ಬೆಂಗಳೂರು: ಪೆಟ್ರೋಲ್, ಡೀಸೆಲ್ ದರ ಹೆಚ್ಚಳ (Petrol Diesel Price) ಖಂಡಿಸಿ ಜೂನ್ 17ರಂದು ಬೆಂಗಳೂರು ಸೇರಿ ರಾಜ್ಯಾದ್ಯಂತ ಪ್ರತಿಭಟನೆ (BJP Protest) ನಡೆಸಲು ಬಿಜೆಪಿ ತೀರ್ಮಾನಿಸಿದೆ. ನಗರದ ಫ್ರೀಡಂ ಪಾರ್ಕ್‌ನಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಪಕ್ಷ ನಾಯಕ ಆರ್. ಅಶೋಕ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಲಿದೆ.
ಕಾಂಗ್ರೆಸ್ ಸರ್ಕಾರ ಜನವಿರೋಧಿ ನೀತಿಗಳನ್ನು ಜಾರಿ ಮಾಡುತ್ತಿದೆ ಎಂದು ಬಿಜೆಪಿ ಆರೋಪಿಸುತ್ತಿತ್ತು. ಆದರೆ, ಇದೀಗ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ (Petrol, Diesel Price Hike) ಮೂಲಕ ವಿಪಕ್ಷಗಳ ಕೈಗೆ ರಾಜ್ಯ ಸರ್ಕಾರ ಅಸ್ತ್ರ ಕೊಟ್ಟಿದೆ. ರಾಜ್ಯದಲ್ಲಿ ಬೆಲೆ ಏರಿಕೆಯನ್ನು ಅಸ್ತ್ರ ಮಾಡಿಕೊಂಡು ಅಧಿಕಾರಕ್ಕೆ ಬಂದ ಕೈ ಸರ್ಕಾರಕ್ಕೆ ಈಗ ಬೆಲೆ ಏರಿಕೆಯೇ ಸಂಕಷ್ಟ ತಂದಿದೆ.
ಪೆಟ್ರೋಲ್ ಬೆಲೆ 3 ರೂಪಾಯಿ, ಡೀಸೆಲ್ ಬೆಲೆ ಮೂರೂವರೆ ರೂಪಾಯಿ ಏರಿಕೆ ಮಾಡಿರುವುದಕ್ಕೆ ಆಕ್ರೋಶ ಹೊರಹಾಕಿರುವ ಬಿಜೆಪಿ ನಾಯಕರು, ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆಗೆ ಕರೆ ನೀಡಿದ್ದಾರೆ. ಬೆಲೆ ಏರಿಕೆಯನ್ನು ಸದನದ ಒಳಗೂ ಮತ್ತು ಹೊರಗೆ ಸರ್ಕಾರದ ವಿರುದ್ಧ ಪ್ರಮುಖ ಅಸ್ತ್ರ ಮಾಡಿಕೊಳ್ಳಲು ಬಿಜೆಪಿ ಮುಂದಾಗಿದ್ದು, ಹೋರಾಟದ ಮೂಲಕ ಸರ್ಕಾರದ ವಿರುದ್ಧ ಜನಾಭಿಪ್ರಾಯ ಮೂಡಿಸಲು ಪ್ಲ್ಯಾನ್ ಮಾಡಿದೆ.
ಇದನ್ನೂ ಓದಿ | Petrol Diesel Price: ಪೆಟ್ರೋಲ್ ದರ ಹೆಚ್ಚಳ ಆದೇಶ ವಾಪಸ್ ಪಡೆಯದಿದ್ದರೆ ಉಗ್ರ ಪ್ರತಿಭಟನೆ: ವಿಜಯೇಂದ್ರ ಎಚ್ಚರಿಕೆ
ಕಾಂಗ್ರೆಸ್ ಸರ್ಕಾರ ಬೆಲೆ ಏರಿಕೆ ಭಾಗ್ಯ ನೀಡಿದೆ: ಅಶೋಕ್
ಬೆಲೆ ಏರಿಕೆ ಖಂಡಿಸಿ ವಿಪಕ್ಷ ನಾಯಕ ಆರ್.ಅಶೋಕ್ ಅವರು ಭಾನುವಾರ ಸುದ್ದಿಗೋಷ್ಠಿ ನಡೆಸಿದರು. ಪೆಟ್ರೋಲ್ ದರ ಹೆಚ್ಚಳವಾದಾಗ ಕಾಂಗ್ರೆಸ್‌ನಿಂದ ಪ್ರತಿಭಟನೆ ಮಾಡಲಾಗಿತ್ತು ಎಂದು ಹೇಳಿದ ಅವರು, ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅವರು ಬೈಕ್ ಶವಯಾತ್ರೆ ಮಾಡಿದ್ದ ಫೋಟೊ ರಿಲೀಸ್ ಮಾಡಿದರು. ಇದೇ ವೇಳೆ ಸಿದ್ದರಾಮಯ್ಯ ಟ್ವೀಟ್ ಅನ್ನು ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಬಿಡುಗಡೆ ಮಾಡಿದರು.
ನಾವು ಅಧಿಕಾರಕ್ಕೆ ಬಂದರೆ ಗೊಬ್ಬರ ಬೆಲೆ, ಗ್ಯಾಸ್, ಪೆಟ್ರೋಲ್, ಡೀಸೆಲ್ ಬೆಲೆ ಕಡಿಮೆ ಮಾಡುವುದಾಗಿ ಹೇಳಿದ್ದ ಸಿದ್ದರಾಮಯ್ಯ ಅವರ ವೀಡಿಯೊವನ್ನು ಬಿಡುಗಡೆ ಮಾಡಿ ಕಿಡಿ ಕಾರಿದ ಅಶೋಕ್ ಅವರು, ಕಾಂಗ್ರೆಸ್ ಸರ್ಕಾರ ಬಂದ ಒಂದು ವರ್ಷದಲ್ಲಿ ಎಲ್ಲಾ ಬೆಲೆ ಏರಿಕೆ ಭಾಗ್ಯ ನೀಡಿದೆ. ಹಾಲು, ಆಲ್ಕೋಹಾಲ್, ಸ್ಟ್ಯಾಂಪ್ ಡ್ಯೂಟಿ, ಗೈಡೆನ್ಸ್ ವ್ಯಾಲ್ಯೂ, ಆಸ್ತಿ ತೆರಿಗೆ, ಎಲೆಕ್ಟ್ರಿಕ್ ಬಿಲ್ ಜಾಸ್ತಿ ಮಾಡಿದ್ದಾರೆ. ವರ್ಷಕ್ಕೆ ಮೂರು ಸಾವಿರ ಕೋಟಿ ಹೆಚ್ಚುವರಿ ತೆರಿಗೆ ಸಂಗ್ರಹಕ್ಕೆ ರಾಜ್ಯಾ ಸರ್ಕಾರ ದರೋಡೆಗೆ ಮುಂದಾಗಿದೆ. ಬಿಜೆಪಿ ಅವಧಿಯಲ್ಲಿ ಒಂದು ರೂಪಾಯಿ ದರ ಹೆಚ್ಚಳ ಆಗಿದ್ದಕ್ಕೆ ಬೈಕ್ ಶವಯಾತ್ರೆ ಮಾಡಿದ್ದರು. ಈಗ ದರ ಹೆಚ್ಚಳ ಮಾಡಿರುವ ಸಿದ್ದರಾಮಯ್ಯ ಅವರೇ ನಿಮಗೆ ಮಾನ ಮರ್ಯಾದೆ ಇದೆಯಾ ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯ ದ್ವೇಷ ರಾಜಕಾರಣ ಮಾಡುತ್ತಿದ್ದಾರೆ. ಮತದಾರ ಪ್ರಭುಗಳು ಮತದಾನ ಮಾಡಿಲ್ಲ ಅಂತ ದ್ವೇಷ ಮಾಡುತ್ತಿದ್ದಾರೆ. ಈ ಹಿಂದೆ ನಮ್ಮ ಸರ್ಕಾರ ದರ ಹೆಚ್ಚಳ ಆದಾಗ ತೆರಿಗೆ ಕಡಿಮೆ ಮಾಡಿತ್ತು. ನೀವೂ ಕೂಡ ದರ ಕಡಿಮೆ ಮಾಡಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ | Mallikarjun Kharge: ಶೀಘ್ರವೇ ಮೋದಿ ಸರ್ಕಾರ ಪತನ; ಭವಿಷ್ಯ ನುಡಿದ ಮಲ್ಲಿಕಾರ್ಜುನ ಖರ್ಗೆ
ಕರ್ನಾಟಕದ ಆರ್ಥಿಕ ಪರಿಸ್ಥಿತಿ ಪಾತಾಳಕ್ಕೆ ಹೋಗಿದೆ. ಬಿಡಿಎ ಕಮರ್ಷಿಯಲ್ ಕಾಂಪ್ಲೆಕ್ಸ್ ಮೂಲಕ ಆದಾಯ ಬರಲು ಕಾಂಪ್ಲೆಕ್ಸ್ ಕಟ್ಟಿದರು. ಅದನ್ನೂ ಮಾರಾಟ ಮಾಡಲು ಹೊರಟಿದ್ದಾರೆ. ಕಮುಷನ್ ಹೊಡೆಯಲು ದುಡ್ಡಿಲ್ಲ. ಬಿಬಿಎಂಪಿಗೆ ನಾಲ್ಕು ಸಾವಿರ ಕೋಟಿ ಸಾಲ ಮಾಡುತ್ತಿದ್ದಾರೆ. ಕಾರ್ಪೊರೇಷನ್ ಬಿಲ್ಡಿಂಗ್, ಯುಟಿಲಿಟಿ ಬಿಲ್ಡಿಂಗ್, ವಾರ್ಡ್ ಆಫಿಸ್ ಅಡ ಇಡಲು ನೀಲಿ ನಕ್ಷೆ ತಯಾರು ಮಾಡುತ್ತಿದ್ದಾರೆ. ವರ್ಲ್ಡ್ ಬ್ಯಾಂಕ್ ಅಥವಾ ನ್ಯಾಷನಲ್ ಬ್ಯಾಂಕಿಗೆ ಅಡ ಇಡಲು ಮುಂದಾಗಿದ್ದಾರೆ ಎಂದು ಆರೋಪಿಸಿದರು.