Site icon Vistara News

ಮಗನ ಕಳೆದುಕೊಂಡ ತಾಯಿ ಸಂಕಷ್ಟಕ್ಕೆ ಮಿಡಿದ ಲಕ್ಷ್ಮಿ ಹೆಬ್ಬಾಳ್ಕರ್‌; 1 ವರ್ಷದ ‘ಗೃಹಲಕ್ಷ್ಮಿ’ ಮೊತ್ತ ನೆರವು

Laxmi hebbalkar

ಬೆಳಗಾವಿ: ಬದುಕಿಗೆ ಆಸರೆಯಾಗಿದ್ದ ಮಗನನ್ನು ಕಳೆದುಕೊಂಡು ಅರಣ್ಯರೋದನ ಅನುಭವಿಸುತ್ತಿದ್ದ ಹಿರಿಯ ವಯಸ್ಸಿನ ತಾಯಿ ಸಂಕಷ್ಟಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಮನ ಮಿಡಿದಿದ್ದಾರೆ. ಗೃಹಲಕ್ಷ್ಮಿ ಯೋಜನೆ ಮೂಲಕ ಒಂದು ವರ್ಷಕ್ಕೆ ಜಮಾ ಆಗುವ ಹಣದಷ್ಟು ವೈಯಕ್ತಿಯವಾಗಿ ನೆರವಿನ ಹಸ್ತ ಚಾಚಿದ್ದಾರೆ.

ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಸವದತ್ತಿ ತಾಲೂಕಿನ ಮರಕುಂಬಿ ಗ್ರಾಮದ ವಿಶ್ವನಾಥ ಗುರಕ್ಕನವರ ಚಿಕಿತ್ಸೆ ಫಲಿಸದೇ ಶನಿವಾರ ಮೃತಪಟ್ಟಿದ್ದರು. ಈತನ ತಾಯಿ ನೀಲವ್ವ ಗುರಕ್ಕನವರ ಮಗನನ್ನು ಕಳೆದುಕೊಂಡು, ಅಂತಿಮ ಸಂಸ್ಕಾರ ಮಾಡಲು ಸಾಧ್ಯವಾಗದೇ ಅಸಹಾಯಕರಾಗಿದ್ದರು. ನಂತರ ಮಾಜಿ ಮೇಯರ್ ವಿಜಯ ಮೋರೆ ಅವರ ಪುತ್ರ ಅಲೆನ್ ಮತ್ತು ಅವರ ಗೆಳೆಯರ ನೆರವಿನಿಂದ ಮಗನ ಅಂತ್ಯಸಂಸ್ಕಾರ ನೆರೆವೇರಿಸಿದ್ದರು. ಅಂತ್ಯಸಂಸ್ಕಾರದ ವೇಳೆ ಗೃಹಲಕ್ಷ್ಮಿ ಯೋಜನೆಯಿಂದ ಪಡೆಯುತ್ತಿರುವ ಮಾಸಿಕ 2 ಸಾವಿರ ರೂಪಾಯಿ ಹಣದ ಕುರಿತು ಪ್ರಸ್ತಾಪಿಸಿ ಆಕ್ರಂದನ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ | DK Shivakumar: ಬೆಂಗಳೂರಲ್ಲಿ ಡಬಲ್‌ ಡೆಕ್ಕರ್‌ ಫ್ಲೈ ಓವರ್ ಮೇಲೆ ಮೆಟ್ರೋ ಸೇರಿ ವಿವಿಧ ಯೋಜನೆ: ಡಿಕೆಶಿ

ಅಂತ್ಯ ಸಂಸ್ಕಾರ ವೇಳೆ ತಾಯಿ ಅರಣ್ಯರೋದನ

ಮಗನನ್ನು ಕಳೆದುಕೊಂಡ ತಾಯಿ ಅಂತ್ಯಸಂಸ್ಕಾರ ಸಮಯದಲ್ಲಿ ಅರಣ್ಯ ರೋದನದ ದೃಶ್ಯ ಸಾಮಾಜಿಕ ತಾಣದಲ್ಲಿ ವೈರಲ್ ಆಗಿತ್ತು. ಈ ವಿಡಿಯೊವನ್ನು ಗಮನಿಸಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಅವರು, ಅಂತ್ಯಸಂಸ್ಕಾರ ಮುಗಿಸಿ ಸ್ವ ಗ್ರಾಮ ಮರಕುಂಬಿಗೆ ಹೋಗಿದ್ದ ತಾಯಿಯ ನೆರವಿಗೆ ಧಾವಿಸಿ ಆರ್ಥಿಕ ಸಹಾಯ ಮಾಡಿದ್ದಾರೆ.

ಮನೆ ಬಾಗಿಲಿಗೆ ನೆರವು

ಒಂದು ವರ್ಷಕ್ಕೆ ಗೃಹಲಕ್ಷ್ಮಿ ಯೋಜನೆಯ ಮೂಲಕ ಜಮಾ ಆಗುವ ಒಟ್ಟು 24 ಸಾವಿರ ರೂಪಾಯಿ ಹಣದ ನೆರವಿನ ಹಸ್ತ ಚಾಚಿದ್ದಾರೆ. ತಮ್ಮ ಕಚೇರಿಯ ಸಿಬ್ಬಂದಿ ಮೂಲಕ ಹಣವನ್ನು ಮಹಿಳೆಯ ಮನೆಗೆ ಕಳುಹಿಸಿದ್ದಾರೆ. ಅಲ್ಲದೇ ನೊಂದ ತಾಯಿಗೆ ಕರೆ ಮಾಡಿ ಮಾತನಾಡಿದ ಸಚಿವೆ, ಸ್ವಾಂತ್ವನದ ಜತೆಗೆ ಆತ್ಮಸ್ಥೈರ್ಯವನ್ನು ತುಂಬಿದ್ದು, ಸದಾಕಾಲವೂ ತಾಯಿಯ ಬೆನ್ನಿಗೆ ನಿಲ್ಲುವುದಾಗಿ ತಿಳಿಸಿದ್ದಾರೆ. ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ತಾಯಿ ಹೃದಯಕ್ಕೆ ನೊಂದ ಹಿರಿಯ ಜೀವ ಹರಸಿ ಹಾರೈಸಿದೆ.

ಇದನ್ನೂ ಓದಿ | Vistara Impact: ಹಾವೇರಿಯಲ್ಲಿ ಗಾಂಧಿ ಭವನ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ

ಸಚಿವೆ ನಡೆಗೆ ಎಲ್ಲೆಡೆ ಶ್ಲಾಘನೆ

ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತ್ವರಿತವಾಗಿ ಮನಮಿಡಿದು, ದುಃಖದಿಂದ ಭಾರವಾದ ತಾಯಿ ಹೃದಯಕ್ಕೆ ಧೈರ್ಯ ತುಂಬಿ ನೆರವಿನ ಹಸ್ತ ನೀಡಿದ ಕಾರ್ಯಕ್ಕೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗಿದೆ.

Exit mobile version