ಯಾದಗಿರಿ: ನರೇಂದ್ರ ಮೋದಿ (PM Narendra Modi) ಅವರು 10 ವರ್ಷಗಳ ಕಾಲ ಪಿಎಂ ಆಗಿ ದೇಶದಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದು, ಮತ್ತೊಮ್ಮೆ ಮೋದಿ ಅವರನ್ನು ಪಿಎಂ ಮಾಡಲು ಬಿಜೆಪಿ ಅಭ್ಯರ್ಥಿ ರಾಜಾಅಮರೇಶ್ವರ ನಾಯಕ ಅವರನ್ನು ಗೆಲ್ಲಿಸಬೇಕು ಎಂದು ಮಾಜಿ ಶಾಸಕ ವೆಂಕಟರೆಡ್ಡಿ ಮುದ್ನಾಳ ಮನವಿ (Lok Sabha Election 2024) ಮಾಡಿದರು.
ಜಿಲ್ಲೆಯ ವಡಗೇರಾ ತಾಲೂಕಿನ ನಾಯ್ಕಲ್ ಗ್ರಾಮದಲ್ಲಿ ರಾಯಚೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಜಾಅಮರೇಶ್ವರ ನಾಯಕ ಪರ ಹಮ್ಮಿಕೊಂಡ ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಲೋಕಸಭಾ ಚುನಾವಣೆಯು ತೀವ್ರ ಜಿದ್ದಾಜಿದ್ದಿನ ಚುನಾವಣೆಯಾಗಿದೆ. ಕಾಂಗ್ರೆಸ್ ನಾಯಕರು ಬಿಜೆಪಿ ವಿರುದ್ಧ ಇಲ್ಲಸಲ್ಲದ ಸುಳ್ಳು ಹೇಳುತ್ತಿದ್ದಾರೆ ಎಂದು ಆರೋಪಿಸಿದ ಅವರು, ಪಿಎಂ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಬಡಜನರಿಗೆ ಪಡಿತರ ಅಕ್ಕಿ ನೀಡುವ ಮೂಲಕ ಬಡಜನರ ಹಸಿವು ನೀಗಿಸುವ ಕಾರ್ಯ ಮಾಡಿದೆ. ಸರ್ಕಾರವು ಗ್ಯಾರಂಟಿ ಯೋಜನೆಯಿಂದ ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಮಾಡುತ್ತಿಲ್ಲ. ಕೇಂದ್ರ ಸರಕಾರವು ಜೆಜೆಎಂ ಯೋಜನೆ ಜಾರಿಗೆ ತಂದು ಹಳ್ಳಿಯ ಜನರಿಗೆ ಕುಡಿಯುವ ನೀರಿನ ಸಮಸ್ಯೆ ನೀಗಿಸಿದೆ. ಮೋದಿ ಅವರು ಉತ್ತಮ ಆಡಳಿತ ನೀಡಿದ್ದಾರೆ ಎಂದು ತಿಳಿಸಿದರು.
ಇದನ್ನೂ ಓದಿ: Toyota Kirloskar Motor: ಟೊಯೊಟಾ ರುಮಿಯಾನ್ G-AT ಬುಕ್ಕಿಂಗ್ ಶುರು! ಏನಿದರ ವಿಶೇಷ?
ಕೇಂದ್ರ ಸರ್ಕಾರವು ಯಾದಗಿರಿ ಜಿಲ್ಲಾ ಕೇಂದ್ರದಲ್ಲಿ ಮೆಡಿಕಲ್ ಕಾಲೇಜು ಆರಂಭಕ್ಕೆ ಅನುದಾನ ನೀಡಿ ಮೆಡಿಕಲ್ ಕಾಲೇಜು ಸ್ಥಾಪಿಸಲು ಮಹತ್ವದ ಕೊಡುಗೆ ನೀಡಿದೆ. ನನ್ನ ಅಧಿಕಾರಾವಧಿಯಲ್ಲಿ ಯಾದಗಿರಿ ವಿಧಾನಸಭೆ ಕ್ಷೇತ್ರದಲ್ಲಿ ರಸ್ತೆ, ಶಾಲೆಗಳ ಅಭಿವೃದ್ಧಿ, ಕುಡಿಯುವ ನೀರಿನ ಯೋಜನೆ ಸೇರಿದಂತೆ ಅನೇಕ ಸೌಲಭ್ಯಗಳನ್ನು ಕಲ್ಪಿಸಿದ್ದೇನೆ ಎಂದ ಅವರು, ಅಭ್ಯರ್ಥಿ ರಾಜಾಅಮರೇಶ್ವರ ನಾಯಕ ಅವರನ್ನು ಹೆಚ್ಚು ಮತಗಳಿಂದ ಗೆಲ್ಲಿಸಿ ತರಬೇಕು ಎಂದು ಮತದಾರರದಲ್ಲಿ ಮನವಿ ಮಾಡಿದರು.
ಬಿಜೆಪಿ ಯುವ ಮುಖಂಡ ಮಹೇಶರೆಡ್ಡಿ ಮುದ್ನಾಳ ಮಾತನಾಡಿ, ರಾಜ್ಯದಲ್ಲಿ ಗ್ಯಾರಂಟಿ ಯೋಜನೆ ಜಾರಿಗೆ ತಂದು ಸರ್ಕಾರವು ಯಾವುದೇ ಅಭಿವೃದ್ಧಿ ಮಾಡಿಲ್ಲ. ರಾಜ್ಯ ಸರ್ಕಾರವು ಕೇಂದ್ರದ ಕಿಸಾನ್ ಸಮ್ಮಾನ್ ಯೋಜನೆಗೆ ಕೊಡಮಾಡುವ 4 ಸಾವಿರ ರೂಪಾಯಿ ಸಹಾಯಧನವನ್ನು ಕಡಿತ ಮಾಡಿ, ರೈತರ ಹಿತ ಮರೆತಿದೆ ಎಂದು ಆರೋಪಿಸಿದರು.
ಬಿಜೆಪಿ ಮುಖಂಡ ಸಿದ್ದಣ್ಣಗೌಡ ಕಾಡಂನೋರ್, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ದೇವರಾಜ್ ನಾಯಕ ಮಾತನಾಡಿದರು.
ಇದನ್ನೂ ಓದಿ: Labour Day 2024: ಕಾರ್ಮಿಕ ದಿನಾಚರಣೆ ಸಂದರ್ಭದಲ್ಲಿ ಉದ್ಯೋಗಿಗಳಿಗೆ ಉಪಯುಕ್ತ ಹಣಕಾಸು ಟಿಪ್ಸ್ ಇಲ್ಲಿದೆ
ಈ ಸಂದರ್ಭದಲ್ಲಿ ಮುಖಂಡರಾದ ಉಮಾರೆಡ್ಡಿ ವಡ್ಡವಡಗಿ, ಶರಣಗೌಡ ಬಟಗೇರಿ, ಸುರೇಶ್ ಗೌಡ, ಸಂತೋಷಗೌಡ ವಡ್ಡವಡಗಿ, ಡಾ.ಎಂ.ಡಿ. ಮೊಲ್ಲಾ ರಾಯಚೂರು, ಸತೀಶ್ ಗೌಡ, ಬಸವರಾಜ ಮೇತ್ರಿ, ಈಶೆಪ್ಪ ಕೊಲ್ಲುರು, ಮರಳ ಸಿದ್ದಪ್ಪ, ಮಹಿಪಾಲರೆಡ್ಡಿ, ಸುರೇಶ್‌ಗೌಡ ಸೇರಿದಂತೆ ಇತರರು ಉಪಸ್ಥಿತರಿದ್ದರು.