Site icon Vistara News

Parliament Session: ವಿನೇಶ್‌ ಫೋಗಟ್‌ ಅನರ್ಹತೆಯ ವಿಚಾರ ಚರ್ಚೆಗೆ ಆಗ್ರಹಿಸಿ ರಾಜ್ಯಸಭೆಯಲ್ಲಿ ಪ್ರತಿಪಕ್ಷಗಳ ಗದ್ದಲ, ಸಭಾತ್ಯಾಗ

Parliament Session

ನವದೆಹಲಿ: ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ (Paris Olympics) ವಿನೇಶ್‌ ಫೋಗಟ್‌ (Vinesh Phogat) ಅವರಿಗೆ ಮಾತ್ರವಲ್ಲ ಇಡೀ ಭಾರತೀಯರಿಗೆ ಆಘಾತವಾಗಿದೆ. ಕುಸ್ತಿಯಲ್ಲಿ ಫೈನಲ್‌ ತಲುಪಿ ಇತಿಹಾಸ ಸೃಷ್ಟಿಸಿದ್ದ ಅವರು ಇನ್ನೇನು ಚಿನ್ನದ ಪದಕಕ್ಕಾಗಿ ಕಾದಾಡಬೇಕು ಎನ್ನುವರಷ್ಟರಲ್ಲಿಯೇ ದೇಹದ ತೂಕ 100 ಗ್ರಾಂ ಹೆಚ್ಚಾದ ಹಿನ್ನೆಲೆಯಲ್ಲಿ ಅನರ್ಹಗೊಂಡಿರುವುದು ಕೋಟ್ಯಂತರ ಭಾರತೀಯರ ಕನಸನ್ನು ನುಚ್ಚು ನೂರಾಗಿಸಿದೆ. ಈ ವಿಚಾರ ಸಂಸತ್ತಿನ ಅಧಿವೇಶನದಲ್ಲಿಯೂ ಪ್ರತಿಧ್ವನಿಸಿದೆ. ವಿನೇಶ್‌ ಫೋಗಟ್‌ ಅವರ ಅನರ್ಹತೆಯ ವಿಚಾರ ಚರ್ಚಿಸಲು ಅವಕಾಶ ನೀಡಲಿಲ್ಲ ಎನ್ನುವ ಕಾರಣಕ್ಕೆ ಪ್ರತಿಪಕ್ಷಗಳ ಇಂಡಿ ಒಕ್ಕೂಟದ ಸದಸ್ಯರು ರಾಜ್ಯಸಭೆಯಿಂದ ಹೊರ ನಡೆದರು (Parliament Session).

ಪಟ್ಟಿ ಮಾಡಲಾದ ದಾಖಲೆಗಳನ್ನು ಸದನದಲ್ಲಿ ಮಂಡಿಸಿದ ಕೂಡಲೇ ಪ್ರತಿಪಕ್ಷದ ನಾಯಕ ಮತ್ತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಎದ್ದು ನಿಂತು ಅನರ್ಹತೆಯ ವಿಷಯವನ್ನು ಪ್ರಸ್ತಾವಿಸಿದರು. ಇದರ ಹಿಂದೆ ಯಾರು ಇದ್ದಾರೆ ಎಂದು ಪ್ರಶ್ನಿಸಿದರು. ಆದರೆ ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನ್ಕರ್ ಅವರು ಖರ್ಗೆ ಅವರಿಗೆ ಈ ವಿಷಯ ಎತ್ತಲು ಅವಕಾಶ ನೀಡಲಿಲ್ಲ. ಬಳಿಕ ತೃಣಮೂಲ ಕಾಂಗ್ರೆಸ್ ಸಂಸದ ಡೆರೆಕ್ ಒ’ಬ್ರಿಯಾನ್ ಕೂಡ ಪ್ರಶ್ನೆಗಳನ್ನು ಕೇಳಲು ಮುಂದಾದರು. ಅವರಿಗೂ ಅವಕಾಶ ದೊರೆಯಲಿಲ್ಲ. ಇದಕ್ಕೆ ಡೆರೆಕ್ ಒ’ಬ್ರಿಯಾನ್ ಅಸಮಾಧಾನ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಗದೀಪ್ ಧನ್ಕರ್ ಅವರು, “ನೀವು ಸಭಾಧ್ಯಕ್ಷರ ಮೇಲೆ ಕೂಗುತ್ತಿದ್ದೀರಿ. ನಿಮ್ಮ ಈ ನಡವಳಿಕೆ ಸರಿಯಲ್ಲ. ನಿಮ್ಮ ಕ್ರಮವನ್ನು ನಾನು ಖಂಡಿಸುತ್ತೇನೆ. ಈ ವರ್ತನೆ ಪುನರಾವರ್ತಿಸಿದರೆ ಮುಂದಿನ ಬಾರಿ ಸದನದಿಂದ ಹೊರಗೆ ಕಳುಹಿಸಬೇಕಾಗುತ್ತದೆʼʼ ಎಂದು ಎಚ್ಚರಿಕೆ ನೀಡಿದರು. ಇದರಿಂದ ಸದನದಲ್ಲಿ ಕೋಲಾಹಲ ಮೂಡಿ ಪ್ರತಿಪಕ್ಷಗಳ ಸದಸ್ಯರು ಸಭಾತ್ಯಾಗ ಮಾಡಿದರು.

ʼʼವಿನೇಶ್ ಫೋಗಟ್ ಅವರ ಅನರ್ಹತೆಯಿಂದ ಇಡೀ ದೇಶಕ್ಕೆ ನೋವಾಗಿದೆ. ಆದರೆ ಪ್ರತಿಪಕ್ಷಗಳ ನಾಯಕರು ತಮಗೆ ಮಾತ್ರ ನೋವಾಗಿದೆ ಎನ್ನುವಂತೆ ವರ್ತಿಸುತ್ತಿದ್ದಾರೆ. ಆದರೆ ಈ ವಿಚಾರವನ್ನು ರಾಜಕೀಯಗೊಳಿಸುವುದು ಫೋಗಟ್ ಅವರಿಗೆ ಮಾಡಿದ ದೊಡ್ಡ ಅಗೌರವ” ಎಂದು ಜಗದೀಪ್ ಧನ್ಕರ್ ಹೇಳಿದರು. “ಹರಿಯಾಣ ಸರ್ಕಾರವು ತಕ್ಷಣವೇ ಫೋಗಟ್ ಅವರಿಗೆ ಎಲ್ಲ ರೀತಿಯ ಆರ್ಥಿಕ ಸಹಾಯ ನೀಡುವುದಾಗಿ ಘೋಷಿಸಿದ್ದು ಉತ್ತಮ ಕಾರ್ಯʼʼ ಎಂದು ಅವರು ಮೆಚ್ಚುಗೆ ಸೂಚಿಸಿದರು.

ಪ್ರತಿಪಕ್ಷಗಳು ಹೇಳಿದ್ದೇನು?

“ವಿನೇಶ್ ಫೋಗಟ್ ಅವರ ಅನರ್ಹತೆಯ ಬಗ್ಗೆ ಚರ್ಚೆ ನಡೆಸಲು ನಾವು ಸಮಯ ಕೇಳಿದ್ದೆವು. ಆದರೆ ಸರ್ಕಾರ ಸಿದ್ಧವಾಗಿಲ್ಲ” ಎಂದು ಕಾಂಗ್ರೆಸ್ ಸಂಸದ ಪ್ರಮೋದ್ ತಿವಾರಿ ಸಂಸತ್ತಿನ ಹೊರಗೆ ಸುದ್ದಿಗಾರರಿಗೆ ತಿಳಿಸಿದರು. ಜತೆಗೆ ಅವರು ಇಂದು ಕುಸ್ತಿಯಿಂದ ನಿವೃತ್ತಿ ಘೋಷಿಸಿದ ಫೋಗಟ್ ಭರವಸೆಯನ್ನು ಕಳೆದುಕೊಳ್ಳಬಾರದು ಎಂದರು. ಇಡೀ ದೇಶವು ಫೋಗಟ್ ಅವರನ್ನು ಬೆಂಬಲಿಸುತ್ತಿದೆ ಎಂದು ಹೇಳಿದರು.

ಇದನ್ನೂ ಓದಿ: Parliament Session: ಇಂದು ವಕ್ಫ್ ಮಸೂದೆ ಮಂಡನೆ: ಸಂಸತ್ತಿನಲ್ಲಿ ಕೋಲಾಹಲ ಸಾಧ್ಯತೆ; ಅಧಿವೇಶನವನ್ನು Live ಆಗಿ ನೋಡಿ

ವಿನೇಶ್​ಗೆ 1.5 ಕೋಟಿ ರೂ. ಘೋಷಣೆ

ವಿನೇಶ್‌ ಫೋಗಟ್‌ ಅವರಿಗೆ ಹರಿಯಾಣ ಸರ್ಕಾರ ವಿಶೇಷ ಗೌರವ ಸೂಚಿಸಲು ನಿರ್ಧರಿಸಿದೆ. ಅವರ ಸಾಧನೆಯನ್ನು ಪರಿಗಣಿಸಿ 1.5 ಕೋಟಿ ರೂ. ನಗುದು ಬಹುಮಾನ ನೀಡುವುದಾಗಿ ಮುಖ್ಯಮಂತ್ರಿ ನಯಾಬ್‌ ಸಿಂಗ್‌ ಸೈನಿ ಘೋಷಿಸಿದ್ದಾರೆ.

Exit mobile version