ಬೆಳಗಾವಿ: ಗಡಿ ನಾಡು – ನುಡಿ ವಿಷಯದಲ್ಲಿ ಸದಾ ಕ್ಯಾತೆ ತೆಗೆಯುತ್ತಲೇ ಬಂದಿರುವ ನಾಡದ್ರೋಹಿ ಸಂಘಟನೆ ಎಂದೇ ಕುಖ್ಯಾತಿಗೊಳಗಾಗಿರುವ ಎಂಇಎಸ್ (MES) ಪ್ರತಿ ವರ್ಷದಂತೆ ಈ ವರ್ಷವೂ ಕನ್ನಡ ರಾಜ್ಯೋತ್ಸವದಂದು (Karnataka Rajyotsava) ಕರಾಳ ದಿನಾಚರಣೆ ನಡೆಸಲು ಮುಂದಾಗಿದೆ. ಇದಕ್ಕೆ ಮಹಾರಾಷ್ಟ್ರ ಸಿಎಂ ಏಕನಾಥ ಶಿಂಧೆ (Maharashtra CM Eknath Shinde) ಸಹ ಕುಮ್ಮಕ್ಕು ನೀಡಿದ್ದು, ತಮ್ಮ ಸಂಪುಟ ಸದಸ್ಯರು ಭಾಗಿಯಾಗಲಿದ್ದಾರೆ ಎಂದು ಹೇಳಿಕೆಯನ್ನು ನೀಡಿದ್ದರು. ಆದರೆ, ಈ ಎಲ್ಲದಕ್ಕೂ ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ (Belagavi Deputy Commissioner Nitesh Patil) ಖಡಕ್ ಉತ್ತರ ಕೊಟ್ಟಿದ್ದು, ಕರಾಳ ದಿನಾಚರಣೆಗೆ ಯಾವುದೇ ರೀತಿಯಲ್ಲೂ ಅನುಮತಿ ನೀಡುವುದಿಲ್ಲ. ಮಹಾರಾಷ್ಟ್ರದ ಯಾವೊಬ್ಬ ನಾಯಕನಿಗೂ ಅಂದು ರಾಜ್ಯ ಪ್ರವೇಶಕ್ಕೆ ಅನುಮತಿ ನೀಡುವುದಿಲ್ಲ ಎಂದು ಹೇಳುವ ಮೂಲಕ ರಾಜ್ಯ ವಿರೋಧ ಚಟುವಟಿಕೆಗೆ ಬಾಗಿಲು ಬಂದ್ ಮಾಡಿರುವುದಾಗಿ ಹೇಳಿದ್ದಾರೆ.
ಕ್ಯಾತೆ ತೆಗೆದ ಏಕನಾಥ ಶಿಂಧೆ
ಕರ್ನಾಟಕದ ಗಡಿ ವಿಷಯ, ಅದರಲ್ಲೂ ಬೆಳಗಾವಿ ವಿಷಯ ಬಂದಾಗ ಮಹಾರಾಷ್ಟ್ರದ ಶಿವಸೇನೆ ಕ್ಯಾತೆ ತೆಗೆಯುತ್ತಲೇ ಬರುತ್ತಿದೆ. ಅದಕ್ಕೆ ಇಂಬು ನೀಡುವಂತೆ ರಾಜ್ಯದಲ್ಲಿರುವ ಎಂಇಎಸ್ ನಾಯಕರು, ಕಾರ್ಯಕರ್ತರು ಕುಣಿಯುತ್ತಿದ್ದರು. ಈಗ ಕನ್ನಡ ರಾಜ್ಯೋತ್ಸವದಂದು ಕರಾಳ ದಿನ ಆಚರಣೆ ಮಾಡಲು ಎಂಇಎಸ್ ಮುಂದಾಗಿತ್ತು. ಈ ಕುರಿತು ಹೇಳಿಕೆಗಳನ್ನು ನೀಡಿತ್ತು. ಆದರೆ, ಇದಕ್ಕೆ ಜಿಲ್ಲಾಡಳಿತದ ಅನುಮತಿಯನ್ನು ಪಡೆದಿರಲಿಲ್ಲ. ಈ ನಡುವೆ ಇದರ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ, “ಕರ್ನಾಟಕದಲ್ಲಿ ಎಂಇಎಸ್ ನಡೆಸುವ “ಕರಾಳ ದಿನಾಚರಣೆ”ಗೆ ಮಹಾರಾಷ್ಟ್ರದ ಸಚಿವರು ಭಾಗಿಯಾಗುತ್ತಾರೆ ಎಂದು ಹೇಳಿದ್ದರು. ಇದು ರಾಜ್ಯದಲ್ಲಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿತ್ತು. ವ್ಯಾಪಕ ಆಕ್ರೋಶವೂ ವ್ಯಕ್ತವಾಗಿತ್ತು.
ಸಭೆ ನಡೆಸಿದ ಎಂಇಎಸ್
ಅತ್ತ ಮಹಾರಾಷ್ಟ್ರ ಸಿಎಂ ಏಕನಾಥ ಶಿಂಧೆ ಹೇಳಿಕೆ ನೀಡುತ್ತಿದ್ದಂತೆ ಇತ್ತ ಎಂಇಎಸ್ ನಾಯಕರು ಚಿಗುರಿದ್ದರು. ಕರಾಳ ದಿನಾಚರಣೆ ಕಾರ್ಯಕ್ರಮದ ರೂಪುರೇಷೆ ಬಗೆಗ ಚರ್ಚೆ ನಡೆಸಲು ಗೋವಾವೇಸ್ ಸರ್ಕಲ್ ನಲ್ಲಿರುವ ಮರಾಠಾ ಮಂದಿರದಲ್ಲಿ ಸಭೆ ಸೇರಿ ಮಾತುಕತೆಯನ್ನು ನಡೆಸಿದ್ದರು. ಮಹಾರಾಷ್ಟ್ರ ನಾಯಕರಿಗೆ ಆಹ್ವಾನ ಕೊಡುವ ಬಗ್ಗೆಯೂ ಈ ಸಭೆಯಲ್ಲಿ ನಿರ್ಣಯವನ್ನು ಕೈಗೊಂಡರು. ಇನ್ನು ಜಿಲ್ಲಾಡಳಿತದ ಬಳಿ ಇದಕ್ಕೆ ಅನುಮತಿಯನ್ನು ಕೇಳುವುದು, ಜಿಲ್ಲಾಧಿಕಾರಿ ಅನುಮತಿ ನೀಡದೇ ಹೋದರೂ ಯಾವ ರೀತಿ ಕರಾಳ ಆಚರಣೆಯನ್ನು ಮಾಡಬೇಕು ಎಂದು ಸಹ ಈ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.
ಜಿಲ್ಲಾಧಿಕಾರಿ ವಾರ್ನಿಂಗ್
ಎಂಇಎಸ್ ಪುಂಡಾಟ ಈ ಮಟ್ಟಕ್ಕೆ ಹೋಗಿರುವುದನ್ನು ತಿಳಿದ ಕನ್ನಡಪರ ಸಂಘಟನೆಯವರು ಜಿಲ್ಲಾಡಳಿತದ ಕದ ತಟ್ಟಿದ್ದರು. ಯಾವುದೇ ಕಾರಣಕ್ಕೂ ಬೆಳಗಾವಿಯಲ್ಲಿ ಕರಾಳ ದಿನಾಚರಣೆ ನಡೆಸಲು ಅನುಮತಿಯನ್ನು ನೀಡಲೇಬಾರದು. ಒಂದು ವೇಳೆ ಅನುಮತಿ ನೀಡಿದರೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿಯನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದರು.
ಇದನ್ನೂ ಓದಿ: Congress Karnataka : ಸಂಪುಟ ಪುನಾರಚನೆ ಬಗ್ಗೆ ಸಿದ್ದರಾಮಯ್ಯ ಮಾತು; ಕೈ ಪಾಳೆಯಕ್ಕೆ ತಲೆ ನೋವಾದ ಡಿನ್ನರ್ ಪಾಲಿಟಿಕ್ಸ್!
ಈ ಬಗ್ಗೆ ಮಾಧ್ಯಮಗಳ ಮುಂದೆ ಹೇಳಿಕೆ ನೀಡಿರುವ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್, ಬೆಳಗಾವಿಯಲ್ಲಿ ಕರಾಳ ದಿನಾಚರಣೆ ಕಾರ್ಯಕ್ರಮ ನಡೆಸಲು ಅನುಮತಿಯನ್ನು ನೀಡಲಾಗುವುದಿಲ್ಲ. ಇಷ್ಟಾಗಿಯೂ ಎಂಇಎಸ್ ಕಾರ್ಯಕ್ರಮವನ್ನು ನಡೆಸಿದ್ದೇ ಆದಲ್ಲಿ ಮುಂದಿನ ಕಾನೂನು ಕ್ರಮಗಳನ್ನು ಎದುರಿಸಬೇಕಾದೀತು. ಇನ್ನು ಅಂದು ಮಹಾರಾಷ್ಟ್ರದಿಂದ ಯಾವುದೇ ರಾಜಕೀಯ ನಾಯಕರಿಗೂ ಪ್ರವೇಶಿಸಲು ಅನುಮತಿ ನೀಡುವುದಿಲ್ಲ ಎಂದು ಖಡಕ್ ಆಗಿ ವಾರ್ನಿಂಗ್ ನೀಡಿದ್ದಾರೆ.