Site icon Vistara News

Lokayukta: ಲೋಕಾಯುಕ್ತ ಎಡಿಜಿಪಿಯಾಗಿ ಮನೀಶ್‌ ಕರ್ಬೀಕರ್‌, ಅಗ್ನಿಶಾಮಕ ದಳ ಡಿಜಿಪಿಯಾಗಿ ಪ್ರಶಾಂತ್ ಕುಮಾರ್ ಥಾಕೂರ್‌ ನೇಮಕ

Lokayukta

ಬೆಂಗಳೂರು: ಹಿರಿಯ ಐಪಿಎಸ್ ಅಧಿಕಾರಿಗಳಾದ ಮನೀಶ್‌ ಕರ್ಬೀಕರ್‌ ಮತ್ತು ಪ್ರಶಾಂತ್ ಕುಮಾರ್ ಥಾಕೂರ್ ಅವರನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.‌ ಸಿಐಡಿ ಎಡಿಜಿಪಿ (ಆರ್ಥಿಕ ಅಪರಾಧಗಳು) ಆಗಿದ್ದ ಮನೀಶ್‌ ಕರ್ಬೀಕರ್‌ ಅವರು ಲೋಕಾಯುಕ್ತ ಎಡಿಜಿಪಿಯಾಗಿ (Lokayukta) ನೇಮಕವಾಗಿದ್ದು, ಲೋಕಾಯುಕ್ತ ಡಿಜಿಪಿಯಾಗಿದ್ದ ಪ್ರಶಾಂತ್ ಕುಮಾರ್ ಥಾಕೂರ್ ಅವರು ಅಗ್ನಿಶಾಮಕ ದಳ ಡಿಜಿಪಿಯಾಗಿ ವರ್ಗಾವಣೆಯಾಗಿದ್ದಾರೆ.

ಮನೀಶ್‌ ಕರ್ಬೀಕರ್‌ ಅವರು ಸದ್ಯ ವಾಲ್ಮೀಕಿ ನಿಗಮದ ಹಗರಣ ಹಾಗೂ ಬಿಟ್ ಕಾಯಿನ್ ಹಗರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ ಮುಖ್ಯಸ್ಥರೂ ಆಗಿದ್ದಾರೆ. ಇವರು ಲೋಕಾಯುಕ್ತ ಎಡಿಜಿಪಿಯಾಗಿ ನೇಮಕವಾಗಿದ್ದರೂ ಕೂಡ ಎರಡೂ ಪ್ರಕರಣಗಳ ಎಸ್ಐಟಿ ಮುಖ್ಯಸ್ಥರಾಗಿ ಮುಂದುವರಿಯುವಂತೆ ಸೂಚಿಸಲಾಗಿದೆ.

ಇನ್ನು ಲೋಕಾಯುಕ್ತ ಡಿಜಿಪಿಯಾಗಿದ್ದ ಪ್ರಶಾಂತ್ ಠಾಕೂರ್ ಅವರನ್ನು ಅಗ್ನಿಶಾಮಕ ದಳ ಡಿಜಿಪಿಯಾಗಿ ವರ್ಗಾವಣೆ ಮಾಡಲಾಗಿದೆ. ಅಗ್ನಿಶಾಮಕ ದಳ ಡಿಜಿಪಿ ಹಾಗೂ ಮಹಾ ನಿರ್ದೇಶಕರಾಗಿದ್ದ ಮಾಲಿನಿ ಕೃಷ್ಣಮೂರ್ತಿ ಅವರನ್ನು ಹುದ್ದೆಯಿಂದ ಬಿಡುಗಡೆಗೊಳಿಸಲಾಗಿದೆ.

ಇದನ್ನೂ ಓದಿ | NEET UG 2024: ನೀಟ್‌ ಪರಿಷ್ಕೃತ ಫಲಿತಾಂಶ ಪ್ರಕಟ ಆಗಿಲ್ಲ, ಹಳೇ ಲಿಂಕ್‌ ಹಂಚಿಕೆ ಎಂದ ಕೇಂದ್ರ; ಮತ್ತೊಂದು ಪ್ರಮಾದ?

ನೀಟ್ ಪರೀಕ್ಷೆ ರದ್ದು, ಒನ್ ನೇಷನ್-ಒನ್ ಎಲೆಕ್ಷನ್ ವಿರುದ್ಧ ನಿರ್ಣಯ

ಬೆಂಗಳೂರು: ಕೇಂದ್ರ ಸರ್ಕಾರದ ನೀಟ್ ಪರೀಕ್ಷಾ ವ್ಯವಸ್ಥೆ, ಒನ್ ನೇಷನ್-ಒನ್ ಎಲೆಕ್ಷನ್ ವಿರುದ್ಧ ರಾಜ್ಯ ಸರ್ಕಾರ ಮಂಡಿಸಿರುವ ನಿರ್ಣಯ ವಿಧಾನಮಂಡಲದ ಉಭಯ ಸದನಗಳಲ್ಲಿ (Assembly session) ಅಂಗೀಕಾರವಾಗಿದೆ. ಕೇಂದ್ರ ಸರ್ಕಾರದ ನೀಟ್‌ ಪರೀಕ್ಷೆ, ಒಂದು ದೇಶ-ಒಂದು ಎಲೆಕ್ಷನ್‌ ತೀರ್ಮಾನಗಳನ್ನು ವಿರೋಧಿಸಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿತ್ತು. ಇದೀಗ ಅಧಿವೇಶನದಲ್ಲಿ ರಾಜ್ಯ ಸರ್ಕಾರ ನಿರ್ಣಯ ಮಂಡಿಸಿ, ಅಂಗೀಕಾರ ಪಡೆದಿದೆ.

ವಿಧಾನ ಸಭೆಯಲ್ಲಿ ಸಚಿವ ಶರಣು ಪ್ರಕಾಶ್ ಪಾಟೀಲ್ ಅವರು ನೀಟ್ ರದ್ದು ನಿರ್ಣಯ ಮಂಡನೆ ಮಾಡಿದ್ದು, ವಿಧಾನ ಪರಿಷತ್‌ನಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಮಂಡಿಸಿದರು. ಇನ್ನು ವಿಧಾನ ಸಭೆಯಲ್ಲಿ ಒನ್ ನೇಷನ್- ಒನ್ ಎಲೆಕ್ಷನ್ ವಿರುದ್ಧದ ನಿರ್ಣಯವನ್ನು ಸಚಿವ ಎಚ್‌.ಕೆ. ಪಾಟೀಲ್, ವಿಧಾನ ಪರಿಷತ್‌ನಲ್ಲಿ ಸಿಎಂ ಸಿದ್ದರಾಮಯ್ಯ ಅವರು ಮಂಡಿಸಿದರು. ಉಭಯ ಸದನಗಳಲ್ಲೂ ನಿರ್ಣಯಗಳು ಅಂಗೀಕಾರವಾಗಿವೆ.

ಒನ್ ನೇಷನ್, ಒನ್ ಎಲೆಕ್ಷನ್ ವಿರುದ್ಧವಾಗಿ ವಿಧಾನಪರಿಷತ್‌ನಲ್ಲಿ ನಿರ್ಣಯ ಮಂಡನೆ ಮಾಡಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಈ ರೀತಿಯ ಚುನಾವಣೆಗೆ ನಮ್ಮ ವಿರೋಧ ಇದೆ. ಒಂದು ದೇಶ, ಒಂದು ಚುನಾವಣೆಯಿಂದ ಪ್ರಜಾಪ್ರಭುತ್ವಕ್ಕೆ ಮಾರಕ. ಏಕರೂಪ ಚುನಾವಣೆ ರಾಷ್ಟ್ರೀಯವಾಗಿ ಸಮಸ್ಯೆ ಆಗಲಿದೆ. ಸ್ಥಳೀಯವಾಗಿ ಹಲವು ತಾಂತ್ರಿಕ ಸಮಸ್ಯೆ ಆಗಲಿದೆ. ಇದನ್ನು ಅನುಷ್ಠಾನ ಮಾಡಬಾರದು ಅಂತ‌ ಕೇಂದ್ರದ ಮೇಲೆ ಒತ್ತಡ ಹಾಕಬೇಕು ಅಂತ ಸದಸ್ಯರಿಗೆ ಮನವಿ ಮಾಡಿದರು.

ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಾತಿಗಾಗಿ ನಡೆಯುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯನ್ನು (NEET) ರದ್ದುಗೊಳಿಸಬೇಕು ಎಂದು ತಮಿಳುನಾಡು ಸೇರಿ ಹಲವು ರಾಜ್ಯಗಳಲ್ಲಿ ಆಗ್ರಹ ಕೇಳಿಬರುತ್ತಿದೆ. ಅದರಲ್ಲೂ, ನೀಟ್‌ ಯುಜಿ ಪರೀಕ್ಷೆಯ (NEET UG 2024) ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣವು ದೇಶಾದ್ಯಂತ ಸುದ್ದಿಯಾದ ಬಳಿಕ ಆಗ್ರಹ ಹೆಚ್ಚಾಗಿದೆ. ಇದರ ಬೆನ್ನಲ್ಲೇ, ಕರ್ನಾಟಕದಲ್ಲೂ ನೀಟ್‌ ಪರೀಕ್ಷೆ ಸೇರಿ ಕೇಂದ್ರ ಸರ್ಕಾರದ ಮೂರು ತೀರ್ಮಾನಗಳನ್ನು ವಿರೋಧಿಸುವ ಕುರಿತು ಸಿಎಂ ಸಿದ್ದರಾಮಯ್ಯ (CM Siddaramaiah) ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿತ್ತು,.

ನೀಟ್‌ ಪರೀಕ್ಷೆ ಬದಲು ಹಳೆಯ ಪ್ರವೇಶ ಪರೀಕ್ಷೆ ವ್ಯವಸ್ಥೆಗೆ ಮರಳಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ರಾಜ್ಯವು ತನ್ನದೇ ವೈದ್ಯಕೀಯ ಪ್ರವೇಶ ಪರೀಕ್ಷೆ ನಡೆಸಲು ತೀರ್ಮಾನಿಸಿದ್ದು, ಈ ಮೂಲಕ ತಮಿಳುನಾಡಿನಂತೆಯೇ 12ನೇ ತರಗತಿಯ ಅಂಕಗಳ ಆಧಾರದ ಮೇಲೆ ವೈದ್ಯಕೀಯ ಪ್ರವೇಶವನ್ನು ನಡೆಸಲು ಚಿಂತನೆ ನಡೆಸಿದೆ.

Exit mobile version