Site icon Vistara News

Rushikonda Palace: 500 ಕೋಟಿಯ ʼಋಷಿಕೊಂಡ ಅರಮನೆʼ ಖರೀದಿಸಲು ಕ್ರಿಮಿನಲ್‌ ಸುಕೇಶ್ ಚಂದ್ರಶೇಖರ್ ರೆಡಿ!

Rushikonda Palace

ನವದೆಹಲಿ: ಆಂಧ್ರಪ್ರದೇಶದ ಋಷಿಕೊಂಡ ಬೆಟ್ಟದಲ್ಲಿ (Rushikonda Hilltop) ಈ ಹಿಂದಿನ ಜಗನ್ ರೆಡ್ಡಿ ಸರ್ಕಾರ ನಿರ್ಮಿಸಿರುವ ವಿವಾದಾತ್ಮಕ ಅರಮನೆಯನ್ನು (Rushikonda Palace) ಮಾರುಕಟ್ಟೆ ದರಕ್ಕಿಂತ ಶೇ.20ರಷ್ಟು ಹೆಚ್ಚು ಹಣ ಕೊಟ್ಟು ಖರೀದಿಸಲು ತಾನು ಸಿದ್ಧ ಎಂದು ಅಕ್ರಮ ಹಣ ವರ್ಗಾವಣೆ, ವಂಚನೆ ಮತ್ತು ಸುಲಿಗೆ ಪ್ರಕರಣ ಸಂಬಂಧ ದೆಹಲಿಯ ಜೈಲಿನಲ್ಲಿರುವ ಆರೋಪಿ ಸುಕೇಶ್ ಚಂದ್ರಶೇಖರ್ (Sukesh Chandrashekhar) ಹೇಳಿಕೊಂಡಿದ್ದಾನೆ. ಈ ಕುರಿತು ಆತ ಆಂಧ್ರಪ್ರದೇಶದ (Andhra Pradesh) ಮುಖ್ಯಮಂತ್ರಿ (Chief Minister) ಎನ್. ಚಂದ್ರಬಾಬು ನಾಯ್ಡು (N Chandrababu Naidu) ಅವರಿಗೆ ಪತ್ರ ಬರೆದಿದ್ದಾನೆ.

ಮಾಜಿ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅಧಿಕಾರದಲ್ಲಿದ್ದಾಗ ಸುಮಾರು 500 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ಋಷಿಕೊಂಡ ಹಿಲ್‌ಟಾಪ್ ಪ್ಯಾಲೇಸ್ ಬಗ್ಗೆ ಟಿಡಿಪಿ ಆಕ್ಷೇಪ ವ್ಯಕ್ತಪಡಿಸಿ ಸಾಕಷ್ಟು ಆರೋಪಗಳನ್ನು ಮಾಡಿತ್ತು. ಇದೀಗ ಈ ಅರಮನೆಯನ್ನು ಖರೀದಿ ಮಾಡಲು ಸದ್ಯ ದೆಹಲಿಯ ಜೈಲಿನಲ್ಲಿರುವ ಸುಕೇಶ್ ಆಸಕ್ತಿ ತೋರಿದ್ದಾನೆ.

ಆಂಧ್ರಪ್ರದೇಶದ ಈಗಿನ ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿ ಸರ್ಕಾರವು ಆ ಆಸ್ತಿಯನ್ನು ಮಾರಾಟ ಮಾಡಲು ಅಥವಾ ಗುತ್ತಿಗೆಗೆ ನೀಡಲು ನಿರ್ಧರಿಸಿದರೆ ಮಾರುಕಟ್ಟೆ ಬೆಲೆಗಿಂತ ಶೇ. 20 ಹೆಚ್ಚಿನ ದರ ನೀಡುವುದಾಗಿ ಆತ ಹೇಳಿದ್ದಾನೆ. ಮಾಜಿ ಮುಖ್ಯಮಂತ್ರಿ ರೆಡ್ಡಿ ವೈಜಾಗ್‌ನಲ್ಲಿ 500 ಕೋಟಿ ರೂಪಾಯಿ ವೆಚ್ಚದ ಬೆಟ್ಟದ ಅರಮನೆಯನ್ನು ತಮ್ಮ ಸ್ವಾರ್ಥಕ್ಕಾಗಿ ನಿರ್ಮಿಸಿದ್ದಾರೆ ಎಂದು ತೆಲುಗು ದೇಶಂ ಪಕ್ಷ (ಟಿಡಿಪಿ) ಆರೋಪಿಸಿದೆ. ರಾಜ್ಯದ ಆರ್ಥಿಕ ಪರಿಸ್ಥಿತಿ ಕೆಟ್ಟದಾಗಿದ್ದರೂ ಈ ಅರಮನೆ ಮತ್ತು ಅಲ್ಲಿನ ಐಷಾರಾಮಿ ಸೌಕರ್ಯಗಳಿಗೆ ದುಂದು ವೆಚ್ಚ ಮಾಡಲಾಗಿದೆ ಎಂದು ಆರೋಪಿಸಿದೆ.


ಇದು ನನಗೆ, ನನ್ನ ಕುಟುಂಬಕ್ಕೆ ಮತ್ತು ನನ್ನ ಸಮುದಾಯಕ್ಕೆ ಬಹಳ ವಿಶೇಷವಾಗಿದೆ ಎಂದು ಸುಕೇಶ್ ಆಂಧ್ರಪ್ರದೇಶ ಮುಖ್ಯಮಂತ್ರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾನೆ ಎಂದು ಅವರ ವಕೀಲ ಅನಂತ್ ಮಲಿಕ್ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.

ನಾನು ಬಾಲ್ಯದ ರಜಾ ದಿನಗಳಲ್ಲಿ ಅಜ್ಜಿಯ ಬಳಿ ಕರೆದುಕೊಂಡು ಹೋದಾಗ ಆ ಪ್ರದೇಶದ ಸುತ್ತಮುತ್ತ ಆಟವಾಡುತ್ತಿದ್ದೆ. ಆ ಸೆಂಟಿಮೆಂಟ್‌ ನನಗೆ ಅಲ್ಲಿಯ ಆಸ್ತಿ ಖರಿದಿಸುವ ಬಯಕೆ ಹುಟ್ಟಿಸಿದೆ. ಸರ್ಕಾರ ಆ ಆಸ್ತಿ ಮಾರಿದರೆ ಹಣವನ್ನು ಶೇ. 100ರಷ್ಟು ನ್ಯಾಯಸಮ್ಮತ ರೀತಿಯಲ್ಲಿ ಪಾವತಿಸುತ್ತೇನೆ ಎಂದು ಸುಕೇಶ್ ಪತ್ರದಲ್ಲಿ ತಿಳಿಸಿದ್ದಾನೆ.

ನನ್ನ ಆತಿಥ್ಯ ಉದ್ಯಮವು ಚೆನ್ನೈ, ಗೋವಾ, ದುಬೈ ಮತ್ತು ಬಾರ್ಸಿಲೋನಾದಲ್ಲಿ ಹೊಟೇಲ್ ರೂಪದಲ್ಲಿ ಯಶಸ್ವಿಯಾಗಿ ನಡೆಯುತ್ತಿದೆ. ಈ ಎಲ್ಲಾ ವಿವರಗಳನ್ನು ನಾನು ದಾಖಲೆ ಸಮೇತ ನೀಡುವೆ. ಮಧ್ಯಮ ವರ್ಗದ ಕುಟುಂಬದ ಹುಡುಗನೊಬ್ಬ ಋಷಿಕೊಂಡ ಅರಮನೆಯಂತಹ ಪ್ರತಿಷ್ಠಿತ ಆಸ್ತಿಯನ್ನು ಪಡೆಯುವ ಹಂತಕ್ಕೆ ಬೆಳೆದಿದ್ದಾನೆ. ನನ್ನ ವಿರುದ್ಧದ ಆರೋಪಗಳು ಸಾಬೀತಾಗಿಲ್ಲ. ಹೀಗಾಗಿ ಅರಮನೆಯನ್ನು ಖರೀದಿಸಲು ಅಥವಾ ಬಾಡಿಗೆಗೆ ನೀಡಲು ನನಗೆ ಅವಕಾಶವನ್ನು ನೀಡುವುದರಿಂದ ಅಲ್ಲಿರುವ ಎಲ್ಲಾ ಯುವಕರಿಗೆ ಇದು ಸ್ಫೂರ್ತಿಯಾತ್ತದೆ. ಯಾಕೆಂದರೆ ಜಗತ್ತು ನಿಮ್ಮ ಯಶಸ್ಸಿಗೆ ವಿರುದ್ಧವಾಗಿದ್ದರೂ ಯಾವುದೂ ಅಸಾಧ್ಯವಲ್ಲ ಎಂದು ಸುಕೇಶ್ ಪತ್ರದಲ್ಲಿ ವಿವರಿಸಿದ್ದಾನೆ.

ಆರೋಪವೇನು?

ವೈ.ಎಸ್.ಜಗನ್‌ ಮೋಹನ್‌ ರೆಡ್ಡಿ ಅವರು ಈ ಮೊದಲು ಮೂರು ನಗರಗಳನ್ನು ರಾಜಧಾನಿ ಎಂದು ಘೋಷಿಸಿದ್ದರು. ವಿಶಾಖಪಟ್ಟಣಂ ಅಥವಾ ವೈಜಾಗ್‌ ಅನ್ನೇ ಈ ಮೊದಲು ಆಂಧ್ರಪ್ರದೇಶದ ರಾಜಧಾನಿ ಎಂದು ಘೋಷಿಸಲಾಗಿತ್ತು. ಹಾಗಾಗಿ, ಇಲ್ಲಿ ಪತ್ನಿಯ ಆಸೆಯಂತೆಯೇ ಜಗನ್‌ ಮೋಹನ್‌ ರೆಡ್ಡಿ ಅವರು ಐಷಾರಾಮಿ ಬಂಗಲೆ ಕಟ್ಟಿಸಿದ್ದಾರೆ ಎಂದು ಟಿಡಿಪಿ ಆರೋಪಿಸಿದೆ.

ಇದನ್ನೂ ಓದಿ: Actor Darshan: ದರ್ಶನ್‌ ತುಂಬ ಮುಗ್ದ, ತಾಯಿ ಕಣ್ಣೀರು ಹಾಕೊಂಡು ಮಗನನ್ನು ಬೆಳಸಬೇಕು ಎಂದಿದ್ರು ಎಂದ ಲಹರಿ ವೇಲು!

ಋಷಿಕೊಂಡ ಹಿಲ್ಸ್‌ ಪ್ರವಾಸಿ ತಾಣವಾಗಿತ್ತು. ಇಲ್ಲಿಗೆ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಭೇಟಿ ನೀಡುತ್ತಿದ್ದರು. ಆದರೆ, 9.88 ಎಕರೆ ಜಾಗದಲ್ಲಿ ಜಗನ್‌ ಮೋಹನ್‌ ರೆಡ್ಡಿ ಅವರು ಬಂಗಲೆ ನಿರ್ಮಿಸಿದ್ದಾರೆ. ಸುಮಾರು 36 ಲಕ್ಷ ರೂ. ವೆಚ್ಚದಲ್ಲಿ ಬಾತ್‌ ಟಬ್‌ ನಿರ್ಮಿಸಿದ್ದಾರೆ. ಹತ್ತಾರು ಐಷಾರಾಮಿ ಕೋಣೆಗಳು, ಸೌಕರ್ಯಗಳು ಬಂಗಲೆಯಲ್ಲಿವೆ. ಇದನ್ನೇ ಪಾರ್ಟಿ ಕಚೇರಿ ಮಾಡುವುದು ಜಗನ್‌ ಮೋಹನ್‌ ರೆಡ್ಡಿ ಅವರ ಉದ್ದೇಶವಾಗಿತ್ತು ಎಂದು ಆರೋಪಿಸಲಾಗಿದೆ.

Exit mobile version