ಬೆಂಗಳೂರು: ಕೇಂದ್ರ ಸರ್ಕಾದ ಬಜೆಟ್ (Budget 2023) ಸಹಕಾರ ಕ್ಷೇತ್ರದ ಬೆಳವಣಿಗೆಗೆ ಪೂರಕವಾಗಿದೆ ಎಂದು ಶ್ರೀ ತ್ಯಾಗರಾಜ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಡಾ. ಎಂ. ಆರ್. ವೆಂಕಟೇಶ್ ಪ್ರಶಂಸಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಎಂ.ಆರ್. ವೆಂಕಟೇಶ್, 7 ಲಕ್ಷ ರೂ.ವರೆಗೆ ಆದಾಯ ತೆರಿಗೆ ವಿನಾಯ್ತಿ ಘೋಷಿಸಿರುವುದು ಮದ್ಯಮ ಮತ್ತು ಕೆಳ ಮಧ್ಯಮ ವರ್ಗಕ್ಕೆ ಅನುಕೂಲವಾಗಿದೆ ಎಂದಿದ್ದಾರೆ.
ಪ್ರಾಥಮಿಕ ಸೊಸೈಟಿಗಳ ಬಹು ದಿನಗಳ ಬೇಡಿಕೆಯಂತೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸೊಸೈಟಿಗಳಲ್ಲಿ(PACS) ಯಾವುದೇ ವ್ಯಕ್ತಿ 2 ಲಕ್ಷ ರೂ.ವರಗೆ ನಗದು ಡೆಪಾಸಿಟ್ ಮಾಡಲು ಅವಕಾಶ ಕಲ್ಪಿಸುವ ನಿಯಮ ಪ್ರಾಥಮಿಕ ಸೊಸೈಟಿಗಳ ವಹಿವಾಟು ಹೆಚ್ಚಿಸಲು ಮತ್ತು ರೈತರ ದಿನ ನಿತ್ಯದ ವಹಿವಾಟಿಗೆ ಅನುಕೂಲವಾಗುತ್ತದೆ. ಈ ಕ್ರಮ PACS ಗಳ ಬಲವರ್ಧನೆಗೆ ಸಹಕಾರಿಯಾಗಲಿದೆ. ಮತ್ತು ಕೇಂದ್ರದ ಸಹಕಾರ ಸಚಿವರ ಆಶಯದಂತೆ ಪಂಚಾಯಿತಿಗೊಂದು PACS ಗಳ ಸ್ಥಾಪನೆಗೆ ಪೂರಕವಾಗಲಿದೆ.
ಕೋ-ಆಪರೇಟಿವ್ ಸೊಸೈಟಿಗಳ TDS ಮಿತಿಯನ್ನು 1 ಕೋಟಿ ರೂ.ನಿಂದ 3 ಕೋಟಿ ರೂ.ಗೆ ಹೆಚ್ಚಳ ಮಾಡಿರುವುದು ಸೊಸೈಟಿಗಳ ಆದಾಯವನ್ನು ಹೆಚ್ಚಿಸಲು ಮತ್ತು ವಹಿವಾಟು ಹೆಚ್ಚಳಕ್ಕೆ ಸಹಕಾರಿಯಾಗಿದೆ. MSME ವಲಯದ ಸಂಭಾವ್ಯ ತೆರಿಗೆ ಸೌಲಭ್ಯದ ಮಿತಿಯನ್ನು ವಾರ್ಷಿಕ 2 ಕೋಟಿ ರೂ.ನಿಂದ 3 ಕೋಟಿ ರೂ.ಗೆ ಮತ್ತು 50 ಲಕ್ಷ ರೂ.ನಿಂದ 75 ಲಕ್ಷ ರೂ.ವರೆಗೆ ಹೆಚ್ಚಳ ಮಾಡಿರುವುದು ಈ ವಲಯಕ್ಕೆ ಉತ್ತೇಜನ ನೀಡಿದಂತಾಗಿದೆ.
ಇದನ್ನೂ ಓದಿ : Union Budget 2023 ವಿಸ್ತಾರ ಸಮಗ್ರ : ಆರ್ಥಿಕ ಶಿಸ್ತಿಗಾಗಿ ರಕ್ಷಣಾತ್ಮಕ ಆಟ, ಆದಾಯ ತೆರಿಗೆಯ ಜೂಟಾಟ
2024ರ ಆರ್ಥಿಕ ಸಾಲಿನ ಒಳಗೆ 20 ಲಕ್ಷ ಕೋಟಿ ರೂ.ನಷ್ಟು ಕೃಷಿ ವಲಯದ ಸಾಲಕ್ಕೆ ಹಂಚಿಕೆ ಮಾಡಲು ನಿಗದಿ ಮಾಡಿ ಅದರಲ್ಲೂ ಪಶು ಸಂಗೋಪನೆ, ಹೈನುಗಾರಿಕೆ ಮತ್ತು ಮೀನುಗಾರಿಕೆ ವಲಯಕ್ಕೆ ಹೆಚ್ಚಿನ ಆದ್ಯತೆ ನೀಡಿರುವುದು ತುಂಬಾ ಉತ್ತೇಜನಕಾರಿ ಕ್ರಮ. ಒಟ್ಟಾರೆಯಾಗಿ ಕೇಂದ್ರದ ಈ ಬಜೆಟ್ ಎಲ್ಲಾ ವಲಯಗಳ ಬಲವರ್ಧನೆಗೆ ಉತ್ತೇಜನಕಾರಿಯಾಗಿದ್ದು, ದೇಶದ ಪ್ರಗತಿಗೆ ಸಹಕಾರಿಯಾಗಲಿದೆ ಎಂದಿದ್ದಾರೆ.