ಬೆಂಗಳೂರು: ಶಿವಮೊಗ್ಗ ಕ್ಷೇತ್ರದ ಲೋಕಸಭಾ ಚುನಾವಣೆಯಲ್ಲಿ (Karnataka election results 2024) ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ವಿರುದ್ಧ ಸ್ಪರ್ಧಿಸಿ ಸೋತ ಸಹೋದರಿ ಗೀತಾ ಮತ್ತು ನಟ ಶಿವರಾಜ್‌ಕುಮಾರ್ ಬಗ್ಗೆ ಮಾಜಿ ಶಾಸಕ ಕುಮಾರ್ ಬಂಗಾರಪ್ಪ (Kumar Bangarappa) ವ್ಯಂಗ್ಯವಾಗಿ ಹೇಳಿಕೆ ನೀಡಿದ್ದರು. ಶಿವರಾಜ್ ಕುಮಾರ್ ಈಗ ಶಿವಮೊಗ್ಗ ಜಾತ್ರೆಯಲ್ಲಿ ಕುಣಿಯಲು ಅರ್ಜಿ ಹಾಕಿಕೊಳ್ಳಲಿ ಎಂದಿದ್ದರು. ಇದೀಗ ಸದಾಶಿವನಗರದಲ್ಲಿರುವ ಅವರ ಮನೆಗೆ ನಟ ಶಿವರಾಜ್‌ಕುಮಾರ್ ಬೆಂಬಲಿಗರು ಮುತ್ತಿಗೆ ಹಾಕಿದ್ದಾರೆ. ಶಿವರಾಜ್ ಕುಮಾರ್ ಹಾಗೂ ರಾಜ್ ಕುಮಾರ್ ಕುಟುಂಬದ ಬಗ್ಗೆ ಕುಮಾರ್ ಬಂಗಾರಪ್ಪ ಲಘುವಾಗಿ ಮಾತನಾಡಿದ್ದಾರೆ. ಅದರಿಂದ ನಮಗೆ ನೋವಾಗಿದೆ. ಹಾಗಾಗಿ ಅವರು ಕ್ಷಮೆ ಕೇಳಬೇಕು ಎಂದು ಆಗ್ರಹಿಸಿ ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದಾರೆ.
ಮನೆಯ ಗೇಟ್ ಒಳಗೆ ನುಗ್ಗಿ ಕುಮಾರ್ ಬಂಗಾರಪ್ಪ ವಿರುದ್ಧ ಧಿಕ್ಕಾರ ಕೂಗಿದ್ದಾರೆ. ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದಂತೆಯೇ ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದಾರೆ. ಈ ವೇಳೆ ಪೊಲೀಸರು ಹಾಗೂ ಶಿವಣ್ಣ ಅಭಿಮಾನಿಗಳ ನಡುವೆ ಮಾತಿನ ಚಕಮಕಿ ನಡೆದಿದೆ. ಮನೆ ಬಾಗಿಲಿನಿಂದ ಹೊರ ಹೋಗುವಂತೆ ಪೊಲೀಸರು ನಟನ ಅಭಿಮಾನಿಗಳಿಗೆ ಎಚ್ಚರಿಕೆ ನೀಡಿದರು. ಇನ್ನು ಕುಮಾರ್ ಬಂಗಾರಪ್ಪ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕುಮಾರ್ ಬಂಗಾರಪ್ಪ ಅವರು ಪೋಸ್ಟ್‌ನಲ್ಲಿ, ನಟ ಶಿವರಾಜ್ ಕುಮಾರ್ ಈಗ ನಿರುದ್ಯೋಗಿ ಆಗಬೇಕಿಲ್ಲ, ನಮ್ಮ ಊರಿನ ಜಾತ್ರೆಯಲ್ಲಿ ಕುಣಿಯೋಕೆ ಅರ್ಜಿ ಹಾಕಲಿ ಎಂದು ಕುಮಾರ್ ಬಂಗಾರಪ್ಪ ಗೇಲಿ ಮಾಡಿದ್ದರು.
ಕುಮಾರ್ ಬಂಗಾರಪ್ಪ ಫೋಸ್ಟ್ನಲ್ಲಿ ಏನಿತ್ತು?
ʻʻನನ್ನ ತಂಗಿ ಸಿನಿಮಾ ಡಾನ್ ಆಗಿರುವುದರಿಂದ ಬೇಸರ ಪಡುವುದು ಬೇಕಿಲ್ಲ. ದೊಡ್ಮನೆ ವ್ಯವಹಾರ ಸಾಕಷ್ಟಿದೆ, ಅದು ಬೇರೆಯವರಿಗೆ ಅವಕಾಶ ಸಿಗಲ್ಲ. ಹೆದರಿಸುವ, ಬೆದರಿಸುವ, ಹುಷಾರ್ ಎನ್ನುವ ಮಾತುಗಳು ಏನಿದ್ದರೂ ತಮ್ಮ ಪಟಾಲಂ ಮುಂದೆ ಮಾತ್ರ ಇರಲಿ. ದಿಕ್ಕು ಗೆಟ್ಟು ದಿಕ್ಕಾ ಪಾಲಾಗಿ ಬೆಂಗಳೂರು ಸೇರಿದವರಿಗೆ ಇದು ಕೊನೆಯ ಎಚ್ಚರಿಕೆ. ನೀವು ಹಿಂತುಗಿರುಗಿ ಬರುವುದು ನಿಮ್ಮ ಕನಸಿನ ಮಾತು. ಹೋಗಿ ಬನ್ನಿ ಟಾಟಾ ಬೈ ಬೈ ಎಂದು ತಿರುಗೇಟು ನೀಡಿದ್ದರು.
ಬಂಗಾರಪ್ಪನವರನ್ನು ಪ್ರಚಾರ ಸಾಮಗ್ರಿಯಾಗಿ ಬಳಸಿಕೊಂಡವರಿಗೆ ತಕ್ಕ ಶಾಸ್ತಿಯಾಗಿದೆ.
ಬಂಗಾರಪ್ಪನವರನ್ನು ಕೇವಲ ಪ್ರಚಾರ ಸಾಮಗ್ರಿಯನ್ನಾಗಿ ಬಳಸಿಕೊಂಡವರಿಗೆ ತಕ್ಕ ಶಾಸ್ತಿಯಾಗಿದೆ ಎಂದು ಗೀತಾ ಶಿವರಾಜ್‌ಕುಮಾರ್, ಬಾವ ಶಿವರಾಜ್ ಕುಮಾರ್ ಹಾಗೂ ಸಹೋದರ ಮಧು ಬಂಗಾರಪ್ಪ ಅವರ ವಿರುದ್ಧ ಕುಮಾರ್ ಬಂಗಾರಪ್ಪ ವಾಗ್ದಾಳಿ ನಡೆಸಿದರು. ಕರ್ನಾಟಕ ಕಂಡ ಧೀಮಂತ ರಾಜಕಾರಣಿ, ಬಡವರ ಬಂಧು ಎಂಬ ಸಾರ್ಥಕ ಬಿರುದಾವಳಿಯನ್ನು ತಮ್ಮ ಹೆಸರಿನೊಡನೆ ನಡೆಸಿಕೊಂಡು ಬದುಕಿದವರು ಸಾರೆಕೊಪ್ಪ ಬಂಗಾರಪ್ಪ. ಹಿಂದುಳಿದ ವರ್ಗಗಳಿಗೆ ಆಶಾಕಿರಣವಾಗಿದ್ದ, ರೈತಬಂಧುವೂ, ಗೇಣಿದಾರರ ಜೀವಜಲವೆನಿಸಿದ್ದ ಹೋರಾಟಗಾರ, ನಾಡು ನುಡಿ ಸಂಸ್ಕೃತಿಗಳ ರಕ್ಷಾ ದೀಕ್ಷೆಯನ್ನು ತೊಟ್ಟಿದ್ದ ವೀರಯೋಧನೆನಿಸಿದ್ದ ಕರ್ನಾಟಕದ ಈ ಮಾಜಿ ಮುಖ್ಯಮಂತ್ರಿ, ಲಿಂಗಾಯತ, ಬ್ರಾಹ್ಮಣ, ಒಕ್ಕಲಿಗರೆಲ್ಲರಲ್ಲಿಯೂ ಸಮ ಭಾವ, ಸಮಚಿತ್ತದಿಂದ ಬೆರೆತಿದ್ದವರು. ಇವರ ಆಡಳಿತ ವೈಖರಿಯು ಅನುಕರಣೀಯ ಮಾತ್ರವಲ್ಲದೆ ಆದರ್ಶರೂಪದ್ದಾಗಿತ್ತು ಎಂದು ಹೇಳಿದ್ದರು.
ಇವರು ಜಾರಿಗೆ ತಂದಿದ್ದ ಪಂಚಮುಖಿ ಕಾರ್ಯಕ್ರಮಗಳಾದ ವಿಶ್ವ, ಸುಶ್ರತ, ಆರಾಧನ, ಆಶ್ರಯ, ಅಕ್ಷಯ ಮುಂತಾದವನ್ನು ಇಡೀ ರಾಜ್ಯ ನೆನೆಯುತ್ತಾ ಆರಾಧಿಸುತ್ತಿದೆ, ಬೇರೆ ರಾಜ್ಯಗಳೂ ಅನುಕರಿಸುತ್ತಿವೆ. ಇಂತಹ ಒಬ್ಬ ಧೀರೋದ್ಧಾತ ನಾಯಕನನ್ನು ನನ್ನ ತಮ್ಮ ಹಾಗೂ ತಂಗಿ ತಮ್ಮ ಸ್ವಾರ್ಥಸಾಧನೆಗಾಗಿ, ಕೇವಲ ಒಂದು ಲೋಕಸಭಾ ಕ್ಷೇತ್ರಕ್ಕೆ ಅಂದರೆ ಶಿವಮೊಗ್ಗ ಕ್ಷೇತ್ರಕ್ಕೆ ಸೀಮಿತಗೊಳಿಸಿದ್ದು ಇವರ ಸಂಕುಚಿತ ಸ್ವಭಾವದಿಂದ ಬಂಗಾರಪ್ಪನವರನ್ನು ಕೇವಲ ಪ್ರಚಾರ ಸಾಮಗ್ರಿಯನ್ನಾಗಿ ಬಳಸಿಕೊಂಡ ಇವರಿಗೆ ತಕ್ಕ ಶಾಸ್ತಿಯಾಯಿತು. ಈ ಮಹಾಪರಾಧಕ್ಕಾಗಿ ಜಿಲ್ಲೆಯ, ಕ್ಷೇತ್ರದ ಜನರ ಕ್ಷಮಾಪಣೆ ಕೇಳಿ ಹೋಗಿಬರಲಿ, ಟಾಟಾ! ಎಂದು ತಿಳಿಸಿದ್ದರು.
ಇದನ್ನೂ ಓದಿ: Madhu Bangarappa : ಆ ಹುಚ್ಚನ್ ಬಗ್ಗೆ ನಾ ಮಾತಾಡಲ್ಲ ಬಿಟ್ಬಿಡಿ; ಮಧು ಬಂಗಾರಪ್ಪ ಹೇಳಿದ್ದು ಯಾರ ಬಗ್ಗೆ?
ಮೇಲಾಗಿ, ಕನ್ನಡದ ಕಣ್ಮಣಿ Dr. ರಾಜಕುಮಾರ್ ರವರ ಹೆಸರನ್ನು ದುರುಪಯೋಗಪಡಿಸಿಕೊಂಡಿದ್ದಲ್ಲದೆ ಅವರಿಗಿಲ್ಲದಿದ್ದ ಇಂಗಿತವನ್ನು ಇತ್ತೆಂದು ಪ್ರಚುರಪಡಿಸಿ ಲಾಭ ಮಾಡಿಕೊಳ್ಳಬಯಸಿದ ಇವರಿಗೆ ಮಾಡಿದ್ದುಣೋ ಮಹಾರಾಯ ಎಂಬಂತ ಸ್ಥಿತಿಯಾಗಿದೆ. ಉತ್ತಮ ಉದ್ದೇಶ ಇವರದ್ದಾಗಿದ್ದರೆ ಖಂಡಿತ ವಿಜಯಲಕ್ಷ್ಮಿ ಒಲಿಯುತ್ತಿದ್ದಳು, ಸ್ವಂತ ಸಹೋದರನ ಭವಿಷ್ಯಕ್ಕೆ ತೊಡರುಗಾಲು ಹಾಕಲೆಂದೇ ಬೆಂಗಳೂರಿನಿಂದ ಧಾವಿಸಿಬಂದು ತಿಳಿಯಾಗಿಸಬೇಕಿದ್ದ ವಾತಾವರಣವನ್ನು ಕಲುಷಿತಗೊಳಿಸಿ, ದಿಕ್ಕು ದೆಸೆ ಇಲ್ಲದಂತಾಗಿ ಹೋಗಿ ಗೂಡು ಸೇರಿಕೊಂಡಿದ್ದಾರೆ ಬೆಂಗಳೂರಿಗೆ, ಹಿಂತಿರುಗಿ ಬರುವುದು ಕನಸಿನ ಮಾತು. ಅವರ ಕ್ಷೇತ್ರ, ಸಿನಿಮಾ ಅದನ್ನು ನಿಭಾಯಿಸಿಕೊಂಡಿರುವುದು ಆರೋಗ್ಯಕರ ಎಂದು ಸಲಹೆ ನೀಡಿದ್ದರು
ಈ ವಿಜಯೋತ್ಸವದ ಕೊಡುಗೆ ಜಿಲ್ಲೆಯ ಹಾಗೂ ಲೋಕ ಸಭಾ ಕ್ಷೇತ್ರದ ಮತದಾರರಿಂದ ಲಭಿಸಿದ್ದು ಅವರಿಗೆ ನಾವು ಚಿರಋಣಿಗಳಾಗಿರುತ್ತೇವೆ ಅವರ ಆಶಯಗಳನ್ನು ಸಾಕಾರಗೊಳಿಸುತ್ತೇವೆ ಅವರ ನಂಬಿಕೆಗೆ ಚ್ಯುತಿಬಾರದಂತೆ ನಡೆದುಕೊಳ್ಳುತ್ತೇವೆ. ನಮ್ಮ ಪಕ್ಷದ ಕಾರ್ಯಕರ್ತರು, ಹಿರಿಯ ಕಿರಿಯ ಪದಾಧಿಕಾರಿಗಳು, ಸಂಘಟನೆಯಲ್ಲಿ ತೊಡಗಿಸಿಕೊಂಡ ಬ್ರಿಗೇಡ್/ಶಿಸ್ತಿನ ಸಿಪಾಯಿಗಳು ಹಗಲಿರುಲೆನ್ನದೆ ದುಡಿದು, B Y ರಾಘವೇಂದ್ರರಿಗೆ ಅತ್ಯಧಿಕ ಬಹುಮತದಿಂದ ವಿಜಯಶಾಲಿಯನ್ನಾಗಿಸಿದ್ದಾರೆ ಅವರೆಲ್ಲರಿಗೂ ನನ್ನ ನಮನಗಳು. ರಾಜ್ಯಮಟ್ಟದಲ್ಲಿ, ರಾಷ್ಟ್ರ ಮಟ್ಟದಲ್ಲಿ ಮಾರ್ಗದರ್ಶನ ನೀಡಿದ ನಾಯಕರೆಲ್ಲರಿಗೂ ಧನ್ಯವಾದಗಳು ಎಂದಿದ್ದರು.
War is over but battle remains ZP, TP ಚುನಾವಣೆಗಳು, ಇದೇ ಓಟ ನಿರಂತರವಾಗಿ ನಡೆಯಬೇಕು, ಗೆಲುವನ್ನು ನಮ್ಮದಾಗಿಸಿಕೊಳ್ಳಬೇಕು ಪಣತೋಡೋಣ, ಗುರಿ ಮುಟ್ಟೋಣ. ಜೊತೆ ಜೊತೆಗೆ ಅಭಿವೃದ್ಧಿ ಕಾರ್ಯಗಳು ಶರವೇಗದಲ್ಲಿ ಚಾಲನೆಯಗಬೇಕು. ಪಶ್ಚಿಮ ಘಟ್ಟದ ಈ ತಪ್ಪಲು ಸರ್ವ ಜನಾಂಗದ ಶಾಂತಿಯ ತೋಟವಾಗಿ ಕಂಗೊಳಿಸಬೇಕು. ಇನ್ನು ನನ್ನ ತಮ್ಮ ಮಧು ತಕ್ಷಣ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಬೇಕು, ಇಲ್ಲ CM ಅವನನ್ನು ಸಂಪುಟ ದಿಂದ ವಜಾ ಮಾಡಬೇಕು. ಕನ್ನಡಕ್ಕೆ, ಕನ್ನಡನಾಡಿಗೆ ಅವಮಾನಪಡಿಸಿದಾತ, ಟ್ರೊಲ್ ಮಾಡಿದವರಿಗೆ, ಮಾಧ್ಯಮದವರಿಗೆ ಶಾಪ ಹಾಕಿ ತಾನೇ ಶಾಪಗ್ರಸ್ತನಾದ. ಅವನ bAವ, ನನ್ನ ತಂಗಿಯ ಗಂಡ Dr. ಶಿವರಾಜಕುಮಾರ್ ನಿರುದ್ಯೋಗಿಯಾಗಬೇಕಿಲ್ಲ, ನಮ್ಮೂರ ಜಾತ್ರೆಗಳಲ್ಲಿ ಕುಣಿಯುವ ಕೆಲಸಕ್ಕೆ ಈಗಲೇ ಅರ್ಜಿ ಹಾಕಿಕೊಳ್ಳಬಹುದು.
ನನ್ನ ತಂಗಿ ಸಿನಿಮಾ ಡಾನ್ ಆಗಿರುವುದರಿಂದ ಬೇಸರಕ್ಕೆ ಕಾರಣವಿಲ್ಲ ದೊಡ್ಡಮನೆಯ ವ್ಯವಹಾರ ಸಾಕಷ್ಟಿರುತ್ತದೆ, ಬೇರೆಯವರಿಗೆ ಅವಕಾಶ ಸಿಗಲಾರದು. ಹೆದರಿಸುವ, ಬೆದರಿಸುವ, ಹುಷಾರ್ ಅನ್ನುವ ಮಾತುಗಳೇನಿದ್ದರೂ ಗಂಟಲೋಳಗೇ, ನಾಲ್ಕು ಗೋಡೆಗಳೊಳಗೆ, ತಮ್ಮ ಪಟಾಲಂ ಮುಂದೆ ಮಾತ್ರ ಚಾಲ್ತಿಯಲ್ಲಿರಬೇಕು ಎಂದು ತಾಕೀತು ಮಾಡಿದ್ದರು. ದಿಕ್ಕು ಗೆಟ್ಟು ದಿಕ್ಕಾಪಾಲಾಗಿ ಹೋಗಿ ಬೆಂಗಳೂರು ಸೇರಿಕೊಂಡವರಿಗೆ ಕೊನೆಯ ಎಚ್ಚರಿಕೆ, ನೀವು ಹಿಂತಿರುಗಿ ಬರುವುದು ಕನಸಿನ ಮಾತು. ಜೈಹಿಂದ್, ಜೈ ಕರ್ನಾಟಕ! ಎಂದು ತಿಳಿಸಿದ್ದರು.