Site icon Vistara News

BY Vijayendra : ವಿಜಯೇಂದ್ರ ಅಧ್ಯಕ್ಷರಾಗುತ್ತಿದ್ದಂತೆ ರೇಣುಕಾಚಾರ್ಯ ಶಸ್ತ್ರತ್ಯಾಗ! ಸಾಮರಸ್ಯ ಮಂತ್ರ ಪಠಣ

MP Renukacharya and BY Vijayendra

ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಮಾಜಿ ಸಿಎಂ ಬಿ.ಎಸ್.‌ ಯಡಿಯೂರಪ್ಪ (Former CM BS Yediyurappa) ಅವರನ್ನು ಕಡೆಗಣಿಸಲಾಗಿದೆ. ಇನ್ನು ಬಿಜೆಪಿಗೆ ಉಳಿಗಾಲ ಇಲ್ಲ ಎಂದು ನೇರವಾಗಿ ಪಕ್ಷದ ವಿರುದ್ಧ ಮಾತನಾಡಿದ್ದ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ (MP Renukacharya) ಅವರು ಬಿ.ವೈ. ವಿಜಯೇಂದ್ರ (BY Vijayendra) ಅವರು ಬಿಜೆಪಿ ರಾಜ್ಯಾಧ್ಯಕ್ಷರಾಗಿ (BJP state president) ಆಯ್ಕೆಯಾದ ಬಳಿಕ ಈಗ ಶಸ್ತ್ರತ್ಯಾಗ ಮಾಡಿದ್ದಾರೆ. ಇನ್ನೇನಿದ್ದರೂ ಸಾಮರಸ್ಯ ಮಾತ್ರ. ನಾನು ಸಂಘರ್ಷ ಮಾಡುವುದಿಲ್ಲ. ಸಾಮರಸ್ಯ ಮಾಡುತ್ತೇನೆ ಎಂದು ಹೇಳಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಎಂ.ಪಿ. ರೇಣುಕಾಚಾರ್ಯ, ಬಿ.ವೈ. ವಿಜಯೇಂದ್ರ ಅವರು ರಾಜ್ಯಾಧ್ಯಕ್ಷ ಆಗಿದ್ದಾರೆ. ನಮ್ಮ‌ ನೆಚ್ಚಿನ ನಾಯಕರಾದ ಪ್ರಧಾನಿ ನರೇಂದ್ರ ಮೋದಿ (PM Narendra Modi), ಜೆ.ಪಿ. ನಡ್ಡಾ (JP Nadda), ಅಮಿತ್ ಶಾ (Amit Shah) ಅವರು ಕರ್ನಾಟಕ ಬಿಜೆಪಿಯ ಪ್ರಸ್ತುತ ಸಂಘಟನೆ, ಲೋಕಸಭಾ ಚುನಾವಣೆ (Lok Sabha Election 2024) ದೃಷ್ಟಿಯಿಂದ ಈ ಆಯ್ಕೆಯನ್ನು ಮಾಡಿದ್ದಾರೆ. ವಿಜಯೇಂದ್ರ ಅವರನ್ನು ಅಧ್ಯಕ್ಷರನ್ನಾಗಿ ಮಾಡಲು ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ ಲಾಬಿ ಮಾಡಿಲ್ಲ. ವಿಜಯೇಂದ್ರ, ಯಡಿಯೂರಪ್ಪ ಅಡ್ಜಸ್ಟ್‌ಮೆಂಟ್ ರಾಜಕಾರಣ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ: Caste Census : ಜಾತಿ ಗಣತಿ ವರದಿ ಬಗ್ಗೆ ಊಹೆ ಮಾಡ್ಬೇಡಿ, ನಾವೇಕೆ ಸಮಾಜ ಒಡೆಯುತ್ತೇವೆ? ಸಿಎಂ ಖಡಕ್‌ ಪ್ರಶ್ನೆ

ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ಬಂದಿದೆ

ಬಿ.ವೈ. ವಿಜಯೇಂದ್ರ ಅವರು ಬಿಜೆಪಿ ಬೆಂಗಳೂರು ಘಟಕದ ಪ್ರಧಾನ ಕಾರ್ಯದರ್ಶಿ, ಯುವ ಮೋರ್ಚಾ ಅಧ್ಯಕ್ಷರಾಗಿ, ಪಕ್ಷದ ಉಪಾಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಅನೇಕ ಉಪ ಚುನಾವಣೆಯನ್ನು ಗೆಲ್ಲಿಸಿದ್ದಾರೆ. ಇಂದು ಅವರ ಬಗ್ಗೆ ಮಾತನಾಡಿದರೆ ರಾಷ್ಟ್ರೀಯ ನಾಯಕರಿಗೆ ಅಪಮಾನ ಮಾಡಿದಂತಾಗಲಿದೆ. ವಿಜಯೇಂದ್ರ ಜತೆ ಆರ್. ಅಶೋಕ್ ವಿಪಕ್ಷ ನಾಯಕ ಆಗಿದ್ದಾರೆ. ಮಂಗಳೂರಿನಲ್ಲಿ ನಿನ್ನೆ ಉತ್ತಮ ಕಾರ್ಯಕ್ರಮ ನಡೆದಿದೆ. ತುಮಕೂರು, ಕೋಲಾರ, ಮೈಸೂರು ಸೇರಿದಂತೆ ಹಲವೆಡೆ ಪ್ರವಾಸ ಮಾಡಿದ್ದಾರೆ. ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ಬಂದಿದೆ ಎಂದು ಎಂ.ಪಿ. ರೇಣುಕಾಚಾರ್ಯ ಹೇಳಿದರು.

ವಿನಾಕಾರಣ ಆರೋಪ ಮಾಡೋದು ಸರಿಯಲ್ಲ

ನಮ್ಮ ಮುಂದೆ ಈಗ ಅನೇಕ ಸವಾಲುಗಳು ಇವೆ. ಜಿಲ್ಲೆ, ತಾಲೂಕು ಪಂಚಾಯಿತಿ ಚುನಾವಣೆಗಳು ಬರುತ್ತಿವೆ. ಕರ್ನಾಟಕದಿಂದ 28 ಲೋಕಸಭಾ ಚುನಾವಣೆ ಗೆದ್ದು ಕೇಂದ್ರಕ್ಕೆ ಕೊಡುಗೆ ನೀಡಬೇಕಿದೆ. ಎಲ್ಲರೂ ಒಟ್ಟಾಗಿ ಹೋಗಬೇಕಿದೆ. ವಿನಾಕಾರಣ ಆರೋಪ ಮಾಡೋದು ಸರಿಯಲ್ಲ. ಸಂಘಟನೆ ಮಾಡಿ ಪಕ್ಷ ಮತ್ತೆ ಅಧಿಕಾರಕ್ಕೆ ತರಬೇಕಿದೆ ಎಂದು ಎಂ.ಪಿ. ರೇಣುಕಾಚಾರ್ಯ ಹೇಳಿದರು.

ಇದನ್ನೂ ಓದಿ: ESCOM Karnataka : ನಾಳೆಯಿಂದ 3 ದಿನ ಈ 98 ನಗರ, ಪಟ್ಟಣಗಳಲ್ಲಿ ಎಸ್ಕಾಂ ಆನ್‌ಲೈನ್‌ ಸೇವೆ ಇರಲ್ಲ!

ನಾನು ಸಂಘರ್ಷ ಮಾಡಲ್ಲ

ಬಿ.ವೈ. ವಿಜಯೇಂದ್ರ, ಆರ್. ಅಶೋಕ್ ಭಲೇ ಜೋಡಿಯಾಗಿದ್ದಾರೆ. ಅನೇಕ ಹಿರಿಯರು, ಕಾರ್ಯಕರ್ತರು, ಸಂಘದ ಪ್ರಮುಖರು ಎಲ್ಲರ ಮನೆಗೆ ಭೇಟಿ ನೀಡುತ್ತಿದ್ದಾರೆ. ಬಿಜೆಪಿ ಕಚೇರಿ ಈಗ ತುಂಬಿ ತುಳುಕುತ್ತಿದೆ. ಇನ್ನೇನಿದ್ದರೂ ಸಾಮರಸ್ಯ ಮಾತ್ರ. ನಾನು ಸಂಘರ್ಷ ಮಾಡಲ್ಲ, ಸಾಮರಸ್ಯ ಮಾಡುತ್ತೇನೆ ಎಂದು ಎಂ.ಪಿ. ರೇಣುಕಾಚಾರ್ಯ ಹೇಳಿದರು.

Exit mobile version