ಹೊಸದಿಲ್ಲಿ: ಇತ್ತೀಚೆಗೆ ನಡೆದ ಸಾರ್ವತ್ರಿಕ ಲೋಕಸಭಾ ಚುನಾವಣೆ-2024ರಲ್ಲಿ (Lok Sabha Election 2024) ಚುನಾಯಿತರಾದ ಬಹುಪಾಲು ಸಂಸತ್ ಸದಸ್ಯರು (MPs) ಕೋಟ್ಯಧಿಪತಿಗಳಾಗಿದ್ದಾರೆ (crorepatis) ಮತ್ತು ಶೇ. 46 ರಷ್ಟು ಮಂದಿ ಕ್ರಿಮಿನಲ್ ಆರೋಪಗಳನ್ನು (criminal charges) ಎದುರಿಸುತ್ತಿದ್ದಾರೆ ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ADR) ವರದಿ ತಿಳಿಸಿದೆ.
ಒಟ್ಟು ವಿಜೇತರಾದ 543 ವಿಜೇತ ಅಭ್ಯರ್ಥಿಗಳಲ್ಲಿ 251 ಮಂದಿ ವಿರುದ್ಧ ಕ್ರಿಮಿನಲ್ ಆರೋಪಗಳಿದ್ದು, 504 ಅಂದರೆ ಒಟ್ಟು ವಿಜೇತ ಅಭ್ಯರ್ಥಿಗಳಲ್ಲಿ ಶೇ. 93ರಷ್ಟು ಮಂದಿ ಕೋಟ್ಯಧಿಪತಿಗಳಾಗಿದ್ದಾರೆ.
ಬಿಜೆಪಿಯಲ್ಲೇ ಅತ್ಯಧಿಕ ಕೋಟ್ಯಧೀಶರು
240 ಸೀಟುಗಳನ್ನು ಗೆದ್ದು ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಬಿಜೆಪಿ ಗರಿಷ್ಠ ಸಂಖ್ಯೆಯ ಕೋಟ್ಯಧಿಪತಿಗಳನ್ನು ಹೊಂದಿದೆ. 240 ವಿಜೇತ ಬಿಜೆಪಿ ಅಭ್ಯರ್ಥಿಗಳ ಪೈಕಿ ಶೇ. 95ರಷ್ಟು ಮಂದಿ ಅಂದರೆ 240ರಲ್ಲಿ 227 ಮಂದಿ ಕೋಟ್ಯಧಿಪತಿಗಳಾಗಿದ್ದಾರೆ. ಪ್ರತಿ ಅಭ್ಯರ್ಥಿಯ ಸರಾಸರಿ ಆಸ್ತಿ 50.04 ಕೋಟಿ ರೂ. ಆಗಿದೆ.
ಬಿಜೆಪಿಯ ವಿಜೇತ ಅಭ್ಯರ್ಥಿಗಳಲ್ಲಿ ಶೇ.39ರಷ್ಟು ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳು ದಾಖಲಾಗಿವೆ.
ಕಾಂಗ್ರೆಸ್ ನಾಯಕರ ವಿರುದ್ಧ ಅತ್ಯಧಿಕ ಕ್ರಿಮಿನಲ್ ಕೇಸ್
ಲೋಕಸಭಾ ಚುನಾವಣೆಯಲ್ಲಿ 99 ಸ್ಥಾನಗಳನ್ನು ಪಡೆದಿರುವ ಕಾಂಗ್ರೆಸ್ ಪಕ್ಷದಲ್ಲಿ ಶೇ. 93ರಷ್ಟು ಮಂದಿ ಕೋಟ್ಯಧಿಪತಿಗಳಾಗಿದ್ದಾರೆ. ಪ್ರತಿ ಅಭ್ಯರ್ಥಿಯ ಸರಾಸರಿ ಆಸ್ತಿ 22.93 ಕೋಟಿ ಆಗಿದೆ. ಕಾಂಗ್ರೆಸ್ ನಾಯಕರಲ್ಲಿ ಅರ್ಧದಷ್ಟು ಮಂದಿ ತಮ್ಮ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳನ್ನು ಎದುರಿಸುತ್ತಿದ್ದಾರೆ. ಎಂದು ವರದಿ ಉಲ್ಲೇಖಿಸಿದೆ. ಬಿಜೆಪಿಗೆ ಹೋಲಿಸಿದರೆ ಸರಾಸರಿ ಪ್ರಕಾರ ಕಾಂಗ್ರೆಸ್ ನಲ್ಲೇ ಹೆಚ್ಚು ಕ್ರಿಮಿನಲ್ ಗಳಿದ್ದಾರೆ.
543 ವಿಜೇತ ಅಭ್ಯರ್ಥಿಗಳಲ್ಲಿ ಶೇ. 46ರಷ್ಟು ಅಂದರೆ 251 ಅಭ್ಯರ್ಥಿಗಳು ತಮ್ಮ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳನ್ನು ಘೋಷಿಸಿದ್ದಾರೆ.
2009ರ ಸಾರ್ವತ್ರಿಕ ಚುನಾವಣೆಯ ಅನಂತರ ಅವರ ವಿರುದ್ಧ ಘೋಷಿತ ಕ್ರಿಮಿನಲ್ ಪ್ರಕರಣಗಳನ್ನು ಹೊಂದಿರುವ ಸಂಸದರ ಸಂಖ್ಯೆಯಲ್ಲಿ ಶೇ. 55ರಷ್ಟು ಹೆಚ್ಚಳವಾಗಿದೆ. 2024ರಲ್ಲಿ ಗೆದ್ದ 240 ಬಿಜೆಪಿ ಅಭ್ಯರ್ಥಿಗಳಲ್ಲಿ 94 ಮತ್ತು ಗೆದ್ದ 99 ಕಾಂಗ್ರೆಸ್ ಅಭ್ಯರ್ಥಿಗಳಲ್ಲಿ 49 ಮಂದಿ ತಮ್ಮ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳಿರುವುದಾಗಿ ಘೋಷಿಸಿದ್ದಾರೆ.
ಇದನ್ನೂ ಓದಿ: Lok Sabha Election 2024: ಈ 17 ಸಂಸದರು ಎನ್‌ಡಿಎಯಲ್ಲೂ ಇಲ್ಲ, ಇಂಡಿ ಕೂಟದಲ್ಲೂ ಇಲ್ಲ!
ಗಂಭೀರ ಪ್ರಕರಣ
543 ವಿಜೇತ ಅಭ್ಯರ್ಥಿಗಳಲ್ಲಿ ಶೇ. 31ರಷ್ಟು ಮಂದಿ ಅಂದರೆ 170 ಅಭ್ಯರ್ಥಿಗಳು ತಮ್ಮ ವಿರುದ್ಧ ಗಂಭೀರ ಕ್ರಿಮಿನಲ್ ಮೊಕದ್ದಮೆಗಳು ದಾಖಲಾಗಿರುವುದಾಗಿ ಹೇಳಿದ್ದಾರೆ.
ಅತ್ಯಾಚಾರ, ಕೊಲೆ, ಕೊಲೆಯತ್ನ, ಅಪಹರಣ, ಮಹಿಳೆಯರ ವಿರುದ್ಧದ ಅಪರಾಧಗಳು ಇತ್ಯಾದಿಗಳಿಗೆ ಸಂಬಂಧಿಸಿದ ಪ್ರಕರಣಗಳನ್ನು ಗಂಭೀರ ಅಪರಾಧ ಪ್ರಕರಣಗಳ ಅಡಿಯಲ್ಲಿ ವರ್ಗೀಕರಿಸಲಾಗಿದೆ.
ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಪಕ್ಷದ ಗೆದ್ದಿರುವ ನಾಲ್ವರು ಅಭ್ಯರ್ಥಿಗಳ ವಿರುದ್ಧ ಗಂಭೀರ ಕ್ರಿಮಿನಲ್ ಪ್ರಕರಣಗಳಿವೆ. ಬಿಜೆಪಿಯಲ್ಲಿ ಗೆದ್ದಿರುವ 240 ಅಭ್ಯರ್ಥಿಗಳ ಪೈಕಿ 63 ಹಾಗೂ 99 ಕಾಂಗ್ರೆಸ್ ಅಭ್ಯರ್ಥಿಗಳ ಪೈಕಿ 32 ಮಂದಿ ವಿರುದ್ಧ ಗಂಭೀರ ಕ್ರಿಮಿನಲ್ ಮೊಕದ್ದಮೆಗಳಿವೆ ಎಂದು ವರದಿ ತಿಳಿಸಿದೆ.