Site icon Vistara News

Lok Sabha Election 2024: ಬಿಜೆಪಿಯವರಿಂದ ಹಿಂದೂ ಧರ್ಮಕ್ಕೆ ಅಪಾಯ ಎಂದ ಅಂಜಲಿ ನಿಂಬಾಳ್ಕರ್

Congress election camapaign meeting in haliyala

ಹಳಿಯಾಳ: ಹಿಂದೂ ಧರ್ಮಕ್ಕೆ ಅಪಾಯ ಇರುವುದು ಬಿಜೆಪಿಗರಿಂದಲೇ ಹೊರತು ಬೇರಾರಿಂದಲೂ ಅಲ್ಲ ಎಂದು ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಡಾ. ಅಂಜಲಿ ನಿಂಬಾಳ್ಕರ್ (Lok Sabha Election 2024) ಆರೋಪಿಸಿದರು.

ತಾಲೂಕಿನ ತೇರಗಾಂವ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಶುಕ್ರವಾರ ನಡೆದ ಕಾಂಗ್ರೆಸ್ ಬಹಿರಂಗ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿಗರು ತಾವೇ ಹಿಂದುತ್ವ ರಕ್ಷಣೆ ಮಾಡುತ್ತಿರುವವರು ಎನ್ನುತ್ತಾರೆ. ಮೊಘಲರು, ಬ್ರಿಟೀಷರು ಬಂದಾಗಲೂ ಹಿಂದೂ ಧರ್ಮಕ್ಕೆ ತೊಂದರೆಯಾಗಲು ಯಾರೂ ಬಿಟ್ಟಿರಲಿಲ್ಲ. ಆದರೆ ಅಂಥ ಮೋಸ ಈಗ ಬಿಜೆಪಿಯಿಂದ ಆಗುತ್ತಿದೆ ಎಂದು ಕಿಡಿಕಾರಿದರು.

ಇದನ್ನೂ ಓದಿ: Chocolate: ಏನಿದು ಮೀಲಿಬಗ್‌ ವೈರಸ್‌? ಚಾಕೊಲೇಟ್ ದರ ಏರಿಕೆಗೂ ಇದಕ್ಕೂ ಏನು ಸಂಬಂಧ?

ಬಿಜೆಪಿಗರಿಂದ ನಮ್ಮ ಧರ್ಮ, ಸಂಸ್ಕೃತಿ, ರಕ್ಷಣೆ ಮಾಡಬೇಕಿದೆ. ನಾನು ಹಿಂದೂ ಧರ್ಮದಲ್ಲಿ ಹುಟ್ಟಿರಲು ನನಗೆ ಹೆಮ್ಮೆ ಇದೆ. ಬಿಜೆಪಿಗರಿಂದ ಹಿಂದುತ್ವದ ಪಾಠ ಕಲಿಬೇಕಿಲ್ಲ. ಶಿವಾಜಿಯವರು ಎಲ್ಲಾ ಜಾತಿಗಳು ಸೇರಿ ಹಿಂದೂ ಧರ್ಮ ಎಂದಿದ್ದರು. ಯಾವುದೇ ಒಂದು ಜಾತಿಗೆ ಸೀಮಿತವಾದುದಲ್ಲ. ಆ ಹಿಂದೂ ಧರ್ಮವನ್ನು ಬಿಜೆಪಿಗರೇ ಹಾಳು ಮಾಡುತ್ತಿದ್ದಾರೆ ಎಂದು ಆರೋಪಿದರು.

ಬಿಜೆಪಿಗರು, ಕಾಂಗ್ರೆಸ್ 70 ವರ್ಷದಲ್ಲಿ ಏನು ಮಾಡಿದೆ ಎಂದು ಕೇಳುತ್ತಾರೆ. ಆ ಪುಣ್ಯಾತ್ಮರಿಗೆ ಹೇಳಬೇಕು, ನೀವಿರುವ ಗುಜರಾತ್‌ಗೆ ನೀರು ಪೂರೈಸುವ ಬೃಹತ್ ಅಣೆಕಟ್ಟು ಕಟ್ಟಿದ್ದು ಕಾಂಗ್ರೆಸ್. ಆದರೆ ಇವರಿಂದ ಹಳ್ಳಿಗಳಲ್ಲಿ ಚಿಕ್ಕ ಚರಂಡಿಗಳನ್ನೂ ನಿರ್ಮಿಸಲಾಗುತ್ತಿಲ್ಲ. ಸುಳ್ಳು, ಜಾತಿ, ಧರ್ಮದ ಮೇಲೆ ಮತ ಕೇಳಲು ಬಂದಿಲ್ಲ. ಅಭಿವೃದ್ಧಿ ಕೆಲಸಗಳ ಮೇಲೆ ಮತ ಯಾಚಿಸಲು ಬಂದಿದ್ದೇನೆ. ಈ ಬಾರಿ ಒಂದು ಅವಕಾಶ ನನಗೆ ನೀಡಿ ಬದಲಾವಣೆ ನೋಡಿ ಎಂದರು.

ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ.ದೇಶಪಾಂಡೆ ಮಾತನಾಡಿ, ರಾಷ್ಟ್ರ, ರಾಜ್ಯ, ತಾಲೂಕಿನ ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ ದೊಡ್ಡದು. ಆದರೂ ಮಹಿಳೆಯರಿಗೆ ಲೋಕಸಭಾ ಟಿಕೆಟ್ ಸಿಗುವುದು ತುಂಬಾ ಕಷ್ಟವಾಗಿದೆ. ಉತ್ತರ ಕನ್ನಡ ಭಾಗದಲ್ಲಿ ಇದುವರೆಗೂ ಬಿಜೆಪಿ ಮಹಿಳೆಯರಿಗೆ ಒಮ್ಮೆಯೂ ಟಿಕೆಟ್ ನೀಡಿಲ್ಲ. ಆದರೆ ಕಾಂಗ್ರೆಸ್, ಗ್ಯಾರಂಟಿಯ ಜತೆಗೆ ಮಹಿಳಾ ಅಭ್ಯರ್ಥಿಯನ್ನು ನೀಡಿ ಮಹಿಳಾ ಸಬಲೀಕರಣಕ್ಕಾಗಿ ಪ್ರಯತ್ನಿಸುತ್ತಿದೆ. ಮಹಿಳೆಯರು ಕೂಡ ಗ್ಯಾರಂಟಿ ನೀಡಿ ನೆರವಾದ ಕಾಂಗ್ರೆಸ್ ಪರ ಮತ ಚಲಾಯಿಸಬೇಕು ಎಂದು ತಿಳಿಸಿದರು.

ಇದನ್ನೂ ಓದಿ: Viral News: ಸಿಂಗಾಪುರ ಏರ್‌ಲೈನ್ಸ್‌ ಪೈಲಟ್‌ ಅಂತಾ ಹೇಳ್ಕೊಂಡು ಪೋಸ್‌ ಕೊಡ್ತಿದ್ದವ ಲಾಕ್‌!

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೈತಾನ‌ ಬಾರ್ಬೋಜ, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಸಂತೋಷ ರೇಣಕೆ, ರವಿ ತೋರಣಗಟ್ಟಿ, ಪುರಸಭೆ ಮಾಜಿ ಅಧ್ಯಕ್ಷ ಅಜರ್ ಬಸರಿಕಟ್ಟಿ, ಡಿ ವಾಯ್ ಡಾಂಗೆ ಸೇರಿದಂತೆ ಇತರರು ಉಪಸ್ಥಿತರಿದ್ದರು.

Exit mobile version