ಯಾದಗಿರಿ: ಈಗಾಗಲೇ ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆ ಎದುರಾಗಿದ್ದು ಈ ಚುನಾವಣೆ ಕಾಂಗ್ರೆಸ್ ಪಕ್ಷಕ್ಕೆ ಮಹತ್ವದಾಗಿದೆ, ಚುನಾವಣೆಯಲ್ಲಿ (MLC Election) ಕಾಂಗ್ರೆಸ್ ಅಭ್ಯರ್ಥಿ ಡಾ. ಚಂದ್ರಶೇಖರ ಪಾಟೀಲ್ ಅವರನ್ನು ಗೆಲ್ಲಿಸಲು ಜಿಲ್ಲೆಯ ಪಕ್ಷದ ಕಾರ್ಯಕರ್ತರು ಶ್ರಮಿಸಬೇಕು ಎಂದು ಸಣ್ಣ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಕರೆ ನೀಡಿದರು.
ನಗರದ ಎಸ್.ಡಿ.ಎನ್ ಹೋಟಲ್ ಸಭಾಂಗಣದಲ್ಲಿ ಈಶಾನ್ಯ ಪದವಿಧರರ ಕ್ಷೇತ್ರ ಚುನಾವಣೆ ನಿಮಿತ್ತ ಜಿಲ್ಲಾ ಕಾಂಗ್ರೆಸ್ ಸಮಿತಿ ಹಮ್ಮಿಕೊಂಡಿದ್ದ ಪಕ್ಷದ ಮುಖಂಡರ ಹಾಗೂ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಎಲ್ಲಾ ವರ್ಗದ ಜನರಿಗೆ ಜನಪರ ಯೋಜನೆಗಳನ್ನು ಜಾರಿಗೆ ತಂದಿದೆ, ಅದರಲ್ಲೂ ವಿಶೇಷವಾಗಿ ಪದವಿಧರರಿಗೆ ಅನುಕೂಲವಾಗುವ ಯೋಜನೆಗಳನ್ನು ಅನುಷ್ಟಾನಗೊಳಿಸಿದೆ, ಇನ್ನೂ ಹೆಚ್ಚು ಯೋಜನೆಗಳನ್ನು ಹಮ್ಮಿಕೊಂಡಿದೆ, ವಾಸ್ತವಿಕತೆ ಅರಿತು ಮತದಾರರು ಕಾಂಗ್ರೆಸ್ ಅಭ್ಯರ್ಥಿಗೆ ಮೊದಲ ಪ್ರಾಶಸ್ತ್ಯ ಮತ ನೀಡಿ, ಆಶೀರ್ವದಿಸಬೇಕು ಎಂದು ಮನವಿ ಮಾಡಿದರು.
2014ರ ಲೋಕಸಭಾ ಚುನಾವಣೆ ಸಮಯದಲ್ಲಿ ಬಿಜೆಪಿ ನಾಯಕರು ದೇಶದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ ಎಂದು ಆರೋಪಿಸಿ, ಸುಳ್ಳು ಭರವಸೆಗಳನ್ನು ನೀಡಿ, ಯುವಕರನ್ನು ಆಕರ್ಷಿಸಿ, ಮತ ಪಡೆದು ಅಧಿಕಾರಕ್ಕೆ ಬಂದ ನಂತರ ಉದ್ಯೋಗ ಸೃಷ್ಟಿ ಮಾಡಲಿಲ್ಲ, ಬದಲಾಗಿ ಭಾರತ ಸರ್ಕಾರದ ಪ್ರಮುಖ ಸಂಸ್ಥೆಗಳನ್ನು ಖಾಸಗೀಕರಣ ಮಾಡಿ, ಉದ್ಯೋಗ ಖಡಿತಗೊಳಿಸಿದ್ದಾರೆ, ಇದರಿಂದ ಯುವಕರು ನಿರಾಶೆಗೊಂಡಿದ್ದಾರೆ, ಈ ಚುನಾವಣೆಯಲ್ಲಿ ಅವರ ಸಮಸ್ಯೆಗಳಿಗೆ ಸ್ಪಂದಿಸುತ್ತಿರುವ ನಮ್ಮ ಅಭ್ಯರ್ಥಿ ಪರ ಒಲವು ವ್ಯಕ್ತಪಡಿಸಲು ನಿರ್ಧರಿಸಿದ್ದಾರೆ ಎಂದು ತಿಳಿಸಿದರು.
ಕಾಗ್ರೆಸ್ ಅಭ್ಯರ್ಥಿ ಡಾ, ಚಂದ್ರಶೇಖರ ಬಿ. ಪಾಟೀಲ್ ಮಾತನಾಡಿ, ಈಶಾನ್ಯ ಪದವಿಧರರ ಕ್ಷೇತ್ರದ ವಿಸ್ತಾರ ದೊಡ್ಡದಾಗಿದೆ, ಕಳೆದ 6 ವರ್ಷಗಳಲ್ಲಿ ನಿಮ್ಮೆಲ್ಲರ ಆಶೀರ್ವಾದದಿಂದ ಮತದಾರರ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸಿದ್ದೇನೆ, ಚುನಾವಣೆಯಲ್ಲಿ ಮತ್ತೊಮ್ಮೆ ಅವಕಾಶ ಕಲ್ಪಿಸಬೇಕು, ಈ ಭಾಗದ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳ ಸಂಕಲ್ಪ ನಾನು ಇಟ್ಟುಕೊಂಡಿದ್ದೇನೆ ಎಂದು ಹೇಳಿದರು.
ಕಲ್ಯಾಣ ಕರ್ನಾಟಕಕ್ಕೆ 371ನೇ ಜೆ. ಅಡಿಯಲ್ಲಿ ಸಂವಿಧಾನಬದ್ದವಾಗಿ ಸಿಗಬೇಕಾದ ಔದ್ಯೋಗಿಕ ಹಾಗೂ ಶೈಕ್ಷಣಿಕ ಮೀಸಲಾತಿಯ ಸೌಲಭ್ಯವನ್ನು ಸಮರ್ಪಕವಾಗಿ ಜಾರಿಗೊಳಿಸಲು ಹಾಗೂ ಈ ಭಾಗದ ಪದವೀಧರರ ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ಪರಿಷತ್‌ನಲ್ಲಿ ಕಲ್ಯಾಣ ಕರ್ನಾಟಕದ ಧ್ವನಿಯಾಗಿ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಇದನ್ನೂ ಓದಿ: Vijayanagara News: ಖಾಸಗಿ ಆಸ್ಪತ್ರೆಗಳು ಚಿಕಿತ್ಸಾ ಲೋಪ ಎಸಗಿದರೆ ಕಾನೂನು ಕ್ರಮ: ಡಿಸಿ ಎಚ್ಚರಿಕೆ
ಈ ಸಂದರ್ಭದಲ್ಲಿ ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರು, ಕೆಪಿಸಿಸಿ ಉಪಾಧ್ಯಕ್ಷ ಶರಣಪ್ಪ ಮಟ್ಟೂರ, ಮುಖಂಡರಾದ ರಾಜಾ ವೇಣುಗೋಪಾಲ ನಾಯಕ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಸರಡ್ಡಿ ಪಾಟೀಲ್ ಅನಪೂರ, ಎ.ಸಿ ಕಾಡ್ಲೂರ, ಚಿದಾನಂದಪ್ಪ ಕಾಳೆಬೆಳಗುಂದಿ, ಡಾ. ಭೀಮಣ್ಣ ಮೇಟಿ, ಚಂದ್ರಶೇಖರ ದಂಡೀನ್, ನಿಂಗರಾಜ ಬಾಚಿಮಟ್ಟಿ, ಸಿದ್ಲಿಂಗರಡ್ಡಿ ಉಳ್ಳೆಸೂಗೂರ, ರಾಜಶೇಖರ ಪಾಟೀಲ್ ವಜ್ಜಲ್, ಸುದರ್ಶನ ನಾಯಕ, ಕೃಷ್ಣಾ ಚಪಟ್ಲಾ, ನಿರಂಜನ್‌ರಡ್ಡಿ ಶೆಟ್ಟಿಹಳ್ಳಿ, ಮರೇಪ್ಪ ಬಿಳ್ಹಾರ, ಮಲ್ಲಣ್ಣ ಸಾಹುಕಾರ, ಮಂಜುಳಾ ಗೂಳಿ, ರಾಜಾ ಕುಮಾರ ನಾಯಕ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಜಿಲ್ಲಾ ಕಾಂಗ್ರೆಸ್ ವಕ್ತಾರ ಶ್ಯಾಮಸನ್ ಮಾಳಿಕೇರಿ ಸ್ವಾಗತಿಸಿದರು.