಲಮಾಣಿ ಅವರ ಜತೆ ಕ್ಷೇತ್ರದಲ್ಲಿ ಸಂಚಾರ ಮಾಡಿದ್ದೇನೆ. ಲಂಬಾಣಿ ಸಮುದಾಯದ ಭೂಮಿ, ತಾಂಡದ ಸಮಸ್ಯೆಗಳನ್ನು ಶ್ರೀಘ್ರ ಪರಿಹರಿಸಲಾಗುವುದು. ಕೆಲವೊಬ್ಬರು ಸಚಿವ ಸ್ಥಾನ ಸಿಗಲಿಲ್ಲ ಎಂದು ಹೇಳುತ್ತಿದ್ದರು, ಒಂದಲ್ಲ ಒಂದು ದಿನ ಅವಕಾಶ ಮನೆ ಬಾಗಿಲಿಗೆ ಬರುತ್ತದೆ. ಭೀಮಾ ನಾಯ್ಕ ಅವರು ಸೋತರು ಸಚಿವ ಸ್ಥಾನಕ್ಕಿಂತ ದೊಡ್ಡ ಹುದ್ದೆಯನ್ನು ಕೊಟ್ಟಿದ್ದೇವೆ. ಸಮುದಾಯದ ಅಭಿವೃದ್ಧಿಗೆ ನಾವು ಜತೆಗಿರುತ್ತೇವೆ. ಡಾ. ಉಮೇಶ್‌ ಜಾದವ್‌ ಅವರು ಸ್ವಲ್ಪ ಯಾಮಾರಿದರು, ಇಲ್ಲದಿದ್ದರೆ ಒಳ್ಳೆ ಸ್ಥಾನದಲ್ಲಿ ಇರಬಹುದಿತ್ತು, ಈಗ ಆ ಚರ್ಚೆ ಬೇಡ ಎಂದು ಹೇಳಿದರು.

ಇದನ್ನೂ ಓದಿ: JDS Politics : ಮೈತ್ರಿ ಬಗ್ಗೆ ಜೆಡಿಎಸ್‌ನ 19 ಶಾಸಕರಲ್ಲಿ ಅಸಮಾಧಾನ; ಗಾಂಧೀಜಿ ಎಲೆಕ್ಷನ್‌ಗೆ ನಿಂತರೂ 20 ಕೋಟಿ ರೂ ಬೇಕು!

ಲಂಬಾಣಿ ಸಮುದಾಯಕ್ಕೆ ಪಿಎಸ್‌ಇ ಸದಸ್ಯ ಸ್ಥಾನ

ಮುಖ್ಯಮಂತ್ರಿಗಳು ಲಂಬಾಣಿ ಸಮುದಾಯಕ್ಕೆ ಪಿಎಸ್‌ಇ ಸದಸ್ಯ ಸ್ಥಾನ ನೀಡಬೇಕೆಂದು ತೀರ್ಮಾನ ಮಾಡಿದ್ದಾರೆ. ಹೆಚ್ಚಿನ ಜನರು ಅವಕಾಶಕ್ಕಾಗಿ ಕಾಯುತ್ತಿದ್ದಾರೆ, ಕೆಲವರಿಗೆ ಮಾತ್ರ ಕೆಲಸ ಮಾಡುವ ಅವಕಾಶ ದೊರೆಯುತ್ತದೆ. ಯಾರಿಗೆ ದೊರೆಯುತ್ತದೆ ನೋಡೋಣ. ರಾಜಕಾರಣ ಮಾಡುವವರು ಮಾಡುತ್ತಿರುತ್ತಾರೆ. ಆದರೆ ನಾವು- ನೀವು ಒಟ್ಟಿಗೆ ಕೆಲಸ ಮಾಡಿದರೆ ಕರ್ನಾಟಕವನ್ನು ಅಭಿವೃದ್ಧಿ ಪಥದ ಕಡೆಗೆ ತೆಗೆದುಕೊಂಡು ಹೋಗಬಹುದು ಎಂದು ಮನವಿ ಮಾಡಿದರು.

Exit mobile version