ಬೆಂಗಳೂರು: ಕಾಂಗ್ರೆಸ್ ಪಕ್ಷದ ವರ್ತನೆಯಿಂದ ಬೇಸತ್ತು ಇಂಡಿ ಒಕ್ಕೂಟದ ಪಕ್ಷಗಳು ದೂರವಾಗುತ್ತಿದ್ದು, ಮಮತಾ ಬ್ಯಾನರ್ಜಿ ಹೊರಗೆ ಹೋಗಿದ್ದು, ಶರತ್ ಪವಾರ್, ನಿತೀಶ್ ಕುಮಾರ್ ಕೂಡ ಒಂದು ಹೆಜ್ಜೆ ಹೊರಗಿಟ್ಟಿದ್ದಾರೆ. ಹೀಗಾಗಿ ಕಾಂಗ್ರೆಸ್‌ನವರ ಇಂಡಿಯಾ (I.N.D.I.A Alliance) ಒಕ್ಕೂಟ ಛಿದ್ರವಾಗಲಿದೆ. ಅಲ್ಲದೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು (Rahul Gandhi) ಭಕ್ತಿಯ ಕನ್ನಡಕದಿಂದ ನೋಡಿದರೆ ಎಲ್ಲೆಡೆಯೂ ರಾಮ (Lord Rama) ಕಾಣಿಸುತ್ತಾನೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಬಸವರಾಜ ಬೊಮ್ಮಾಯಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮೈತ್ರಿಯಿಂದ ಹೊರಗೆ ಬಂದಿದ್ದಾರೆ. ಶರತ್ ಪವಾರ್ ಕೂಡ ಹೊರ ಬರಲಿದ್ದಾರೆ. ಬಿಹಾರ ಸಿಎಂ ನಿತೀಶ್ ಕುಮಾರ್ ಕೂಡ ಒಂದು ಹೆಜ್ಜೆಯನ್ನು ಹೊರಗೆ ಇಟ್ಟಿದ್ದಾರೆ. ಇಂಡಿ ಒಕ್ಕೂಟ ಮುಂದಿನ ದಿನಗಳಲ್ಲಿ ಉಳಿಯುವುದಿಲ್ಲ. ಕಾಂಗ್ರೆಸ್‌ನವರ ಕಾಟದಿಂದ ಅವರು ಹೊರಗೆ ಬರುತ್ತಿದ್ದಾರೆ. ನರೇಂದ್ರ ಮೋದಿಯವರು 3ನೇ ಬಾರಿಗೆ ಪ್ರಧಾನಿಯಾದ ಮೇಲೆ ಈ ಒಕ್ಕೂಟ ಇರುವುದಿಲ್ಲ. ಮಮತಾ ಬ್ಯಾನರ್ಜಿಯವರಿಗೆ ಭ್ರಮನಿರಸನ ಆಗಿದೆ ಎಂದು ಹೇಳಿದರು.
ಹೈಕಮಾಂಡ್ ನಿರ್ಧಾರಕ್ಕೆ ಬದ್ಧ
ಇದೇ ವೇಳೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರನ್ನು ಬಿಜೆಪಿಗೆ ಕರೆ ತರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಬಸವರಾಜ ಬೊಮ್ಮಾಯಿ, ಜಗದೀಶ್ ಶೆಟ್ಟರ್ ಅವರು ಜನಸಂಘದಿಂದ ಇದ್ದವರು, ಅವರಿಗೆ ಕಾಂಗ್ರೆಸ್‌ನಲ್ಲಿ ಇರಲು ಕಷ್ಟವಾಗಲಿದೆ. ಅವರನ್ನು ಪಕ್ಷಕ್ಕೆ ಕರೆತರಲು ಯಾರ ಮೂಲಕ ಪ್ರಯತ್ನ ನಡೆಸಲಾಗುತ್ತಿದೆ ಎನ್ನುವುದು ನನಗೆ ಗೊತ್ತಿಲ್ಲ. ಅವರ ವಿಚಾರದಲ್ಲಿ ಹೈಕಮಾಂಡ್ ತೆಗೆದುಕೊಳ್ಳುವ ತೀರ್ಮಾನಕ್ಕೆ ನಾವೆಲ್ಲರೂ ಬದ್ಧರಾಗಿರುತ್ತೇವೆ ಎಂದು ಹೇಳಿದರು.
ಬಿಹಾರದ ಮಾಜಿ ಸಿಎಂ ದಿ. ಕರ್ಪೂರಿ ಠಾಕೂರ್ ಅವರಿಗೆ ಮರಣೋತ್ತರ ಭಾರತ ರತ್ನ ನೀಡಿರುವುದಕ್ಕೆ ಕಾಂಗ್ರೆಸ್ ಆಕ್ಷೇಪ ಎತ್ತಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಬಸವರಾಜ ಬೊಮ್ಮಾಯಿ, ದಲಿತರು, ಒಬಿಸಿ ಕಾಂಗ್ರೆಸ್‌ನ ಗುತ್ತಿಗೆಯಲ್ಲ. ಅಂಬೇಡ್ಕರ್ ಅವರಿಗೆ ಭಾರತ ರತ್ನ ಕೊಟ್ಟಿದ್ದು ಯಾರು? ಕಾಂಗ್ರೆಸ್ ಯಾಕೆ ಕೊಡಲಿಲ್ಲ? ಪ್ರಣಬ್ ಮುಖರ್ಜಿ, ಅಬ್ದುಲ್ ಕಲಾಂ ಅವರಿಗೆ ನಾವು ಕೊಟ್ಟಿದ್ದೇವೆ. ಯಾರು ಒಳ್ಳೆಯ ಕೆಲಸ ಮಾಡಿದ್ದಾರೆ ಅವರಿಗೆ ಬಿಜೆಪಿ ಗುರುತಿಸಿ ಭಾರತ ರತ್ನ ಗೌರವ ಕೊಡುತ್ತಿದೆ ಎಂದು ಹೇಳಿದರು.
ಭಕ್ತಿಯ ಕನ್ನಡಕ ಹಾಕಿದರೆ ರಾಮ ಕಾಣಿಸುತ್ತಾನೆ
ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ರಾಮನ ಕುರಿತು ಆಡಿರುವ ಮಾತಿಗೆ ಆಕ್ರೋಶ ವ್ಯಕ್ತಪಡಿಸಿದ ಬಸವರಾಜ ಬೊಮ್ಮಾಯಿ, ರಾವಣನ ಕನ್ನಡಕ ಹಾಕಿಕೊಂಡು ನೋಡಿದರೆ ರಾಮ ರಾಜ್ಯ ಕಾಣಿಸುವುದಿಲ್ಲ. ಭಕ್ತಿಯ ಕನ್ನಡಕದಿಂದ ನೋಡಿದರೆ ಎಲ್ಲೆಡೆಯೂ ರಾಮ ಕಾಣಿಸುತ್ತಾನೆ ಎಂದು ಹೇಳಿದರು.
ಇದನ್ನೂ ಓದಿ: Karnataka Budget 2024: ಫೆ.16ಕ್ಕೆ ರಾಜ್ಯ ಬಜೆಟ್ ಬೇಡ: ಮುಂದಕ್ಕೆ ಹಾಕುವಂತೆ ರಾಜ್ಯಪಾಲರಿಗೆ ಬಿಜೆಪಿ ಮನವಿ
ಇನ್ನು ಹಾವೇರಿಯಲ್ಲಿ ಬಿಜೆಪಿ ಗೆಲ್ಲುವ ಅವಕಾಶ ಹೆಚ್ಚಿರುವುದರಿಂದ ಆಕಾಂಕ್ಷಿಗಳು ಹೆಚ್ಚಿದ್ದಾರೆ. ಬಿ.ಸಿ. ಪಾಟೀಲ್, ಸಂದೀಪ್ ಪಾಟೀಲ್, ಕೆ.ಎಸ್. ಈಶ್ವರಪ್ಪ ಅವರ ಪುತ್ರ ಕಾಂತೇಶ್ ಸೇರಿದಂತೆ ಬಹಳ ಜನ ಇದ್ದಾರೆ ಎಂದು ಹೇಳಿದರು.