Site icon Vistara News

Liquor News : ಕೇಂದ್ರ ಮನೆ ಮನೆಗೆ ನೀರು ಬಿಟ್ಟರೆ, ರಾಜ್ಯ ಕಾಂಗ್ರೆಸ್‌ ಎಣ್ಣೆ ಕೊಡುತ್ತಿದೆ: ಬಿ.ವೈ. ರಾಘವೇಂದ್ರ ಕಿಡಿ

MP BY Raghavendra talk on Liquor News

ಸೊರಬ: ಕೇಂದ್ರ ಸರ್ಕಾರ ಲಕ್ಷ ಲಕ್ಷ ಕೋಟಿ ಅನುದಾನವನ್ನು ವಿನಿಯೋಗಿಸಿ ಗ್ರಾಮದ ಮನೆ, ಮನೆಗಳಿಗೆ ಜಲ ಜೀವನ ಮಿಷನ್‌ (Jal Jeevan Mission) ಅಡಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿದರೆ, ರಾಜ್ಯ ಸರ್ಕಾರ 3000 ಜನರಿಗೆ ಅನ್ವಯವಾಗುವಂತೆ ಮದ್ಯದ ಅಂಗಡಿ (Liquor News) ತೆರೆಯುವ ಮೂಲಕ ರಾಜ್ಯವನ್ನು ಕುಡುಕರ ರಾಜ್ಯವಾಗಿಸಿ, ಬಡತನವನ್ನು ಶಾಶ್ವತವಾಗಿ ಉಳಿಸುವ ಯೋಜನೆ ರೂಪಿಸಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ (MP BY Raghavendra) ಕಿಡಿಕಾರಿದ್ದಾರೆ.

ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಬಿ.ವೈ. ರಾಘವೇಂದ್ರ, ಗೋವಾದಲ್ಲಿ 100 ರೂಪಾಯಿ, ದೆಹಲಿಯಲ್ಲಿ 134 ರೂಪಾಯಿಗೆ ಮಾರಾಟವಾಗುವ ಮದ್ಯವನ್ನು ರಾಜ್ಯದಲ್ಲಿ 513ಕ್ಕೆ ಮಾರಾಟ ಮಾಡಲಾಗುತ್ತಿದೆ. ಒಟ್ಟಾರೆ ಶೇಕಡಾ 83 ತೆರಿಗೆಯನ್ನು ಹೆಚ್ಚಿಸುವ ಮೂಲಕ ರಾಜ್ಯ ಸರ್ಕಾರದ ನೌಕರರಿಗೆ (State Government Employees) ಈ ಹಣದಿಂದಲೇ ಸಂಬಳ ಕೊಡುವ ಪರಿಸ್ಥಿತಿಗೆ ತಲುಪಿದೆ. ಹೀಗಾಗಿ ಅಭಿವೃದ್ಧಿಗೆ ಸರ್ಕಾರದಲ್ಲಿ ಹಣವೇ ಇಲ್ಲದಂತಾಗಿದೆ (No money for development) ಎಂದು ಆಕ್ರೋಶವನ್ನು ವ್ಯಕ್ತಪಡಿಸಿದರು.

ತೆರಿಗೆ ಹೆಚ್ಚಳ ಗಾಂಧಿ ಜಯಂತಿ ಉಡುಗೊರೆ

ದಿನ ಬಳಕೆ ವಸ್ತುಗಳು ಸೇರಿದಂತೆ ಎಲ್ಲ ತೆರಿಗೆಗಳನ್ನೂ ಹೆಚ್ಚಿಸಿದ ರಾಜ್ಯ ಸರ್ಕಾರವು ಗಾಂಧಿ ಜಯಂತಿಯ (Gandhi Jayanti) ಉಡುಗೊರೆಯಾಗಿ ಆಸ್ತಿ ನೋಂದಣಿ ಶುಲ್ಕವನ್ನು (Property Registration Fee) ಹೆಚ್ಚಿಸುವ ಮೂಲಕ ಜನತೆಗೆ ಹೆಚ್ಚಿನ ಹೊರೆ ಬೀಳುವಂತೆ ಮಾಡಿದ್ದು, ದಿನ ಬೆಳಗಾದರೆ ಗ್ಯಾರಂಟಿ ಯೋಜನೆ (Congress Guarantee Scheme) ಬಗ್ಗೆ ಮಂತ್ರಿಗಳು ಮಾತನಾಡುತ್ತಾ ಕಾಲ ಕಳೆಯುತ್ತಿದ್ದಾರೆ. ಮಹಿಳೆಯರಿಗೆ ಉಚಿತ ಬಸ್ ಸೌಲಭ್ಯ ನೀಡಿ ಪುರುಷ ಪ್ರಯಾಣಿಕರಿಗೆ ಟಿಕೆಟ್ ದರ ಹೆಚ್ಚಿಸಿದೆ. ಹೊಸ ಹೊಸ ಹೆಂಡದಂಗಡಿಗಳಿಗೆ ಲೈಸನ್ಸ್ ನೀಡುವ ಮೂಲಕ ತೆರಿಗೆ ಸಂಗ್ರಹಕ್ಕೆ ಸರ್ಕಾರ ಇಳಿದಿದೆ. ರಾಜ್ಯದಲ್ಲಿ ಹಿಂದಿನ ಸರ್ಕಾರದಿಂದ ಆರಂಭಿಸಿದ ಅಭಿವೃದ್ಧಿ ಕಾಮಗಾರಿಗಳನ್ನು ಪೂರ್ಣಗೊಳಿಸಿ, ಗುತ್ತಿಗೆದಾರರಿಗೆ ಹಣ ಪಾವತಿಸಬೇಕು. ಆ ಮೂಲಕ ಅವರು ಈಗಾಗಲೇ ಮಾಡಿಕೊಂಡಿರುವ ಬಡ್ಡಿ ಸಾಲದಿಂದ ಮುಕ್ತಗೊಳಿಸುವಂತೆ ಬಿ.ವೈ. ರಾಘವೇಂದ್ರ ಆಗ್ರಹಿಸಿದರು.

ಸಭೆಯಲ್ಲಿ ಪ್ರಸಂಶೆ ಮಾಡಿ, ಹೊರಗೆ ಬಂದು ಉಲ್ಟಾ

ಕಾವೇರಿ ನದಿ ನೀರಿನ ವಿಷಯದಲ್ಲಿ ರಾಜ್ಯ ಸರ್ಕಾರ ಈಗಾಗಲೇ ತಪ್ಪು ಹೆಜ್ಜೆಗಳನ್ನಿಟ್ಟಿದೆ. ಸಂಸದರು ಭಾಗವಹಿಸಿದ್ದ ಕೆಂದ್ರದ ಬೃಹತ್ ನೀರಾವರಿ ಸಚಿವರ ಸಭೆಯಲ್ಲಿ ಭಾಗವಹಿಸಿದ್ದ ರಾಜ್ಯದ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಕೇಂದ್ರದ ನಿಲವುಗಳನ್ನು ಅಭಿನಂದಿಸಿದ್ದಾರೆ. ಕೇಂದ್ರ ಸರ್ಕಾರ ರಾಜ್ಯದ ಪರವಾಗಿಯೇ ಇದೆ. ಆದರೆ, ಸಭೆಯಲ್ಲಿ ಕೆಂದ್ರದ ನಿಲುವನ್ನು ಅಭಿನಂದಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೊರಗೆ ಬಂದು ಕೇಂದ್ರ ಸರ್ಕಾರವನ್ನು ತೆಗಳುತ್ತಾರೆ. ರಾಜ್ಯದಲ್ಲಿ ಈಗಾಗಲೇ ವಿದ್ಯುತ್ ಕೊರತೆ ಉಂಟಾಗಿದ್ದು, ರೈತರ ಬೆಳೆಗಳಿಗಾದರೂ ಪಕ್ಕದ ರಾಜ್ಯಗಳಿಂದ ವಿದ್ಯುತ್ ಖರೀದಿಸಿ ರೈತರಿಗೆ ಅನುವು ಮಾಡಿಕೊಡುವಂತೆ ಬಿ.ವೈ. ರಾಘವೇಂದ್ರ ಆಗ್ರಹಿಸಿದರು.

ರಾಜ್ಯ ಸರ್ಕಾರದಿಂದ ಬಗರ್‌ಹುಕುಂ ತೆರವು ಕಾರ್ಯ

ಶರಾವತಿ ಸಂತ್ರಸ್ತರು, ಅರಣ್ಯ ಭೂ ಪ್ರದೇಶದ ಸಾಗುವಳಿದಾರರು, ಬಗರ್‌ಹುಕುಂ ಸಮಸ್ಯೆಗಳ ಪರಿಹಾರಕ್ಕಾಗಿ ನಮ್ಮ ಆಡಳಿತ ಎಂದು ಹೇಳುತ್ತ ಅಧಿಕಾರಕ್ಕೆ ಬಂದ ಸರ್ಕಾರ, ಈಗ ಅರಣ್ಯ ಒತ್ತುವರಿ ತೆರವುಗೊಳಿಸುವಂತೆ ಖಡಕ್ ಆದೇಶ ಹೊರಡಿಸಿದೆ. ಅರಣ್ಯ ಸಚಿವ ಖಂಡ್ರೆ ಅಧಿಕಾರಿಗಳಿಗೆ ಆದೇಶ ನೀಡಿದ್ದು, ಬಗರ್‌ಹುಕುಂ ಜಮೀನುಗಳನ್ನು ತೆರವುಗೊಳಿಸಲು ತಿಳಿಸಿದ್ದಾರೆ. ಆದರೆ, ಪ್ರಕೃತಿಯ ವಿರುದ್ಧವಾಗಿ ಹೊಸದಾಗಿ ಬಗರ್‌ಹುಕುಂ ಮಾಡಲು ನಮ್ಮ ಸಹಮತವಿಲ್ಲ. ಕೇಂದ್ರ ಸರ್ಕಾರ ಅರಣ್ಯ ಕಾಯ್ದೆಗೆ ತಿದ್ದುಪಡಿ ತಂದಿದ್ದು ಅದರ ಅನ್ವಯ ಬಗರ್‌ಹುಕುಂ ಸಾಗುವಳಿದಾರರಿಗೆ ರಾಜ್ಯ ಸರ್ಕಾರ ಹಕ್ಕು ಪತ್ರ ನೀಡಬಹುದಾಗಿದೆ ಎಂದು ಬಿ.ವೈ. ರಾಘವೇಂದ್ರ ತಿಳಿಸಿದರು.

ತಾಲೂಕು ಬಿಜೆಪಿ ಅಧ್ಯಕ್ಷ ಪ್ರಕಾಶ ತಲಕಾಲಕೊಪ್ಪ, ಉಪಾಧ್ಯಕ್ಷ ದೆವೇಂದ್ರಪ್ಪ ಚನಾಪುರ, ಕಾರ್ಯದರ್ಶಿ ಶಿವಕುಮಾರ ಕಡಸೂರು, ಪುರಸಭೆ ಸದಸ್ಯರಾದ ಈರೇಶಪ್ಪ ಮೇಸ್ತ್ರಿ, ಮಧುರಾಯ್ ಶೇಟ್, ಎಂ. ಡಿ. ಉಮೇಶ, ಯು. ನಟರಾಜ, ಪ್ರಮುಖರಾದ ಈಶ್ವರಪ್ಪ ಚನ್ನಪಟ್ಟಣ, ನಾಗಪ್ಪ ವಕೀಲ, ಎಂ. ಆರ್. ಪಾಟೀಲ್, ಯೋಗೇಶ ಓಟೂರು ಮತ್ತಿತರರಿದ್ದರು.

Exit mobile version