Site icon Vistara News

Modi v/s Rahul: ರಾಹುಲ್‌ ಗಾಂಧಿ ಆಸ್ತಿ ಪ್ರಧಾನಿ ಮೋದಿಗಿಂತ ಎಷ್ಟು ಪಟ್ಟು ಹೆಚ್ಚು ಗೊತ್ತೆ?

Modi v/s Rahul

ಪ್ರಧಾನಿ (Prime Minister) ನರೇಂದ್ರ ಮೋದಿ (narendra modi) ಸಾಮಾನ್ಯ ಕುಟುಂಬದಿಂದ ಬಂದವರು. ಇನ್ನು ಕಾಂಗ್ರೆಸ್ (congress) ನಾಯಕ ರಾಹುಲ್ ಗಾಂಧಿ (rahul gandhi) ಹುಟ್ಟಿದ್ದೇ ಶ್ರೀಮಂತ, ರಾಜಕಾರಣಿಗಳ ಕುಟುಂಬದಲ್ಲಿ. ಆದರೂ ಇವರಿಗೆ ರಾಜಕೀಯ ಜೀವನ ಮಾತ್ರ ಸುಲಭದ ಹಾದಿಯಾಗಲಿಲ್ಲ. “ಹಮ್ ತೋ ಫಕೀರ್ ಆದ್ಮಿ ಹೈಂ, ಜೊಲಾ ಲೇ ಕೆ ಚಲ್ ಪಡೆಂಗೆ” ಅಂದರೆ ನಾನೊಬ್ಬ ಸನ್ಯಾಸಿ, ಜೋಳಿಗೆ ಹಿಡಿದು ಹೊರಟುಬಿಡುತ್ತೇನೆ… ಹೀಗೆಂದು ಪ್ರಧಾನಿ ನರೇಂದ್ರ ಮೋದಿ ಅವರು 2016ರ ಡಿಸೆಂಬರ್ ನಲ್ಲಿ ಹೇಳಿದ್ದ ಘೋಷಣೆ ಆಗ ಜನಪ್ರಿಯವಾಗಿತ್ತು.

ಚಲಾವಣೆಯಲ್ಲಿರುವ 18 ಲಕ್ಷ ಕೋಟಿ ರೂಪಾಯಿ ಮೌಲ್ಯದ ಬ್ಯಾಂಕ್ ನೋಟುಗಳಲ್ಲಿ ಸುಮಾರು ಶೇ. 86ರಷ್ಟು ಅಮಾನ್ಯಗೊಳಿಸುವ ಸರ್ಕಾರದ ಕಠಿಣ ನಿರ್ಧಾರವನ್ನು ಆಗ ಅವರು ಸಮರ್ಥಿಸಿಕೊಂಡಿದ್ದರು. ಭ್ರಷ್ಟಾಚಾರದ ವಿರುದ್ಧದ ಇದು ಹೋರಾಟ ಎಂದು ಬಣ್ಣಿಸಿದರು. ಈ ನಿರ್ಧಾರದ ಬಗ್ಗೆ ಸಾಕಷ್ಟು ಟೀಕೆಗಳನ್ನು ಎದುರಿಸಿದರೂ ಅದೆಲ್ಲವನ್ನೂ ತಳ್ಳಿಹಾಕಿದರು. ಕಳೆದುಕೊಳ್ಳಲು ಏನೂ ಇಲ್ಲ ನನ್ನ ಬಳಿ ಎಂದು ಹೇಳಿದರು.

2014ರ ಚುನಾವಣೆ ಮುನ್ನ ಮೋದಿ ತಮ್ಮ ಅಫಿಡವಿಟ್‌ನಲ್ಲಿ 1.65 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಘೋಷಿಸಿದ್ದರು. ಕಳೆದ 10 ವರ್ಷಗಳಲ್ಲಿ ಅವರ ಆಸ್ತಿ 2014ರಲ್ಲಿ 1.65 ಕೋಟಿ ರೂಪಾಯಿ ಇದದ್ದು 2024ರಲ್ಲಿ 3.02 ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದೆ ಎಂದು ಉತ್ತರ ಪ್ರದೇಶದ ವಾರಣಾಸಿಯಿಂದ ನಾಮಪತ್ರ ಸಲ್ಲಿಸುವಾಗ ಪ್ರಧಾನಿ ಸಲ್ಲಿಸಿದ ಅಫಿಡವಿಟ್ ತೋರಿಸುತ್ತದೆ. 2019ರಲ್ಲಿ ಪ್ರಧಾನಿ ಮೋದಿಯವರ ಆಸ್ತಿ 2.51 ಕೋಟಿ ರೂ. ಆಗಿತ್ತು.


ನರೇಂದ್ರ ಮೋದಿಯವರ ಆಸ್ತಿ ಎಷ್ಟಿದೆ?

ಪ್ರಧಾನಿ ನರೇಂದ್ರ ಮೋದಿ ಅವರ ಅಫಿಡವಿಟ್ ಪ್ರಕಾರ, ಅವರು ಯಾವುದೇ ಸ್ಥಿರ ಆಸ್ತಿಯನ್ನು ಹೊಂದಿಲ್ಲ ಮತ್ತು ಅವರ ಹೆಸರಿನಲ್ಲಿ ಯಾವುದೇ ಆಸ್ತಿ ಅಥವಾ ವಾಹನಗಳು ನೋಂದಣಿಯಾಗಿಲ್ಲ. ಅವರ ಹೆಸರಿನಲ್ಲಿ ಪಟ್ಟಿ ಮಾಡಲಾದ ಆಸ್ತಿಗಳು ಬ್ಯಾಂಕ್ ಠೇವಣಿಗಳಲ್ಲಿ 2.86 ಕೋಟಿ ರೂ.ಗಳನ್ನು ಒಳಗೊಂಡಿವೆ. ಎಲ್ಲವೂ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿವೆ. ರಾಷ್ಟ್ರೀಯ ಉಳಿತಾಯ ಪ್ರಮಾಣ ಪತ್ರಗಳು 9 ಲಕ್ಷ ರೂಪಾಯಿ ಇದೆ. ಅವರು ಸುಮಾರು 2.7 ಲಕ್ಷ ಮೌಲ್ಯದ ನಾಲ್ಕು ಚಿನ್ನದ ಉಂಗುರಗಳನ್ನು ಹೊಂದಿದ್ದಾರೆ. ಷೇರು, ಮ್ಯೂಚುವಲ್ ಫಂಡ್‌ ಮತ್ತು ಬಾಂಡ್‌ಗಳಂತಹ ಸೆಕ್ಯೂರಿಟಿಗಳನ್ನು ಹೊಂದಿಲ್ಲ.

ಅವರ ಚರ ಆಸ್ತಿಗಳ ಅಡಿಯಲ್ಲಿ ಈ ಹಿಂದೆ ಪಟ್ಟಿ ಮಾಡಲಾದ 1.1 ಕೋಟಿ ಮೌಲ್ಯದ ವಸತಿ ಆಸ್ತಿಯು ಇನ್ನು ಮುಂದೆ ಅವರ 2024ರ ಅಫಿಡವಿಟ್‌ನ ಭಾಗವಾಗಿರುವುದಿಲ್ಲ. ಪ್ರಧಾನಮಂತ್ರಿಯವರ ಅಫಿಡವಿಟ್‌ನಲ್ಲಿ 52,920 ರೂಪಾಯಿ ನಗದು ಎಂದು ನಮೂದಿಸಲಾಗಿದೆ. ಅವರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 2.86 ಕೋಟಿ ರೂಪಾಯಿ ಮೌಲ್ಯದ ಎಫ್‌ಡಿಗಳನ್ನು ಹೊಂದಿದ್ದಾರೆ. ಅವರ ವಿರುದ್ಧ ಯಾವುದೇ ಸಾಲ ಅಥವಾ ಬಾಕಿ ಉಳಿದಿಲ್ಲ.
ಪ್ರಧಾನಿ ಮೋದಿ ಅವರು ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಸತತ ಮೂರನೇ ಬಾರಿಗೆ ಸ್ಪರ್ಧಿಸುತ್ತಿದ್ದಾರೆ. ಅವರು ಮೊದಲು 2014 ಮತ್ತು 2019ರ ಚುನಾವಣೆಯಲ್ಲಿ ಈ ಕ್ಷೇತ್ರದಿಂದ ಸ್ಪರ್ಧಿಸಿ ಸಂಸದರಾಗಿದ್ದಾರೆ.


ರಾಹುಲ್ ಗಾಂಧಿ ಮೋದಿಗಿಂತ ಆರು ಪಟ್ಟು ಹೆಚ್ಚು ಶ್ರೀಮಂತರು

ಕೇರಳದ ವಯನಾಡ್‌ನ ಹಾಲಿ ಸಂಸದರಾಗಿರುವ ಮತ್ತು ಈ ವರ್ಷದ ಆರಂಭದಲ್ಲಿ ಅವರ ತಾಯಿ ಸೋನಿಯಾ ಗಾಂಧಿ ಅವರಿಂದ ತೆರವಾದ ರಾಯ್‌ಬರೇಲಿಯಿಂದ ಕಣದಲ್ಲಿರುವ ಮಾಜಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರ ಆಸ್ತಿ ಪ್ರಧಾನಿ ಮೋದಿಗಿಂತ ಹೆಚ್ಚಿದೆ.

2014ರ ಚುನಾವಣೆಯಲ್ಲಿ ಕಾಂಗ್ರೆಸ್ ಸೋತ ಅನಂತರ ರಾಹುಲ್ ಅವರು ರಫೇಲ್ ಒಪ್ಪಂದದಲ್ಲಿನ ಅಕ್ರಮಗಳಿಂದ ಹಿಡಿದು ಚುನಾವಣಾ ಬಾಂಡ್‌ಗಳ ಮೂಲಕ ರಾಜಕೀಯ ದೇಣಿಗೆಯ ನೆಪದಲ್ಲಿ ತಮ್ಮ ಕೈಗಾರಿಕೋದ್ಯಮಿ “ಸ್ನೇಹಿತರಿಗೆ” ಕ್ವಿಡ್ ಪ್ರೋಕೋವರೆಗಿನ ಆರೋಪಗಳೊಂದಿಗೆ ಪ್ರಧಾನಿ ಮೋದಿ ವಿರುದ್ಧ ಆರೋಪವನ್ನು ಮುಂದುವರಿಸಿದ್ದಾರೆ. ಈ ವರ್ಷದ ಆರಂಭದಲ್ಲಿ ನ್ಯಾಯಾಲಯವು ಈ ಆರೋಪ ಕುರಿತು ಎಚ್ಚರಿಕೆ ನೀಡಿತ್ತು.

ವಯನಾಡ್ ಮತ್ತು ರಾಯ್‌ಬರೇಲಿ ಕ್ಷೇತ್ರಗಳಿಗೆ ನಾಮಪತ್ರ ಸಲ್ಲಿಸುವ ಮುನ್ನ ಸಲ್ಲಿಸಿದ ಅಫಿಡವಿಟ್‌ಗಳ ಪ್ರಕಾರ, ರಾಹುಲ್ ಅವರು 20.34 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾರೆ. ಇದು ಮೋದಿಯವರ ಆಸ್ತಿಯ ಆರು ಪಟ್ಟು ಹೆಚ್ಚು.
ಅವರ ಸ್ವಯಂ ಪ್ರಮಾಣಪತ್ರದ ಪ್ರಕಾರ, ರಾಹುಲ್ ಅವರು 9.24 ಕೋಟಿ ರೂ. ಮೌಲ್ಯದ ಚರ ಆಸ್ತಿಯನ್ನು ಹೊಂದಿದ್ದು, ಅವರ ಸ್ಥಿರ ಆಸ್ತಿ ಮೌಲ್ಯ 11.14 ಕೋಟಿ ರೂಪಾಯಿ. ರಾಹುಲ್ ಬಳಿ 4.3 ಕೋಟಿ ರೂಪಾಯಿ ಷೇರು ಮಾರುಕಟ್ಟೆ ಹೂಡಿಕೆ, 3.81 ಕೋಟಿ ರೂಪಾಯಿ ಮ್ಯೂಚುವಲ್ ಫಂಡ್ ಠೇವಣಿ, ಬ್ಯಾಂಕ್ ಖಾತೆಯಲ್ಲಿ 26.25 ಲಕ್ಷ ರೂಪಾಯಿ ಮತ್ತು ಚಿನ್ನದ ಬಾಂಡ್ 15.21 ಲಕ್ಷ ರೂಪಾಯಿ ಇದೆ. ರಾಹುಲ್ ಅವರ ಸ್ಥಿರಾಸ್ತಿಗಳಲ್ಲಿ ಅವರು 9.04 ಕೋಟಿ ರೂಪಾಯಿ ಮೌಲ್ಯದ ಮತ್ತು 2.10 ಕೋಟಿ ರೂಪಾಯಿ ಮೌಲ್ಯದ ಪಿತ್ರಾರ್ಜಿತ ಆಸ್ತಿಯನ್ನು ಹೊಂದಿದ್ದಾರೆ.

ಇದನ್ನೂ ಓದಿ: Lok Sabha Election 2024: ಬಿಜೆಪಿ 400+ ಸೀಟು ಗೆಲ್ಲುತ್ತಾ? ಸಟ್ಟಾ ಬಜಾರ್ ಲೇಟೆಸ್ಟ್ ಲೆಕ್ಕಾಚಾರ ಹೀಗಿದೆ

ಸ್ಥಿರ ಆಸ್ತಿಗಳಲ್ಲಿ ಹೊಸದಿಲ್ಲಿಯ ಮೆಹ್ರೌಲಿ ಗ್ರಾಮದ ಸುಲ್ತಾನ್‌ಪುರದಲ್ಲಿ ಸುಮಾರು 3.77 ಎಕರೆ ವಿಸ್ತೀರ್ಣದ ಕೃಷಿ ಭೂಮಿಯನ್ನು ಅವರು ತಮ್ಮ ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರೊಂದಿಗೆ ಜಂಟಿಯಾಗಿ ಹೊಂದಿದ್ದಾರೆ. 5,838 ಚದರ ಅಡಿ ಅಳತೆಯ ಗುರುಗ್ರಾಮ್‌ನ ಸಿಗ್ನೇಚರ್ ಟವರ್ಸ್‌ನಲ್ಲಿರುವ ವಾಣಿಜ್ಯ ಅಪಾರ್ಟ್‌ಮೆಂಟ್‌ಗಳು ಸೇರಿವೆ.

2022-23ರ ಹಣಕಾಸು ವರ್ಷದಲ್ಲಿ ಅವರ ಒಟ್ಟು ಆದಾಯ 1.02 ಕೋಟಿ ರೂಪಾಯಿಗಳಷ್ಟಿದ್ದರೆ; ಸಂಬಳ, ರಾಯಧನ, ಬಾಡಿಗೆ, ಬಾಂಡ್‌ಗಳಿಂದ ಬಡ್ಡಿ, ಲಾಭಾಂಶ ಮತ್ತು ಮ್ಯೂಚುವಲ್ ಫಂಡ್‌ಗಳಿಂದ ಬಂಡವಾಳ ಗಳಿಕೆ ಸೇರಿದಂತೆ ಮೂಲಗಳಿಂದ ರಾಹುಲ್ 55,000 ರೂಪಾಯಿ ನಗದು ಘೋಷಿಸಿದ್ದಾರೆ. ಅವರು 4.2 ಲಕ್ಷ ರೂಪಾಯಿ ಮೌಲ್ಯದ ಆಭರಣಗಳನ್ನು ಹೊಂದಿದ್ದಾರೆ ಮತ್ತು ಸುಮಾರು 49.7 ಲಕ್ಷ ರೂಪಾಯಿಗಳ ಸಾಲ ಹೊಂದಿದ್ದಾರೆ. ಅವರು ಯಾವುದೇ ವಸತಿ ಅಪಾರ್ಟ್ಮೆಂಟ್ ಹೊಂದಿಲ್ಲ.

Exit mobile version