ಬೆಂಗಳೂರು: ರಾಜ್ಯದ ರಾಜಕಾರಣಕ್ಕೆ ನಿರ್ಮಾಪಕ ಕೆ ಮಂಜು (K. Manju) ಎಂಟ್ರಿ ಕೊಡಲು ಸಜ್ಜಾಗಿದ್ದಾರೆ. ಪದ್ಮನಾಭ ನಗರ ವಿಧಾನಸಭಾ ಕ್ಷೇತ್ರದಿಂದ ಅಭ್ಯರ್ಥಿಯಾಗುವ ಬಗ್ಗೆ ಇದೀಗ ನಿರ್ಮಾಪಕ ಕೆ.ಮಂಜು ಮಾತನಾಡಿದ್ದಾರೆ. ಪದ್ಮನಾಭ ನಗರ (Padmanabha Nagar) ವಿಧಾನಸಭಾ ಕ್ಷೇತ್ರದಿಂದ ಅವರು ಸ್ಪರ್ಧಿಸುವ ಸಾಧ್ಯತೆ ಇದೆ. ಈ ಬಗ್ಗೆ ಅವರು ಶೀಘ್ರದಲ್ಲೇ ಅಧಿಕೃತವಾಗಿ ಘೋಷಣೆ ಮಾಡಲಿದ್ದಾರೆ.
ರಾಜಕೀಯಕ್ಕೆ ಬರುತ್ತಿರುವ ಬಗ್ಗೆ ಕೆ.ಮಂಜು ಮಾತನಾಡಿ ʻʻರಾಜ್ಯ ರಾಜಕಾರಣ ನೋಡಿಕೊಂಡು ಬಂದಿದ್ದೇನೆ. ನನಗೆ ಜನಸೇವೆ ಮಾಡುವುದಕ್ಕೆ ಒಂದು ಅವಕಾಶ ಕೊಡಿ. ಪಕ್ಷದ ಬಗ್ಗೆ ನಾಯಕ ತೀರ್ಮಾನ ಮಾಡಿಕೊಂಡು, ಅವರ ಸಲಹೆ ಸೂಚನೆ ಮೇರೆಗೆ ಅನೌನ್ಸ್ ಮಾಡುತ್ತೇನೆ. ಒಕ್ಕಲಿಗ ಜನಾಂಗದಲ್ಲಿ ಜನರ ಸೇವೆ ಮಾಡಲು ಅವಕಾಶ ಕೊಡಬೇಕು. ಟಿಕೆಟ್ ತೆಗೆದುಕೊಳ್ಳುವುದು ಮುಖ್ಯವಲ್ಲ ಜನರ ಆಶೀರ್ವಾದ ನನ್ನ ಮೇಲೆ ಇರಬೇಕು. ಜೆಡಿಎಸ್ ಅಥವಾ ಕಾಂಗ್ರೆಸ್ ಪಕ್ಷಗಳಲ್ಲಿ ಯಾವುದಾದರೂ ಒಂದು ಪಕ್ಷದಲ್ಲಿ ನಿಂತು ಸ್ಪರ್ಧಿಸ್ತೇನೆ. ಜೆಡಿಎಸ್, ಕಾಂಗ್ರೆಸ್ ಎರಡು ಪಕ್ಷಗಳಲ್ಲಿ ಒಂದು ಪಕ್ಷ ನನ್ನ ಕೈ ಹಿಡಿಯುತ್ತದೆ. ಪದ್ಮನಾಭನಗರ ನಾಯಕರ ಜತೆ ಸಂಪರ್ಕದಲ್ಲಿ ಇದ್ದೀನೆʼʼಎಂದು ಹೇಳಿದರು.
ಇದನ್ನೂ ಓದಿ: JDS Hassan: ಹಾಸನ ವಿಧಾನಸಭಾ ಕ್ಷೇತ್ರ ಟಿಕೆಟ್: ಭವಾನಿ-ಸ್ವರೂಪ್ ವಿವಾದದ ನಡುವೆ ಕೆ.ಎಂ. ರಾಜೇಗೌಡ ಅಭ್ಯರ್ಥಿ?
ಬಿಜೆಪಿಯ ಆರ್. ಅಶೋಕ್ ಅವರ ಪ್ರಾಬಲ್ಯ ಇರುವಂತಹ ಕ್ಷೇತ್ರ ಇದಾಗಿದ್ದು, ಒಂದು ವೇಳೆ ಕೆ. ಮಂಜು ಅವರು ಪದ್ಮನಾಭ ನಗರದಿಂದ ಚುನಾವಣೆಗೆ ಸ್ಪರ್ಧಿಸಿದ್ದೇ ಆದರೆ ಪೈಫೋಟಿ ಬಲವಾಗಲಿದೆ. ಅಶೋಕ್ ವಿರುದ್ಧ ಕಾಂಗ್ರೆಸ್ನಿಂದ ಪಿಜಿಆರ್ ಸಿಂಧ್ಯಾ ಅವರು ಸ್ಪರ್ಧಿಸುವ ಸಾಧ್ಯತೆ ದಟ್ಟವಾಗಿದೆ. ಜೆಡಿಎಸ್ನಿಂದ ಕೆ. ಮಂಜು ಸ್ಪರ್ಧಿಸಿದರೆ ಮೂರೂ ಪಕ್ಷಗಳ ನಡುವೆ ಹಣಾಹಣಿ ಜೋರಾಗಲಿದೆ. ರಾಜಕೀಯ ಅಖಾಡಟಕ್ಕೆ ಕೆ. ಮಂಜು ಬರಲಿದ್ದಾರಾ ಎಂಬುದು ಕಾದು ನೋಡಬೇಕಿದೆ.