Site icon Vistara News

Lok Sabha Election 2024: ಈ ಬಾರಿ ಆಯ್ಕೆಯಾದ 105 ಸಂಸದರು ಪಿಯುಸಿ ದಾಟಿಲ್ಲ!

Lok Sabha Election 2024

ಹೊಸದಿಲ್ಲಿ: ಲೋಕಸಭಾ ಚುನಾವಣೆಯಲ್ಲಿ (Lok Sabha Election 2024) ಗೆದ್ದು ಸಂಸತ್ತು ಪ್ರವೇಶಿಸಿರುವ ಶೇ. 19ರಷ್ಟು ನೂತನ ಸಂಸದರ (MPs) ಶೈಕ್ಷಣಿಕ ಅರ್ಹತೆ (education qualification) 12 ನೇ ತರಗತಿಗಿಂತ ಕೆಳಗಿದೆ. ಶೇ. 77ರಷ್ಟು ಅಭ್ಯರ್ಥಿಗಳು ಪದವಿ ಮತ್ತು ಅದಕ್ಕಿಂತ ಹೆಚ್ಚಿನ ಶಿಕ್ಷಣ ಅರ್ಹತೆಯನ್ನು ಪಡೆದಿದ್ದಾರೆ ಎಂದು ಅಸೋಸಿಯೇಷನ್ ​​ಆಫ್ ಡೆಮಾಕ್ರಟಿಕ್ ರಿಫಾರ್ಮ್ಸ್ (ADR) ವರದಿ ಹೇಳಿದೆ.

ವಿಜೇತ ಅಭ್ಯರ್ಥಿಗಳಲ್ಲಿ ಸುಮಾರು 105 ಮಂದಿ ತಮ್ಮ ಶೈಕ್ಷಣಿಕ ಅರ್ಹತೆಯನ್ನು 5ನೇ ತರಗತಿ ಮತ್ತು 12 ನೇ ತರಗತಿಯ ನಡುವೆ ಎಂದು ಘೋಷಿಸಿದ್ದಾರೆ. 420 ಅಭ್ಯರ್ಥಿಗಳು ಪದವಿ ಅಥವಾ ಅದಕ್ಕಿಂತ ಹೆಚ್ಚಿನ ಪದವಿಯನ್ನು ಹೊಂದಿರುವುದಾಗಿ ಹೇಳಿಕೊಂಡಿದ್ದಾರೆ. 17 ವಿಜೇತ ಅಭ್ಯರ್ಥಿಗಳು ಡಿಪ್ಲೊಮಾ ಮಾಡಿದ್ದು, ಒಬ್ಬ ವಿಜೇತರು “ಕೇವಲ ಸಾಕ್ಷರರು” ಎಂದು ಹೇಳಿಕೊಂಡಿದ್ದಾರೆ.

ಚುನಾವಣಾ ಕಣದಲ್ಲಿ ಇಳಿಯುವಾಗ ತಾವು ಅನಕ್ಷರಸ್ಥರೆಂದು ಘೋಷಿಸಿಕೊಂಡ ಎಲ್ಲಾ 121 ಅಭ್ಯರ್ಥಿಗಳು ಸೋಲು ಅನುಭವಿಸಿದ್ದಾರೆ.

ಯಾರು ಎಷ್ಟು?

5ನೇ ತರಗತಿಯವರೆಗೆ ಓದಿರುವ ಇಬ್ಬರು ವಿಜೇತ ಅಭ್ಯರ್ಥಿಗಳಿದ್ದರೆ, ನಾಲ್ವರು 8 ನೇ ತರಗತಿಯವರೆಗೆ ಓದಿದ್ದೇವೆ ಎಂದು ಹೇಳಿದ್ದಾರೆ. 34 ಅಭ್ಯರ್ಥಿಗಳು ತಾವು 10 ನೇ ತರಗತಿಯವರೆಗೆ ಮತ್ತು 65 ಅಭ್ಯರ್ಥಿಗಳು 12ನೇ ತರಗತಿಯವರೆಗೆ ಓದಿರುವುದಾಗಿ ಘೋಷಿಸಿದ್ದಾರೆ.

ಕೃಷಿಕರು

ಪಿ ಆರ್ ಎಸ್ ಶಾಸಕಾಂಗ ಸಂಶೋಧನೆ ವಿಶ್ಲೇಷಣೆಯ ಪ್ರಕಾರ 543 ಸಂಸದರಲ್ಲಿ ಛತ್ತೀಸ್‌ಗಢದ ಶೇ. 91 ಸಂಸದರು, ಮಧ್ಯಪ್ರದೇಶದಿಂದ ಶೇ. 72 ಮತ್ತು ಗುಜರಾತ್‌ನ ಶೇ. 65 ಸಂಸದರು ಕೃಷಿಯನ್ನು ತಮ್ಮ ವೃತ್ತಿ ಎಂದು ಘೋಷಿಸಿದ್ದಾರೆ.
18ನೇ ಲೋಕಸಭೆಗೆ ಚುನಾಯಿತರಾದ ಸಂಸದರಲ್ಲಿ ಸುಮಾರು ಶೇ. 7 ರಷ್ಟು ಮಂದಿ ವಕೀಲರು ಮತ್ತು ಶೇ. 4ರಷ್ಟು ಮಂದಿ ವೈದ್ಯಕೀಯ ವೃತ್ತಿಯವರು ಇದ್ದಾರೆ.


ಪ್ರಾರಂಭದಿಂದ 11ನೇ (1996-98) ಲೋಕಸಭೆಯವರೆಗೆ ಪದವಿಪೂರ್ವ, ಪದವಿಗಳನ್ನು ಹೊಂದಿರುವ ಸಂಸದರ ಪ್ರಮಾಣವು ಸ್ಥಿರವಾಗಿ ಹೆಚ್ಚಾಗಿದೆ. ಪ್ರಾರಂಭದಲ್ಲಿ ಕಾಲೇಜು ಶಿಕ್ಷಣ ಪಡೆಯದ ಸಂಸದರ ಪ್ರಮಾಣವೂ ಹೆಚ್ಚಾಗಿತ್ತು. 17 ನೇ ಲೋಕಸಭೆಯಲ್ಲಿ ಶೇ. 27ರಿಂದ 18ನೇ ಲೋಕಸಭೆಯಲ್ಲಿ ಶೇ. 22 ಕ್ಕೆ ಇಳಿದಿದೆ ಎಂದು ಪಿಆರ್ ಎಸ್ ವರದಿ ತಿಳಿಸಿದೆ.

18ನೇ ಲೋಕಸಭೆಯಲ್ಲಿ ಶೇ. 5ರಷ್ಟು ಸಂಸದರಲ್ಲಿ ಮೂವರು ಮಹಿಳೆಯರು ಡಾಕ್ಟರೇಟ್ ಪದವಿಗಳನ್ನು ಹೊಂದಿದ್ದಾರೆ ಎಂದು ವಿಶ್ಲೇಷಣೆ ವರದಿ ಬಹಿರಂಗಪಡಿಸಿದೆ.

ಇದನ್ನೂ ಓದಿ: Lok Sabha Election : ಶತಕ ಬಾರಿಸಿದ ಕಾಂಗ್ರೆಸ್​​; ಪಕ್ಷೇತರನ ಬೆಂಬಲದೊಂದಿಗೆ ಕಾಂಗ್ರೆಸ್​ನ ಸೀಟ್​ಗಳ ಸಂಖ್ಯೆ 100ಕ್ಕೆ ಏರಿಕೆ

ಕಣದಲ್ಲಿದ್ದ 8,390 ಅಭ್ಯರ್ಥಿಗಳ ಪೈಕಿ 121 ಅಭ್ಯರ್ಥಿಗಳು ತಾವು ಅನಕ್ಷರಸ್ಥರು ಮತ್ತು 359 ಅಭ್ಯರ್ಥಿಗಳು ತಾವು 5ನೇ ತರಗತಿಯವರೆಗೆ ಓದಿರುವುದಾಗಿ ಹೇಳಿದ್ದಾರೆ.

ಅಧಿಕೃತ ಮಾಹಿತಿಯ ಪ್ರಕಾರ 647 ಅಭ್ಯರ್ಥಿಗಳು ತಮ್ಮ ಶಿಕ್ಷಣ ಮಟ್ಟವನ್ನು 8 ನೇ ತರಗತಿಯವರೆಗೆ ವರದಿ ಮಾಡಿದ್ದಾರೆ. ಒಟ್ಟು 1,303 ಅಭ್ಯರ್ಥಿಗಳು ತಾವು ಶಾಲೆಯನ್ನು ತೇರ್ಗಡೆಗೊಳಿಸಿರುವುದಾಗಿ ಘೋಷಿಸಿದರು. 1,502 ಅಭ್ಯರ್ಥಿಗಳು ತಾವು ಪದವಿಯನ್ನು ಹೊಂದಿರುವುದಾಗಿ ಹೇಳಿದ್ದಾರೆ. 198 ಅಭ್ಯರ್ಥಿಗಳು ಡಾಕ್ಟರೇಟ್ ಪಡೆದಿರುವುದಾಗಿ ಘೋಷಿಸಿದ್ದರು.

Exit mobile version