ಬೆಂಗಳೂರು: ಕಳೆದ ಹಲವು ತಿಂಗಳುಗಳಿಂದ ಕಂಗನಾ ರಣಾವತ್ (Kangana Ranaut) 2024ರ ಲೋಕಸಭೆಗೆ ಸ್ಪರ್ಧಿಸುತ್ತಾರೆ ಎಂಬ ವದಂತಿಗಳಿದ್ದವು. ಇದೀಗ ಅವರ ತಂದೆ ಈ ಬಗ್ಗೆ ಹೊಸ ಅಪ್‌ಡೇಟ್ ಹಂಚಿಕೊಂಡಿದ್ದಾರೆ ಎಂದು ವರದಿಯಾಗಿದೆ. ಕಂಗನಾ ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ಟಿಕೆಟ್‌ನಲ್ಲಿ ಸ್ಪರ್ಧಿಸಲಿದ್ದಾರೆ ಎಂದು ಕಂಗನಾ ತಂದೆ ಅಮರ್‌ದೀಪ್ ರಣಾವತ್ ಖಚಿತಪಡಿಸಿದ್ದಾರೆ.
ಕಂಗನಾ ಬಿಜೆಪಿ ಟಿಕೆಟ್‌ನಲ್ಲಿ ಮಾತ್ರ ಸ್ಪರ್ಧಿಸುತ್ತಾರೆ. ಆದರೆ ಅವರು ಎಲ್ಲಿಂದ ಚುನಾವಣೆಗೆ ಸ್ಪರ್ಧಿಸುತ್ತಾರೆ ಎಂಬುದನ್ನು ಪಕ್ಷ ನಿರ್ಧರಿಸಬೇಕು ಎಂದು ಅಮರ್‌ದೀಪ್ ರಣಾವತ್ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ ಎಂದು ವರದಿಯಾಗಿದೆ. ಮುಂಬಯಿಯ ಪ್ರಮುಖ ಕ್ಷೇತ್ರವೊಂದರಿಂದ ಅವರು ಸ್ಪರ್ಧಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಕುಲುವಿನ ಶಾಸ್ತ್ರಿನಗರದಲ್ಲಿರುವ ಅವರ ನಿವಾಸದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರೊಂದಿಗೆ ಕಂಗನಾ ಸಭೆ ನಡೆಸಿದ್ದರು. ಅಂದಿನಿಂದ, ಕಂಗನಾ ಬಿಜೆಪಿಯಿಂದ ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಊಹಾಪೋಹಗಳು ಹುಟ್ಟಿಕೊಂಡಿತ್ತು. ಆದರೆ, ಈಗ ಅವರ ತಂದೆ ಮುಂದಿನ ವರ್ಷ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಸ್ಪಷ್ಟಪಡಿಸಿದ್ದಾರೆ.
ಈ ಹಿಂದೆ ಗುಜರಾತ್‌ನ ದ್ವಾರಕಾದಲ್ಲಿರುವ ಶ್ರೀಕೃಷ್ಣನ ದ್ವಾರಕಾಧೀಶ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಕಂಗನಾ ರಣಾವತ್ ಅವರು “ಶ್ರೀಕೃಷ್ಣನ ಆಶೀರ್ವಾದ ಇದ್ದರೆ ಸ್ಪರ್ಧಿಸುವೆ” ಎಂದು ಹೇಳುವ ಮೂಲಕ ರಾಜಕೀಯ ಪ್ರವೇಶದ ಸುಳಿವು ನೀಡಿದ್ದರು.
ಇದನ್ನೂ ಓದಿ: BBK SEASON 10: ಹಸಿವಿಂದ ಕಂಗೆಟ್ಟ ಬಿಗ್‌ಬಾಸ್ ಸದಸ್ಯರಿಗೆ ಕಿಚ್ಚನ ಕೈಯಡುಗೆಯ ಸವಿ!
ಕೇಂದ್ರ ಸರ್ಕಾರಕ್ಕೆ ಮೆಚ್ಚುಗೆ
“ರಾಮಮಂದಿರ ನಿರ್ಮಾಣ ವಿಷಯವನ್ನು ಪ್ರಸ್ತಾಪಿಸಿದ ಕಂಗನಾ ರಣಾವತ್ ಅವರು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವನ್ನು ಹೊಗಳಿದ್ದರು. “ಬಿಜೆಪಿ ಸರ್ಕಾರದ ಪ್ರಯತ್ನದಿಂದ ರಾಮಮಂದಿರ ನಿರ್ಮಾಣವಾಗುತ್ತಿದೆ. 600 ವರ್ಷಗಳ ಹೋರಾಟದ ಫಲವಾಗಿ ಮಂದಿರ ನಿರ್ಮಾಣವಾಗುತ್ತಿದೆ. ಅದೇ ಸಂಭ್ರಮಾಚರಣೆಯಿಂದ ಮಂದಿರಕ್ಕೆ ಚಾಲನೆ ನೀಡಲಾಗುತ್ತಿದೆ. ಜಗತ್ತಿನಾದ್ಯಂತ ಸನಾತನ ಧರ್ಮದ ಧ್ವಜವು ಜಗತ್ತಿನಾದ್ಯಂತ ಹಾರಾಡಬೇಕು” ಎಂದಿದ್ದರು. ಇದಕ್ಕೂ ಮೊದಲು ಕೂಡ ಕಂಗನಾ ರಣಾವತ್ ಅವರು ಮೋದಿ ಸರ್ಕಾರದ ನಿಲುವುಗಳನ್ನು ಸಮರ್ಥಿಸಿಕೊಂಡಿದ್ದರು. ಮೋದಿ ಅವರನ್ನು ಹಾಡಿ ಹೊಗಳಿದ್ದರು. ಕಂಗನಾ ರಣಾವತ್ ಅಭಿನಯದ ತೇಜಸ್ ಸಿನಿಮಾ ಇತ್ತೀಚೆಗೆ ಬಿಡುಗಡೆಯಾಗಿದ್ದು, ಬಾಕ್ಸ್ ಆಫೀಸ್‌ನಲ್ಲಿ ಅಷ್ಟೇನೂ ಸದ್ದು ಮಾಡಿಲ್ಲ.
ಈ ಹಿಂದೆ ಈ ವರ್ಷ ನವೆಂಬರ್ 24ರಂದು ಎಮರ್ಜೆನ್ಸಿ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಲಾಗಿತ್ತು. ಇದೀಗ ಮುಂದಿನ ವರ್ಷ ಸಿನಿಮಾ ಬಿಡುಗಡೆ ಮಾಡುತ್ತಿರುವುದಾಗಿ ಹೇಳಿದ್ದಾರೆ. ಈ ಸಿನಿಮಾದಲ್ಲಿ ಕಂಗನಾ ಭಾರತದ ಮೊದಲ ಮಹಿಳಾ ಪ್ರಧಾನಿ ಇಂದಿರಾ ಗಾಂಧಿ ಪಾತ್ರದಲ್ಲಿ ನಟಿಸಿದ್ದಾರೆ.ಅನುಪಮ್ ಖೇರ್, ಮಿಲಿಂದ್ ಸೋಮನ್, ಮಹಿಮಾ ಚೌಧರಿ, ಸತೀಶ್ ಕೌಶಿಕ್ ಮತ್ತು ಶ್ರೇಯಸ್ ತಲ್ಪಡೆ ಕೂಡ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ ಅಟಲ್ ಬಿಹಾರಿ ವಾಜಪೇಯಿ ಪಾತ್ರವನ್ನು ಶ್ರೇಯಸ್ ತಲ್ಪಡೆ ನಿರ್ವಹಿಸಲಿದ್ದಾರೆ.