ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ(Karnataka Election) ತಾವೇ ಗೆಲ್ಲಬೇಕು ಎಂದು ಜನರ ನಡುವೆ ಪ್ರಚಾರ ನಡೆಸುತ್ತಿರುವ ನಡುವೆಯೇ ಅದೃಷ್ಟ ಪರೀಕ್ಷೆಯಲ್ಲೂ ಉತ್ತೀರ್ಣರಾಗಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪ್ರಯತ್ನಿಸುತ್ತಿದ್ದಾರೆಯೇ ಎಂಬ ಮಾತುಗಳು ಕೇಳಿಬರುತ್ತಿವೆ.
ಅದೃಷ್ಟ ತಮ್ಮ ಪರವಾಗಿ ಚುನಾವಣೆಯಲ್ಲಿ ಗೆಲುವು ದೊರಕಲೆಂದು, ದಶಕಗಳಿಂದಲೂ ಇರುವ ಕಾಂಗ್ರೆಸ್ ಚಿಹ್ನೆಯನ್ನೇ ಬದಲಾಯಿಸಿದ್ದಾರೆ ಎನ್ನಲಾಗುತ್ತಿದೆ. ಕಾಂಗ್ರೆಸ್ ಚಿಹ್ನೆಯಾದ ಹಸ್ತದ ಗುರುತಿನ ಮಧ್ಯ ಭಾಗದಲ್ಲಿ ಮೂರು ಗೆರೆಗಳಿವೆ. ಇದು ಚುನಾವಣಾ ಆಯೋಗದಿಂದ ಗುರುತಿಸಲ್ಪಟ್ಟಿರುವ ಚಿಹ್ನೆ.
ಆದರೆ ಇದೀಗ ಕಾಂಗ್ರೆಸ್ ರೂಪಿಸಿರುವ ಪ್ರಜಾಧ್ವನಿ ಯಾತ್ರೆಯ ಲಾಂಛನದಲ್ಲಿ ಹಸ್ತದ ಗುರುತು ಬದಲಾಗಿದೆ. ಸಂಖ್ಯಾ ಶಾಸ್ತ್ರಜ್ಞರ ಸಲಹೆ ಮೇರೆಗೆ, ಹಸ್ತದ ಮಧ್ಯ ಭಾಗದಲ್ಲಿ ಲಂಬವಾಗಿ ಮತ್ತೊಂದು ಗೆರೆಯನ್ನು ಸೇರಿಸಲಾಗಿದೆ. ಈ ಗೆರೆಯನ್ನು ಅದೃಷ್ಟ ರೇಖೆ ಎನ್ನಲಾಗುತ್ತದೆ. ಸಂಖ್ಯಾಶಾಸ್ತ್ರಜ್ಞರ ಸಲಹೆ ಮೇರೆಗೆ ಡಿ.ಕೆ. ಶಿವಕುಮಾರ್ ಬದಲಾವಣೆ ಮಾಡಿದ್ದಾರೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ಡಿ.ಕೆ. ಶಿವಕುಮಾರ್‌ಗೆ ಎರಡು ಕುಕ್ಕರ್ ಮೇಲೆ ಪ್ರೀತಿ; ಒಂದು ಮಂಗಳೂರು ಇನ್ನೊಂದು ಬೆಳಗಾವಿ: ನಳಿನ್ ಕುಮಾರ್ ಕಟೀಲ್ ವ್ಯಂಗ್ಯ
ಕೆಪಿಸಿಸಿ ಅಧ್ಯಕ್ಷರಾಗಿ ಆಯ್ಕೆಯಾದ ನಂತರದಲ್ಲಿ ವಾಸ್ತು ಆಧಾರದಲ್ಲಿ ಕಚೇರಿಯ ವಿನ್ಯಾಸದಲ್ಲೂ ಶಿವಕುಮಾರ್ ಸಾಕಷ್ಟು ಬದಲಾವಣೆ ಮಾಡಿದ್ದರು. ಇದೀಗ ಚುನಾವಣೆ ಗೆಲುವಿಗಾಗಿ ಹಾಗೂ ಯಾತ್ರೆಯ ಯಶಸ್ಸಿಗಾಗಿ ಹಸ್ತದ ಗುರುತಿನಲ್ಲಿ ಬದಲಾವಣೆ ಮಾಡಿದ್ದಾರೆ ಎನ್ನಲಾಗುತ್ತಿದೆ.