Site icon Vistara News

Lok Sabha Election 2024: ಈ ಬಾರಿ 74 ಮಹಿಳಾ ಸಂಸದರು, ಯಾವ ಪಕ್ಷದಲ್ಲಿ ಎಷ್ಟು ಮಂದಿ?

Lok Sabha Election 2024

ಲೋಕಸಭಾ ಚುನಾವಣೆಯಲ್ಲಿ (Lok Sabha Election 2024) ಈ ಬಾರಿ 74 ಮಹಿಳೆಯರು ಸಂಸದರಾಗಿ (Women MPs) ಆಯ್ಕೆಯಾಗಿದ್ದಾರೆ. ಈ ಸಂಖ್ಯೆಯು 2019ಕ್ಕಿಂತ ಸ್ವಲ್ಪ ಕಡಿಮೆಯಾಗಿದೆ. 2019ರಲ್ಲಿ ಒಟ್ಟು 78 ಮಹಿಳೆಯರು ಸಂಸದರಾಗಿದ್ದರು. 1952ರ ಚುನಾವಣೆಗೆ (election) ಹೋಲಿಸಿದರೆ ಮಹಿಳಾ ಸಂಸದರ ಸಂಖ್ಯೆಯಲ್ಲಿ ಗಮನಾರ್ಹ ಹೆಚ್ಚಳವಾಗಿದೆ.

ಸಂಸತ್ತಿನಲ್ಲಿ ಮಹಿಳಾ ಮೀಸಲಾತಿ (Women’s reservation) ಮಸೂದೆ ಅಂಗೀಕಾರವಾದ ಅನಂತರ ಮಹಿಳೆಯರಿಗೆ ಮೂರನೇ ಒಂದು ಭಾಗದಷ್ಟು ಸ್ಥಾನಗಳನ್ನು ಮೀಸಲಿಡುವ ಮೊದಲ ಚುನಾವಣೆ ಇದಾಗಿದೆ. ಈ ಕಾನೂನು ಇನ್ನೂ ಜಾರಿಗೆ ಬರಬೇಕಿದೆ.

ಮಹಿಳಾ ಸಂಸದರು ಸಂಖ್ಯೆ ಒಟ್ಟು ಚುನಾಯಿತ ಸದಸ್ಯರಲ್ಲಿ ಕೇವಲ ಶೇ. 13.63ರಷ್ಟಿದೆ. ಇದು ಮಹಿಳೆಯರಿಗೆ ಪ್ರಸ್ತಾಪಿಸಲಾಗಿರುವ ಶೇ. 33 ಮೀಸಲಾತಿಗಿಂತ ಕಡಿಮೆಯಾಗಿದೆ. ದೇಶಾದ್ಯಂತ ಕೆಳಮನೆಗೆ ಆಯ್ಕೆಯಾಗಿರುವ ಒಟ್ಟು ಮಹಿಳಾ ಸಂಸದರ ಪೈಕಿ 11 ಮಂದಿ ಪಶ್ಚಿಮ ಬಂಗಾಳದವರಾಗಿರುವುದು ವಿಶೇಷ.

ಯಾವ ಪಕ್ಷದಿಂದ ಎಷ್ಟು?

ಈ ಬಾರಿ ಲೋಕಸಭೆಯಲ್ಲಿ 14 ರಾಜಕೀಯ ಪಕ್ಷಗಳ ಮಹಿಳಾ ಸಂಸದರು ತಮ್ಮ ಕ್ಷೇತ್ರಗಳನ್ನು ಪ್ರತಿನಿಧಿಸಲಿದ್ದಾರೆ. ಇದರಲ್ಲಿ ಬಿಜೆಪಿ 31 ಮಹಿಳಾ ಸಂಸದರನ್ನು ಹೊಂದಿದ್ದು, ಕಾಂಗ್ರೆಸ್ 13, ತೃಣಮೂಲ ಕಾಂಗ್ರೆಸ್ (ಟಿಎಂಸಿ) 11, ಸಮಾಜವಾದಿ ಪಕ್ಷ (ಎಸ್‌ಪಿ) 5, ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) 3 ಮಹಿಳಾ ಸಂಸದರನ್ನು ಹೊಂದಿದೆ.

ಮೊದಲ ಬಾರಿ ಸಂಸದರಾದವರು

74 ಮಹಿಳಾ ಸಂಸದರಲ್ಲಿ 43 ಮಂದಿ ಮೊದಲ ಬಾರಿಗೆ ಸಂಸದರಾಗಿ ಆಯ್ಕೆಯಾಗಿದ್ದಾರೆ. ರಾಷ್ಟ್ರೀಯ ಜನತಾ ದಳದಿಂದ (ಆರ್‌ಜೆಡಿ) ಆಯ್ಕೆಯಾಗಿರುವ ಮಿಸಾ ಭಾರತಿ ಚೊಚ್ಚಲ ಲೋಕಸಭಾ ಸಂಸದರಾಗಿದ್ದಾರೆ.

ಕಣದಲ್ಲಿ ಇದದ್ದು ಎಷ್ಟು ಮಂದಿ ?

ಒಟ್ಟು 797 ಮಹಿಳಾ ಅಭ್ಯರ್ಥಿಗಳು ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದು, ಬಿಜೆಪಿ ಗರಿಷ್ಠ 69 ಮತ್ತು ಕಾಂಗ್ರೆಸ್ 41 ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು.

ಪಿಆರ್ ಎಸ್ ನ ವಿಶ್ಲೇಷಣೆಯ ಪ್ರಕಾರ ಮಹಿಳಾ ಸಂಸದರಲ್ಲಿ ಶೇ. 16ರಷ್ಟು ಮಂದಿ 40 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾರೆ. ಶೇ. 41ರಷ್ಟು ಮಂದಿ ಈ ಹಿಂದೆ ಲೋಕಸಭೆಯ ಸದಸ್ಯರಾಗಿದ್ದರು. ಉಳಿದವರಲ್ಲಿ ಒಬ್ಬ ಸಂಸದರು ಮಾತ್ರ ರಾಜ್ಯಸಭಾ ಸದಸ್ಯರಾಗಿದ್ದರು.

ಕಿರಿಯ ಮಹಿಳಾ ಸಂಸದರು

ಸಮಾಜವಾದಿ ಪಕ್ಷದ ಮಚ್ಲಿಶಹರ್‌ನ 25 ವರ್ಷದ ಪ್ರಿಯಾ ಸರೋಜ್ ಮತ್ತು ಕೈರಾನಾ ಕ್ಷೇತ್ರದ 29 ವರ್ಷದ ಇಕ್ರಾ ಚೌಧರಿ ಗೆಲುವು ಸಾಧಿಸಿದ ಅತ್ಯಂತ ಕಿರಿಯ ಸಂಸದರಾಗಿದ್ದಾರೆ.

ಇದನ್ನೂ ಓದಿ: Rahul Gandhi: ರಾಯ್‌ ಬರೇಲಿ V/S ವಯನಾಡ್‌-ರಾಹುಲ್‌ ಆಯ್ಕೆ ಯಾವುದು?

ಮಹಿಳಾ ಮೀಸಲಾತಿ ಎಷ್ಟು?

ಗಮನಾರ್ಹ ಸಂಗತಿ ಎಂದರೆ ನಾಮ್ ತಮಿಲರ್ ಕಚ್ಚಿಯಂತಹ ಪಕ್ಷಗಳು ಶೇ. 50ರಷ್ಟು ಮಹಿಳಾ ಅಭ್ಯರ್ಥಿ ಗಳನ್ನು ಕಣಕ್ಕೆ ಇಳಿಸಿತ್ತು. ಮಹಿಳಾ ಪ್ರಾತಿನಿಧ್ಯವನ್ನು ಹೊಂದಿರುವ ಇತರ ಪಕ್ಷಗಳಲ್ಲಿ ಲೋಕ ಜನಶಕ್ತಿ ಪಕ್ಷ (ರಾಮ್ ವಿಲಾಸ್) ಮತ್ತು ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ ಕೂಡ ಸೇರಿದೆ. ಈ ಎರಡೂ ಪಕ್ಷಗಳು ಶೇ. 40ರಷ್ಟು ಮಹಿಳಾ ಅಭ್ಯರ್ಥಿಗಳನ್ನು ಹೊಂದಿದೆ.

ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಮತ್ತು ಬಿಜು ಜನತಾ ದಳ (ಬಿಜೆಡಿ) ಶೇ. 33 ರಷ್ಟು, ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಶೇ.29, ಸಮಾಜವಾದಿ ಪಕ್ಷವು ಶೇ. 20 ಮತ್ತು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಶೇ. 25ರಷ್ಟು ಮಹಿಳಾ ಅಭ್ಯರ್ಥಿಗಳನ್ನು ಹೊಂದಿತ್ತು.

Exit mobile version