Site icon Vistara News

Ram Janmabhoomi : ಬಿ.ಕೆ. ಹರಿಪ್ರಸಾದ್ ಹೊರಗೆ ಬಂದರೆ ರಾಮ ಭಕ್ತರು ಕೈ ಕಾಲು ಮುರೀತಾರೆ: ಡಿ.ವಿ. ಸದಾನಂದಗೌಡ

DV Sadanada gowda and BK Hariprasad

ಬೆಂಗಳೂರು: ಗೋಧ್ರಾ ದುರಂತದಂತಹ ಘಟನೆಯು ರಾಮಜನ್ಮಭೂಮಿಯಾದ (Ram Janmabhoomi) ಅಯೋಧ್ಯೆಯಲ್ಲಿ ನಡೆಯುತ್ತಿರುವ ಶ್ರೀರಾಮನ ಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ರಮದ ಸಂಭ್ರಮದ ಕರ್ನಾಟಕದಲ್ಲಿ ಆಗಬಹುದು ಎಂಬ ಕಾಂಗ್ರೆಸ್‌ ಹಿರಿಯ ನಾಯಕ, ವಿಧಾನ ಪರಿಷತ್‌ ಸದಸ್ಯ ಬಿ.ಕೆ. ಹರಿಪ್ರಸಾದ್‌ (BK Hariprasad) ಅವರ ಹೇಳಿಕೆಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಈ ಬಗ್ಗೆ ಸಂಸದ, ಕೇಂದ್ರ ಮಾಜಿ ಸಚಿವ ಡಿ.ವಿ. ಸದಾನಂದಗೌಡ (DV Sadananda Gowda) ಪ್ರತಿಕ್ರಿಯೆ ನೀಡಿ, ಬಿ.ಕೆ. ಹರಿಪ್ರಸಾದ್ ದೇಶದ ನಂಬರ್ ಒನ್ ಭಯೋತ್ಪಾದಕ. ರಕ್ಷಣೆ ಕೊಡುವುದಿದ್ದರೆ ಮೊದಲಿಗೆ ಅವರಿಗೇ ಕೊಡಬೇಕು. ಯಾಕೆಂದರೆ ರಾಮ ಭಕ್ತರು ಅವರನ್ನೇ ಪುಡಿ ಪುಡಿ ಮಾಡುತ್ತಾರೆ. ಅವರನ್ನು ತಕ್ಷಣ ಬಂಧನ ಮಾಡಬೇಕು. ಪ್ರಚೋದನಾತ್ಮ ಹೇಳಿಕೆ ಕೊಟ್ಟು ರಾಮಭಕ್ತರನ್ನು ಪ್ರಚೋದಿಸಿದ್ದಾರೆ. ಅವರು ಹೊರಗೆ ಹೋದಾಗ ರಾಮ ಭಕ್ತರು ಅವರ ಕೈ ಕಾಲು ಮುರೀಬಹುದು ಎಂದು ಎಚ್ಚರಿಕೆ ಕೊಟ್ಟಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ ಡಿ.ವಿ. ಸದಾನಂದಗೌಡ, ಕರ ಸೇವಕ ಶ್ರೀಕಾಂತ್ ಪೂಜಾರಿ ಅವರನ್ನು ಈ ಸರ್ಕಾರದವರು ಅರೆಸ್ಟ್ ಮಾಡುತ್ತಾರೆ. ಇದು ಖಂಡನೀಯ. ಈಗ ಪ್ರಚೋದನೆ ಕೊಟ್ಟಿರುವ ಬಿ.ಕೆ. ಹರಿಪ್ರಸಾದ್ ಅವರನ್ನು ಬಂಧಿಸಬೇಕು. ದೇಶದಲ್ಲಿ ನಂಬರ್ ಒನ್ ಭಯೋತ್ಪಾದಕ ಹರಿಪ್ರಸಾದ್ ಅವರಾಗಿದ್ದಾರೆ. ಅವರು ಹೊರಗೆ ಹೋದಾಗ ರಾಮ ಭಕ್ತರು ಅವರ ಕೈ ಕಾಲನ್ನು ಮುರಿಯಬಹುದು ಎಂದು ಎಚ್ಚರಿಕೆ ನೀಡಿದರು.

ಸಿದ್ದರಾಮಯ್ಯ ಹೆಸರಲ್ಲಿ ರಾಮ ಇರುವ ಬಗ್ಗೆ ಮಾಜಿ ಸಚಿವ ಎಚ್. ಆಂಜನೇಯ ಹೇಳಿಕೆ ನೀಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಸದಾನಂದ ಗೌಡ, ರಾಮಾಯಣ ಕಾಲದ ಆಂಜನೇಯನೇ ಬೇರೆ. ಈ ಕಾಲದ ಆಂಜನೇಯನೇ ಬೇರೆ. ಇಬ್ಬರಿಗೂ ಬಹಳ ವ್ಯತ್ಯಾಸ ಇದೆ. ಆ ಆಂಜನೇಯನಿಗೆ ಬಾಲವಿತ್ತು. ಲಂಕೆಯನ್ನು ದಹನ ಮಾಡಲು ಶಕ್ತಿ ಇತ್ತು. ಇವರಿಗೆ ಬಾಲ ಇಲ್ಲ ಎಂದು ನಗುತ್ತಾ ಕುಟುಕಿದರು.

ಎದೆ ಬಗೆದರೆ ಸಿದ್ದರಾಮಯ್ಯ ಕಾಣಬಹುದಾ ಎಂಬ ಪ್ರಶ್ನೆಗೆ ಉತ್ತರಿಸಿದ ಡಿ.ವಿ. ಸದಾನಂದಗೌಡ, ಹಲವಾರು ಜನರು ಓಲೈಕೆ ರಾಜಕಾರಣಕ್ಕೆ ಇಳಿದಿದ್ದಾರೆ. ಎರಡು ನಾಯಕರು ಇದ್ದಾಗ ಈ ರೀತಿಯ ಗುಂಪುಗಾರಿಕೆ ಇರುತ್ತದೆ ಎಂದು ಹೇಳಿದರು.

ಬಿ.ಕೆ. ಹರಿಪ್ರಸಾದ್‌ ಹೇಳಿದ್ದೇನು?

ಜ. 22ರಂದು ರಾಮಜನ್ಮಭೂಮಿ ಅಯೋಧ್ಯೆಗೆ ಹೋಗುವವರಿಗೆ ಸರ್ಕಾರವೇ ರಕ್ಷಣೆ ಕೊಡಬೇಕು. ಕಾರಣ, ಗೋಧ್ರಾ ದುರಂತದ ರೀತಿ ಮತ್ತೊಮ್ಮೆ ಏನಾದರೂ ಆಗಬಹುದು. ನಮಗೆ ಈ ಬಗ್ಗೆ ಮಾಹಿತಿ ಸಿಗುತ್ತಾ ಇದೆ. ಮಾಹಿತಿ ಇದ್ದೇ ನಾನು ಈ ರೀತಿ ಹೇಳುತ್ತಾ ಇದ್ದೇನೆ. ಆದರೆ, ಇದು ನನ್ನ ವೈಯಕ್ತಿಕ ಅಭಿಪ್ರಾಯವಾಗಿದೆ. ನನ್ನ ಹೇಳಿಕಗೂ ಪಕ್ಷಕ್ಕೂ ಸಂಬಂಧವಿಲ್ಲ ಎಂದು ಬಿ.ಕೆ. ಹರಿಪ್ರಸಾದ್‌ ಹೇಳಿದ್ದರು.

ಇದನ್ನೂ ಓದಿ: Ram Janmabhoomi: ಕ್ರಿಮಿನಲ್‌ ಆರೋಪಿ ಬೆನ್ನಿಗೆ ಬಿಜೆಪಿ ನಿಂತಿದ್ದು ಎಷ್ಟು ಸರಿ? ಸಿದ್ದರಾಮಯ್ಯ ಸರಣಿ ಪ್ರಶ್ನೆ!

ಅಲ್ಲದೆ, ರಾಮ ಮಂದಿರ ಉದ್ಘಾಟನೆಯು ಧಾರ್ಮಿಕ ಕಾರ್ಯಕ್ರಮ ಅಲ್ಲ. ಇದೊಂದು ರಾಜಕೀಯ ಕಾರ್ಯಕ್ರಮ ಆಗುತ್ತಿದೆ. ಧಾರ್ಮಿಕ ಕಾರ್ಯಕ್ರಮ ಆಗಿದ್ದಿದ್ದರೆ ನಾವೆಲ್ಲರೂ ಹೋಗುತ್ತಿದ್ದೆವು. ಧಾರ್ಮಿಕ ಕಾರ್ಯಕ್ರಮ ಆಗಿದ್ದರೆ ಧಾರ್ಮಿಕ ಮುಖಂಡರು ಭಾಗಿ ಆಗಬೇಕಿತ್ತು. ಶಂಕರಾಚಾರ್ಯರು ಮೂಲ ಗುರುಗಳಾಗಿದ್ದಾರೆ. ಅದೇ ರೀತಿ ಧರ್ಮ ಗುರುಗಳು ನಡೆಸಿಕೊಟ್ಟಿದ್ದರೆ ಅದು ಧಾರ್ಮಿಕ ಕಾರ್ಯಕ್ರಮ ಆಗುತ್ತಿತ್ತು ಎಂದು ಬಿ.ಕೆ. ಹರಿಪ್ರಸಾದ್‌ ಹರಿಹಾಯ್ದಿದ್ದರು.

Exit mobile version