Site icon Vistara News

Rajya Sabha Election: ಎಲ್ಲ ಪಕ್ಷಗಳಿಂದ ನಮಗೂ ಆತ್ಮಸಾಕ್ಷಿ ಮತಗಳು ಬರುತ್ತವೆ: ಎಚ್‌ಡಿಕೆಗೆ ಡಿಕೆಶಿ ತಿರುಗೇಟು

Rajya Sabha election We will get conscience votes from all parties says DK Shivakumar

ಬೆಂಗಳೂರು: ನಮಗೂ ಎಲ್ಲ ಪಕ್ಷಗಳಲ್ಲಿ ಸ್ನೇಹಿತರಿದ್ದಾರೆ. ರಾಜ್ಯಸಭೆ ಚುನಾವಣೆಯಲ್ಲಿ (Rajya Sabha Election) ನಮ್ಮ ಅಭ್ಯರ್ಥಿಗಳಿಗೂ ಆತ್ಮಸಾಕ್ಷಿ ಮತಗಳು ಬೀಳಲಿವೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಹೇಳಿದ್ದಾರೆ.

ಜೆಡಿಎಸ್ ಅಭ್ಯರ್ಥಿ ಕುಪೇಂದ್ರ ರೆಡ್ಡಿ (Kupendra Reddy) ಅವರಿಗೆ ಎಲ್ಲ ಪಕ್ಷಗಳಲ್ಲಿ ಸ್ನೇಹಿತರಿದ್ದು, ಅವರಿಗೆ ಆತ್ಮಸಾಕ್ಷಿಯ ಮತಗಳು ಬೀಳಲಿವೆ ಎಂಬ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಡಿ.ಕೆ. ಶಿವಕುಮಾರ್‌, ನಮಗೂ ಎಲ್ಲ ಪಕ್ಷಗಳಲ್ಲೂ ಸ್ನೇಹಿತರಿದ್ದಾರೆ. ಜೆಡಿಎಸ್ ವಿಫಲವಾಗಿರುವ ಕಾರಣದಿಂದ ಅವರು ಬಿಜೆಪಿ ಜತೆ ನೆಂಟಸ್ಥನ ಮಾಡುತ್ತಿದ್ದಾರೆ. ಆ ಪಕ್ಷಗಳಿಂದ ನಮಗೂ ಆತ್ಮಸಾಕ್ಷಿಯ ಮತಗಳು ಬರುವ ವಿಶ್ವಾಸವಿದೆ ಎಂದು ಹೇಳಿದರು.

ಬಿಜೆಪಿ ಮತ್ತು ಜೆಡಿಎಸ್‌ನವರು ಸದಾ ಕುದುರೆ ವ್ಯಾಪಾರ ಮಾಡುತ್ತಾರೆ. ಅವರು ಅದಕ್ಕೆ ಹೆಸರುವಾಸಿ. ಫೆ. 27 ರಂದು ಎಲ್ಲವೂ ತಿಳಿಯಲಿದೆ. ಅವರು ಬಿಜೆಪಿಗೆ ಬಹಳ ಹತ್ತಿರವಾಗಿರುವಂತೆ ಬಿಂಬಿಸುತ್ತಿದ್ದಾರೆ. ಬಿಜೆಪಿಯ ಎಷ್ಟು ಮತಗಳು ಅವರಿಗೆ ಸಿಗಲಿದೆ ಎಂಬುದನ್ನು ಕಾದು ನೋಡಿ ಎಂದು ಡಿ.ಕೆ. ಶಿವಕುಮಾರ್‌ ಮಾರ್ಮಿಕವಾಗಿ ನುಡಿದರು.

ಆ ಪಕ್ಷಗಳಿಂದ ನಿಮಗೆ ಎಷ್ಟು ಆತ್ಮಸಾಕ್ಷಿ ಮತಗಳು ಸಿಗಬಹುದು ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಡಿ.ಕೆ. ಶಿವಕುಮಾರ್‌, “ಮತದಾನದ ನಂತರ ತಿಳಿಸುತ್ತೇವೆ” ಎಂದು ಹೇಳಿದರು.

ಬಿಜೆಪಿ – ಜೆಡಿಎಸ್ ಮೈತ್ರಿ ಪಕ್ಷಗಳಿಂದ ಐದನೇ ಅಭ್ಯರ್ಥಿ ಕಣಕ್ಕಿಳಿಸುತ್ತಿರುವ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಡಿ.ಕೆ. ಶಿವಕುಮಾರ್‌, ಅವರು ಅವರ ಪ್ರಯತ್ನ ಮಾಡಲಿ. ನಾವು ನಮ್ಮ ಒಗ್ಗಟ್ಟಿನ ರಾಜಕಾರಣ ಮಾಡುತ್ತೇವೆ” ಎಂದು ತಿಳಿಸಿದರು.

ನಮ್ಮ ಅಭ್ಯರ್ಥಿಗಳು ರಾಜ್ಯಸಭೆಯಲ್ಲಿ ಕರ್ನಾಟಕದ ಪರ ಧ್ವನಿ ಎತ್ತಲಿದ್ದಾರೆ

ರಾಜ್ಯಸಭೆ ಅಭ್ಯರ್ಥಿಗಳ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಡಿ.ಕೆ. ಶಿವಕುಮಾರ್‌, ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದ ಕಾಂಗ್ರೆಸ್ ಪಕ್ಷಕ್ಕೆ ರಾಜ್ಯದ ಜನ ಬೆಂಬಲ ನೀಡಿದ್ದಾರೆ. ರಾಜ್ಯಸಭೆಗೆ ನಮ್ಮ ಪಕ್ಷದಿಂದ ಮೂವರು ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿದೆ. ಇವರು ಆಯ್ಕೆಯಾಗಿ ರಾಜ್ಯಸಭೆಯಲ್ಲಿ ರಾಜ್ಯದ ಪರವಾಗಿ ಧ್ವನಿ ಎತ್ತಲಿದ್ದಾರೆ ಎಂಬ ವಿಶ್ವಾಸವಿದೆ ಎಂದರು.

ಅಜಯ್ ಮಾಕೇನ್ ಅವರ ಆಯ್ಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಡಿ.ಕೆ. ಶಿವಕುಮಾರ್‌, ಈ ಹಿಂದೆ ಬಿಜೆಪಿ, ಜೆಡಿಎಸ್‌ನವರು ಕರೆದುಕೊಂಡು ಬಂದು ನಿಲ್ಲಿಸಿದ್ದರಲ್ಲ ಅವರನ್ನು ಕೇಳಿ. ಅಜಯ್ ಮಾಕೇನ್ ಅವರ ಕುಟುಂಬ ದೇಶದ ಐಕ್ಯತೆ, ಸಮಗ್ರತೆ, ಶಾಂತಿಗಾಗಿ ಅನೇಕ ತ್ಯಾಗ ಮಾಡಿದೆ. ವಿದ್ಯಾರ್ಥಿ ನಾಯಕನಿಂದ ದೆಹಲಿವರೆಗೂ ಪಕ್ಷದ ಸಂಘಟನೆ ಮಾಡಿರುವ ಪಕ್ಷದ ಆಧಾರಸ್ತಂಭ ಇವರು. ಹೀಗಾಗಿ ಅವರನ್ನು ನಾವು ಬಹಳ ಸಂತೋಷದಿಂದ ಆಯ್ಕೆ ಮಾಡಿದ್ದೇವೆ” ಎಂದರು.

ಇದನ್ನೂ ಓದಿ: CM Siddaramaiah: ವಿಪಕ್ಷದವರು ಗೂಂಡಾಗಳು ಎಂದು ಕರೆದ ಸಿಎಂ ಕ್ಷಮೆ ಕೇಳಲೇಬೇಕು; ಕೋಟ ಶ್ರೀನಿವಾಸ್‌ ಪೂಜಾರಿ

ಪ್ರಜಾಪ್ರಭುತ್ವ ರಕ್ಷಣೆಗೆ ಸುಪ್ರೀಂ ಮಹತ್ವದ ನಿರ್ಧಾರ

ಚುನಾವಣಾ ಬಾಂಡ್‌ಗಳನ್ನು ಸುಪ್ರೀಂ ಕೋರ್ಟ್ ರದ್ದು ಮಾಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಡಿ.ಕೆ. ಶಿವಕುಮಾರ್‌, “ದೇಶದ ಇತಿಹಾಸದಲ್ಲೇ ಇದೊಂದು ಮಹತ್ವದ ನಿರ್ಧಾರ. ಈ ಧೈರ್ಯವಾದ ನಿರ್ಧಾರಕ್ಕೆ ನಾನು ಅಭಿನಂದಿಸುತ್ತೇನೆ. ದೇಶದ ಪ್ರಜಾಪ್ರಭುತ್ವ ಉಳಿಸಲು ಇಂತಹ ಮಹತ್ವದ ನಿರ್ಧಾರಗಳು ಬೇಕು” ಎಂದು ತಿಳಿಸಿದರು.

Exit mobile version