Site icon Vistara News

Karnataka Budget Session 2024: ‘ವಿಪಕ್ಷದವರು ಗೂಂಡಾಗಳು’ ಎಂಬ ಸಿಎಂ ಹೇಳಿಕೆಗೆ ಟಿ.ಎ. ಶರವಣ ಕಿಡಿ

Karnataka Budget Session 2024 Opposition is goondas says CM and TA Sharavana condemn this statement

ಬೆಂಗಳೂರು: ವಿಧಾನ ಪರಿಷತ್ತಿನಲ್ಲಿ ಶುಕ್ರವಾರ ನಡೆದ ಸದನದಲ್ಲಿ (Karnataka Budget Session 2024) ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರ ಪದ ಬಳಕೆ ಬಗ್ಗೆ ತೀವ್ರ ಆಕ್ಷೇಪಗಳು ವ್ಯಕ್ತವಾಗಿವೆ. ಈ ಬಗ್ಗೆ ತೀವ್ರ ಅಸಮಾಧಾನವನ್ನು ಹೊರಹಾಕಿರುವ ವಿಧಾನ ಪರಿಷತ್ ಸದಸ್ಯರಾದ ಟಿ.ಎ. ಶರವಣ, ಸಿದ್ದರಾಮಯ್ಯ ಅವರು ವಿಪಕ್ಷದ ಸದಸ್ಯರನ್ನು ಗುಂಡಾಗಳಿಗೆ ಹೋಲಿಸಿ, ಥೂ, ಛಿ ಎಂದು ಬೆದರಿಸಲು ಪ್ರಯತ್ನಿಸಿದ್ದಾರೆ. ಇದು ಖಂಡನೀಯವಾಗಿದೆ. ಅವರು ತಮ್ಮ ಪದ ಬಳಕೆ ಬಗ್ಗೆ ಕನಿಷ್ಠ ವಿಷಾದ ಸೂಚಿಸುವ ಕೆಲಸವನ್ನೂ ಮಾಡಿಲ್ಲ ಎಂದು ಹೇಳಿದರು.

ವಿಧಾನ ಪರಿಷತ್‌ನಲ್ಲಿ ನಡೆಯುತ್ತಿದ್ದ ಕಲಾಪದ ವೇಳೆ ಸಿಎಂ ಸಿದ್ದರಾಮಯ್ಯ ಅವರ ಪದಪ್ರಯೋಗದಿಂದ ಅಸಮಾಧಾನಗೊಂಡ ವಿಪಕ್ಷ ಸದಸ್ಯರು ಸಭಾತ್ಯಾಗವನ್ನು ಮಾಡಿದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ವಿಧಾನ ಪರಿಷತ್‌ ಸದಸ್ಯ ಟಿ.ಎ. ಶರವಣ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸುದೀರ್ಘ ಉತ್ತರವನ್ನು ಸೌಜನ್ಯದಿಂದ ಕೇಳಿಸಿಕೊಳ್ಳುತ್ತಿದ್ದೆವು. ಪದೇ ಪದೆ ಅವರು ಕೇಂದ್ರ ಸರ್ಕಾರವನ್ನು ದೂರಿದ್ದಾರೆ. ಆಗ ಆಕ್ಷೇಪಿಸಿದಾಗ ‘ನೀವು ವಿಪಕ್ಷ ಸದಸ್ಯರು ಗೂಂಡಾಗಳಾ? ಥೂ, ಛೀ ಎಂದು ನಮ್ಮನ್ನೆಲ್ಲ ಬೆದರಿಸುವ ಕೆಲಸಕ್ಕೆ ಕೈ ಹಾಕಿದ್ದಾರೆ’ ಎಂದು ಟೀಕಿಸಿದರು.‌

ಆರೂವರೆ ಕೋಟಿ ಜನರನ್ನು ಪ್ರತಿನಿಧಿಯಾಗಿರುವ ಮುಖ್ಯಮಂತ್ರಿಗಳು ಅಸಾಂವಿಧಾನಿಕ ಪದವನ್ನು ಬಳಸಿದ್ದಾರೆ. ಮುಖ್ಯಮಂತ್ರಿಗಳು ತಮ್ಮ ಪದ ಬಳಕೆಗೆ ವಿಷಾದ ಸೂಚಿಸಿಲ್ಲ. ಸಿಎಂ ಅವರ ವರ್ತನೆ, ಪದ ಪ್ರಯೋಗದಿಂದ ನಮಗೆ ಬಹಳ ನೋವಾಗಿದೆ. ಆದ್ದರಿಂದ ವಿಪಕ್ಷದ ಸದಸ್ಯರೆಲ್ಲರೂ ಸಭಾತ್ಯಾಗ ಮಾಡಿದ್ದೇವೆ ಎಂದು ಟಿ.ಎ. ಶರವಣ ತಿಳಿಸಿದರು.

ರಾಜ್ಯದ ಜನರು ಮುಖ್ಯಮಂತ್ರಿಗಳ ವರ್ತನೆಗೆ ತಕ್ಕ ಉತ್ತರವನ್ನು ಸೂಕ್ತ ಸಮಯದಲ್ಲಿ ನೀಡುತ್ತಾರೆ ಎಂದು ತಿಳಿಸಿದ ಅವರು, ಇವತ್ತು ಕಲಾಪವನ್ನು ಬಹಿಷ್ಕರಿಸಿದ್ದೇವೆ. ಮುಖ್ಯಮಂತ್ರಿಗಳು ಮಾತ್ರವಲ್ಲದೆ, ಸಚಿವರು ಕೂಡ ಪದೇ ಪದೆ ಎದ್ದುನಿಂತು ವಿಪಕ್ಷದವರಿಗೆ ಮಾತನಾಡಲು ಅವಕಾಶವನ್ನೇ ಕೊಟ್ಟಿಲ್ಲ ಎಂದು ಟಿ.ಎ. ಶರವಣ ಕಿಡಿಕಾರಿದರು.

ಬಿಜೆಪಿಯವರು ಗೂಂಡಾಗಳು ಎಂದ ಸಿಎಂ

ರಾಜ್ಯದ ತೆರಿಗೆ ಪಾವತಿ ಹಾಗೂ ಕೇಂದ್ರದ ತೆರಿಗೆ ಲೆಕ್ಕಾಚಾರದ ವ್ಯತ್ಯಾಸದ ಬಗ್ಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ (CM Siddaramaiah), ವಿಪಕ್ಷಗಳ ಗದ್ದಲದಿಂದ ಆಕ್ರೋಶಗೊಂಡು, “ಏನು ಗೂಂಡಾಗಿರಿ ಮಾಡ್ತೀರಾ? ನೀವು ಗೂಂಡಾಗಳು, ನಿಮ್ಮ ಗೂಂಡಾಗಿರಿಗೆ ನಾವು ಹೆದರುವುದಿಲ್ಲ” ಎಂದು ಹೇಳಿರುವುದು ಈಗ ಗಲಾಟೆಗೆ ಕಾರಣವಾಗಿದೆ. ಈ ಸಂಬಂಧ ವಿಪಕ್ಷಗಳು ಕೆರಳಿದ್ದು ಗದ್ದಲ ಎಬ್ಬಿಸಿದ್ದಾರೆ. ಗದ್ದಲ ಹೆಚ್ಚಾದ ಹಿನ್ನೆಲೆಯಲ್ಲಿ 10 ನಿಮಿಷ ಕಾಲ ವಿಧಾನ ಪರಿಷತ್ ಕಲಾಪವನ್ನು ಸಭಾಪತಿಗಳು ಮುಂದೂಡಿದ್ದಾರೆ.

ರಾಜ್ಯದ ತೆರಿಗೆ ಪಾವತಿ ಹಾಗೂ ಕೇಂದ್ರದ ತೆರಿಗೆ ಲೆಕ್ಕಾಚಾರದಲ್ಲಿನ ವ್ಯತ್ಯಾಸದ ಬಗ್ಗೆ ಕಾಂಗ್ರೆಸ್‌ನ ಯು.ಬಿ. ವೆಂಕಟೇಶ್ ಕೇಳಿದ ಪ್ರಶ್ನೆಗೆ ಸಿಎಂ ಸಿದ್ದರಾಮಯ್ಯ ಉತ್ತರ ನೀಡುವ ವೇಳೆ ಈ ಗದ್ದಲಗಳು ನಡೆದಿವೆ. ಕರ್ನಾಟಕ ಇವತ್ತು ತೆರಿಗೆ ಪಾವತಿಸುವುದರಲ್ಲಿ ಎರಡನೇ ಸ್ಥಾನದಲ್ಲಿದೆ. ಆದರೂ, ನಮಗೆ ಬರುವ ತೆರಿಗೆ ಆದಾಯದ ಪಾಲು ಕಡಿಮೆ ಆಗುತ್ತಿದೆ ಎಂದು ಹೇಳಿದರು.

ಹದಿನಾಲ್ಕು ಮತ್ತು ಹದಿನೈದನೇ ಹಣಕಾಸು ಆಯೋಗ ಶಿಫಾರಸು ಮಾಡುವಾಗ 18-19ರ ಬಜೆಟ್ ಗ್ರಾತ್ರ ಇತ್ತು. ಬಳಿಕ ಬಜೆಟ್ ಗಾತ್ರ ಹೆಚ್ಚಾಗುತ್ತಾ ಹೋಯಿತು. ಹೀಗಾಗಿ ಅದರ ಪಾಲು ಹೆಚ್ಚಾಗಬೇಕಿತ್ತು. ಈ ಹಿನ್ನೆಲೆಯಲ್ಲಿ 14ನೇ ಹಣಕಾಸು ಆಯೋಗವು ಶೇ. 42 ಕೊಡಲು ಹೇಳಿತ್ತು. ಆದರೆ, 15ನೇ ಆಯೋಗದಲ್ಲಿ ಇದರ ಪ್ರಮಾಣ ಕಡಿಮೆಯಾಗಿದೆ. ಈ ಎರಡೂ ಹಣಕಾಸು ಆಯೋಗದಲ್ಲಿ ವರ್ಷವಾರು ಕಡಿಮೆ ತೆರಿಗೆ ಪಾವತಿ ಆಗುತ್ತಿದೆ. ಮೊದಲ ವರದಿಯಲ್ಲಿ 5495 ಕೋಟಿ ಕೊಡಲು ಶಿಫಾರಸು ಆಗಿತ್ತು. ಅಂತಿಮ ವರದಿಯಲ್ಲಿ ಕೆರೆ ಹಾಗೂ ಫೆರಿಫರಲ್ ರಿಂಗ್ ರೋಡ್‌ಗಾಗಿ 6000 ಕೋಟಿ ರೂಪಾಯಿ ನೀಡಿತ್ತು ಎಂದು ಸಿಎಂ ಸಿದ್ದರಾಮಯ್ಯ ಅವರು ಅಂಕಿ-ಅಂಶಗಳನ್ನು ತೆರೆದಿಟ್ಟರು.

ಕರ್ನಾಟಕಕ್ಕೆ 11 ಸಾವಿರ ಕೋಟಿ ರೂ. ಕೊಡಲು 15ನೇ ಹಣಕಾಸು ಆಯೋಗದಿಂದ ಶಿಫಾರಸು ಮಾಡಲಾಗಿತ್ತು. ಆದರೆ, ಈ ಹಣವನ್ನು ಕೇಂದ್ರ ಸರ್ಕಾರ ಕೊಟ್ಟಿಲ್ಲ. ಇದನ್ನೇ ಸೆಂಟ್ರಲ್ ಫೈನಾನ್ಸ್ ಮಿನಿಸ್ಟರ್ ವಾದ ಮಾಡಲು ಹೊರಟಿದ್ದಾರೆ. ಪ್ರಶ್ನೆ ಮಾಡಿದರೆ ಹಣಕಾಸು ಆಯೋಗ ಅಟಾನಮಸ್ ಬಾಡಿಯಾಗಿದೆ. ನಾವು ಅದರ ವರದಿಯನ್ನಷ್ಟೇ ಅನುಷ್ಠಾನ ಮಾಡುತ್ತೇವೆ ಎನ್ನುತ್ತಾರೆ.‌ ಅದರಂತೆ ಮಾಡಿದರೂ ನಮಗೆ ಹಣ ಬಿಡುಗಡೆ ಆಗಬೇಕಿತ್ತು. ಅದನ್ನಿನ್ನೂ ಅವರು ಮಾಡಿಲ್ಲ. ಈ ಹಿಂದಿನ ಸರ್ಕಾರದ ಗಮನಕ್ಕೆ ಈ ವಿಚಾರವನ್ನು ತಂದಿದ್ದೆ. ವಿಶೇಷ ಅನುದಾನ ಪಡೆಯಲು ಕ್ರಮ ವಹಿಸಿ ಎಂದು ಮನವಿ ಮಾಡಿದ್ದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಇದಕ್ಕೆ ವಿಪಕ್ಷದವರು ತೀವ್ರ ಆಕ್ಷೇಪವನ್ನು ವ್ಯಕ್ತಪಡಿಸಿದರು. ಅದಕ್ಕೆ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ, ನಾನು ಫ್ಯಾಕ್ಟ್ ಹೇಳುತ್ತಿದ್ದೇನೆ. ಫ್ಯಾಕ್ಟ್ ಈಸ್ ಫ್ಯಾಕ್ಟ್. ವಿಪಕ್ಷಗಳ ಈ ನಡೆ ಸಹಿಸಲ್ಲ. ನಾನು ಉತ್ತರ ಕೊಡಲ್ಲ. ಪ್ರಶ್ನೆ ಕೇಳಿದವರು ಸುಮ್ಮನಿರುವಾಗ ವಿಪಕ್ಷದ್ದವರದ್ದೇನು ಮಾತು? ಎಂದು ಪ್ರಶ್ನೆ ಮಾಡಿದರು. ಆಗ ಮತ್ತೆ ವಿಪಕ್ಷದವರು ಗದ್ದಲ ಮಾಡಿದರು. ಆಗ ಮಧ್ಯಪ್ರವೇಶ ಮಾಡಿದ ಸಭಾಪತಿಗಳು, ಸದಸ್ಯರ ಮನವೊಲಿಕೆಗೆ ಪ್ರಯತ್ನಿಸಿದರು.

ಈ ವೇಳೆ ಮಾತನಾಡಿದ ಸಿಎಂ ಸಿದ್ದರಾಮಯ್ಯ. ನಮ್ಮ ಫ್ಯಾಕ್ಟ್ ಉತ್ತರ ಸಹಿಸಲು ಸಾಧ್ಯ ಆಗುತ್ತಿಲ್ಲ. ನೀವು ಎಷ್ಟೇ ಕೂಗಾಡಿದರೂ ಅದು ಸತ್ಯವೇ. ನಿರ್ಮಲಾ ಸೀತಾರಾಂ ಕೂಡ ವಿರೋಧಿ ಧೋರಣೆ ತೋರಿಸಿದ್ದಾರೆ ಎಂದು ಹೇಳಿದರು. ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ ಸದಸ್ಯರು, “ಸಿಎಂ ಆನ್ಸರ್ ಬೇಡ” ಎಂದು ಘೋಷಣೆ ಕೂಗಿದರು.

ಇದನ್ನೂ ಓದಿ: Rajya Sabha Election: ರಾಜ್ಯಸಭೆಗೆ 5ನೇ ಅಭ್ಯರ್ಥಿಯಾಗಿ ಕುಪೇಂದ್ರ ರೆಡ್ಡಿ; ನಿಜ ಕಾರಣ ಬಿಚ್ಚಿಟ್ಟ ಬಿ.ವೈ. ವಿಜಯೇಂದ್ರ

ಘೋಷಣೆ ನಡುವೆ ಸಿಎಂ ಉತ್ತರವನ್ನು ಮುಂದುವರಿಸಿದರು. “ಅವರೇ ಬಜೆಟ್‌ನಲ್ಲಿ ಒಪ್ಪಿಕೊಂಡಿದ್ದ 5300 ಕೋಟಿ ರೂಪಾಯಿಯನ್ನು ಬಿಡುಗಡೆ ಮಾಡಿಲ್ಲ. ಆದರೆ, ನಾವು ಯೋಜನೆ ಮೇಲಿನ ಕಾಳಜಿಯಿಂದ 1 ಸಾವಿರ ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದೇವೆ. ಕೇಂದ್ರ ಸರ್ಕಾರ ರಾಜ್ಯಕ್ಕೆ 1 ಸಾವಿರ ಕೋಟಿ ರೂಪಾಯಿಗಳ ದ್ರೋಹ ಮಾಡಿದೆ. ಇದಕ್ಕೆ ಹಣಕಾಸು ಸಚಿವರು ಸಹಕಾರ ನೀಡಿದ್ದಾರೆ ಎಂದ ಸಿಎಂ ಸಿದ್ದರಾಮಯ್ಯ ಹೇಳಿದರು.

ನೀವು ಗೂಂಡಾಗಳು ಎಂದ ಸಿಎಂ ಸಿದ್ದರಾಮಯ್ಯ

ಸಿಎಂ ಉತ್ತರದಿಂದ ಕೆರಳಿದ ಬಿಜೆಪಿ ಸದಸ್ಯರು ತೀವ್ರ ಗದ್ದಲ ನಡೆಸಿದರು. ಆಗ ಮಾತನಾಡಿದ ಸಿಎಂ ಸಿದ್ದರಾಮಯ್ಯ, ನಾನು ಉತ್ತರ ಕೊಟ್ಟ ಮೇಲೆ ಹೇಳಿ. ಏನು ಗೂಂಡಾಗಿರಿ ಮಾಡ್ತೀರಾ? ನಾನು ಯಾವುದಕ್ಕೂ ಹೆದರಲ್ಲ. ಏಳು ಕೋಟಿ ಜನ ನೋಡುತ್ತಾ ಇದ್ದಾರೆ. ಎದ್ದು ನಿಂತಿದ್ದಾರೆ ಎಂದರೆ? ಅವರು ತಪ್ಪು ಮಾಡಿದ್ದಾರೆ ಅಂತ ಅರ್ಥ ಎಂದು ಹೇಳಿದರು. ಆಗ ವಿಧಾನ ಪರಿಷತ್‌ ಪ್ರತಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಎದ್ದುನಿಂತು, ವಿಧಾನಸೌಧದಲ್ಲಿ ತೊಡೆ ತಟ್ಟಿದ್ದು, ನೀವಾ ನಾವಾ? ಈಗ ನಮಗೆ ಗೂಂಡಾಗಿರಿ ಎಂದು ಹೇಳುತ್ತೀರಾ? ಅಂದು ತೊಡೆ ತಟ್ಟಿದ್ದು ಯಾರು? ಎಂದು ಪ್ರಶ್ನೆ ಮಾಡಿದರು. ಇದಕ್ಕೆ ಸಿಟ್ಟಿಗೆದ್ದ ಸಿಎಂ ಸಿದ್ದರಾಮಯ್ಯ, ನೀವು ಗೂಂಡಾಗಳು. ನಿಮ್ಮ ಗೂಂಡಾಗಿರಿಗೆ ನಾವು ಹೆದರಲ್ಲ. ನಾನು ಸತ್ಯವನ್ನೇ ಹೇಳುತ್ತಾ ಇದ್ದೇನೆ ಎಂದು ಹೇಳಿದರು. ಆಗ ಎದ್ದನಿಂತ ವಿಪಕ್ಷ ಬಿಜೆಪಿಯವರು ಗಲಾಟೆ ಮಾಡಿದರು. ಅದಕ್ಕೆ ಸಿಎಂ ಸಿದ್ದರಾಮಯ್ಯ ಮಾತನಾಡಿ, ಜನ ಇವರಿಗೆ ಛೀ.. ಥೂ.. ಅಂತಿದ್ದಾರೆ. ನಮ್ಮ ತೆರಿಗೆ ನಮ್ಮ ಹಕ್ಕು ಎಂದು ಹೇಳಿದರು. ಆಗ ತೀವ್ರ ಗದ್ದಲವಾಗಿದ್ದರಿಂದ ಸಭಾಪತಿಯವರು ಪರಿಷತ್ ಕಲಾಪವನ್ನು ಮುಂದೂಡಿಕೆ ಮಾಡಿದರು. ಆಗ ವಿಪಕ್ಷ ಬಿಜೆಪಿಯವರು, ಗೂಂಡಾ ಸರ್ಕಾರಕ್ಕೆ ಧಿಕ್ಕಾರ ಎಂದು ಕೂಗಿದರು.

Exit mobile version