ಬೆಂಗಳೂರು: ಕಾಂಗ್ರೆಸ್ ಸರ್ಕಾರಕ್ಕೆ ರಾಜ್ಯದಲ್ಲಿ ಬರ ಇಲ್ಲ. ನೀರಿನ ಸಮಸ್ಯೆ, ವಿದ್ಯುತ್ ಸಮಸ್ಯೆಯೇ ಇಲ್ಲ ಎಂಬಂತೆ ಸರ್ಕಾರ ಮೋಜು ಮಸ್ತಿಯಲ್ಲಿ ತೊಡಗಿದೆ ಎಂದು ವಿಧಾನಪರಿಷತ್ ಮುಖ್ಯ ಸಚೇತಕ ಎನ್.ರವಿಕುಮಾರ್ (N Ravikumar) ಆಕ್ರೋಶ ಹೊರಹಾಕಿದ್ದಾರೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಾತನಾಡಿದ ಅವರು, ಸದನದಲ್ಲಿ ಸೋಮವಾರ ಬೆಂಗಳೂರಿನ ನೀರಿನ ಸಮಸ್ಯೆ ಕುರಿತು ಚರ್ಚೆ ಮಾಡಲಿದ್ದೇವೆ. ನೀರು, ವಿದ್ಯುತ್ ಸಮಸ್ಯೆ ಇದ್ದರೂ, ಬರಗಾಲ ಕಿತ್ತು ತಿನ್ನುತ್ತಿದ್ದರೂ ರೈತರಿಗೆ ಒಂದು ನಯಾಪೈಸೆ ಪರಿಹಾರ ಕೊಟ್ಟಿಲ್ಲ. 2 ಸಾವಿರ ಕೊಟ್ಟು ಕೈತೊಳೆದುಕೊಂಡಿದ್ದಾರೆ ಎಂದು ಟೀಕಿಸಿದರು.
ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಇದ್ದಾಗ ರೈತರಿಗೆ ಕೇಂದ್ರದಿಂದ 6 ಸಾವಿರ, ರಾಜ್ಯದಿಂದ 4 ಸಾವಿರ ಸೇರಿ 10 ಸಾವಿರ ಕೊಡುತ್ತಿತ್ತು, ಅದರಿಂದ ರೈತರಿಗೆ ಸಹಾಯ ಆಗುತ್ತಿತ್ತು. ಕರ್ನಾಟಕ ಸರ್ಕಾರವು ಹಣಕಾಸಿನ ತೊಂದರೆ ಇಲ್ಲವೆಂದು ಹೇಳುತ್ತಾ ಹೇಳುತ್ತಾ, ಸಚಿವರು ಸೇರಿ 84 ಜನರಿಗೆ ಕ್ಯಾಬಿನೆಟ್ ದರ್ಜೆ ಕೊಟ್ಟಿದೆ. ಇಷ್ಟು ದೊಡ್ಡ ಮಟ್ಟದಲ್ಲಿ ಕ್ಯಾಬಿನೆಟ್ ದರ್ಜೆ ಕೊಡುವ ಅವಶ್ಯಕತೆ ಇದೆಯೇ ಎಂದು ಪ್ರಶ್ನಿಸಿದರು.
ಇದನ್ನೂ ಓದಿ | Congress Guarantee: ಅರ್ಚಕರ ರಕ್ಷಣೆ ಮಾಡೋ ಕಾಯ್ದೆಯನ್ನು ಬಿಜೆಪಿ-ಜೆಡಿಎಸ್ ಸೋಲಿಸಿವೆ ಎಂದ ಡಿಕೆಶಿ
ಒಂದು ಕ್ಯಾಬಿನೆಟ್ ದರ್ಜೆ ಎಂದರೆ ಒಂದು ತಿಂಗಳಿಗೆ 5 ಲಕ್ಷ ಎಂದರೆ 84 ಜನರಿಗೆ ಒಂದು ತಿಂಗಳಿಗೆ ಎಷ್ಟು ಖರ್ಚಾಯಿತು ಎಂದು ಪ್ರಶ್ನಿಸಿದ ಅವರು, ಸರ್ಕಾರ ಈ ಕುರಿತು ಯೋಚಿಸಬೇಕು. 34 ಹೊಸ ಇನ್ನೋವಾ ಕಾರುಗಳನ್ನು ಖರೀದಿಸಲಾಗಿದೆ. ಸಿದ್ದರಾಮಯ್ಯನವರ ಮನೆ ನವೀಕರಣಕ್ಕೆ 6.40 ಕೋಟಿ ಖರ್ಚಾದ ಬಗ್ಗೆ ಪತ್ರಿಕೆಯಲ್ಲಿ ನೋಡಿದ್ದೇನೆ ಎಂದು ತಿಳಿಸಿದರು.
ಯಥಾ ರಾಜಾ ತಥಾ ಪ್ರಜಾ
ಯಥಾ ರಾಜಾ ತಥಾ ಪ್ರಜಾ ಎಂಬಂತೆ ಸಚಿವರು ತಮ್ಮ ಮನೆ, ಕಚೇರಿಗಳನ್ನು ನವೀಕರಿಸಲು ಮುಂದಾಗಿದ್ದಾರೆ. ಹೊಸ ಹೊಸ ಕಾರುಗಳನ್ನು ಖರೀದಿಸುತ್ತಿದ್ದಾರೆ. ನೀವು ಒಂದು ಕಡೆ ದುಡ್ಡಿಲ್ಲದೆ ದೇವಸ್ಥಾನಗಳಿಂದ ಶೇ.10 ಹಣ ಕೊಡಿ ಎಂದು ಕೇಳಲು ಯೋಚಿಸುತ್ತೀರಿ. ಇನ್ನೊಂದು ಕಡೆ ಖರ್ಚು, ಮೋಜು ಮಾಡುತ್ತಿದ್ದೀರಿ. ಈ ಸರ್ಕಾರದ ನೀತಿ ಏನು? ಏನು ಮಾಡುತ್ತಿದೆ ಈ ಸರ್ಕಾರ ಎಂದು ಪ್ರಶ್ನಿಸಿದರು.
ಕರ್ನಾಟಕ ಸರ್ಕಾರ ಎಲ್ಲ ವಸ್ತುಗಳ ಬೆಲೆಗಳನ್ನು ಹೆಚ್ಚು ಮಾಡಿದೆ. ಅಬಕಾರಿಯಂತೂ ಶೇ.30 ಹೆಚ್ಚಾಗಿದೆ. ಹೆಣ್ಮಕ್ಕಳಿಗೆ ಪ್ರತಿ ತಿಂಗಳು 2 ಸಾವಿರ ಕೊಡುವುದಾಗಿ ಹೇಳುತ್ತಾರೆ. ಒಂದು ದಿನಕ್ಕೆ ಒಬ್ಬ ವ್ಯಕ್ತಿ ಒಂದು ಕ್ವಾರ್ಟರ್ ಹೆಚ್ಚು ತೆಗೆದುಕೊಂಡರೂ ಒಬ್ಬನು 1,800 ರೂ. ತಿಂಗಳಿಗೆ ಕೊಡಬೇಕಾಗುತ್ತದೆ. ಏರಿಸಿದ ಬೆಲೆಯಿಂದಲೇ ಸರ್ಕಾರಕ್ಕೆ 1,800 ರೂ. ಬರುತ್ತದೆ. ಮಹಿಳೆಯರಿಂದ ಕೊಡುವ ದುಡ್ಡು ಇದರಿಂದಲೇ ಬಂತು, ನೀವೇನು ಮಾಡಿದಂತಾಯಿತು ಎಂದು ಕೇಳಿದರು.
ಕೇಂದ್ರ ಸರ್ಕಾರದತ್ತ ಬೊಟ್ಟು ಮಾಡಿ ತೋರಿಸುವ ಈ ಸರ್ಕಾರಕ್ಕೆ ನಾಚಿಕೆ ಆಗಬೇಕು. 1 ಲಕ್ಷದ 5 ಸಾವಿರ ಕೋಟಿ ಸಾಲದ ಬಜೆಟ್ ಮಂಡಿಸಿದ್ದಾರೆ. ಈ ಸರ್ಕಾರವು ಸಾಲ ತೀರಿಸಲು ಸಾಲ ಮಾಡಬೇಕಾಗಿದೆ. ಹೋಪ್‍ಲೆಸ್ ಬಜೆಟ್ ಕೊಟ್ಟು, ವಿದ್ಯುತ್, ಅಬಕಾರಿ, ಹಾಲು, ದವಸ ಧಾನ್ಯ, ತರಕಾರಿ, ಬೆಲೆ ಏರಿಕೆಗಳ ಜೊತೆಗೇ ನೋಂದಣಿ ದರ ಹೆಚ್ಚಳ, ವಿದ್ಯುತ್ ಕಣ್ಣಾಮುಚ್ಚಾಲೆ ಮಾಡಿದ್ದಾರೆ. ರಾಜ್ಯದಲ್ಲಿ ಈಗ ವಿಧಾನಸಭಾ ಚುನಾವಣೆ ನಡೆದರೂ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ಲೋಕಸಭಾ ಚುನಾವಣೆಯು ಕರ್ನಾಟಕ ಸರ್ಕಾರಕ್ಕೆ ಪಾಠ ಕಲಿಸುವ ಚುನಾವಣೆ ಆಗಲಿದೆ ಎಂದು ಅವರು ವಿಶ್ಲೇಷಿಸಿದರು.
ಬರದ ದಾಹ, ನೀರಿನ ಬೇಗೆ ಎಲ್ಲ ಕಡೆಗಳಲ್ಲಿ ನಾವು ಕಾಣುತ್ತಿದ್ದೇವೆ. ಬೆಂಗಳೂರಿನ ಅನೇಕ ಕಡೆಗಳಲ್ಲಿ ಕುಡಿಯಲು ಕೂಡ ನೀರಿಲ್ಲದೆ ಜನರು ಟ್ಯಾಂಕರ್‌ಗಳ ಮೊರೆ ಹೋಗುತ್ತಿದ್ದಾರೆ. 500 ರೂಪಾಯಿಗೆ ಒಂದು ಟ್ಯಾಂಕರ್ ಸಿಗುತ್ತಿದ್ದ ಜಾಗದಲ್ಲಿ 2,500 ರೂಪಾಯಿಯಿಂದ 3 ಸಾವಿರ ರೂಪಾಯಿಗೆ ಒಂದು ಟ್ಯಾಂಕರ್ ನೀರು ಸಿಗುವಂತಾಗಿದೆ ಎಂದರು.
ಇದನ್ನೂ ಓದಿ | Pralhad Joshi: ಸಿದ್ದರಾಮಯ್ಯ ದೇವಸ್ಥಾನಗಳ ಹುಂಡಿಗೆ ಕನ್ನ ಹಾಕೋ ಕನ್ನರಾಮಯ್ಯ: ಪ್ರಲ್ಹಾದ್ ಜೋಶಿ ಕಿಡಿ
ಆದರೆ, ಸರ್ಕಾರ ಕಣ್ತರೆಯುತ್ತಿಲ್ಲ. ಬೋರ್‌ವೆಲ್ ಹಾಕಲು 1 ಸಾವಿರ ಅಡಿ, 1200ರಿಂದ 1500 ಅಡಿವರೆಗೆ ಕೊರೆದರೂ ನೀರು ಸಿಗುತ್ತಿಲ್ಲ. ಬೆಂಗಳೂರಿನಲ್ಲಿ ನೀರಿನ ಬವಣೆ ಪರಿಹರಿಸಲು ತಕ್ಷಣವೇ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ಸರ್ಕಾರವನ್ನು ಆಗ್ರಹಿಸಿದರು.