ಬೆಳಗಾವಿ: ವಾಯವ್ಯ ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿಯಲ್ಲಿ ಮನೆ ಮಾಡಿದ್ದ ಭಿನ್ನಮತ ಇದೀಗ ಬೆಳಗಾವಿಯ ಕಾಂಗ್ರೆಸ್‌ನಲ್ಲೂ ಕಾಣಿಸಿಕೊಂಡಿರುವಂತಿದೆ. ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ನೇತೃತ್ವದಲ್ಲಿ ಬಿಜೆಪಿ ನಾಯಕರ ಸಭೆ ಬೆನ್ನಲ್ಲೇ ಬೆಳಗಾವಿಯ ಖಾಸಗಿ ಹೋಟೆಲ್‌ನಲ್ಲಿ ಕಾಂಗ್ರೆಸ್ ಮಹತ್ವದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ಸಭೆ ನಡೆಯಿತು. ಆದರೆ ಸಭೆಗೆ ಜಿಲ್ಲೆಯ ಇಬ್ಬರು ಮಹಿಳಾ ಶಾಸಕರು ಗೈರಾಗಿದ್ದಾರೆ.
ಶಾಸಕಿಯರಾದ ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ಅಂಜಲಿ ನಿಂಬಾಳ್ಕರ್ ಗೈರಾಗಿದ್ದು, ಎಂಎಲ್‌ಸಿ ಚನ್ನರಾಜ ಹಟ್ಟಿಹೊಳಿ ಕೂಡ ಸಭೆಯಲ್ಲಿ ಇರಲಿಲ್ಲ. ವಾಯವ್ಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ್ ಹುಕ್ಕೇರಿ, ಪದವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸುನಿಲ್ ಸಂಕ್, ಶಾಸಕರಾದ ಗಣೇಶ್ ಹುಕ್ಕೇರಿ, ಮಹಾಂತೇಶ ಕೌಜಲಗಿ ಸೇರಿ ಹಲವರು ಭಾಗಿಯಾಗಿದ್ದಾರೆ.
ಇದನ್ನೂ ಓದಿ | ಬೆಳಗಾವಿ ಜಿಲ್ಲಾ ಬಿಜೆಪಿಯಲ್ಲಿ ಭಿನ್ನಮತವೇ ಇಲ್ಲ ಎಂದ ಪ್ರಲ್ಹಾದ ಜೋಶಿ
ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಕ್ಷೇತ್ರದಲ್ಲಿ ಪ್ರಚಾರ ಮಾಡುತ್ತಿರುವುದಕ್ಕೆ ಸಭೆಗೆ ಬರಲಾಗಿಲ್ಲ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ ಮೃಣಾಲ್ ಹೆಬ್ಬಾಳ್ಕರ್ ತಿಳಿಸಿದ್ದಾರೆ. ಶಾಸಕಿ ಅಂಜಲಿ ನಿಂಬಾಳ್ಕರ್, ಎಂಎಲ್‌ಸಿ ಚನ್ನರಾಜ ಹಟ್ಟಿಹೊಳಿ ಬೆಂಗಳೂರಿನಲ್ಲಿ ಇರುವುದಾಗಿ ಮಾಹಿತಿ ನೀಡಿದ್ದಾರೆ. ಇದೀಗ ಕಾಂಗ್ರೆಸ್‌ನಲ್ಲಿಯೂ ಭಿನ್ನಮತ ಕಾಣಿಸಿಕೊಂಡರೆ ಅದನ್ನು ಸರಿಪಡಿಸುವ ಕುರಿತು ನಾಯಕರು ಚಿಂತನೆ ನಡೆಸಬೇಕಿದೆ. ಚುನಾವಣೆ ಇನ್ನೇನು ಹತ್ತಿರವಾಗುತ್ತಿರುವಂತೆಯೇ ಎರಡೂ ರಾಷ್ಟ್ರೀಯ ಪಕ್ಷಗಳಲ್ಲಿರುವ ಭಿನ್ನಮತ ಕುತೂಹಲ ಕೆರಳಿಸಿದೆ.
ಅರುಣ್ ಶಹಾಪುರ ನಾಮಪತ್ರ
ವಾಯವ್ಯ ಶಿಕ್ಷಕರ ಮತಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ಅರುಣ ಶಹಾಪುರ ಉಮೇದುವಾರಿಕೆ ಸಲ್ಲಿಕೆ ಮಾಡಿದ್ದಾರೆ. ಬೆಳಗಾವಿ ಡಿಸಿ ಕಚೇರಿಯಲ್ಲಿ ಚುನಾವಣಾಧಿಕಾರಿ, ಡಿಸಿ ನಿತೇಶ ಪಾಟೀಲ್‌ಗೆ ನಾಮಪತ್ರ ಸಲ್ಲಿಸಿದರು. ಬಿಜೆಪಿಯಿಂದ ಮೂರನೇ ಬಾರಿಗೆ ಆಯ್ಕೆ ಬಯಸಿರುವ ಅರುಣ್ ಶಹಾಪುರ ಅವರಿಗೆ ಸಂಸದೆ ಮಂಗಳಾ ಅಂಗಡಿ, ಶಾಸಕ ಆನಂದ ಮಾಮನಿ, ಮಾಜಿ ಶಾಸಕ ವಿಶ್ವನಾಥ ಪಾಟೀಲ್ ಸಾಥ್ ನೀಡಿದರು. ಮೇ 26ರಂದು ಮಾಜಿ ಸಿಎಂ ಬಿ ಎಸ್ ವೈ ನೇತೃತ್ವದಲ್ಲಿ ಮತ್ತೊಮ್ಮೆ ನಾಮಪತ್ರ ಸಲ್ಲಿಸಲಿದ್ದಾರೆ.
ಇದನ್ನೂ ಓದಿ | ವಾಯವ್ಯ ಪದವೀಧರ, ಶಿಕ್ಷಕರ ಕ್ಷೇತ್ರಕ್ಕೆ ‘ಕೈ’ ರಣತಂತ್ರ: ಇಂದು ಸಭೆ