ಭಾರತೀಯ ಜನತಾ ಪಕ್ಷದ (BJP) ವರ್ಚಸ್ವಿ ನಾಯಕ ನರೇಂದ್ರ ಮೋದಿ (Narendra Modi) ಅವರು ಸತತ ಮೂರನೇ ಬಾರಿಗೆ ದೇಶದ ಪ್ರಧಾನ ಮಂತ್ರಿಯಾಗಿ (Prime Minister) ಅಧಿಕಾರ ವಹಿಸಿಕೊಳ್ಳುವುದರೊಂದಿಗೆ ಭಾರತದ (India) 2024ರ ಲೋಕಸಭಾ ಚುನಾವಣೆ (Loksabha election 2024) ಪ್ರಕ್ರಿಯೆ ಮುಕ್ತಾಯಗೊಂಡಿದೆ.
ಈ ವರ್ಷದ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ನ್ಯಾಷನಲ್ ಡೆಮಾಕ್ರಟಿಕ್ ಅಲಯನ್ಸ್ (NDA) 293 ಸ್ಥಾನಗಳನ್ನು ಗೆದ್ದು ಬಹುಮತವನ್ನು ಪಡೆದುಕೊಂಡಿದೆ. ಅಸೋಸಿಯೇಷನ್ ಆಫ್ ಡೆಮಾಕ್ರಟಿಕ್ ರಿಫಾರ್ಮ್ಸ್ (ADR) ನ ಇತ್ತೀಚಿನ ವರದಿಯ ಪ್ರಕಾರ ಪ್ರಸ್ತುತ ಲೋಕಸಭೆಯಲ್ಲಿ ಗೆದ್ದ ಅಭ್ಯರ್ಥಿಗಳಲ್ಲಿ ಶೇ. 93ರಷ್ಟು ಮಂದಿ ಕೋಟ್ಯಧಿಪತಿಗಳು (Richest MP’s). 2019ರಲ್ಲಿ ಇದು ಶೇ. 88ರಷ್ಟಿದ್ದು, 2014 ರಲ್ಲಿ ಇದು ಶೇ. 82ರಷ್ಟಾಗಿತ್ತು.
ಪಿಆರ್‌ಎಸ್ ಶಾಸಕಾಂಗ ಸಂಶೋಧನೆ ವರದಿಯ ಪ್ರಕಾರ ಲೋಕಸಭೆಯ 543 ಸ್ಥಾನಗಳಿಗೆ 8,039 ಅಭ್ಯರ್ಥಿಗಳು ಅಂತಿಮವಾಗಿ ಚುನಾವಣಾ ಕಣದಲ್ಲಿದ್ದರು. 1996ರ ಬಳಿಕ ಈ ಚುನಾವಣೆಯಲ್ಲೇ ಅತೀ ಹೆಚ್ಚು ಅಭ್ಯರ್ಥಿಗಳನ್ನು ಸ್ಪರ್ಧಿಸಿರುವುದು ಈಗ ದಾಖಲೆಯಾಗಿದೆ.
ಈ ಬಾರಿ ಲೋಕಸಭೆಯನ್ನು ಪ್ರವೇಶಿಸಿದ ಅತೀ ಹೆಚ್ಚು ಶ್ರೀಮಂತರನ್ನು ಗುರುತಿಸಲಾಗಿದ್ದು, ಟಾಪ್ ಹತ್ತರಲ್ಲಿರುವ ಶ್ರೀಮಂತ ಸಂಸದರ ಮಾಹಿತಿ ಇಲ್ಲಿದೆ.
1. ಡಾ. ಚಂದ್ರಶೇಖರ್ ಪೆಮ್ಮಸಾನಿ- ಟಿಡಿಪಿ
ಗ್ರಾಮೀಣಾಭಿವೃದ್ಧಿ ಮತ್ತು ಸಂವಹನ ಸಚಿವಾಲಯದ ರಾಜ್ಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಡಾ. ಚಂದ್ರಶೇಖರ್ ಪೆಮ್ಮಸಾನಿ ಅವರು ಮೋದಿ 3.0 ಕ್ಯಾಬಿನೆಟ್‌ನಲ್ಲಿ 2024ರ ಶ್ರೀಮಂತ ಲೋಕಸಭೆ ಅಭ್ಯರ್ಥಿ ಮತ್ತು ಸಂಸದರಾಗಿದ್ದಾರೆ. ಇವರು ಒಟ್ಟು 5,705 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದ್ದಾರೆ. ಪೆಮ್ಮಸಾನಿ ಅವರು ಗುಂಟೂರು ಕ್ಷೇತ್ರದಿಂದ ತಮ್ಮ ಸಮೀಪದ ಪ್ರತಿಸ್ಪರ್ಧಿ ವೈಎಸ್‌ಆರ್‌ಸಿಪಿಯ ಕಿಲಾರಿ ವೆಂಕಟ ರೋಸಾಲ ಅವರನ್ನು 3,44,695 ಮತಗಳ ಅಂತರದಿಂದ ಸೋಲಿಸಿದರು.
2. ಕೊಂಡ ವಿಶ್ವೇಶ್ವರ್ ರೆಡ್ಡಿ- ಬಿಜೆಪಿ
ತೆಲಂಗಾಣದ ಚೆಲ್ಲೆವಾ ಕ್ಷೇತ್ರದಿಂದ ಬಿಜೆಪಿಯ ಕೊಂಡ ವಿಶ್ವೇಶ್ವರ್ ರೆಡ್ಡಿ ಅವರು ಕಾಂಗ್ರೆಸ್ ನ ಡಾ. ಗದ್ದಂ ರಂಜಿತ್ ರೆಡ್ಡಿ ಅವರನ್ನು 1,72,897 ಮತಗಳ ಅಂತರದಿಂದ ಸೋಲಿಸಿದ್ದಾರೆ. ರೆಡ್ಡಿ ಅವರು 4,568 ಕೋಟಿ ರೂ. ಮೌಲ್ಯದ ಒಟ್ಟು ಆಸ್ತಿಯನ್ನು ಹೊಂದಿದ್ದಾರೆ. ಇವರು ಲೋಕಸಭೆಯಲ್ಲಿ ಪ್ರಸ್ತುತ ಸಂಸದರಲ್ಲಿ ಎರಡನೇ ಅತ್ಯಂತ ಶ್ರೀಮಂತರಾಗಿದ್ದಾರೆ.
3. ನವೀನ್ ಜಿಂದಾಲ್- ಬಿಜೆಪಿ
14 ಮತ್ತು 15ನೇ ಲೋಕಸಭೆಯಲ್ಲಿ ಸಂಸದರಾಗಿದ್ದ ನವೀನ್ ಜಿಂದಾಲ್ ಅವರು ಕುರುಕ್ಷೇತ್ರ ಕ್ಷೇತ್ರದಿಂದ ಬಿಜೆಪಿಗೆ 2024 ರ ಲೋಕಸಭೆ ಚುನಾವಣೆಯಲ್ಲಿ ತಮ್ಮ ಸಮೀಪದ ಪ್ರತಿಸ್ಪರ್ಧಿ ಎಎಪಿಯ ಸುಶೀಲ್ ಗುಪ್ತಾ ಅವರನ್ನು 29,021 ಮತಗಳಿಂದ ಸೋಲಿಸಿದರು. ನವೀನ್ ಜಿಂದಾಲ್ ಏಷ್ಯಾದ ಅತ್ಯಂತ ಶ್ರೀಮಂತ ಕುಟುಂಬದಿಂದ ಬಂದವರು ಮತ್ತು ಭಾರತದ ಪ್ರಮುಖ ಉಕ್ಕಿನ ಕಂಪೆನಿಯಾದ ಜಿಂದಾಲ್ ಸ್ಟೀಲ್ ಮತ್ತು ಪವರ್ ಲಿಮಿಟೆಡ್‌ನ ಅಧ್ಯಕ್ಷರಾಗಿದ್ದಾರೆ. ಅವರ ಒಟ್ಟು ಆಸ್ತಿ ಮೌಲ್ಯ 1,241 ಕೋಟಿ ರೂ. ಗಿಂತ ಹೆಚ್ಚಿದ್ದು, ಲೋಕಸಭೆಯಲ್ಲಿ ಮೂರನೇ ಅತ್ಯಂತ ಶ್ರೀಮಂತ ಸಂಸದರಾಗಿದ್ದಾರೆ.
4. ಪ್ರಭಾಕರ ರೆಡ್ಡಿ ವೇಮಿರೆಡ್ಡಿ- ಟಿಡಿಪಿ
ಪ್ರಭಾಕರ ರೆಡ್ಡಿ ವೇಮಿರೆಡ್ಡಿ ಅವರು ವಿಪಿಆರ್ ಮೈನಿಂಗ್ ಇನ್ಫ್ರಾ ಪ್ರೈ. ಲಿಮಿಟೆಡ್ ನ ಮಾಲೀಕರಾಗಿದ್ದು, 716 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಘೋಷಿಸಿದ್ದಾರೆ. ನೆಲ್ಲೂರು ಕ್ಷೇತ್ರದಲ್ಲಿ ಅವರು ವೈಎಸ್‌ಆರ್‌ಸಿಪಿಯ ವೇಣುಂಬಾಕ ವಿಜಯ ರೆಡ್ಡಿ ಅವರನ್ನು 2,45,902 ಮತಗಳ ಅಂತರದಿಂದ ಸೋಲಿಸಿದರು.
5. ಸಿ.ಎಂ. ರಮೇಶ್- ಬಿಜೆಪಿ
ಚಿಂತಕುಂಟಾ ಮುನುಸ್ವಾಮಿ ಅಥವಾ ಸಿ.ಎಂ. ರಮೇಶ್ ಅವರು ಭಾರತದ ಸಂಸತ್ತಿನ ಮೇಲ್ಮನೆಯಾದ ರಾಜ್ಯಸಭೆಯಲ್ಲಿ ಸಂಸತ್ ಸದಸ್ಯರಾಗಿದ್ದರು. ಒಟ್ಟು 497 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿರುವ ಇವರು ಆಂಧ್ರಪ್ರದೇಶದ ಅನಕಾಪಲ್ಲಿ ಕ್ಷೇತ್ರದಲ್ಲಿ ವೈಎಸ್‌ಆರ್ ಕಾಂಗ್ರೆಸ್ ಪಕ್ಷದ (ವೈಎಸ್‌ಆರ್‌ಸಿಪಿ) ಡಿ. ಮುತ್ಯಾಲ ನಾಯ್ಡು ಅವರನ್ನು 2,96,530 ಮತಗಳ ಅಂತರದಿಂದ ಸೋಲಿಸಿದರು.
6. ಜ್ಯೋತಿರಾದಿತ್ಯ ಎಂ. ಸಿಂಧಿಯಾ- ಬಿಜೆಪಿ
ಜ್ಯೋತಿರಾದಿತ್ಯ ಎಂ. ಸಿಂಧಿಯಾ ಅವರು 424 ಕೋಟಿಗೂ ಹೆಚ್ಚು ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ. 2021 ರಲ್ಲಿ ಮೋದಿ ಕ್ಯಾಬಿನೆಟ್ ಅಡಿಯಲ್ಲಿ ನಾಗರಿಕ ವಿಮಾನಯಾನ ಮತ್ತು ಉಕ್ಕು ಸಚಿವರಾಗಿದ್ದ ಸಿಂಧಿಯಾ ಈ ಬಾರಿಯ ಚುನಾವಣೆಯಲ್ಲಿ ಮಧ್ಯದ ಗುನಾ ಕ್ಷೇತ್ರದಿಂದ ಗೆದ್ದು, ಸಂವಹನ ಮತ್ತು ಈಶಾನ್ಯ ಪ್ರದೇಶದ ಅಭಿವೃದ್ಧಿ ಸಚಿವರಾಗಿ ನೇಮಕಗೊಂಡಿದ್ದಾರೆ.
7. ಛತ್ರಪತಿ ಶಾಹು ಮಹಾರಾಜ್- ಐ ಎನ್ ಸಿ
ಕೊಲ್ಲಾಪುರದ ರಾಜಮನೆತನದವರಾದ ಛತ್ರಪತಿ ಶಾಹು ಮಹಾರಾಜರ ಒಟ್ಟು ಆಸ್ತಿ 342 ಕೋಟಿ ರೂ. 2024ರ ಸಾರ್ವತ್ರಿಕ ಚುನಾವಣೆಯಲ್ಲಿ, ಅವರು ಕಾಂಗ್ರೆಸ್ ಪಕ್ಷವನ್ನು ಪ್ರತಿನಿಧಿಸಿದರು. ಮಹಾರಾಷ್ಟ್ರದ ಕೊಲ್ಲಾಪುರ ಕ್ಷೇತ್ರದಿಂದ 1,54,964 ಮತಗಳ ಗೆಲುವಿನ ಅಂತರದಿಂದ ಶಿವಸೇನೆಯ ಸಂಜಯ್ ಸದಾಶಿವರಾವ್ ಮಾಂಡ್ಲಿಕ್ ಅವರನ್ನು ಸೋಲಿಸಿದರು.
ಇದನ್ನೂ ಓದಿ: Tamilisai Soundararajan: ವೇದಿಕೆ ಮೇಲೆಯೇ ತಮಿಳ್‌ಸಾಯಿಗೆ ಅಮಿತ್ ಶಾ ಭರ್ಜರಿ ಕ್ಲಾಸ್; ವಿಡಿಯೊ ನೋಡಿ
8. ಶ್ರೀಭರತ್ ಮಾತುಕುಮಿಲ್ಲಿ- ಟಿಡಿಪಿ
ಭಾರತೀಯ ಶಿಕ್ಷಣ ತಜ್ಞ ಮತ್ತು ಗಾಂಧಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್‌ಮೆಂಟ್ ನ (GITAM) ಅಧ್ಯಕ್ಷ, ಟಿಡಿಎಸ್ ನ ಶ್ರೀಭರತ್ ಮಟ್ಟುಕುಮಿಲ್ಲಿ ಅವರು ಒಟ್ಟು 298 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದ್ದಾರೆ. ಆಂಧ್ರಪ್ರದೇಶದ ವಿಶಾಖಪಟ್ಟಣಂ ಕ್ಷೇತ್ರದಲ್ಲಿ ಅವರು ವೈಎಸ್‌ಆರ್ ಕಾಂಗ್ರೆಸ್ ಪಕ್ಷದ (ವೈಎಸ್‌ಆರ್‌ಸಿಪಿ) ಝಾನ್ಸಿ ಲಕ್ಷ್ಮಿ ಬೋಟ್ಚಾ ಅವರನ್ನು 5,04,247 ಮತಗಳ ಅಂತರದಿಂದ ಸೋಲಿಸಿದರು.
9. ಹೇಮಾ ಮಾಲಿನಿ- ಬಿಜೆಪಿ
2024ರ ಲೋಕಸಭಾ ಚುನಾವಣೆಯಲ್ಲಿ ಮಥುರಾ ಕ್ಷೇತ್ರದಿಂದ ಗೆಲ್ಲುವ ಮೂಲಕ ಮಾಲಿನಿ ಹ್ಯಾಟ್ರಿಕ್ ಸಾಧಿಸಿದರು. ಅವರ ಹತ್ತಿರದ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಮುಖೇಶ್ ಧಂಗರ್ ಅವರನ್ನು 2,93,407 ಮತಗಳ ಅಂತರದಿಂದ ಸೋಲಿಸಿದರು. ಅವರು 278 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ.
10. ಡಾ ಪ್ರಭಾ ಮಲ್ಲಿಕಾರ್ಜುನ್- ಕಾಂಗ್ರೆಸ್
ಕಾಂಗ್ರೆಸ್‌ನ ಡಾ. ಪ್ರಭಾ ಮಲ್ಲಿಕಾರ್ಜುನ್ ಒಟ್ಟು 241 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ. ಇವರು ಕರ್ನಾಟಕದ ದಾವಣಗೆರೆ ಕ್ಷೇತ್ರದಲ್ಲಿ ಬಿಜೆಪಿಯ ಗಾಯತ್ರಿ ಸಿದ್ದೇಶ್ವರ ಅವರನ್ನು 26,094 ಮತಗಳ ಅಂತರದಿಂದ ಸೋಲಿಸಿ ಸಂಸತ್ತು ಪ್ರವೇಶಿಸಿದ್ದಾರೆ.